ಭಾರತಕ್ಕೆ ಕಿರುಕುಳ ಕೊಡುವ ವಿಚಾರದಲ್ಲಿ ಪಾಕಿಸ್ತಾನವನ್ನೂ ಚೀನಾ ಮೀರಿಸಿದೆ. ಚೀನಾದ ಆತಿಥ್ಯದಲ್ಲಿ ನಡೆಯುವ ಏಷ್ಯನ್ ಗೇಮ್ಸ್‌ನಲ್ಲಿ ಅರುಣಾಚಲ ಪ್ರದೇಶದ ಮೂವರು ಸ್ಪರ್ಧಿಗಳಿಗೆ ಚೀನಾದ ಅಧಿಕಾರಿಗಳು ಪ್ರವೇಶ ನಿರಾಕರಿಸಿದ್ದಾರೆ. ಇದಕ್ಕೆ ಚೀನಾ ಮೊದಲಿನಿಂದಲೂ ತಗಾದೆ ತೆಗೆಯುತ್ತ ಬಂದಿರುವ ಗಡಿ ರಾಜಕೀಯ ಕಾರಣವಾಗಿದೆ. ಅರುಣಾಚಲ ಪ್ರದೇಶ ವಿಚಾರದಲ್ಲಿ ಭಾರತ ಹಾಗೂ ಚೀನಾ ನಡುವೆ ವಿವಾದವಿದೆ. ಹೀಗಾಗಿ ವುಶು ಸ್ಪರ್ಧಿಗಳಿಗೆ ಅಲ್ಲಿನ ಅಧಿಕಾರಿಗಳು ಪ್ರವೇಶ ನಿರಾಕರಿಸಿದ್ದರು. ಅವರಿಗೆ ಮಾನ್ಯತಾ ಪತ್ರಗಳನ್ನು ಡೌನ್ಲೋಡ್ ಮಾಡಲು ಸಾಧ್ಯವಾಗದ ಕಾರಣ ದೆಹಲಿಯಲ್ಲೇ ಉಳಿದಿದ್ದಾರೆ. ಚೀನಾದ ಈ ನೀತಿಯನ್ನು ಭಾರತ ಖಂಡಿಸಿದೆ. ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕ್ರೀಡಾಕೂಟದ ಹಿನ್ನೆಲೆಯಲ್ಲಿ ಚೀನಾಗೆ ಪ್ರವಾಸ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಆತಿಥೇಯರ ಆಹ್ವಾನವನ್ನು ಖಡಾಖಂಡಿತವಾಗಿ ತಿರಸ್ಕರಿಸಿದ್ದಾರೆ.
ಅರುಣಾಚಲ ವಿಚಾರದಲ್ಲಿ ಚೀನಾ ತಗಾದೆ ತೆಗೆಯುತ್ತಿರುವುದು ಇದೇ ಮೊದಲಲ್ಲ. ಆದರೆ ಕ್ರೀಡೆಯಲ್ಲೂ ಭೇದ ಮಾಡುವ, ಕಿರುಕುಳ ನೀಡುವ ಚೀನಾದ ವರಸೆ ಹೊಸತು. ಇದು ಕ್ರೀಡಾ ಸ್ಫೂರ್ತಿಗೆ ವಿರುದ್ಧ ಎಂಬುದನ್ನು ಪ್ರತ್ಯೇಕ ಹೇಳಬೇಕಿಲ್ಲ. ಮತ್ತಿದು ಏಷ್ಯನ್ ಕ್ರೀಡಾಕೂಟದ ಆಶಯ, ನಿಯಮಗಳನ್ನೂ ಉಲ್ಲಂಘಿಸುತ್ತದೆ. ಸದಸ್ಯ ರಾಷ್ಟ್ರಗಳ ಸ್ಪರ್ಧಿಗಳ ನಡುವೆ ತಾರತಮ್ಯ ಮಾಡುವುದು ಸ್ಪಷ್ಟವಾಗಿ ಕ್ರೀಡಾನಿಯಮಗಳ ಉಲ್ಲಂಘನೆ. ಯುದ್ಧಕೈದಿಗಳನ್ನೂ ಗೌರವದಿಂದ ನಡೆಸಿಕೊಳ್ಳಬೇಕು ಎಂಬುದು ಅಂತಾರಾಷ್ಟ್ರೀಯ ಸನ್ನದು. ಹೀಗಿರುವಾಗ, ಅತಿಥಿ ದೇಶಗಳ ಕ್ರೀಡಾಳುಗಳನ್ನು ಗೌರವಿಸುವುದು, ಆಟಕ್ಕೆ ಆಸ್ಪದ ಮಾಡಿಕೊಡುವುದು ಆತಿಥೇಯ ದೇಶದ ಕರ್ತವ್ಯ. ಚೀನಾ ಈ ಕರ್ತವ್ಯಕ್ಕೆ ದ್ರೋಹ ಬಗೆದಿದೆ. ಕ್ರೀಡೆಗೆ ಅನ್ಯಾಯ ಎಸಗಿದೆ.
