Site icon Vistara News

ಅಂತಿಮ ಪಂದ್ಯದಲ್ಲಿ ಸೋಲು, ರೋಜರ್‌ ಫೆಡರರ್‌ ಟೆನಿಸ್‌ಗೆ ಕಣ್ಣೀರಿನ ವಿದಾಯ

roger federer

ಲಂಡನ್‌: ಜಾಗತಿಕ ಖ್ಯಾತಿಯ ಟೆನಿಸ್‌ ಕ್ರೀಡಾಪಟು ರೋಜರ್‌ ಫೆಡರರ್‌ ಅಂತಾರಾಷ್ಟ್ರೀಯ ಟೆನಿಸ್‌ನ ಕೊನೆಯ ಪಂದ್ಯದಲ್ಲಿ ಸೋತು ವಿದಾಯ ಹೇಳಿದ್ದಾರೆ. ವಿಶೇಷವೆಂದರೆ, ಅವರ ಬಹುಕಾಲದ ಎದುರಾಳಿ ರಫೇಲ್‌ ನಡಾಲ್‌ ಅವರು ಅಂತಿಮ ಡಬಲ್ಸ್‌ ಪಂದ್ಯದಲ್ಲಿ ಫೆಡರರ್‌ ಅವರ ಜತೆಗಾರನಾಗಿದ್ದರು.

ಇಂಗ್ಲೆಂಡ್‌ನಲ್ಲಿ ನಡೆದ ಲೇವರ್‌ ಕಪ್‌ ಪಂದ್ಯಾವಳಿಯ ಈ ಪಂದ್ಯ ತಮ್ಮ ವೃತ್ತಿ ಟೆನಿಸ್‌ನ ಅಂತಿಮ ಪಂದ್ಯವೆಂದು ಫೆಡರರ್‌ ಘೋಷಿಸಿದ್ದರು. 20 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳ ವಿಜೇತರಾದ ಅವರಿಗೆ ರಫೇಲ್‌ ನಡಾಲ್‌ ಬಹುಕಾಲದ ಎದುರಾಳಿಯಾಗಿದ್ದು, ಈ ಪಂದ್ಯದಲ್ಲಿ ಜತೆಗಾರನಾಗಿದ್ದರು. ಟೀಮ್‌ ವರ್ಲ್ಡ್‌ನ ಜ್ಯಾಕ್‌ ಸಾಕ್‌ ಮತ್ತು ಫ್ರಾನ್ಸೆಸ್‌ ತಿಯಾಫೊ ಅವರು ಎದುರಾಳಿಗಳಾಗಿದ್ದ ಈ ಪಂದ್ಯವನ್ನು ರೋಜರ್-‌ ನಡಾಲ್‌ ತಂಡ 4-6, 7-6, 7-6, 11-9 ಸೆಟ್‌ಗಳಲ್ಲಿ ಕಳೆದುಕೊಂಡಿತು.

ಪಂದ್ಯದ ಬಳಿಕದ ವಿದಾಯದ ಕ್ಷಣಗಳಲ್ಲಿ ರೋಜರ್‌ ಫೆಡರರ್‌ ಹಾಗೂ ರಫೇಲ್‌ ನಡಾಲ್‌ ಭಾವುಕರಾಗಿ ಕಣ್ಣೀರು ಹಾಕಿದ್ದು ಕಂಡುಬಂತು. ಪ್ರೇಕ್ಷಕರಿಗೂ, ಸಹ ಆಟಗಾರರಿಗೂ ಇದು ಭಾವುಕ ಕ್ಷಣವಾಗಿತ್ತು. ʼʼನನಗೆ ಇದೊಂದು ಸೆಲೆಬ್ರೇಷನ್‌ನ ಕ್ಷಣ. ಈ ಪಂದ್ಯಾಟ ಗ್ರೇಟ್‌ ಆಗಿತ್ತು. ರಫೇಲ್‌ ಜತೆ ಒಂದೇ ತಂಡದಲ್ಲಿ ಆಡಿದ್ದು ಮರೆಯಲಾಗದ ಕ್ಷಣ. ಎಲ್ಲರಿಗೂ ಧನ್ಯವಾದ. ಇಂಥದೊಂದು ಸಂಪೂರ್ಣ ಕ್ಷಣವನ್ನು ನಾನು ಬಯಸಿದ್ದೆ, ಹಾಗೇ ಘಟಿಸಿದೆʼʼ ಎಂದು ಫೆಡರರ್‌ ಬಳಿಕ ನುಡಿದರು.‌

