ನವ ದೆಹಲಿ : 2023 ರ ವಿಶ್ವಕಪ್ ಫೈನಲ್ ಪಂದ್ಯದ ಸೋಲಿನ ಬಳಿಕ ಭಾರತ ತಂಡ ಆಘಾತಕ್ಕೆ ಒಳಗಾಗಿದೆ. ಇದೇ ವೇಳೆ ಟೀಮ್ ಇಂಡಿಯಾದ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಅವರ ದೀರ್ಘ ಕಾಲದ ಜತೆಗಾರ, ಮ್ಯಾನೇಜರ್ ಹಾಗೂ ಉದ್ಯಮ ಪಾಲುದಾರ ಬಂಟಿ ಸಜ್ದೇ ಅವರಿಂದ ಪ್ರತ್ಯೇಕಗೊಂಡಿದ್ದಾರೆ. ಜೆರ್ರಿ ಮ್ಯಾಗೈರ್, ಕಾರ್ನರ್ ಸ್ಟೋನ್ ಸಂಸ್ಥಾಪಕರಾಗಿರುವ ಬಂಟಿ ಕೊಹ್ಲಿಯ ಪಾಲುದಾರಿಕೆಯನ್ನು ಬಿಟ್ಟು ಹೋಗುವುದಕ್ಕೆ ಕಾರಣ ಗೊತ್ತಿಲ್ಲ. ಆದರೆ ಕೊಹ್ಲಿ ಶೀಘ್ರದಲ್ಲೇ ತಮ್ಮದೇ ಆದ ಕಂಪನಿಯನ್ನು ಪ್ರಾರಂಭಿಸಲಿದ್ದಾರೆ ಮತ್ತು ಅದನ್ನು ನೋಂದಾಯಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.
“ಹೌದು, ಕೊಹ್ಲಿ ಮತ್ತು ಬಂಟಿ ಬಹಳ ದೀರ್ಘ ಮತ್ತು ಯಶಸ್ವಿನ ಪಾಲುದಾರಿಕೆ ಬಳಿಕ ಇದೀಗ ಬೇರ್ಪಟ್ಟಿದ್ದಾರೆ. ಕಾರ್ನರ್ ಸ್ಟೋನ್ ಸಂಸ್ಥೆಯಿಂದ ಬೇರ್ಪಟ್ಟ ಇತರ ಬಹಳಷ್ಟು ಕ್ರಿಕೆಟಿಗರು ಇದ್ದಾರೆ. ರೋಹಿತ್, ಕೆಎಲ್ ರಾಹುಲ್, ಅಜಿಂಕ್ಯ ರಹಾನೆ, ಶುಭ್ಮನ್ ಗಿಲ್ ಆ ಸಂಸ್ಥೆಯಿಂದ ಬೇರ್ಪಟ್ಟಿದ್ದರು. ಆದರೆ ಕೊಹ್ಲಿ ಈ ಸಂಸ್ಥೆ ಜತೆ ದೀರ್ಘ ಕಾಲದ ನಂಟು ಹೊಂದಿದ್ದರು. ಹೀಗಾಗಿ ಬಿಟ್ಟು ಹೋಗುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಇದೀಗ ಅವರ ಆ ಸಂಬಂಧವೂ ಮುಗಿದಿದೆ” ಎಂದು ಉದ್ಯಮದ ಮೂಲವೊಂದು ತಿಳಿಸಿದೆ.
2020ರಲ್ಲಿ, ಕರಣ್ ಜೋಹರ್ ಒಡೆತನದ ಧರ್ಮ ಪ್ರೊಡಕ್ಷನ್ಸ್. ಕಾರ್ನ್ ರ್ಸ್ಟೋನ್ ಸಹಭಾಗಿತ್ವದಲ್ಲಿ ಧರ್ಮ ಕಾರ್ನರ್ಸ್ಟೋನ್ ಏಜೆನ್ಸಿ (ಡಿಸಿಎ) ಎಂಬ ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯನ್ನು ಸ್ಥಾಪಿಸಿತ್ತು. ಆದಾಗ್ಯೂ, ಕಾರ್ನರ್ ಸ್ಟೋನ್ ಅವರೊಂದಿಗಿನ ಕೊಹ್ಲಿಯ ಪಾಲುದಾರಿಕೆ ಪ್ರತ್ಯೇಕವಾಗಿ ಮುಂದುವರಿದಿತ್ತು ಜೆವಿ ಎಂಬ ಹೊಸ ಸಂಸ್ಥೆಯ ಮೂಲಕ ಉದ್ಯಮದಲ್ಲಿತ್ತು.
ಕಾರ್ನರ್ ಸ್ಟೋನ್ ಸಂಸ್ಥೆಯಲ್ಲಿ ಬಂಟಿ ಇದ್ದರೂ ಅದನ್ನು ಕೊಹ್ಲಿಯೇ ನಡೆಸುತ್ತಿದ್ದಾರೆ ಎಂಬ ಜೋಕ್ ಉದ್ಯಮ ಕ್ಷೇತ್ರದಲ್ಲಿ ಇದೆ. ಆದರೀಗ ಇಂಥ ಒಪ್ಪಂದ ಮುರಿದು ಹೋಗಿದೆ.