ಇದಕ್ಕೂ ಮುನ್ನ ಚೆಂಗ್ಡುವಿನಲ್ಲಿ ನಡೆಯಲಿದ್ದ ವಿಶ್ವ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಭಾಗವಹಿಸಲು 12 ಸದಸ್ಯರ ತಂಡ ಪ್ರಯಾಣಿಸುತ್ತಿದ್ದಾಗ ದೆಹಲಿಯ ಚೀನಾದ ರಾಯಭಾರ ಕಚೇರಿ ಮೂವರು ಕ್ರೀಡಾಪಟುಗಳಿಗೆ ಸ್ಟೇಪಲ್ಡ್ ವೀಸಾಗಳನ್ನು (ಅಧಿಕೃತ ಮುದ್ರೆಯೊತ್ತದ ಅನುಮತಿ ಪತ್ರ) ನೀಡಿತ್ತು. ಇದನ್ನು ಭಾರತ ಬಲವಾದ ಪ್ರತಿಭಟಿಸಿ ಪ್ರವಾಸ ರದ್ದುಗೊಳಿಸಿತ್ತು. ಅರುಣಾಚಲ ಪ್ರದೇಶದ ಕ್ರೀಡಾಪಟುಗಳಿಗೆ ಈ ಹಿಂದೆಯೂ ಸ್ಟಾಂಪ್ ವೀಸಾ ನೀಡಲು ಚೀನಾ ನಿರಾಕರಿಸಿದೆ. 2011ರಲ್ಲಿ ಅರುಣಾಚಲ ಪ್ರದೇಶದ ಐವರು ಕರಾಟೆ ಪಟುಗಳಿಗೆ ಕ್ವಾನ್ಝೌನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಲು ಸ್ಟೇಪಲ್ಡ್ ವೀಸಾ ನೀಡಲಾಗಿತ್ತು. ಈ ತಿಂಗಳ ಆರಂಭದಲ್ಲಿ, ಚೀನಾ ತನ್ನ ದೇಶದ ಹೊಸ ನಕ್ಷೆಯನ್ನು ಪ್ರಕಟಿಸಿ ಅರುಣಾಚಲ ಪ್ರದೇಶ ತನ್ನ ಭಾಗವೆಂದು ಹೇಳಿತ್ತು. ಇದು ಭಾರತವನ್ನು ಕೆರಳಿಸಿತ್ತು. ಚೀನಾದ ನೈಸರ್ಗಿಕ ಸಂಪನ್ಮೂಲ ಸಚಿವಾಲಯದ ವೆಬ್ಸೈಟ್ ಮತ್ತು ಅಲ್ಲಿನ ಗ್ಲೋಬಲ್ ಟೈಮ್ಸ್ ಹೊಸ ನಕ್ಷೆಯನ್ನು ಹಂಚಿಕೊಂಡಿದ್ದವು. ಅರುಣಾಚಲ ಪ್ರದೇಶ, ಅಕ್ಸಾಯ್ ಚಿನ್ ಪ್ರದೇಶ, ತೈವಾನ್ ಮತ್ತು ದಕ್ಷಿಣ ಚೀನಾ ಸಮುದ್ರ ಪ್ರದೇಶಗಳನ್ನು ತನ್ನದೆಂದು ಹೇಳಿತ್ತು. ಇದನ್ನು ಅಮೆರಿಕ, ತೈವಾನ್ ಮತ್ತು ವಿಯೆಟ್ನಾಂ ಸೇರಿದಂತೆ ಹಲವಾರು ದೇಶಗಳು ವ್ಯಾಪಕವಾಗಿ ಟೀಕಿಸಿದ್ದರೂ ಚೀನಾ ಮಣಿದಿಲ್ಲ.
