ಅಹಮದಾಬಾದ್ : ಐಪಿಎಲ್ 16ನೇ ಆವೃತ್ತಿಯಲ್ಲಿ (IPL 2023) ಉದ್ಘಾಟನಾ ಕಾರ್ಯಕ್ರಮದಲ್ಲಿ ಕನ್ನಡತಿ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಪುಷ್ಪ ಸಿನಿಮಾದ ಹಾಡುಗಳಿಗೆ ಕುಣಿದು ಕ್ರಿಕೆಟ್ ಪ್ರೇಮಿಗಳ ಮನ ತಣಿಸಿದರು. ಸಾಮಿ ಸಾಮಿ ಹಾಡಿಗೆ ಅವರು ಕುಣಿಯುತ್ತಿದ್ದಂತೆ ಕ್ರಿಕೆಟ್ ಪ್ರೇಮಿಗಳು ಹರ್ಷದಿಂದ ಕುಣಿದು ಕುಪ್ಪಳಿಸಿದರು. ಈ ಮೂಲಕ ಕ್ರಿಕೆಟ್ನ ಸವಿ ಉಣಲು ಕಾಯುತ್ತಿದ್ದ ಅಭಿಮಾನಿಗಳು ಮೋಹಕ ತಾರೆಯ ನೃತ್ಯ ವೈಭವವನ್ನು ಕಣ್ತುಂಬಿಕೊಂಡರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮೊದಲಿಗೆ ಅರಿಜಿತ್ ಸಿಂಗ್ ಅವರು ಗಾನ ಲಹರಿ ನಡೆಯಿತು. ಜನಪ್ರಿಯ ಹಾಡುಗಳಿಗೆ ಧ್ವನಿಯಾದ ಅವರು ಐಪಿಎಲ್ ಶುಭಾರಂಭಕ್ಕೆ ಕಿಚ್ಚು ಹಚ್ಚಿದರು. ಬಳಿಕ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರಿಂದ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ತಮಿಳು, ಪಂಜಾಬಿ ಸೇರಿದಂತೆ ಹಲವು ಹಾಡುಗಳಿಗೆ ಡಾನ್ಸ್ ಮಾಡಿದರು. ಬಳಿಕ ವೇದಿಕೆಗೆ ರಶ್ಮಿಕಾ ಅವರ ಆಗಮನವಾಯಿತು. ರಶ್ಮಿಕಾ ಬರುತ್ತಿದ್ದಂತೆ ಸ್ಟೇಡಿಯಮ್ನಲ್ಲಿ ನೆರೆದಿದ್ದ ಕ್ರಿಕೆಟ್ ಪ್ರೇಮಿಗಳ ಸಂಭ್ರಮ ಹೆಚ್ಚಾಯಿತು.
ಮೊದಲಿಗೆ ತಮಿಳು ಹಾಗೂ ಗುಜರಾತಿ ಭಾಷೆಯಲ್ಲಿ ಎಲ್ಲರಿಗೂ ಶುಭ ಹಾರೈಕೆ ತಿಳಿಸಿದ ರಶ್ಮಿಕಾ ಮಂದಣ್ಣ ಬಳಿಕ ನೃತ್ಯ ಶುರು ಮಾಡಿದರು. ಪುಷ್ಪ ಚಿತ್ರದ ಸಾಮಿ ಸಾಮಿ ಹಾಡಿನ ಮೂಲಕ ಮೈ ಬಳುಕಿಸಲು ಆರಂಭಿಸಿದ ಅವರು, ಅದೇ ಸಿನಿಮಾದ ಶ್ರೀವಲ್ಲಿ ಹಾಡಿಗೂ ಡಾನ್ಸ್ ಮಾಡಿದರು. ಬಳಿಕ ಆಸ್ಕರ್ ಪ್ರಶಸ್ತಿ ವಿಜೇತ ಹಾಡು ಆರ್ಆರ್ಆರ್ ಸಿನಿಮಾದ ನಾಟು ನಾಟು ಹಾಡಿಗೆ ಕಾಲು ಕುಣಿಸಿದರು.
ನಿರೀಕ್ಷೆಗೂ ಮೀರಿ ನೃತ್ಯ ಪ್ರದರ್ಶನ ನೀಡಿದ ರಶ್ಮಿಕಾ ಮಂದಣ್ಣ ಅವರು ನೆರೆದಿದ್ದ ಪ್ರೇಕ್ಷಕರಿಗೆ ಖುಷಿ ನೀಡಿದರು. ಅವರು ಡಾನ್ಸ್ ಮಾಡುವು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು.
ಗಣ್ಯರೊಂದಿಗೆ ಸಮಾಗಮ
ಗಾಯಕ ಅರಿಜಿತ್ ಸಿಂಗ್, ನಟಿ ತಮನ್ನಾ ಭಾಟಿಯಾ ಹಾಗೂ ರಶ್ಮಿಕಾ ಮಂದಣ್ಣ ಅವರನ್ನು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಬಿಸಿಸಿಐ ಕಾರ್ಯದರ್ಶಿ ಜಯ್ಶಾ, ಖಜಾಂಜಿ ಅರುಣ್ ಧುಮಾಲ್ ಸೇರಿದಂತೆ ಗಣ್ಯರು ಅಭಿನಂದಿಸಿದರು.
