Site icon Vistara News

ವಿಸ್ತಾರ Explainer : IPL ಪ್ರಸಾರ ಹಕ್ಕಿಗಾಗಿ ದಿಗ್ಗಜರ ವಾರ್!

ipl telecast

ಬ್ರಾಡ್‌ಕಾಸ್ಟ್‌ ಇಂಡಸ್ಟ್ರಿಯ ಘಟಾನುಘಟಿಗಳೆಲ್ಲ ಈ ಯುದ್ಧದಲ್ಲಿ ಗೆದ್ದು ಬೀಗಲು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಆದರೆ ಇದು ಐಪಿಎಲ್‌ನಲ್ಲಿ ಆಡುವ ಕ್ರಿಕೆಟಿಗರ ಹರಾಜಲ್ಲ. ಐಪಿಎಲ್‌ ಪಂದ್ಯಗಳನ್ನು ನೇರ ಪ್ರಸಾರ ಮಾಡುವ ಹಕ್ಕುಗಳಿಗೋಸ್ಕರ ನಡೆಯುವ ರೋಚಕ ಹರಾಜಿದು!

2022ರ ಜೂನ್‌ 12ರಿಂದ ಹರಾಜು ಪ್ರಕ್ರಿಯೆ ಶುರುವಾಗಲಿದೆ. ಇದರಲ್ಲಿ ಗೆದ್ದವರಿಗೆ ಮುಂದಿನ ಐದು ವರ್ಷಗಳ ತನಕ ಐಪಿಎಲ್‌ ಪಂದ್ಯಾವಳಿಗಳ ನೇರ ಪ್ರಸಾರ ಮಾಡುವ ಅವಕಾಶ. 2023ರಿಂದ 2027ರ ತನಕ 5 ವರ್ಷಗಳ ಕಾಲ ಪ್ರತಿ ಸೀಸನ್‌ನ ಟೂರ್ನಮೆಂಟ್‌ನಲ್ಲೂ 74 ಮ್ಯಾಚ್‌ಗಳು ನಡೆಯಲಿವೆ.

ಬಿಸಿಸಿಐ ನಡೆಸುವ ಐಪಿಎಲ್‌ ಈಗ ಕೇವಲ ಕ್ರಿಕೆಟ್‌ ಆಟವಾಗಿ ಉಳಿದಿಲ್ಲ. ಭಾರತೀಯ ಕ್ರೀಡಾ ಲೋಕದ ಅತಿ ದೊಡ್ಡ ಮೌಲ್ಯದ ಆಸ್ತಿಯಾಗಿದೆ. ಇದರ ಸುತ್ತಮುತ್ತ ಸಾವಿರಾರು ಕೋಟಿ ರೂ.ಗಳ ಭರ್ಜರಿ ವಹಿವಾಟು ನಡೆಯುವ ಉದ್ಯಮವಾಗಿ ಬೆಳೆದಿದೆ. ದೇಶ-ವಿದೇಶಗಳ ದಿಗ್ಗಜ ಉದ್ಯಮಿಗಳು ಇಲ್ಲಿ ಕೋಟ್ಯಂತರ ರೂ. ಬಂಡವಾಳ ಹೂಡಿ ಲಾಭ ಗಳಿಸುತ್ತಾರೆ. ಆಟಗಾರರಿಗೂ ಅವರವರ ಪ್ರತಿಭೆಗೆ ತಕ್ಕಂತೆ ಭರ್ಜರಿ ದುಡ್ಡು ಸೇರುತ್ತದೆ.

ಹಾಗಾದರೆ ಬಿಸಿಸಿಐ ಈ ಐಪಿಎಲ್‌ ನೇರ ಪ್ರಸಾರದ ಹಕ್ಕುಗಳನ್ನು ಹೇಗೆ ಹರಾಜಿಗೆ ಹಾಕಲಿದೆ? ಯಾರೆಲ್ಲ ಬಿಡ್‌ ಮಾಡಿದ್ದಾರೆ? ಯಾರು ಅಂತಿಮವಾಗಿ ಬಿಡ್‌ ಗೆಲ್ಲಬಹುದು? ಯಾವ ಚಾನೆಲ್‌ನಲ್ಲಿ, ಪ್ಲಾಟ್‌ಫಾರ್ಮ್‌ನಲ್ಲಿ ಐಪಿಎಲ್ ಕ್ರಿಕೆಟ್‌ ಪಂದ್ಯಗಳು ‌ನೇರ ಪ್ರಸಾರವಾಗಬಹುದು? ಎಷ್ಟು ಕೋಟಿ ರೂ.ಗೆ ಹಕ್ಕುಗಳು ಮಾರಾಟವಾದೀತು? ಹೀಗೆ ಜಿದ್ದಿಗೆ ಬಿದ್ದು ದುಬಾರಿ ಹಕ್ಕುಗಳನ್ನು ಪಡೆಯುವ ಕಂಪನಿಗಳು ಬಳಿಕ ಹೇಗೆ ಲಾಭ ಗಳಿಸುತ್ತವೆ? ಹೂಡಿಕೆಯನ್ನು ಲಾಭದಾಯಕವಾಗಿಸಿ ಹೇಗೆ ದಕ್ಕಿಸಿಕೊಳ್ಳುತ್ತವೆ?