ಭಾರತದೊಳಗಿರುವ ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ಪ್ರತ್ಯೇಕ ಹೆಸರಿಟ್ಟು, ಆ ಎಲ್ಲ ಪ್ರದೇಶಗಳು ದಕ್ಷಿಣ ಟಿಬೆಟ್‌ಗೆ ಸೇರಿದ್ದು ಎಂದು ಚೀನಾ ಹಿಂದೆಯೇ ಘೋಷಿಸಿದೆ. ಇಡೀ ಅರುಣಾಚಲ ಪ್ರದೇಶವೇ ದಕ್ಷಿಣ ಟಿಬೆಟ್ ಎಂಬುದು ಚೀನಾದ ಹಳೇ ಪ್ರತಿಪಾದನೆ. ಆದರೆ ಈ ಈಶಾನ್ಯ ರಾಜ್ಯ ಸಂಪೂರ್ಣವಾಗಿ ನಮಗೇ ಸೇರಿದ್ದು, ಹೆಸರು ಬದಲಿಸಿದ ಮಾತ್ರಕ್ಕೆ ವಾಸ್ತವ ಬದಲಿಸಲಾಗದು ಎಂದು ಭಾರತ ಬಲವಾಗಿ ಪ್ರತಿಪಾದಿಸಿದೆ. ಕಳೆದ ವರ್ಷ ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನ ಗಡಿಯಲ್ಲಿ ಚೀನಾದ ಸೇನೆ ಉಪಟಳ ಉಂಟುಮಾಡಿತ್ತು. ಭಾರತ ಹಾಗೂ ಚೀನಾ ಯೋಧರ ಮಧ್ಯೆ ಭಾರಿ ಪ್ರಮಾಣದಲ್ಲಿ ಹೊಡೆದಾಟ ನಡೆದಿದ್ದು, ಉಭಯ ಕಡೆಗಳ ಸೈನಿಕರಿಗೂ ಗಾಯಗಳಾಗಿದ್ದವು. ಟಿಬೆಟಿಗರ ಪರಮೋಚ್ಚ ಧರ್ಮಗುರುವಾದ ದಲಾಯಿ ಲಾಮ ಅವರಿಗೆ ನಾವು ಆಶ್ರಯ ಕೊಟ್ಟದ್ದು ಹಾಗೂ ಟಿಬೆಟಿಗರ ನಿರಾಶ್ರಿತ ಸರ್ಕಾರವನ್ನು ಅವರು ಭಾರತದ ಧರ್ಮಶಾಲೆಯಿಂದ ನಡೆಸುತ್ತಿರುವುದು ಅದರ ಪಾಲಿಗೆ ಇಂದಿಗೂ ಸಹಿಸಲಾಗದ ಸಂಗತಿ. ಹಾಗೆಯೇ ಇತ್ತೀಚೆಗೆ ಅವರು ಮಂಗೋಲಿಯಾದ ಬಾಲಕನೊಬ್ಬನನ್ನು ಬೌದ್ಧರ ಮೂರನೇ ಮರಮೋಚ್ಚ ಧಾರ್ಮಿಕ ನಾಯಕನಾಗಿ ನೇಮಿಸಿದ್ದು ಕೂಡ ಚೀನಾಗೆ ಕಿರಿಕಿರಿ ಉಂಟುಮಾಡಿದೆ. ಇದೆಲ್ಲದರ ಫಲವೇ ಚೀನಾದ ಮುಂದುವರಿದ ರಗಳೆ. ಜಿಹೀಗೆ ಮತ್ತೆ ಮತ್ತೆ ಹೊಸ ಹೊಸ ಕ್ಯಾತೆ ತೆಗೆದು ಭಾರತವನ್ನು ಪ್ರಚೋದಿಸುತ್ತಲೇ ಇರುವ ಚೀನಾದಿಂದಾಗಿ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸಂಬಂಧ ಹಳಸಿದ್ದು, ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಇದೆ.
