ನವದೆಹಲಿ: T20 Ind vs SA: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಗುರುವಾರ ನವದೆಹಲಿಯಲ್ಲಿ ನಡೆಯಲಿದೆ. ಘಟಾನುಘಟಿಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರಿತ್ ಬೂಮ್ರಾ ಈ ಟೂರ್ನಮೆಂಟ್‌ನಿಂದ ಬಿಡುವು ಪಡೆದುಕೊಂಡಿದ್ದಾರೆ. ಇವರುಗಳ ಅನುಪಸ್ಥಿತಿಯಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ನಾಯಕತ್ವದಲ್ಲಿ, ದಿಗ್ಗಜ ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಹರಿಣಗಳ ಪಡೆಯನ್ನು ಹಣಿಯಲು ಸಜ್ಜಾಗುತ್ತಿದೆ.
ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಹಲವು ಹೊಸ ಮುಖಗಳಿಗೆ ಅವಕಾಶ ಸಿಗುವ ನಿರೀಕ್ಷೆ ಇದೆ. ಯುವ ಆಟಗಾರರಿಗೆ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಇದು ಛಾನ್ಸ್. ಹಾಗಾಗಿ ಆಡುವ ಬಳಗದಲ್ಲಿ ಯಾರೆಲ್ಲ ಸ್ಥಾನ ಗಿಟ್ಟಿಸಿಕೊಳ್ಳುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.
ಓಪನರ್ಸ್, ಸೀಮರ್ಸ್ ಡಿಬೇಟ್: ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕೆ.ಎಲ್. ರಾಹುಲ್ ಜತೆ ಯಾರು ಓಪನ್ ಮಾಡಲಿದ್ದಾರೆ ಎಂಬ ಚರ್ಚೆ ಜೋರಾಗಿದೆ. ಓಪನಿಂಗ್ ಬ್ಯಾಟಿಂಗ್ ಮಾಡಲು ಋತುರಾಜ್ ಗಾಯಕ್ವಾಡ್ ಹಾಗೂ ಇಶಾನ್ ಕಿಶನ್ ನಡುವೆ ಪೈಪೋಟಿ ನಡೆಯಲಿದೆ. ಈವರೆಗೆ ಇಬ್ಬರೂ ಉತ್ತಮ ಆಟವನ್ನು ಪ್ರದರ್ಶಿಸಿದ್ದು ಭರವಸೆಯನ್ನು ಮೂಡಿಸಿದ್ದಾರೆ. ಇನ್ನು ಭುವನೇಶ್ವರ್ ಕುಮಾರ್ ಅನುಭವಿ ವೇಗಿಯಾಗಿರುವುದರಿಂದ ಅವರ ಸ್ಥಾನ ಬಹುತೇಕ ಖಚಿತ. ಇದಲ್ಲದೆ ಆರ್‌ಸಿಬಿ ಸ್ಟಾರ್ ಹರ್ಷಲ್ ಪಟೇಲ್ ಕೂಡ ಆಡುವ ಬಳಗ ಸೇರುವ ಸಾಧ್ಯತೆ ಹೆಚ್ಚಿದೆ. ಕಾಶ್ಮೀರ ಎಕ್ಸ್‌ಪ್ರೆಸ್ ಉಮ್ರಾನ್ ಮಲಿಕ್, ಆವೇಶ್ ಖಾನ್ ಹಾಗೂ ಅರ್ಶ್‌ದೀಪ್ ಸಿಂಗ್ ನಡುವೆ ಒಂದು ಸ್ಥಾನಕ್ಕೆ ಸ್ಪರ್ಧೆ ನಡೆಯಲಿದೆ.
ಮಿಡಲ್ ಆರ್ಡರ್ ಸ್ಥಾನವನ್ನು ಯಾರು ತುಂಬುತ್ತಾರೆ?