ಇಂಥ ಅನೇಕ ಪ್ರಶ್ನೆಗಳು ಕ್ರಿಕೆಟ್‌ ಪ್ರೇಮಿಗಳನ್ನು, ಕಾರ್ಪೊರೇಟ್‌ ಕುಳಗಳನ್ನು, ಬಿಸಿನೆಸ್‌ ಜಗತ್ತಿನ ಕುತೂಹಲಿಗಳನ್ನು ಕಾಡತೊಡಗಿದೆ.

ಹರಾಜಿನಿಂದ ಬಿಸಿಸಿಐಗೆ ಹಣದ ಹೊಳೆ

ಬೋರ್ಡ್‌ ಆಫ್‌ ಕಂಟ್ರೋಲ್‌ ಫಾರ್‌ ಕ್ರಿಕೆಟ್ ಇನ್ ಇಂಡಿಯಾ ಅಥವಾ ಸಂಕ್ಷಿಪ್ತವಾಗಿ ಬಿಸಿಸಿಐ ಎಂದು ಜನಪ್ರಿಯವಾಗಿರುವ ಕ್ರಿಕೆಟ್‌ ಮಂಡಳಿಯೇ ಈ ಐಪಿಎಲ್‌ ಪಂದ್ಯಗಳನ್ನು ನಡೆಸುತ್ತದೆ. ಹಾಗೂ ಇದರ ನೇರ ಪ್ರಸಾರದ ಹಕ್ಕುಗಳನ್ನು ಹರಾಜಿಗೆ ಹಾಕಿದೆ.

ಇದುವರೆಗೆ ಸ್ಟಾರ್‌ ಟಿವಿ ಚಾನೆಲ್‌ನಲ್ಲಿ ನೇರ ಪ್ರಸಾರವಾಗುತ್ತಿತ್ತು. ಈ ಸ್ಟಾರ್‌ ಟಿವಿ ಚಾನೆಲ್‌ ಅನ್ನು ನಡೆಸುತ್ತಿರುವ ವರ್ಲ್ಡ್‌ ಡಿಸ್ನಿ ಕಂಪನಿ ಇಂಡಿಯಾ ಖರೀದಿಸಿದ್ದ ನೇರ ಪ್ರಸಾರದ ಹಕ್ಕುಗಳ ಅವಧಿ 2022ರಲ್ಲಿ ಕೊನೆಯಾಗುತ್ತಿದೆ. ಆದ್ದರಿಂದ 2023ರಿಂದ ಮುಂದಿನ ಐದು ವರ್ಷಗಳ ಅವಧಿಗೆ ಮಾರಾಟದ ಹಕ್ಕುಗಳನ್ನು ದೊಡ್ಡ ಮೊತ್ತಕ್ಕೆ ಮಾರಾಟ ಮಾಡಲು ಬಿಸಿಸಿಐ ಸಜ್ಜಾಗಿದೆ.

ಖರೀದಿದಾರರೂ ಉತ್ಸಾಹದಲ್ಲಿದ್ದಾರೆ. ಏಕೆಂದರೆ ಐಪಿಎಲ್‌ ವರ್ಷದಿಂದ ವರ್ಷಕ್ಕೆ ಅಗಾಧವಾಗಿ ಬೆಳೆಯುತ್ತಿದೆ. ಕೋಟ್ಯಂತರ ಪ್ರೇಕ್ಷಕರು ಈ ಪಂದ್ಯಗಳನ್ನು ವೀಕ್ಷಿಸುತ್ತಾರೆ. ಆಗ ತೋರಿಸುವ ಜಾಹೀರಾತಿನ ಪ್ರತಿ ಸೆಕೆಂಡ್‌ಗೂ ಹತ್ತು ಲಕ್ಷ ರೂಪಾಯಿಗೂ ಹೆಚ್ಚು ದುಡ್ಡು, ನೇರ ಪ್ರಸಾರ ಮಾಡುವ ಕಂಪನಿಯ ಖಾತೆಗೆ ಸೇರುತ್ತದೆ.