ಅರುಣಾಚಲದಲ್ಲಿ ಕೆಲವು ಕಡೆ ಗಡಿ ಸರಿಯಾಗಿ ನಿರ್ಧಾರವಾಗಿಲ್ಲ ಎಂಬುದು ನಿಜ. ಇಲ್ಲಿ ಚೀನಾ ಸೈನ್ಯ ಸುಲಭವಾಗಿ ಒಳತೂರಿ ಬರುವುದಕ್ಕೆ ಸಾಕಷ್ಟು ಆಸ್ಪದವಿದೆ ಎಂಬುದೂ ನಿಜ. 1962ರ ಯುದ್ಧದ ವೇಳೆಗೆ ಚೀನಾದ ಸೈನಿಕರು ಸುಮಾರು 20 ಕಿಲೋಮೀಟರ್‌ನಷ್ಟು ಒಳಬಂದು, ಯುದ್ಧವಿರಾಮದ ಬಳಿಕ ಹಿಂದೆ ಸರಿದಿದ್ದರು. ಆಗ ಅಂತಾರಾಷ್ಟ್ರೀಯ ಸಮುದಾಯ ಭಾರತದ ಜತೆಗೆ ನಿಂತಿತ್ತು. ಭಾರತವನ್ನು ಆಗಾಗ ಕೆಣಕುವುದು ಚೀನಾದ ಯುದ್ಧತಂತ್ರಗಳಲ್ಲಿ ಒಂದು. ನೆರೆರಾಷ್ಟ್ರಕ್ಕೆ ಕಾಟ ಕೊಡುವಲ್ಲಿ ಚೀನಾದ ಯುದ್ಧನೀತಿ ಬಹುಮುಖಿಯಾಗಿದೆ. ಭಾರತದ ಸುತ್ತಮುತ್ತಲಿನ ಪುಟ್ಟ ದೇಶಗಳಿಗೆ ಸಾಲ ನೀಡಿ, ತನ್ನ ಸಾಲದಿಂದ ಅವುಗಳು ಮುಳುಗುವಂತೆ ಮಾಡಿ, ಅಲ್ಲಿ ತನ್ನ ವ್ಯಾಪಾರ ಹಾಗೂ ಮಿಲಿಟರಿ ವಸಾಹತುಗಳನ್ನು ಸ್ಥಾಪಿಸಿ, ಅಲ್ಲಿಂದ ಭಾರತದ ಮೇಲೆ ನಿಗಾ ಇಡುವ ವ್ಯವಸ್ಥೆ ಮಾಡಿಕೊಳ್ಳುತ್ತದೆ. ಸೈಬರ್ ಕಾರಸ್ಥಾನಗಳ ಮೂಲಕ ನಮ್ಮ ದೇಶದ ಸರಕಾರಿ- ವ್ಯೂಹಾತ್ಮಕ ವೆಬ್‌ಸೈಟ್‌ಗಳಿಗೆ ಲಗ್ಗೆ ಹಾಕಲು ಯತ್ನಿಸುತ್ತದೆ. ವೈರಿ ದೇಶ ಪಾಕಿಸ್ತಾನಕ್ಕೆ ಮಿಲಿಟರಿ ಬೆಂಬಲ ಹಾಗೂ ಅಲ್ಲಿಂದ ಕಾರ್ಯಾಚರಿಸುವ ಉಗ್ರರ ಶಿಬಿರಗಳಿಗೆ ಧನಸಹಾಯ ಮಾಡುತ್ತದೆ. ವಿಶ್ವಸಂಸ್ಥೆಯಲ್ಲಿ ಭಾರತ ತಕ್ಕ ದಾಖಲೆಗಳನ್ನು ನೀಡಿ, ತನ್ನ ವಿರುದ್ಧ ಕೆಲಸ ಮಾಡುವ ಭಯೋತ್ಪಾದಕರನ್ನು ಕಪ್ಪು ಪಟ್ಟಿಗೆ ಸೇರಿಸಲು ಒತ್ತಡ ತಂದಾಗಲೂ ಚೀನಾ ಅದಕ್ಕೆ ಅಡ್ಡಗಾಲು ಹಾಕುತ್ತದೆ. ಹೀಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಭಾರತಕ್ಕೆ ಕಿರುಕುಳ ಕೊಡಲು ಅದು ಸದಾ ಸಿದ್ಧವಾಗಿಯೇ ಇರುತ್ತದೆ.