ನವ ದೆಹಲಿ : ೨೦ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳ ವಿಜೇತ ಸ್ವಿಜರ್ಲೆಂಡ್‌ನ ಟೆನಿಸ್ ತಾರೆ ರೋಜರ್ ಫೆಡರರ್ ವೃತ್ತಿ ಕ್ರೀಡೆಗೆ ಗುರುವಾರ ವಿದಾಯ ಘೋಷಿಸಿದ್ದಾರೆ. ಲೇವರ್ ಕಪ್ ೨೦೨೨ರ ಬಳಿಕ ಅಂತಾರಾಷ್ಟ್ರೀಯ ಟೆನಿಸ್ ಅಂಗಣದಿಂದ ಅವರು ಹೊರಕ್ಕುಳಿಯಲಿದ್ದು, ತಮ್ಮ ನಿವೃತ್ತಿಯ ಕುರಿತು ಸುದೀರ್ಘವಾದ ಪತ್ರವೊಂದನ್ನು ಬರೆದಿದ್ದಾರೆ.
ಲೇವರ್ ಕಪ್ ಸೆಪ್ಟೆಂಬರ್‌೨೩ರಿಂದ ಲಂಡನ್‌ನಲ್ಲಿ ನಡೆಯಲಿದ್ದು, ATP ಟೂರ್‌ನ ಈ ಟೆನಿಸ್ ಟೂರ್ನಿ ಅವರ ವೃತ್ತಿ ಟೆನಿಸ್‌ನ ಕೊನೇ ಸ್ಪರ್ಧೆಯಾಗಿದೆ.
ತಮ್ಮ ಅಭಿಮಾನಿಗಳು ಹಾಗೂ ಹಿತೈಷಿಗಳಿಗೆ ಧನ್ಯವಾದ ಹೇಳಿರುವ ಅವರು, ೪೧ ವರ್ಷವಾಗಿರುವುದರಿಂದ ಇದು ವಿದಾಯಕ್ಕೆ ಸೂಕ್ತ ಕಾಲ ಎಂದು ಹೇಳಿದ್ದಾರೆ.
“ನನಗೆ ೪೧ ವರ್ಷವಾಗಿದ್ದು, ೧೫೦೦ಕ್ಕೂ ಹೆಚ್ಚು ಟೆನಿಸ್ ಪಂದ್ಯಗಳಲ್ಲಿ ಪಾಲ್ಗೊಂಡಿದ್ದೇನೆ. ೨೪ ವರ್ಷಗಳ ನನ್ನ ವೃತ್ತಿ ಕ್ರೀಡೆಯಲ್ಲಿ ನಾನು ನಿರೀಕ್ಷೆ ಮಾಡಿದ್ದಕ್ಕಿಂತಲೂ ಹೆಚ್ಚಿನದನ್ನು ಪಡೆದುಕೊಂಡಿದ್ದೇನೆ. ಸ್ಪರ್ಧಾತ್ಮಕ ಕ್ರೀಡೆಗೆ ವಿದಾಯ ಹೇಳುವ ದಿನಗಳು ಬಂದಿದೆ ಎಂಬ ಅರಿವಾಗಿದೆ,’ ಎಂದು ಅವರು ಬರೆದುಕೊಂಡಿದ್ದಾರೆ.