ಮೊದಲ ಬಾರಿಗೆ ಆನ್‌ಲೈನ್‌ ಹರಾಜು

ಐಪಿಎಲ್‌ ಮೀಡಿಯಾ ರೈಟ್ಸ್‌ ಅಥವಾ ನೇರ ಪ್ರಸಾರದ ಹಕ್ಕು ಇದೇ ಮೊದಲ ಬಾರಿಗೆ ಆನ್‌ಲೈನ್‌ ಮೂಲಕ ನಡೆಯಲಿದೆ. ಇದು ಮುಂಬಯಿನಲ್ಲಿ ಜೂನ್‌ 12ಕ್ಕೆ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ. ಹೀಗಿದ್ದರೂ ಹರಾಜಿನ ಕೊನೆಯ ದಿನಾಂಕ ಯಾವುದು ಎಂಬುದು ನಿಗದಿಯಾಗಿಲ್ಲ. ಮುಂಬರುವ ಕೆಲ ದಿನಗಳ ತನಕ ನಡೆಯಬಹುದು. ಬಿಡ್‌ಗಳು ಬರುವಷ್ಟು ದಿನ ಮುಂದುವರಿಯಬಹುದು.

ಆನ್‌ಲೈನ್‌ನಲ್ಲಿಯೇ ಬಿಡ್‌ಗಳನ್ನು ಸಲ್ಲಿಸಬೇಕಾಗುತ್ತದೆ. ಅತಿ ಹೆಚ್ಚು ಮೊತ್ತದ ಬಿಡ್‌ ಸಲ್ಲಿಸಿದವರಿಗೆ ನೇರ ಪ್ರಸಾರದ ಹಕ್ಕುಗಳು ದೊರೆಯಲಿವೆ.

ಬಿಡ್ಡರ್‌ಗಳು ಯಾರು?

ಕಳೆದ ಹಲವಾರು ದಿನಗಳಿಂದಲೂ ಐಪಿಎಲ್‌ ನೇರ ಪ್ರಸಾರದ ಹಕ್ಕುಗಳ ಹರಾಜಿನಲ್ಲಿ ವಿಶ್ವದ ಇಬ್ಬರು ಶ್ರೀಮಂತ ಉದ್ಯಮಿಗಳಾದ ಅಮೆಜಾನ್‌ ಸ್ಥಾಪಕ ಜೆಫ್‌ ಬಿಜೋಸ್‌ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ ಎಂದು ಹೇಳಲಾಗಿತ್ತು. ಆದರೆ ಇತ್ತೀಚಿನ ವರದಿಗಳ ಪ್ರಕಾರ ಇ-ಕಾಮರ್ಸ್‌ ದಿಗ್ಗಜ ಅಮೆಜಾನ್‌ ಇ-ಹರಾಜಿನಿಂದ ಹಿಂದೆ ಸರಿದಿದೆ. ಬಿಸಿಸಿಐ ಬಿಡ್‌ಗಳ ತಾಂತ್ರಿಕ ಮೌಲ್ಯಮಾಪನಕ್ಕೆ ಮುಂದಾಗುವ ಮುನ್ನವೇ ಅಮೆಜಾನ್‌ ಕಣದಿಂದ ಹಿಂದುಳಿಯುವ ಬಗ್ಗೆ ದೃಢಪಡಿಸಿದೆ ಎಂದು ವರದಿಯಾಗಿದೆ.

ಕೆಲ ವರದಿಗಳ ಪ್ರಕಾರ ಅಮೆಜಾನ್‌ ಸಿಇಒ ಆಂಡಿ ಜೆಸ್ಸಿ ಅವರು ಆಂತರಿಕ ಸಮಾಲೋಚನೆ ನಡೆಸಿದ ಬಳಿಕ ಕಣದಿಂದ ಹಿಂದೆ ಸರಿಯುವ ನಿರ್ಣಯಕ್ಕೆ ಬರಲಾಗಿದೆ. ಸ್ವಾರಸ್ಯ ಏನೆಂದರೆ ಅಮೆಜಾನ್‌ ಈ ಬಗ್ಗೆ ಅಧಿಕೃತವಾಗಿ ಏನೂ ಹೇಳಿಲ್ಲ.