ಇದನ್ನೂ ಓದಿ | Roger Federer | ಟೆನಿಸ್‌ ಕ್ಷೇತ್ರದ ಲೆಜೆಂಡ್‌ ಫೆಡರರ್‌ ಸೃಷ್ಟಿಸಿರುವ ಸಾಧನೆಯ ಮೈಲುಗಲ್ಲುಗಳು

ಪಂದ್ಯಾಟದ ಕ್ಷಣಗಳು ಆರಂಭದಿಂದಲೇ ಭಾವುಕವಾಗಿದ್ದವು. 41 ವರ್ಷದ ಫೆಡರರ್‌ ಹಾಗೂ ನಡಾಲ್‌ ಜತೆಯಾಗಿ ಅಂಗಣಕ್ಕಿಳಿದಾಗ 17,500 ಮಂದಿ ಸೇರಿದ್ದ ಪ್ರೇಕ್ಷಾಂಗಣ ಎದ್ದು ನಿಂತು ಗೌರವ ಸೂಚಿಸಿತು. ಇತ್ತೀಚೆಗೆ ವಿಂಡಲ್ಡನ್‌ನಲ್ಲಿ ಉಂಡ ಸೋಲು ಹಾಗೂ ಮೊಣಕಾಲಿನ ಸರ್ಜರಿಗಳು ಫೆಡರರ್‌ ಅವರ ಶಕ್ತಿಯನ್ನು ತುಸು ಉಡುಗಿಸಿದ್ದವು.

ಸ್ವಿಜರ್‌ಲ್ಯಾಂಡ್‌ನಲ್ಲಿ ಜನಿಸಿದ ಫೆಡರರ್‌, ವಿಶ್ವ ಟೆನಿಸ್‌ ರ್ಯಾಂಕಿಂಗ್‌ನಲ್ಲಿ ಸತತ 310 ವಾರಗಳ ಕಾಲ ಮೊದಲ ರ್ಯಾಂಕ್‌ನಲ್ಲಿದ್ದರು. 103 ಸಿಂಗಲ್‌ ಟೈಟಲ್‌ಗಳು ಗೆದ್ದುಕೊಂಡಿದ್ದು, ಈ ಸಾಧನೆ ಮಾಡಿದ ಎರಡನೇ ಆಟಗಾರ. 20 ಗ್ರ್ಯಾನ್‌ ಸ್ಲಾಮ್‌ಗಳು ಅವರ ಖಾತೆಯಲ್ಲಿವೆ. ವಿಂಬಲ್ಡನ್‌ ಪುರುಷರ ಟೈಟಲ್‌ನ್ನು ದಾಖಲೆಯ 8 ಬಾರಿ ತಮ್ಮದಾಗಿಸಿಕೊಂಡಿದ್ದರು. ಈ ಕಾಲದ ಟೆನಿಸ್‌ ತ್ರಿಮೂರ್ತಿಗಳಲ್ಲಿ (ರಫೇಲ್‌ ನಡಾಲ್‌, ನೊವಾಕ್‌ ಜೊಕೊವಿಕ್‌ ಇನ್ನಿಬ್ಬರು) ಒಂದು ನಿರ್ಗಮಿಸಿದಂತಾಗಿದೆ.

ಇದನ್ನೂ ಓದಿ | Roger Federer | ವೃತ್ತಿ ಟೆನಿಸ್‌ನ ನಿವೃತ್ತಿ ಕುರಿತು ರೋಜರ್‌ ಫೆಡರರ್‌ ಹೇಳಿದ್ದೇನು?

Exit mobile version