ಇದರೊಂದಿಗೆ ವಿಶ್ವ ಟೆನಿಸ್‌ನಲ್ಲಿ ಬಿಗ್ ತ್ರೀಗಳಾದ ಫೆಡರರ್, ರಾಫೆಲ್ ನಡಾಲ್ ಹಾಗೂ ನೊವಾಕ್ ಜೊಕೊವಿಕ್ ನಡುವಿನ ಹೋರಾಟ ಅಂತ್ಯವಾಗಿದೆ. ಕಳೆದ 24 ವರ್ಷಗಳಿಂದ ಫೆಡರರ್ ಸುಮಾರು 1526 ಸಿಂಗಲ್ಸ್, 223 ಡಬಲ್ಸ್ ಪಂದ್ಯಗಳನ್ನಾಡಿದ್ದಾರೆ. 20 ಗ್ರ್ಯಾನ್ ಸ್ಲಾಮ್‌ಗಳ ಜತೆ ಫೆಡರರ್ 103 ಎಟಿಪಿ ಪ್ರಶಸ್ತಿಗಳನ್ನೂ ಗೆದ್ದಿದ್ದಾರೆ. 2018ರಲ್ಲಿ ಕೊನೇ ಬಾರಿಗೆ ವಿಶ್ವ ನಂಬರ್ ಒನ್ ಅಲಂಕರಿಸಿದ್ದರು. 2003ರಲ್ಲಿ ಮೊದಲ ಗ್ರ್ಯಾನ್‌ಸ್ಲಾಮ್ ಟ್ರೋಫಿ ಜಯಿಸಿದ್ದ ಫೆಡರರ್, 2018ರಲ್ಲಿ ಕಡೇ ಬಾರಿಗೆ ಆಸ್ಟ್ರೇಲಿಯಾ ಓಪನ್ ಜಯಿಸಿದ್ದರು.
ದಾಖಲೆ ಸರದಾರ
ರೋಜರ್ ಫೆಡರರ್ ಸಾರ್ವಕಾಲಿಕ ಶ್ರೇಷ್ಠ ಟೆನಿಸ್ ಆಟಗಾರನಾಗಿದ್ದು, ಪುರುಷರ ಸಿಂಗಲ್ಸ್‌ನಲ್ಲಿ ೨೦ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಮೊದಲ ಆಟಗಾರ ಎಂಬ ದಾಖಲೆ ಸೃಷ್ಟಿಸಿದ್ದರು. ಅದಕ್ಕಿಂತ ಮೊದಲು ಅವರು ೧೫ ಗ್ರ್ಯಾನ್ ಸ್ಲಾಮ್ ಟ್ರೋಫಿಗಳನ್ನು ಗೆಲ್ಲುವ ಮೂಲಕ ಅಮೆರಿಕದ ಟೆನಿಸ್ ದೈತ್ಯ ಪೀಟ್ ಸಾಂಪ್ರಸ್ ಅವರ ವಿಶ್ವ ದಾಖಲೆ ಮುರಿದಿದ್ದರು. ಅದೇ ರೀತಿ ೨೦೧೮ರಲ್ಲಿ ಅವರು ವಿಶ್ವ ನಂಬರ್ ಒನ್ ಸ್ಥಾನ ಅಲಂಕರಿಸುವಾಗ ೩೬ ವರ್ಷಗಳು. ಈ ಮೂಲಕ ಈ ಸಾಧನೆ ಮಾಡಿದ ಹಿರಿಯ ಆಟಗಾರ ಎಂಬ ಖ್ಯಾತಿಯನ್ನು ತಮ್ಮದಾಗಿಸಿಕೊಂಡಿದ್ದರು.
ಎರಡು ವರ್ಷಗಳ ಹಿಂದೆ ಅವರು ಮಂಡಿಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಅಲ್ಲಿಂದ ಅವರಿಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ೨೦೨೧ರ ವಿಂಬಲ್ಡನ್‌ನಲ್ಲಿ ಆಡಿದ್ದ ಅವರು ಪೋಲೆಂಡ್‌ನ ಹುಬರ್ಟ್ ಹರ್ಕಾಜ್ ವಿರುದ್ಧದ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು ಕಂಡಿದ್ದರು.
ಇದನ್ನೂ ಓದಿ | US OPEN | ಟೆನಿಸ್ ದಿಗ್ಗಜ ರಾಫಾ ಜೈತ್ರಯಾತ್ರೆ ಮುಂದುವರಿಸಿದ ಯುವ ತಾರೆ ಕಾರ್ಲೊಸ್ ಅಲ್ಕರಾಝ್