ಇದರಿಂದಾಗಿ ಈ ರೋಚಕ ಹಣಾಹಣಿಯ ಹರಾಜಿನ ಕಣದಲ್ಲಿ ಡಿಸ್ನಿ-ಸ್ಟಾರ್‌, ರಿಲಯನ್ಸ್‌ ವಯಾಕಾಮ್-‌18 ಮತ್ತು ಸೋನಿ-ಝೀ ಕಂಪನಿಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. ಗೂಗಲ್‌ ಪ್ಲಸ್‌ ಕೂಡ ಹಿಂದೊಮ್ಮೆ ಆಸಕ್ತಿ ತೋರಿಸಿದ್ದರೂ ಹಿಂದೆ ಸರಿದಿದೆ. ಕೆಲ ವರದಿಗಳ ಪ್ರಕಾರ ಝೀ ವಾಹಿನಿ ಕೂಡ ಬಿಡ್‌ ಅನ್ನು ಹಿಂಪಡೆಯುವ ಸಾಧ್ಯತೆ ಇದೆ. ಆಗ ಸ್ಟಾರ್‌ ವಾಹಿನಿ-ರಿಲಯನ್ಸ್‌ ವಯಾಕಾಮ್‌-18 ಮತ್ತು ಸೋನಿ ಪಿಕ್ಚರ್ಸ್ ನಡುವೆ ಸ್ಪರ್ಧೆ ನಡೆಯಲಿದೆ.

ಇದನ್ನೂ ಓದಿ: ದೈತ್ಯಾಕಾರದ ಜೆರ್ಸಿ, ಗಿನ್ನಿಸ್ ದಾಖಲೆ ಬರೆದ ಐಪಿಎಲ್‌-2022

ತಾಂತ್ರಿಕ ಬಿಡ್‌ ಪೂರ್ಣಗೊಳಿಸಿದವರು ಯಾರು?

ಡಿಸ್ನಿ ವಾರ್‌, ರಿಲಯನ್ಸ್‌ ವಯಾಕಾಮ್‌18, ಸೋನಿ ನೆಟ್‌ವರ್ಕ್‌, ಝೀ ಎಂಟರ್‌ಟೈನ್‌ಮೆಂಟ್‌, ಟೈಮ್ಸ್‌ ಇಂಟರ್‌ನೆಟ್‌ (ಡಿಜಿಟಲ್‌ ಹಕ್ಕುಗಳಿಗೆ ಮಾತ್ರ), ರಿಲಯನ್ಸ್‌ ಜಿಯೊ (ಡಿಜಿಟಲ್‌ ಹಕ್ಕುಗಳಿಗೆ ಮಾತ್ರ), ಸೂಪರ್‌ ಸ್ಪೋರ್ಟ್ಸ್ ( ಅಂತಾರಾಷ್ಟ್ರೀಯ ನೇರ ಪ್ರಸಾರದ ಹಕ್ಕುಗಳಿಗೆ ಮಾತ್ರ) ತಾಂತ್ರಿಕ ಬಿಡ್‌ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿವೆ.

ಡಿಸ್ನಿ-ಸ್ಟಾರ್‌, ಸೋನಿ-ಝೀ ಮತ್ತು ವಯಾಕಾಮ್‌18-ರಿಲಯನ್ಸ್‌ಗೆ ತಮ್ಮದೇ ಆದ ಟಿವಿ ಚಾನೆಲ್‌ ಮತ್ತು ಸ್ಪೋರ್ಟ್ಸ್‌ ಚಾನೆಲ್‌ಗಳು ಇವೆ. ಆದರೆ ಅಮೆಜಾನ್‌ಗೆ ತನ್ನದೇ ನಿರ್ದಿಷ್ಟವಾದ ಟಿವಿ ಚಾನೆಲ್‌ ಇಲ್ಲ. ಈಗಾಗಲೇ ಭಾರತದಲ್ಲಿ 600 ಕೋಟಿ ಡಾಲರ್‌ಗಿಂತಲೂ ಹೆಚ್ಚು ಬಂಡವಾಳವನ್ನು ಅಮೆಜಾನ್‌ ಹೂಡಿದೆ. ಕೇವಲ ಆನ್‌ಲೈನ್‌ ಮೂಲಕ ನೇರ ಪ್ರಸಾರಕ್ಕಾಗಿ ಸಾವಿರಾರು ಕೋಟಿ ರೂ.ಗಳನ್ನು ಹೂಡುವುದು ಬಿಸಿನೆಸ್‌ ದೃಷ್ಟಿಯಿಂದ ಲಾಭವಾಗದು ಎಂಬ ಹಿನ್ನೆಲೆಯಲ್ಲಿ ಅಮೆಜಾನ್‌ ಹಿಂದೆ ಸರಿದಿರಬಹುದು ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ.

