Site icon Vistara News

ಟೆನಿಸ್‌ಗೆ ವಿದಾಯ ಹೇಳುವರೇ ರೋಜರ್‌ ಫೆಡರರ್‌

ರೋಜರ್‌ ಫೆಡರರ್‌

ಲಂಡನ್‌: ಸ್ವಿಜರ್ಲೆಂಡ್‌ನ ಟೆನಿಸ್‌ ಪ್ರತಿಭೆ ರೋಜರ್‌ ಫೆಡರರ್‌ ವೃತ್ತಿ ಟೆನಿಸ್‌ಗೆ ವಿದಾಯ ಹೇಳುವರೇ ಎಂಬ ಅನುಮಾನ ಹುಟ್ಟಿಕೊಂಡಿದೆ. ಡಚ್‌ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಸುಳಿವು ನೀಡಿದ್ದಾರೆ.

೪೦ ವರ್ಷದ ಹಿರಿಯ ಆಟಗಾರ ಕಳೆದ ವಿಂಬಲ್ಡನ್‌ ವೇಳೆ ಗಾಯದ ಸಮಸ್ಯೆಗೆ ಒಳಗಾಗಿದ್ದರು. ಅದರಿಂದ ಅವರು ಇನ್ನೂ ಚೇತರಿಸಿಕೊಂಡಿಲ್ಲ. ಗ್ರಾಸ್‌ ಕೋರ್ಟ್‌ ಸ್ಪೆಷಲಿಸ್ಟ್‌ (ಒಟ್ಟಾರೆ ೮ ವಿಂಬಲ್ಡನ್‌ ಪ್ರಶಸ್ತಿ) ಎನಿಸಿಕೊಂಡಿರುವ ಅವರಿಗೆ ಈ ಆವೃತ್ತಿಯಲ್ಲೂ ವಿಂಬಲ್ಡನ್‌ಗೆ ಮರಳಲು ಸಾಧ್ಯವಾಗಿಲ್ಲ. ಹೀಗಾಗಿ ನಿವೃತ್ತಿ ಬಗ್ಗೆ ಚಿಂತನೆ ನಡೆಸಿರಬಹುದು ಎನ್ನಲಾಗಿದೆ.

೨೦ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿಗಳ ಒಡೆಯನಾಗಿರುವ ಫೆಡರರ್‌ ಕಳೆದ ಒಂದು ವರ್ಷದಿಂದ ಟೆನಿಸ್‌ ಅಂಗಣದಿಂದ ಹೊರಗಿರುವ ಕಾರಣ ೧೦೦೦ಕ್ಕಿಂತಲೂ ಕೆಳಗಿನ ಶ್ರೇಯಾಂಕ ಹೊಂದಿದ್ದಾರೆ. ಇದು ಕಳೆದ ೨೫ ವರ್ಷಗಳ ಅವರ ಟೆನಿಸ್‌ ವೃತ್ತಿಯಲ್ಲಿ ಕನಿಷ್ಠ ಶ್ರೇಯಾಂಕ. ಇದೂ ಕೂಡ ಅವರ ನಿವೃತ್ತಿ ನಿರ್ಧಾರಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆ

ಏನು ಹೇಳಿದರು ಫೆಡರರ್‌?

ಡಚ್‌ ಪತ್ರಿಕೆಯೊಂದರ ಜತೆ ಮಾತನಾಡಿದ ಫೆಡರರ್‌, ನನಗೆ ಗೆಲುವೆಂದರೆ ಬಲು ಪ್ರೀತಿ. ಆದರೀಗ ಸ್ಪರ್ಧೆ ಮಾಡಲು ಸಾಧ್ಯವಾಗುತ್ತಿಲ್ಲ ಹಾಗೂ ಗೆಲ್ಲುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದಾದರೆ ಅದನ್ನು ನಿಲ್ಲಿಸುವುದೇ ಉತ್ತಮ. ಹೀಗಾಗಿ ನನಗಿನ್ನು ಟೆನಿಸ್‌ ಬೇಕಾಗಿಲ್ಲ ಎಂದು ಅನಿಸುತ್ತಿದೆ. ನನಗೆ ಖುಷಿ ಪಡಲು ಈಗ ಸಾಕಷ್ಟು ವಿಷಯಗಳಿವೆ. ಮಗ ಒಳ್ಳೆಯ ವಿಚಾರ ತೆಗೆದುಕೊಂಡು ಬಂದರೆ, ಮಗಳು ಒಳ್ಳೆಯ ಮಾರ್ಕ್‌ ಪಡೆದರೆ ಖುಷಿ ಪಡುವೆ,ʼʼ ಎಂದು ಹೇಳಿದ್ದಾರೆ.

೧೯೯೯ರಲ್ಲಿ ಟೆನಿಸ್‌ ಕ್ಷೇತ್ರಕ್ಕೆ ಧುಮುಕಿದ್ದ ಫೆಡರರ್‌ ಇದೇ ಮೊದಲ ಬಾರಿಗೆ ವಿಂಬಲ್ಡನ್‌ಗೆ ಅಲಭ್ಯರಾಗಿದ್ದಾರೆ. ಹೀಗಾಗಿ ನಿವೃತ್ತಿ ಬಗ್ಗೆ ಚಿಂತಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Wimbeldon : ಜೊಕೊವಿಕ್‌ಗೆ 21ನೇ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ

Exit mobile version