ಪಂದ್ಯಗಳ ಮಾದರಿ
ಈ ಬಾರಿಯ ಟೂರ್ನಿಯಲ್ಲಿ ಹತ್ತು ತಂಡಗಳನ್ನು ತಲಾ 5 ತಂಡಗಳ ಎರಡು ಗುಂಪುಗಳಾಗಿ ಬಿಂಗಡಿಸಲಾಗಿದೆ. ಗುಂಪು ಹಂತದಲ್ಲಿ ತಂಡವೊಂದು ತನ್ನದೇ ಗುಂಪಿನ ಉಳಿದ 4 ತಂಡಗಳ ವಿರುದ್ಧ ತಲಾ 2 ಪಂದ್ಯಗಳನ್ನು ಆಡಬೇಕು. ಆಗ ತಂಡವೊಂದು 8 ಪಂದ್ಯಗಳನ್ನು ಆಡಿದಂತಾಗುತ್ತದೆ. ಬಳಿಕ ಎರಡೂ ಗುಂಪುಗಳ ತಂಡಗಳ ನಡುವೆ ಪಂದ್ಯಗಳು ಆರಂಭವಾಗುತ್ತವೆ. ಅಂದರೆ ಮೊದಲ ಗುಂಪಿನ ಒಂದು ತಂಡ, ಇನ್ನೊಂದು ಗುಂಪಿನ ತಂಡವೊಂದರ ವಿರುದ್ಧ ತಲಾ 2 ಪಂದ್ಯಗಳನ್ನು ಆಡುತ್ತದೆ. ಇತರ ನಾಲ್ಕು ತಂಡಗಳ ವಿರುದ್ಧ ತಲಾ 1 ಪಂದ್ಯ ಆಡಲಾಗುತ್ತದೆ. ಇದೇ ಮಾದರಿ ಇತರ ತಂಡಗಳಿಗೂ ಈ ಅನ್ವಯವಾಗುತ್ತದೆ. ಅಲ್ಲಿಗೆ ತಂಡವೊಂದು ಲೀಗ್ ಹಂತದಲ್ಲಿ 14 ಪಂದ್ಯಗಳನ್ನಾಡಿದಂತಾಗುತ್ತದೆ.
ಇದನ್ನೂ ಓದಿ IPL 203 : ಐಪಿಎಲ್ 16ನೇ ಆವೃತ್ತಿಯ ವೇಳಾಪಟ್ಟಿ ಇಲ್ಲಿದೆ
ಇಂಪ್ಯಾಕ್ಟ್ ಪ್ಲೇಯರ್
ಆಸ್ಟ್ರೇಲಿಯದ ಪ್ರತಿಷ್ಠಿತ ಬಿಗ್‌ಬಾಶ್ ಟಿ20 ಲೀಗ್‌ನಲ್ಲಿ ಚಾಲ್ತಿಯಲ್ಲಿರುವ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಈ ಬಾರಿ ಐಪಿಎಲ್ನಲ್ಲಿಯೂ ಪರಿಚಯಿಸಲಾಗಿದೆ. ಈ ನಿಯಮದ ಪ್ರಮಾರ ತಂಡವೊಂದು ಆಡುತ್ತಿರುವಾಗ ಪರಿಸ್ಥಿತಿಗೆ ಅನುಗುಣವಾಗಿ ಒಬ್ಬ ಬದಲಿ ಆಟಗಾರನನ್ನು ಕಣಕ್ಕಿಳಿಸಬಹುದು. ಪ್ಲೇಯಿಂಗ್ ಇಲೆವನ್ ಬಳಗದಿಂದ ಹೊರಗಿರುವ ಒಬ್ಬ ಆಟಗಾರನನ್ನು ತಂಡಕ್ಕೆ ಆಡುವ ಬಳಗಕ್ಕೆ ಸೇರಿಸಿಕೊಳ್ಳಬಹುದು. ಇನಿಂಗ್ಸ್ ಆರಂಭಕ್ಕೂ ಮುನ್ನ, ಒಂದು ಓವರ್ ಮುಗಿದ ಮೇಲೆ, ವಿಕೆಟ್ ಬಿದ್ದಾಗ, ಓವರ್‌ಗಳ ನಡುವಿನ ವಿರಾಮದಲ್ಲಿ ಈ ನಿಯಮವನ್ನು ಬಳಸಬಹುದು. ಈ ನಿಯಮದನ್ವಯ ಒಬ್ಬ ಬದಲಿ ಆಟಗಾರನನ್ನು ಮಾತ್ರ ಬದಲಿಸಲು ಅವಕಾಶವಿರಲಿದೆ.