ಐಪಿಎಲ್‌ ನೇರ ಪ್ರಸಾರದ ಹಕ್ಕುಗಳ 4 ಪ್ಯಾಕೇಜ್‌

ಬಿಸಿಸಿಐ ಐಪಿಎಲ್‌ ನೇರ ಪ್ರಸಾರದ ಹಕ್ಕುಗಳನ್ನು 4 ಪ್ಯಾಕೇಜ್‌ಗಳನ್ನಾಗಿ ವಿಭಾಗಿಸಿದೆ. ಅವುಗಳು-ಎ, ಬಿ, ಸಿ ಮತ್ತು ಡಿ ಎಂಬ ಪ್ಯಾಕೇಜ್‌ನಲ್ಲಿವೆ. ಎ- ಟಿವಿ ಚಾನೆಲ್‌ಗಳಲ್ಲಿ ಪಂದ್ಯಾವಳಿಯನ್ನು ಭಾರತದಲ್ಲಿ ವಿಶೇಷ ಪ್ರಸಾರ ಮಾಡುವ ಹಕ್ಕು. ಬಿ- ಭಾರತದಲ್ಲಿ ಡಿಜಿಟಲ್‌ ಮಾಧ್ಯಮದಲ್ಲಿ ಪ್ರಸಾರ ಮಾಡುವ ಹಕ್ಕು. ಸಿ-ಕೆಲವು ವಿಶೇಷ ಪಂದ್ಯಗಳ ಪ್ರಸಾರದ ಹಕ್ಕುಗಳಾಗಿದೆ. ಟೂರ್ನಮೆಂಟ್‌ನ ಆರಂಭಿಕ ಪಂದ್ಯ, ಪ್ಲೇ ಆಫ್‌ ಮ್ಯಾಚ್‌, ಕೆಲವು ವಾರಾಂತ್ಯದ ಮ್ಯಾಚ್‌ಗಳು ಮತ್ತು ಫೈನಲ್‌ ಪಂದ್ಯ. ಐಪಿಎಲ್‌ ಸೀಸನ್‌ 74 ಪಂದ್ಯಗಳನ್ನು ಒಳಗೊಂಡಿದೆ. ಸಿ-ಪ್ಯಾಕೇಜ್‌ನಲ್ಲಿ 11 ಮ್ಯಾಚ್‌ಗಳು ಇವೆ.

ಡಿ-ಪ್ಯಾಕೇಜ್‌ನಲ್ಲಿ ಟಿವಿ ಮತ್ತು ಡಿಜಿಟಲ್‌ ಎರಡೂ ಇದ್ದು ಭಾರತ ಹೊರತುಪಡಿಸಿ ಜಗತ್ತಿನ ಉಳಿದ ಕಡೆ ಪ್ರಸಾರ ಮಾಡುವ ಹಕ್ಕುಗಳಾಗಿದೆ.‌

ಇದನ್ನೂ ಓದಿ: ‌ಭಾರತ-ದ. ಆಫ್ರಿಕಾ T20| ಎರಡನೇ ಪಂದ್ಯ ನಾಯಕ ರಿಷಭ್‌ ಪಂ‌ತ್ ಪಾಲಿಗೆ ಟೆಸ್ಟ್!

ಪ್ರತಿ ಪ್ಯಾಕೇಜ್‌ಗೂ ಪ್ರತ್ಯೇಕ ಮೂಲ ದರ (ಬೇಸ್‌ ಪ್ರೈಸ್‌) ಇದೆ.
ಪ್ಯಾಕೇಜ್‌ ಎ- ಪ್ರತಿ ಪಂದ್ಯಕ್ಕೂ 49 ಕೋಟಿ ರೂ.
ಪ್ಯಾಕೇಜ್‌ ಬಿ- ಪ್ರತಿ ಪಂದ್ಯಕ್ಕೂ 33 ಕೋಟಿ ರೂ.
ಪ್ಯಾಕೇಜ್‌ ಸಿ- ಪ್ರತಿ ಪಂದ್ಯಕ್ಕೂ 11 ಕೋಟಿ ರೂ.
ಪ್ಯಾಕೇಜ್‌ ಡಿ- ಪ್ರತಿ ಪಂದ್ಯಕ್ಕೂ 3 ಕೋಟಿ ರೂ.
ಎ ಮತ್ತು ಬಿ ಪ್ಯಾಕೇಜ್‌ನ ಬಿಡ್ಡಿಂಗ್ ಏಕಕಾಲಕ್ಕೆ ನಡೆಯಲಿದೆ. ಬಳಿಕ ಸಿ ಮತ್ತು ಡಿ ಪ್ಯಾಕೇಜ್‌ನ ಬಿಡ್ಡಿಂಗ್‌ ನಡೆಯಲಿದೆ.

