ಭಾರತೀಯ ಕ್ರಿಕೆಟ್ ಇತಿಹಾಸವನ್ನು ಎಲ್ಲಿಂದ ಬರೆಯಲು ಆರಂಭ ಮಾಡಿದರೂ ರಾಹುಲ್ ದ್ರಾವಿಡ್(Rahul Dravid) ಹೆಸರು ಉಲ್ಲೇಖ ಮಾಡದೆ ಅದು ಮುಗಿದುಹೋಗುವುದೇ ಇಲ್ಲ! ಒಬ್ಬ ಜಂಟಲ್ ಮ್ಯಾನ್ ಕ್ರಿಕೆಟರ್ ಆಗಿ, ಕ್ಯಾಪ್ಟನ್ ಆಗಿ, ಕೋಚ್ ಆಗಿ ಭಾರತೀಯ ಕ್ರಿಕೆಟನ್ನು ಶ್ರೀಮಂತಗೊಳಿಸಿದ ಅವರಿಗೆ ಭಾರತರತ್ನ ಪ್ರಶಸ್ತಿ(bharatha ratna award) ನೀಡಲು ಇದು ಸಕಾಲ ಎಂದು ನನಗೆ ಅನ್ನಿಸುತ್ತದೆ.
ಸ್ಮರಣೀಯ ಇನಿಂಗ್ಸ್ಗಳು
ದ್ರಾವಿಡ್ ಎಂದಿಗೂ ದಾಖಲೆಗಾಗಿ ಅಡಿದ್ದಿಲ್ಲ. ಅದು ಅವರ ಸ್ವಭಾವ ಕೂಡ ಅಲ್ಲ. ಪರಿಸ್ಥಿತಿಗೆ ಹೊಂದಿಕೊಂಡು ಬ್ಯಾಟ್ ಬೀಸುವ ಆತ ಟೀಮ್ ಇಂಡಿಯಾ ಬಿಕ್ಕಟ್ಟಿನಲ್ಲಿ ಇದ್ದಾಗ ತಡೆಗೋಡೆ ಆಗಿ ನಿಂತಿರುವ ನೂರಾರು ಉದಾಹರಣೆಗಳು ದೊರೆಯುತ್ತವೆ.
1). 2003ರಲ್ಲಿ ಅಡಿಲೇಡ್ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸಗಳಲ್ಲಿ ತಾಳ್ಮೆಯ ಪರ್ವತವಾಗಿ ನಿಂತು ಆಡಿದ ದ್ರಾವಿಡ್ ಒಟ್ಟು 305 ರನ್ ಪೇರಿಸಿದ್ದರು. ಅದಕ್ಕಿಂತ ಹೆಚ್ಚಾಗಿ ಅವರು ಕ್ರೀಸ್ ಆಕ್ರಮಿಸಿಕೊಂಡು ನಿಂತದ್ದು 835 ನಿಮಿಷ! 20 ವರ್ಷಗಳ ನಂತರ ಅಡಿಲೇಡ್ ಮೈದಾನದಲ್ಲಿ ಭಾರತ ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಪಂದ್ಯವನ್ನು ದ್ರಾವಿಡ್ ಕಾರಣಕ್ಕೆ ಗೆದ್ದಿತ್ತು. ಆಗ ಭಾರತದ ಕ್ಯಾಪ್ಟನ್ ಆಗಿದ್ದ ಸೌರವ್ ಗಂಗೂಲಿ ಹೇಳಿದ ಮಾತು – ಅವನು ದೇವರಂತೆ ಆಡಿದ ಎಂದು!