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತದ ತಂಡದಲ್ಲಿ ದೀನೇಶ್ ಕಾರ್ತಿಕ್ ಸ್ಥಾನ ಪಡೆಯುವುದು ನಿಶ್ಚಿತವಾಗಿದೆ. ಆದರೆ, ಮಿಡಲ್ ಆರ್ಡರ್‌ಲ್ಲಿ ಯಾರಿಗೆ ಅವಕಾಶ ಸಿಗಲಿದೆ ಎಂಬ ಕುತೂಹಲ ಮೂಡಿಸಿದೆ.
ಭಾರತದ ಕ್ರಿಕೆಟ್ ತಂಡದಲ್ಲಿ ಮಿಡಲ್ ಆರ್ಡರ್ ಸ್ಥಾನಕ್ಕೆ ಅನೇಕ ಹೆಸರುಗಳು ಹರಿದಾಡುತ್ತಿವೆ. ಆದರೆ, ಈ ಸ್ಥಾನ ಒಂದು ರೀತಿ ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸುವ ಹಾಗಾಗಿದೆ. ಕೆಲವೇ ಕೆಲವು ಸ್ಥಾನ ಖಾಲಿ ಇದೆ ಆದರೆ ನಿರೀಕ್ಷೆ ಹೊಂದಿರುವ ಆಟಗಾರರ ಸಂಖ್ಯೆ ಮಾತ್ರ ಬಹಳಷ್ಟಿವೆ. ಪ್ರಮುಖವಾಗಿ ಇಬ್ಬರು ಆಟಗಾರರಿಗೆ ಅವಕಾಶವಿರುವುದು ಕಂಡುಬರುತ್ತದೆ.
- ಶ್ರೇಯಸ್ ಅಯ್ಯರ್: ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ಗಮನಸೆಳೆದಿದ್ದರು. ಆಗ ಮೂರನೇ ಕ್ರಮಾಂಕದಲ್ಲಿ ಆಡಿದ್ದರು. ಆದರೆ, ಇವರು ಈಗ ಫಾರ್ಮ್ ಕಳೆದುಕೊಂಡಿದ್ದಾರೆ. ಈ ಹಿಂದೆ ನಂ. 4ರಲ್ಲಿ ಬ್ಯಾಟಿಂಗ್ ಮಾಡಿಯೂ ಉತ್ತಮ ಆಟ ಪ್ರದರ್ಶಿಸಿದ್ದರು. ಹಾಗಾಗಿ ಆ ಸ್ಥಾನಕ್ಕೂ ಶ್ರೇಯಸ್ ಸೂಕ್ತರಾಗಿದ್ದಾರೆ. ಶ್ರೇಯಸ್ ಅವರ ಈವರೆಗಿನ ಆಟ ಗಮನಿಸಿದಾಗ ಅವರಿಗೆ ಪಿಚ್‌ಗೆ ಹೊಂದಿಕೊಂಡು ರನ್ ಹೊಡೆಯಲು ಸ್ವಲ್ಪ ಸಮಯ ಬೇಕಾಗುತ್ತದೆ.
- ದೀಪಕ್ ಹೂಡ: ದೀಪಕ್ ಹೂಡ ಈ ಬಾರಿ ಐಪಿಎಲ್‌ನಲ್ಲಿ ಉತ್ತಮ ಆಟ ಪ್ರದರ್ಶಿಸಿದ್ದಾರೆ. ನಂ 3 ಹಾಗೂ ನಂ 6 ಎರಡೂ ಕ್ರಮಾಂಕದಲ್ಲಿ ದೀಪಕ್ ಜವಾಬ್ಧಾರಿಯುತವಾದ ಆಟವನ್ನು ಆಡಿದ್ದಾರೆ. ದೀಪಕ್ ಬೌಲಿಂಗ್‌ನಲ್ಲಿ ಕೂಡ ಕೈಚಳಕವನ್ನು ತೋರುವ ಸಾಮರ್ಥ್ಯ ಹೊಂದಿದ್ದಾರೆ. ಹಾಗಾಗಿ ಇವರು ಆಲ್-ರೌಂಡರ್ ಆಗಿ ಕೂಡ ತಂಡಕ್ಕೆ ನೆರವಾಗುತ್ತಾರೆ.
ಎರಡನೇ ಸ್ಪಿನ್ನರ್ ಯಾರಾಗಬಹುದು?