ನೇರ ಪ್ರಸಾರದ ಹಕ್ಕುಗಳ ಮೂಲ ದರ 32,890 ಕೋಟಿ ರೂ!

ಬಿಸಿಸಿಐ ಐಪಿಎಲ್‌ ಪಂದ್ಯಗಳ ನೇರ ಪ್ರಸಾರದ ಹಕ್ಕುಗಳ ಮೂಲ ದರವನ್ನು 32,890 ಕೋಟಿ ರೂ.ಗೆ ನಿಗದಿಪಡಿಸಿದೆ. ಮೂಲದರ ಎಂದರೆ ಕನಿಷ್ಠ ದರ. ಅದಕ್ಕಿಂತ ಕಡಿಮೆ ಬಿಡ್‌ ಸಲ್ಲಿಸುವ ಹಾಗಿಲ್ಲ. 5 ವರ್ಷಗಳ ಹಿಂದೆ ಮೂಲ ದರ 16,347 ಕೋಟಿ ರೂ.ಗಳಾಗಿತ್ತು.

ಬಿಸಿಸಿಐಗೆ 50,000 ಕೋಟಿ ರೂ. ಆದಾಯ ನಿರೀಕ್ಷೆ

ಕಳೆದ ಸಲ 2017ರಲ್ಲಿ ಸ್ಟಾರ್‌ ಇಂಡಿಯಾ ಹರಾಜಿನಲ್ಲಿ ದಾಖಲೆಯ 16,347 ಕೋಟಿ ರೂ.ಗಳನ್ನು ಬಿಸಿಸಿಐಗೆ ಹರಾಜಿನಲ್ಲಿ ಕೊಟ್ಟು ನೇರ ಪ್ರಸಾರದ ಹಕ್ಕುಗಳನ್ನು ಖರೀದಿಸಿತ್ತು. 2018ರಿಂದ 2022ರ ತನಕದ ಅವಧಿಯ ಹಕ್ಕುಗಳನ್ನು ತನ್ನದಾಗಿಸಿತ್ತು. ಇದು ಕ್ರಿಕೆಟ್‌ನ ಇತಿಹಾಸದಲ್ಲಿಯೇ ಅತಿ ದೊಡ್ಡ ಹಕ್ಕು ಖರೀದಿಯಾಗಿತ್ತು. ಈ ಹಿಂದಿನ ದೊಡ್ಡ ಹಕ್ಕಿಗಿಂತ 158% ಹೆಚ್ಚಿನ ಮೌಲ್ಯದ್ದಾಗಿತ್ತು. ಆದರೆ ಈ ಸಲ ನೇರ ಪ್ರಸಾರದ ಹಕ್ಕುಗಳು 50,000 ಕೋಟಿ ರೂ.ಗಳಿಂದ 60,000 ಕೋಟಿ ರೂ. ತನಕದ ದಾಖಲೆಯ ಮೌಲ್ಯಕ್ಕೆ ಮಾರಾಟವಾಗುವ ಭಾರಿ ನಿರೀಕ್ಷೆ ಉಂಟಾಗಿದೆ. ಈ ಸಲ ಹಕ್ಕಿನ ಅಂತಿಮ ಎರಡು ವರ್ಷಗಳಲ್ಲಿ 94ಕ್ಕೆ ಮ್ಯಾಚ್‌ಗಳ ಸಂಖ್ಯೆಯನ್ನು ಏರಿಸುವ ನಿರೀಕ್ಷೆಯೂ ಇದೆ.

ಪ್ರಸಾರದ ಹಕ್ಕು ಖರೀದಿಸಿದವರಿಗೆ ಲಾಭವೇನು?

ಪ್ರತಿಯೊಂದು ಪಂದ್ಯಕ್ಕೂ ನೂರಾರು ಕೋಟಿ ರೂ. ಕೊಟ್ಟು ದುಬಾರಿ ಮೊತ್ತದ ಐಪಿಎಲ್‌ ನೇರ ಪ್ರಸಾರ ಹಕ್ಕುಗಳನ್ನು ಖರೀದಿಸುವ ಮಾಧ್ಯಮ ಕಂಪನಿಗಳಿಗೆ ಲಾಭ ಹೇಗೆ ಎಂಬ ಕುತೂಹಲ ನಿಮ್ಮಲ್ಲಿರಬಹುದಲ್ಲವೇ? ಇದು ನಿಜಕ್ಕೂ ಸಂಶೋಧನೆ ಮಾಡಬೇಕಾಗಿರುವ ವಿಷಯವೇ.