ಇದನ್ನೂ ಓದಿ : Virat Kohli: ವಿರಾಟ್ ಕೊಹ್ಲಿ… ಕ್ರಿಕೆಟ್ ಲೋಕದ ‘ದೇವರ ದೇವ’!; ಇವರ ಬದುಕಿನ ಹಾದಿ ರೋಚಕ!
ಆತ್ಮೀಯ ಗೆಳೆಯರು
ಕಾರ್ನರ್ಸ್ಟೋನ್ ಕಂಪನಿಗಿಂತ ಹೆಚ್ಚಾಗಿ ಕೊಹ್ಲಿ ಹಾಗೂ ಬಂಟಿ ಜೀವದ ಗೆಳೆಯರು . ಬಂಟಿ ಕಂಪನಿಯ ವ್ಯವಸ್ಥಾಪಕ ಮತ್ತು ಸ್ಥಾಪಕನಿಗಿಂತ ಹೆಚ್ಚಾಗಿ ಕೊಹ್ಲಿಯ ವಾಣಿಜ್ಯ ಹಿತಾಸಕ್ತಿಗಳು ಮತ್ತು ಬ್ರಾಂಡ್ ಮೌಲ್ಯ ಮತ್ತು ಮೈದಾನದ ಹೊರಗಿನ ಎಲ್ಲ ಕಾರ್ಯಾಚರಣೆಗಳನ್ನು ನೋಡಿಕೊಳ್ಳುತ್ತಿದ್ದರು. ಪ್ರಮುಖ ಕ್ರಿಕೆಟ್ ವೇದಿಕೆಯಲ್ಲಿ ಬಂಟಿ ಕೊಹ್ಲಿಯ ಪಕ್ಕದಲ್ಲಿದ್ದರು. ಪೂಮಾದೊಂದಿಗೆ 100 ಕೋಟಿ ರೂ.ಗಳ ಒಪ್ಪಂದ ಸೇರಿದಂತೆ ಉನ್ನತ ಕಂಪನಿಗಳೊಂದಿಗೆ ಲಾಭದಾಯಕ ಒಪ್ಪಂದಗಳಿಗೆ ಅವರು ಸಹಿ ಹಾಕಿದ್ದರು.
ಕಾರ್ನರ್ ಸ್ಟೋನ್ ಕಂಪನಿಯು ಇತರ ಕ್ರೀಡಾಪಟುಗಳಿಗಿಂತ ಕೊಹ್ಲಿಯ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು. ಭಾರತದ ಮಾಜಿ ನಾಯಕ ಒಂದು ದಶಕದ ಹಿಂದೆ ಕಾರ್ನರ್ ಸ್ಟೋನ್ ಗೆ ಸೇರಿದ್ದರು. ಅಂದಿನಿಂದ ಬಂಟಿಯೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದರು.
ಯಾರೆಲ್ಲ ಇದ್ದಾರೆ ಕಾರ್ನರ್ಸ್ಟೋನ್ನಲ್ಲಿ?
ಕಾರ್ನರ್ ಸ್ಟೋನ್ ಕಂಪನಿಯು ಕೇವಲ ವಿರಾಟ್ ಮೇಲೆ ಕೇಂದ್ರೀಕರಣಗೊಂಡ ಕಾರಣ ರೋಹಿತ್ ಶರ್ಮಾ, ಕೆಎಲ್ ರಾಹುಲ್, ಅಜಿಂಕ್ಯ ರಹಾನೆ, ಶುಭ್ಮನ್ ಗಿಲ್ ಮತ್ತಿತರರು ಅದರಿಂದ ತಮ್ಮ ಹೂಡಿಕೆಯನ್ನು ವಾಪಸ್ ಪಡೆದಿದ್ದರು.
ಪಿ.ವಿ.ಸಿಂಧು, ಸಾನಿಯಾ ಮಿರ್ಜಾ, ಉಮೇಶ್ ಯಾದವ್, ಕುಲದೀಪ್ ಯಾದವ್, ಭಾರತ ಅಂಡರ್ 19 ನಾಯಕ ಯಶ್ ಧುಲ್ ಅವರಂತಹ ಸ್ಟಾರ್ ಅಥ್ಲೀಟ್ಗಳು ಇನ್ನೂ ಮಂಡಳಿಯಲ್ಲಿದ್ದಾರೆ. ರೋಹಿತ್, ರಾಹುಲ್, ರಹಾನೆ ಮತ್ತು ಗಿಲ್ ವಾಪಸ್ ಪಡೆದಿದ್ದಾರೆ. ಧರ್ಮ ಅವರ ಸಹಭಾಗಿತ್ವದಲ್ಲಿ ಕಾರ್ನರ್ ಸ್ಟೋನ್ ನ ಪೋರ್ಟ್ ಫೋಲಿಯೊ ಬಾಲಿವುಡ್ ಪರವಾಗುತ್ತಿದೆ. ಸಾರಾ ಅಲಿ ಖಾನ್, ಜಾನ್ವಿ ಕಪೂರ್, ಟೈಗರ್ ಶ್ರಾಫ್ ಇತರರು ಆ ಸಂಸ್ಥೆಯಲ್ಲಿದ್ದಾರೆ.