ಭಾರತದ ನಂ. 1 ಸ್ಪಿನ್ ಬೌಲರ್ ಆಗಿರುವ ಯುಜುವೇಂದ್ರ ಚಾಹಲ್ ಈ ಬಾರಿ ಐಪಿಎಲ್‌ನಲ್ಲಿಯೂ ಭರವಸೆಯ ಆಟವನ್ನು ಪ್ರದರ್ಶಿಸಿದ್ದಾರೆ. ಈ ಸರಣಿಯಲ್ಲಿ ಯುಜುವೇಂದ್ರ ಚಾಹಲ್ ಸ್ಥಾನವನ್ನು ಪಡೆಯುವುದು ಖಚಿತ. ಆದರೆ ತಂಡಕ್ಕೆ ಇನ್ನೊಬ್ಬ ಸ್ಪಿನ್ನರ್‌ನ ಅವಶ್ಯಕತೆಯಿದ್ದು ಆ ಸ್ಥಾನ ಯಾರಿಗೆ ದಕ್ಕಬಹುದು? ಮೂವರು ಸ್ಪಿನ್ನರ್‌ಗಳ ಮಧ್ಯೆ ಈ ಸ್ಥಾನಕ್ಕೆ ಪೈಪೊಟಿ ನಡೆಯಲಿದೆ.
- ಅಕ್ಷರ್ ಪಟೇಲ್: ಉತ್ತಮ ಬೌಲಿಂಗ್ ಹಾಗೂ ಬ್ಯಾಟಿಂಗ್ ಶೈಲಿ ಹೊಂದಿರುವ ಅಕ್ಷರ್, ರವೀಂದ್ರ ಜಡೇಜಾ ಅವರ ಮಾದರಿಯಲ್ಲಿದ್ದಾರೆ. ಅಲ್ಲದೆ, ಅಕ್ಷರ್ ಎಡಗೈ ಸ್ಪಿನ್ನರ್ ಆಗಿರುವ ಕಾರಣ ಚಾಹಲ್ ಹಾಗೂ ಅಕ್ಷರ್ ಕಾಂಬಿನೇಷನ್ ವರ್ಕ್‌ಔಟ್ ಆಗುವ ನಿರೀಕ್ಷೆ ಇದೆ.
- ಕುಲ್ದೀಪ್ ಯಾದವ್: ಕುಲ್ದೀಪ್ ಯಾದವ್ ಎಡಗೈ ರಿಸ್ಟ್‌ಸ್ಪಿನ್ನರ್. ಅವರ ಬೌಲಿಂಗ್ ಶೈಲಿಯೇ ವಿಶೇಷವಾಗಿದೆ. ಈ ಬಾರಿ ಐಪಿಎಲ್‌ನಲ್ಲಿ ಕೂಡ ಅವರು ಉತ್ತಮ ಪ್ರದರ್ಶನ ನೀಡಿದ್ದರು.
- ರವಿ ಬಿಶ್ನೊಯ್: ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ರವಿ ಬಿಶ್ನೊಯ್ ಉತ್ತಮ ಇಂಪ್ರಶನ್ ಮೂಡಿಸಿದ್ದಾರೆ. ಚಾಹಲ್ ರೀತಿ ಇವರು ಕೂಡ ಲೆಗ್ ಸ್ಪಿನ್ನರ್. ಗೂಗ್ಲಿ ಹಾಗೂ ಲೆಗ್ ಸ್ಪಿನ್ ಮೂಲಕ ಮೂಡಿ ಮಾಡುವಲ್ಲಿ ಇವರೂ ಸಮರ್ಥರು.
ಇದನ್ನೂ ಓದಿ: T20 Ind v/s Sa | ರೋಹಿತ್, ಕೊಹ್ಲಿ, ಬೂಮ್ರಾ ಅನುಪಸ್ಥಿತಿಯಲ್ಲಿ ರಾಹುಲ್ ಪಡೆ ರೆಡಿ, ಯಾರೆಲ್ಲ ಆಡ್ತಾರೆ?