2). 2001ರ ಕೊಲ್ಕತ್ತಾ ಟೆಸ್ಟ್ ಪಂದ್ಯ ನೆನಪು ಮಾಡಿಕೊಳ್ಳಿ. ಫಾಲೋ ಆನ್ ಪಡೆದ ನಂತರ ಯಾವುದೇ ತಂಡವು ಪಂದ್ಯವನ್ನು ಗೆದ್ದ ಕೇವಲ ಮೂರನೇ ಉದಾಹರಣೆ ಅದು! ಒಂದು ಕಡೆಯಿಂದ ವಿವಿಎಸ್ ಲಕ್ಷ್ಮಣ್, ಇನ್ನೊಂದೆಡೆಯಲ್ಲಿ ಇದೇ ದ್ರಾವಿಡ್ ಐದನೇ ವಿಕೆಟಿಗೆ 376ರನ್ ಜೊತೆಯಾಟ ನೀಡಿದ್ದು, ಆಸೀಸ್ ಆಕ್ರಮಣಕಾರಿ ಬೌಲಿಂಗ್ ಎದುರಿಸಿ ಬಂಡೆಯಂತೆ ನಿಂತದ್ದು, ಕೊನೆಗೆ ಆ ಟೆಸ್ಟ್ ಪಂದ್ಯ ಭಾರತ ಗೆದ್ದದ್ದು ಭಾರತೀಯರಿಗೆ ಮರೆತು ಹೋಗಲು ಸಾಧ್ಯವೇ ಇಲ್ಲ!
3). 2004ರ ಪಾಕ್ ಪ್ರವಾಸ ನೆನಪು ಮಾಡಿಕೊಳ್ಳಿ. ರಾವಲ್ಪಿಂಡಿ ಟೆಸ್ಟ್ ಪಂದ್ಯದಲ್ಲಿ ದ್ರಾವಿಡ್ ಒಟ್ಟು 12 ಗಂಟೆ, 20 ನಿಮಿಷ ಲಂಗರು ಹಾಕಿ ಬೆವರು ಬಸಿದರು. 270 ರನ್ನುಗಳ ಆ ವಿರೋಚಿತ ಇನ್ನಿಂಗ್ಸ್ ಭಾರತಕ್ಕೆ ಪಾಕ್ ವಿರುದ್ಧ ಟೆಸ್ಟ್ ಸರಣಿಯನ್ನು ಗೆಲ್ಲಿಸಿಕೊಟ್ಟಿತು! ಶೋಯೆಬ್ ಅಕ್ತರ್ ಬೌನ್ಸರಗಳನ್ನು ಅವರು ಅಷ್ಟೇ ತಾಳ್ಮೆಯಿಂದ ಉತ್ತರಿಸಿದ್ದು ನಮಗೆ ಮರೆತು ಹೋಗುವುದಿಲ್ಲ.
4). 2011ರ ಇಂಗ್ಲೆಂಡ್ ಪ್ರವಾಸದ ಹೀರೋ ಅಂದರೆ ಅದು ದ್ರಾವಿಡ್! ಮೂರು ಟೆಸ್ಟ್ ಪಂದ್ಯಗಳಲ್ಲಿ ಮೂರು ಶತಕ ಸೇರಿ 446ರನ್ ಪೇರಿಸಿದ್ದು ಅದು ಮಿರಾಕಲ್! ಓವಲ್ ಟೆಸ್ಟ್ ಪಂದ್ಯದಲ್ಲಿ ಅವರು ಇನ್ನಿಂಗ್ಸ್ ಆರಂಭ ಮಾಡಿ ಕೊನೆಯವರೆಗೂ ನಿಂತು ಔಟ್ ಆಗದೆ ಹಿಂದೆ ಬಂದ ಇನ್ನಿಂಗ್ಸ್ ನೆನಪು ಮಾಡಿ.
ರಾಹುಲ್ ದ್ರಾವಿಡ್ ಅವರ ಕ್ರಿಕೆಟ್ ಬದುಕಿನಲ್ಲಿ ಇಂತಹ ನೂರಾರು ಇನ್ನಿಂಗ್ಸ್ ದೊರೆಯುತ್ತವೆ. ಆಗೆಲ್ಲ ನನಗೆ ಅವರು ಮಂಜುಗಡ್ಡೆಯ ಪರ್ವತವಾಗಿ ಕಂಡುಬರುತ್ತಾರೆ.