ಜಾಗತಿಕ ಮಟ್ಟದಲ್ಲಿ ಐಪಿಎಲ್‌ ನೇರ ಪ್ರಸಾರದ ಹಕ್ಕುಗಳು ನಾಲ್ಕನೇ ಗರಿಷ್ಠ ದರವನ್ನು ಹೊಂದಿದೆ. ನ್ಯಾಷನಲ್‌ ಫುಟ್ಬಾಲ್‌ ಲೀಗ್‌ (NFL), ಇಂಗ್ಲೀಷ್‌ ಪ್ರೀಮಿಯರ್‌ ಲೀಗ್‌ (EPL), ಮೇಜರ್‌ ಲೀಗ್‌ ಬೇಸ್‌ಬಾಲ್‌ (MLB) ಬಿಟ್ಟರೆ ಅತಿ ಹೆಚ್ಚು ದರದ ಹಕ್ಕುಗಳು ಐಪಿಎಲ್‌ನದ್ದೇ ಆಗಿದೆ.

ಐಪಿಎಲ್‌ಗಿರುವ ಜನಪ್ರಿಯತೆ, ರೋಚಕತೆಯ ಪರಿಣಾಮ ಕೋಟ್ಯಂತರ ವೀಕ್ಷಕರನ್ನು ಗಳಿಸಿಕೊಂಡಿದೆ. ನೇರ ಪ್ರಸಾರ ಮಾಡುವಾಗ ಪ್ರತಿ ಓವರ್‌ನ ನಡುವೆ ಹಾಗೂ ವಿರಾಮದ ವೇಕೆ ಕಾರ್ಪೊರೇಟ್‌ ಕಂಪನಿಗಳು ಜಾಹೀರಾತುಗಳನ್ನು ನೀಡುತ್ತವೆ. ಜಾಹೀರಾತುಗಳಿಂದ ಸಿಗುವ ಆದಾಯವೇ ಬ್ರಾಡ್‌ಕಾಸ್ಟ್‌ ಕಂಪನಿಗಳಿಗೆ ಲಾಭದಾಯಕವಾಗಿರುತ್ತದೆ. ಅಲ್ಲದೆ ಪ್ರತಿ ವರ್ಷ ಜಾಹೀರಾತಿನ ದರವನ್ನು ಏರಿಸಲಾಗುತ್ತದೆ. ಈಗ ಟಿವಿ ಚಾನೆಲ್‌ಗಳ ಜತೆಗೆ ಡಿಜಿಟಲ್‌ ಮಾಧ್ಯಮಗಳಿಗೆ ಕೂಡ ಜಾಹೀರಾತುಗಳು ಲಭ್ಯ.

ಪ್ರತಿ ಸೆಕೆಂಡ್‌ ಜಾಹೀರಾತಿಗೆ 14 ಲಕ್ಷ ರೂ!

ಐಪಿಎಲ್‌ 2022ರಲ್ಲಿ ಬ್ರ್ಯಾಂಡ್‌ಗಳು ನೀಡಿದ ಜಾಹೀರಾತಿಗೆ ಪ್ರತಿ ಸೆಕೆಂಡ್‌ಗೆ ಸರಾಸರಿ 14 ಲಕ್ಷ ರೂ. ದರ ನಿಗದಿಯಾಗಿತ್ತು. 2018ರಲ್ಲಿ 10 ಲಕ್ಷ ರೂ. ನಿಗದಿಯಾಗಿತ್ತು. ಈ ಆದಾಯದ ಮಾರ್ಗವೇ ಐಪಿಎಲ್‌ ಬಿಡ್ಡಿಂಗ್‌ ವಾರ್‌ಗೆ ಕಾರಣವಾಗಿದೆ.

ಐಪಿಎಲ್‌ ಹಿನ್ನೆಲೆ ಏನು?

