ಇಸ್ಲಾಮಾಬಾದ್: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ (Sania Mirza) ಹಾಗೂ ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರ ದಾಂಪತ್ಯ ಅಂತ್ಯವಾಗಿದೆ. ಶೋಯೆಬ್ ಮಲಿಕ್ (Shoaib Malik) ಅವರು ಅವರು ಪಾಕಿಸ್ತಾನದ ನಟಿ ಸನಾ ಜಾವೇದ್ (Sana Javed) ಅವರನ್ನು ಮದುವೆಯಾಗಿದ್ದಾರೆ. ಇದರೊಂದಿಗೆ ಸಾನಿಯಾ ಹಾಗೂ ಶೋಯೆಬ್ ನಡುವಿನ 13 ವರ್ಷದ ದಾಂಪತ್ಯವು ಕೊನೆಗೊಂಡಂತಾಗಿದೆ. ಸನಾ ಜಾವೇದ್ ಜತೆ ಮದುವೆಯಾದ ಫೋಟೊಗಳನ್ನು ಶೋಯೆಬ್ ಮಲಿಕ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕೆಲ ತಿಂಗಳಿಂದಲೂ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಬಿಟ್ಟಿದೆ. ಇಬ್ಬರೂ ವಿಚ್ಛೇದನ ಪಡೆದಿದ್ದಾರೆ ಎಂಬ ವದಂತಿಗಳು ಹರಡಿದ್ದವು. “ಒಡೆದ ಹೃದಯ ಎಲ್ಲಿಗೆ ಹೋಗುತ್ತದೆ? ಅಲ್ಲಾನ ಬಳಿ” ಎಂಬುದಾಗಿ ಸಾನಿಯಾ ಮಿರ್ಜಾ ಅವರು ಪೋಸ್ಟ್ ಮಾಡಿದ್ದು ಕೂಡ ವೈರಲ್ ಆಗಿತ್ತು. ಹಾಗಾಗಿ, ಇಬ್ಬರೂ ವಿಚ್ಛೇದನ ಪಡೆದುಕೊಂಡಿದ್ದಾರೆ ಎನ್ನಲಾಗಿತ್ತು.
– Alhamdullilah ♥️
— Shoaib Malik 🇵🇰 (@realshoaibmalik) January 20, 2024
"And We created you in pairs" وَخَلَقْنَاكُمْ أَزْوَاجًا pic.twitter.com/nPzKYYvTcV
ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ಅವರು 2010ರಲ್ಲಿ ಮದುವೆಯಾಗಿದ್ದರು. ಹೈದರಾಬಾದ್‌ನ ತಾಜ್ ಕೃಷ್ಣಾ ಹೋಟೆಲ್‌ನಲ್ಲಿ ಹೈದರಾಬಾದ್ ಮುಸ್ಲಿಂ ಸಮುದಾಯದ ಸಂಪ್ರದಾಯದಂತೆ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಗೆ ಇಜಾನ್ ಎಂಬ ಪುತ್ರನಿದ್ದಾನೆ.
ಶೋಯೆಬ್ ಮಲಿಕ್ ಹಾಗೂ ಪಾಕಿಸ್ತಾನದ ನಟಿ ಆಯೇಷಾ ಒಮರ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಕೂಡ ಇದಕ್ಕೂ ಮೊದಲು ಕೇಳಿಬಂದಿದ್ದವು. ಆದರೆ, ವಿಚ್ಛೇದನದ ಕುರಿತು ಸಾನಿಯಾ ಮಿರ್ಜಾ ಆಗಲಿ, ಶೋಯೆಬ್ ಮಲಿಕ್ ಆಗಲಿ, ಇದುವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೀಗ, ಶೋಯೆಬ್ ಮಲಿಕ್ ಅವರು ಸನಾ ಜಾವೇದ್ ಅವರನ್ನು ಮದುವೆಯಾಗುವ ಮೂಲಕ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಶೋಯೆಬ್ ಮಲಿಕ್ ಅವರಿಗೆ ಇದು ಮೂರನೇ ಮದುವೆಯಾದರೆ, ಸನಾ ಜಾವೇದ್ ಅವರಿಗೆ ಎರಡನೇ ಮದುವೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Sania Mirza: ಸಾನಿಯಾ ಮಿರ್ಜಾ ಭಾರತದ ಚಾಂಪಿಯನ್; ಪ್ರಧಾನಿ ಮೋದಿ ಪ್ರಶಂಸೆ
ಸಾನಿಯಾ ಹೆಸರು ತೆಗೆದಿದ್ದ ಶೋಯೆಬ್
ಶೋಯೆಬ್ ಮಲಿಕ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ “ಈ ಜಗತ್ತಿನಲ್ಲಿ ತಂದೆಯ ಆಶೀರ್ವಾದಕ್ಕಿಂತ ಮಿಗಿಲಾದದ್ದು ಯಾವುದು ಇಲ್ಲ” ಎಂದು ಬರೆದುಕೊಂಡಿದ್ದರು. ಜತೆಗೆ ಇನ್‌ಸ್ಟಾಗ್ರಾಮ್ ಬಯೋದಿಂದ ‘ಸಾನಿಯಾ ಮಿರ್ಜಾ ಅವರ ಪತಿ’ ಎಂಬುದನ್ನು ಕೂಡ ಅಳಿಸಿ ಹಾಕಿದ್ದರು. ಈ ಹಿಂದೆ ಮಲಿಕ್ ಇನ್‌ಸ್ಟಾಗ್ರಾಮ್ ಬಯೋದಲ್ಲಿ ‘ಸೂಪರ್ ಮಹಿಳೆ ಸಾನಿಯಾ ಮಿರ್ಜಾ ಅವರ ಪತಿ’ ಎಂದು ಬರೆದುಕೊಂಡಿದ್ದರು. ಆದರೆ ಇದೀಗ ಬಯೋವನ್ನು ಮಲಿಕ್ ಎಡಿಟ್ ಮಾಡಿ ಸಾನಿಯಾ ಮಿರ್ಜಾ ಅವರಿಂದ ದೂರವಾಗುತ್ತಿರುವ ಸುಳಿವನ್ನು ನೀಡಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