ಇದನ್ನೂ ಓದಿ ರಾಜಮಾರ್ಗ ಅಂಕಣ: ಆಲ್ಫೀ ಹೆವೆಟ್ಟ್- ವೀಲ್ ಚೇರ್ ಮೇಲಿನ ಟೆನ್ನಿಸ್ ಬೆರಗು
ಹಾಗೆಂದು ದ್ರಾವಿಡ್ ಕೇವಲ ಟೆಸ್ಟ್ ಪಂದ್ಯಗಳಿಗೆ ಸೀಮಿತ ಎಂದು ನಾವು ಬ್ರಾಂಡ್ ಮಾಡುವ ಅಗತ್ಯ ಇಲ್ಲ. ವಿಶ್ವದಾಖಲೆಯ ಎರಡು ಮಹೋನ್ನತ ODI ಪಂದ್ಯಗಳಲ್ಲಿ ಜೊತೆಯಾಟ ನಿಭಾಯಿಸಿ ಭಾರತವನ್ನು ಗೆಲ್ಲಿಸಿದ್ದು ಇದೇ ದ್ರಾವಿಡ್ ಅಲ್ಲವೇ!
ದ್ರಾವಿಡ್ ಒಬ್ಬ ಮಹಾಗುರು ಆಗಿ…
2018ರಲ್ಲಿ ಭಾರತದ ಅಂಡರ್ 19 ಟೀಮನ್ನು ವಿಶ್ವಕಪ್ ಗೆಲ್ಲುವಂತೆ ಮಾಡಿದ್ದು ಇದೇ ದ್ರಾವಿಡ್. ಯಾವುದೇ ಕ್ರಿಕೆಟ್ ಆಟಗಾರನ ಸಾಮರ್ಥ್ಯವನ್ನು ಒರೆಗೆ ಹಚ್ಚಿ, ತಿದ್ದಿ ತೀಡಿ ಬೆಳಕಿಗೆ ತರುವ ಕೆಲಸದಲ್ಲಿ ಅವರಿಗೆ ಅವರೇ ಸಾಟಿ. ಸಂಜು ಸ್ಯಾಮ್ಸನ್ ಎಂಬ ಹೋರಾಟಗಾರ ರೂಪುಗೊಂಡಿದ್ದು ದ್ರಾವಿಡ್ ಗರಡಿಯಲ್ಲಿ. ಅಂಡರ್ 19 ವಿಶ್ವಕಪ್ ಗೆದ್ದಾಗ ಅವರಿಗೆ ಬಿಸಿಸಿಐ 50 ಲಕ್ಷ ನಗದು ಬಹುಮಾನ ಪ್ರಕಟಿಸಿತ್ತು. ಆಗ ತನ್ನ ಸಹಾಯಕ ಸಿಬ್ಬಂದಿಗೆ ಕೊಟ್ಟಷ್ಟೇ ತನಗೆ ಸಾಕು, 20 ಲಕ್ಷ ಮಾತ್ರ ಕೊಡಿ ಎಂದು ದ್ರಾವಿಡ್ ಉದಾರತೆ ಮೆರೆದಿದ್ದರು!