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಮೊದಲ ಎಡಿಶನ್‌ 2008ರಲ್ಲಿ ಶುರುವಾಯಿತು. ಬಿಸಿಸಿಐ 2007ರಲ್ಲಿ ಈ ಟ್ವೆಂಟಿ20 ಕ್ರಿಕೆಟ್‌ ಪಂದ್ಯಾವಳಿಯನ್ನು ರೂಪಿಸಿತು. ಪ್ರತಿ ವರ್ಷ ಮಾರ್ಚ್‌ ಮತ್ತು ಮೇ ನಡುವೆ ಟೂರ್ನಮೆಂಟ್‌ ಅದ್ಧೂರಿಯಾಗಿ ನಡೆಯುತ್ತದೆ. ವಿಶ್ವದ ಅತ್ಯಂತ ಮಹತ್ವದ ಕ್ರೀಡಾಕೂಟಗಳಲ್ಲೊಂದಾಗಿ ಹೊರಹೊಮ್ಮಿದೆ. ಐಪಿಎಲ್‌ನ ಮೊದಲ ಅಧ್ಯಕ್ಷರಾಗಿದ್ದವರು ಉದ್ಯಮಿ ಹಾಗೂ ಕ್ರಿಕೆಟ್‌ ಪಂದ್ಯಾವಳಿಗಳ ವ್ಯವಸ್ಥಾಪಕ ಲಲಿತ್‌ ಕುಮಾರ್‌ ಮೋದಿ. 2005ರಲ್ಲಿ ಬಿಸಿಸಿಐನ ಉಪಾಧ್ಯಕ್ಷರಾಗಿ ನೇಮಕವಾಗಿದ್ದರು.

2010ರ ತನಕವೂ ಲಲಿತ್‌ ಮೋದಿ ಐಪಿಎಲ್‌ ಟೂರ್ನಮೆಂಟ್‌ಗಳನ್ನು ನಡೆಸುತ್ತಿದ್ದರು. ಐಪಿಎಲ್‌ ಈಗಿನ ಜಮಾನದ ಯುವಜನರಿಗೆ ಹೇಳಿ ಮಾಡಿಸಿದ ಕ್ರೀಡಾಕೂಟ. ಟ್ವೆಂಟಿ20 ಫಾರ್‌ಮ್ಯಾಟಿನ ಕ್ರಿಕೆಟ್‌ ಮ್ಯಾಚ್‌ ಇದಕ್ಕೆ ಸರಿಯಾಗಿ ಹೊಂದಿಕೊಳ್ಳುತ್ತದೆ. ಇದು ಮಹಿಳೆಯರು ಮತ್ತು ಮಕ್ಕಳಿಗೂ ಇಷ್ಟವಾಗಲಿದೆ ಎಂದಿದ್ದರು ಲಲಿತ್‌ ಮೋದಿ.

2005ರಲ್ಲಿ ಬಿಸಿಸಿಐನ ಉಪಾಧ್ಯಕ್ಷರಾಗಿ ಅವರು ನೇಮಕವಾಗಿದ್ದರು. ಆದರೆ ಹಲವಾರು ಅವ್ಯವಹಾರ, ಅಕ್ರಮಗಳ ಹಗರಣಗಳಲ್ಲಿ ಸಿಲುಕಿದ ಲಲಿತ್‌ ಮೋದಿ ಅವರನ್ನು ಬಿಸಿಸಿಐ 2010ರ ಏಪ್ರಿಲ್‌ನಲ್ಲಿ ಮಂಡಳಿಯಿಂದ ಉಚ್ಚಾಟಿಸಿತು. ವಿತ್ತಾಪರಾಧಿಯಾಗಿರುವ ಲಲಿತ್‌ ಮೋದಿ ಈಗ ಲಂಡನ್‌ನಲ್ಲಿ ತಲೆಮರೆಸಿಕೊಂಡಿದ್ದಾರೆ.

ಆರಂಭದಲ್ಲಿ ಐಪಿಎಲ್‌ ಮಾದರಿಯ ಬಗ್ಗೆ ಬಿಸಿಸಿಐಗೆ ಅಂಥ ಆಸಕ್ತಿ ಇರಲಿಲ್ಲ. ಆದರೆ ಅದರ ಲಾಭದ ರುಚಿ ಕಂಡ ಬಳಿಕ ಹಿಂತಿರುಗಿ ನೋಡಲಿಲ್ಲ. ಆದರೆ ಎಲ್ಲದಕ್ಕೂ ಹೆಚ್ಚಿನ ಮುತುವರ್ಜಿಯಿಂದ ಬಿಸಿಸಿಐ ತನ್ನ ಹೆಮ್ಮೆಯ ಐಪಿಎಲ್‌ ಅನ್ನು ನಡೆಸುತ್ತಿದೆ.
ಅಂತೂ, ಐಪಿಎಲ್ ಪಂದ್ಯಾವಳಿಯ ಪ್ರಸಾರ ಹಕ್ಕಿನ ಹರಾಜು ಕುತೂಹಲ ಮೂಡಿಸಿದೆ.

Exit mobile version