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ರಾಜ್ಯಕ್ಕೆ ಅನ್ಯಾಯ; ಕಾವೇರಿ ನೀರು ಬೆಂಕಿಯಾಗದಿರಲಿ
ಆದರೆ ಪ್ರತಿ ಬಾರಿಯೂ ಭಾರತ ಚೀನಾಗೆ ತಕ್ಕ ಉತ್ತರ ನೀಡುತ್ತಲೇ ಬಂದಿದೆ. ಚೀನಾದ ಕಪಟ ಕಾರ್ಯತಂತ್ರಗಳನ್ನೂ ಯುದ್ಧನೀತಿಗಳನ್ನೂ ಅರ್ಥ ಮಾಡಿಕೊಂಡಿರುವ ನೂತನ ಭಾರತದ ಎದಿರೇಟುಗಳು ಚೀನಾವನ್ನು ಅಚ್ಚರಿಯಲ್ಲಿ ಕೆಡವಿರುವ ಸಾಧ್ಯತೆ ಇದೆ. ಗಲ್ವಾನ್‌ನಲ್ಲಿ ಚೀನಾ ಸೈನಿಕರ ಪಾಶವೀ ದಾಳಿಗೆ ಅದೇ ಮಾದರಿಯ ಉತ್ತರ ನೀಡುವಲ್ಲಿಂದ ಹಿಡಿದು, ವಿಶ್ವಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಒತ್ತಡ ಹಾಕಿಸುವವರೆಗೂ ಭಾರತದ ರಾಜನೀತಿ, ವ್ಯೂಹಾತ್ಮಕ ಸಿದ್ಧತೆ, ಮಿಲಿಟರಿ ಸನ್ನದ್ಧತೆಗಳು ಹಬ್ಬಿವೆ. ಇತ್ತೀಚೆಗೆ ಜಿ20 ಶೃಂಗಸಭೆಯ ವೇದಿಕೆಯಲ್ಲೂ ಭಾರತ ತನ್ನ ಪ್ರತಿಷ್ಠೆಯನ್ನು ಹೆಚ್ಚಿಸಿಕೊಂಡಿರುವುದು, ಇಲ್ಲೂ ಚೀನಾಕ್ಕೆ ತಕ್ಕ ಇದಿರೇಟು ನೀಡಿರುವುದು ಚೀನಾಗೆ ಇರಸುಮುರಸು ಉಂಟುಮಾಡಿರಬಹುದು. ಆದರೆ ಅದು ಯಾವಾಗ ಪಾಠ ಕಲಿಯುವುದೋ ಗೊತ್ತಿಲ್ಲ. ಚೀನಾದ ಬಗ್ಗೆ ಸದಾ ಎಚ್ಚರ, ಅದಕ್ಕೆ ತಕ್ಕ ಪ್ರತ್ಯುತ್ತರ ನೀಡುವ ರಾಜನೀತಿಯ ಮಾದರಿಯನ್ನು ಮುಂದುವರಿಯುವುದು ಅಗತ್ಯವಾಗಲಿದೆ. ಸದ್ಯ ಏಷ್ಯನ್ ಗೇಮ್ಸ್ ವಿಚಾರದಲ್ಲಿ ಆಯೋಜಕರ ಕಾರ್ಯಕಾರಿ ಗುಂಪಿನ ಜತೆಗೆ ಚರ್ಚಿಸಿ ಮುನ್ನಡೆಯಬೇಕಾದೀತು.