ಈ ಬಾರಿ ಕೂಡ ಭಾರತ 2024ರ ವಿಶ್ವಕಪ್ ಗೆಲ್ಲುವಲ್ಲಿ ಅವರ ಕೋಚಿಂಗ್ ಪಾತ್ರವೇ ಮುಖ್ಯ ಎಂದು ಎಲ್ಲರಿಗೂ ಗೊತ್ತಿದೆ. ಹೆಚ್ಚು ಎಕ್ಸಪರಿಮೆಂಟ್ ಮಾಡಲು ಹೋಗದೆ ಇರುವ ಆಟಗಾರರ ಮೇಲೆಯೇ ವಿಶ್ವಾಸ ಇಟ್ಟು ಧೈರ್ಯ ತುಂಬುವ ಕೆಲಸ ದ್ರಾವಿಡ್ ಮಾಡಿದ್ದರು. ಬಿಸಿಸಿಐ ಅವರಿಗೆ 5 ಕೋಟಿ ನಗದು ಬಹುಮಾನ ಕೊಟ್ಟದ್ದನ್ನು ನಿರಾಕರಿಸಿ ತನ್ನ ಸಹಾಯಕರಿಗೆ ಕೊಟ್ಟ ಎರಡೂವರೆ ಕೋಟಿ ಸಾಕು ಎಂದು ಮತ್ತೆ ದುಡ್ಡು ಹಿಂದಿರುಗಿಸಿದ್ದಾರೆ!
ಒಂದೆರಡು ವರ್ಷಗಳ ಹಿಂದೆ ಬೆಂಗಳೂರು ವಿವಿ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿದಾಗ ಅದನ್ನು ನಯವಾಗಿ ನಿರಾಕರಿಸಿದವರು ಇದೇ ದ್ರಾವಿಡ್! ಅದಕ್ಕೆ ಅವರು ಕೊಟ್ಟ ಕಾರಣವೂ ಅದ್ಭುತವಾಗಿ ಇತ್ತು. ‘ ಈ ಡಾಕ್ಟರೇಟ್ ಪದವಿ ಪಡೆಯಲು ನನ್ನ ಹೆಂಡತಿ ಏಳು ವರ್ಷಗಳ ಕಾಲ ಓದಿ ಸಂಶೋಧನೆ ಮಾಡಿದ್ದಾರೆ. ನಾನು ಯಾವ ಸಂಶೋಧನೆಯೂ ಮಾಡಿಲ್ಲ. ಮತ್ತೆ ಯಾಕೆ ನನಗೆ ಗೌರವ ಡಾಕ್ಟರೇಟ್?’
ಏಕದಿನದ ವಿಶ್ವಕಪನಲ್ಲಿ ಈ ಬಾರಿ ಭಾರತ ಫೈನಲ್ ತನಕ ಹೋದದ್ದು, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಕೂಟದಲ್ಲಿ ಕೂಡ ಫೈನಲ್ ತನಕ ಸಾಗಿ ಬಂದದ್ದು ದ್ರಾವಿಡ್ ಅವರ ಕೋಚಿಂಗ್ ಬಲದಿಂದ ಎನ್ನುವುದು ನೂರಕ್ಕೆ ನೂರು ನಿಜ.
ಇದೀಗ ಭಾರತೀಯ ಕ್ರಿಕೆಟ್ ತಂಡದ ಕೋಚಿಂಗ್ ಹುದ್ದೆಯಿಂದ ಅವರು ಕೆಳಗೆ ಇಳಿದಿದ್ದಾರೆ. ಭಾರತವನ್ನು ಕಿಕೆಟ್ ಜಗತ್ತಿನಲ್ಲಿ ಹೊಳೆಯುವಂತೆ ಮಾಡಿದ್ದಾರೆ. 20 ವರ್ಷ ಭಾರತಕ್ಕಾಗಿ ಆಡಿದ್ದಾರೆ. ಅಂತಹ ಮಹಾಗುರು ಭಾರತರತ್ನ ಪ್ರಶಸ್ತಿಗೆ ಅತ್ಯಂತ ಅರ್ಹರಿದ್ದಾರೆ. ಕನಿಷ್ಠ ಪಕ್ಷ ಕರ್ನಾಟಕ ಸರಕಾರ ಅವರನ್ನು ದೊಡ್ಡದಾಗಿ ಸನ್ಮಾನಿಸುವ ಅಗತ್ಯ ಕೂಡ ಇದೆ.