Site icon Vistara News

ವಿಸ್ತಾರ Explainer : ಏನಿದು ಮಹಿಳಾ ಕುಸ್ತಿಪಟುಗಳು, ಕುಸ್ತಿ ಒಕ್ಕೂಟದ ಜಂಗೀ ಕುಸ್ತಿ?

Vistara Explainer : What are women wrestlers, wrestling federation wrestling

#image_title

ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆದ್ದು ಕ್ರೀಡಾ ಕ್ಷೇತ್ರದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಜಗದಗಲಕ್ಕೂ ಹಾರಿಸಿದ್ದ ಏಳು ಮಹಿಳಾ ಕುಸ್ತಿಪಟುಗಳು ಕಳೆದ ಭಾನುವಾರದಿಂದ (ಏಪ್ರಿಲ್​ 23ರಂದ) ನವದೆಹಲಿಯ ಜಂತರ್​ ಮಂಥರ್​ನಲ್ಲಿ ಆಹೋರಾತ್ರಿ ಪ್ರತಿಭಟನೆಗೆ ಕುಳಿತಿದ್ದಾರೆ. ನಮ್ಮ ಮೇಳೆ ಲೈಂಗಿಕ ದೌರ್ಜನ್ಯ ಎಸಗಿರುವ ಕುಸ್ತಿ ಒಕ್ಕೂಟದ ಅಧ್ಯಕ್ಷರಾದ ಬ್ರಿಜ್​ಭೂಷಣ್ ಶರಣ್​ ಸಿಂಗ್ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪಟ್ಟು ಹಿಡಿದಿದ್ದಾರೆ. ನಮಗೆ ಅನ್ಯಾಯ ಆಗಿದ್ದರೂ ಯಾರೂ ನಮ್ಮ ಧನಿಯನ್ನು ಯಾರೂ ಕೇಳುತ್ತಿಲ್ಲ. ಈ ವಿಚಾರವಾಗಿ ತನಿಖೆ ನಡೆಸಿರುವ ಮೇಲುಸ್ತುವಾರಿ ಸಮಿತಿ ಒಕ್ಕೂಟದ ಅಧ್ಯಕ್ಷರ ಪರ ನ್ಯಾಯ ನೀಡಿದೆ. ಇದು ಪಕ್ಷಪಾತಿ ಧೋರಣೆ ಎಂದು ಅವರು ಆರೋಪಿಸಿದ್ದಾರೆ. ಅತ್ತ ಕುಸ್ತಿ ಒಕ್ಕೂಟದ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್​ಭೂಷಣ್ ಸಿಂಗ್​, ನನ್ನನ್ನು ಹಣಿಯಲಾಗುತ್ತಿದೆ. ಒಂದು ವೇಳೆ ನಾನು ಸೋಲುವ ಸಂದರ್ಭದ ಬಂದರೆ ಸಾವಿಗೆ ಶರಣಾಗುವೆ ಎಂದು ವಿಡಿಯೊ ಹೇಳಿಕೆ ಕೊಟ್ಟಿದ್ದಾರೆ. ಈ ವಿವಾದ ಇದೀಗ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರಿಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕುಸ್ತಿ ಒಕ್ಕೂಟದ ಮಾನ ಹರಾಜಾಗುತ್ತಿರುವ ರಾಜಕೀಯ ಪವರ್​ ಹಾಗೂ ಕ್ರೀಡಾಪಟುಗಳ ನಡುವಿನ ತೋಳ್ಬಲ ಪ್ರದರ್ಶನಕ್ಕೆ ವೇದಿಕೆಯಾಗುತ್ತಿದೆ. ಇಷ್ಟೊಂದು ಸದ್ದು ಮಾಡುತ್ತಿರುವ ಈ ವಿವಾದದ ಕುರಿತ ವಿಸ್ತಾರ Explainer ಇಲ್ಲಿದೆ.

ಪ್ರಕರಣ ಮತ್ತೆ ಸುದ್ದಿಯಲ್ಲಿರುವುದು ಯಾಕೆ?

ತಮಗೆ ನ್ಯಾಯ ಕೊಡಿಸುವ ಭರವಸೆ ಕೊಟ್ಟು ರಚಿಸಲಾದ ಮೇಲುಸ್ತುವಾರಿ ಸಮಿತಿ ನಮ್ಮ ಆರೋಪಗಳು ಸುಳ್ಳು ಎಂದು ವರದಿ ನೀಡಿದೆ. ಇದು ಏಕಪಕ್ಷೀಯ ತೀರ್ಪು. ಈ ಬಗ್ಗೆ ನಾವು ಪೊಲೀಸ್​ ದೂರು ನೀಡಿದರೂ ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ ಎಂದು ಕುಸ್ತಿಪಟುಗಳು ಜಂತರ್​​ಮಂತ್​​ನಲ್ಲಿ ಧರಣಿ ಕುಳಿತಿದ್ದಾರೆ. ಅವರಿಗೆ ಪುರುಷ ಕುಸ್ತಿಪಟುಗಳ ಬೆಂಬಲ ಕೊಟ್ಟಿದ್ದಾರೆ. ಅವರೂ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.

2012 ರಿಂದ 2022ರವರೆಗೆ 10 ವರ್ಷಗಳ ಅವಧಿಯಲ್ಲಿ ತಮ್ಮ ಮೇಲೆ ದೌರ್ಜನ್ಯ ನಡೆದಿದೆ ಎಂದು ಏಳು ಮಹಿಳಾ ಕುಸ್ತಿಪಟುಗಳು ಸಂಸದರ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್ ಬೆದರಿಕೆಯ ಆರೋಪ ಹೊರಿಸಿ ಏಪ್ರಿಲ್ 21 ರಂದು ಪ್ರತ್ಯೇಕ ಪೊಲೀಸ್ ದೂರುಗಳನ್ನು ದಾಖಲಿಸಿದ್ದಾರೆ. ಆದರೆ ಡೆಲ್ಲಿ ಪೊಲೀಸರು ಬ್ರಿಷ್​ಭೂಷಣ್​ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಹೀಗಾಗಿ ಕುಸ್ತಿಪಟುಗಳು ಮಂಗಳವಾರ ಸುಪ್ರೀಮ್​ ಕೋರ್ಟ್​ ಮೊರೆ ಹೋಗಿದ್ದರು. ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿದ ಸುಪ್ರೀಮ್​ ಕೋರ್ಟ್​​ ದೂರು ದಾಖಲಿಸಿಕೊಳ್ಳುವಂತೆ ಸೂಚನೆ ನೀಡಿದೆ.

ಈ ಬಾರಿ ಪ್ರತಿಭಟನೆ ಕುಳಿತಿರುವ ಕುಸ್ತಿಪಟುಗಳು ಕೇಂದ್ರ ಸರಕಾರ, ಕ್ರೀಡಾ ಸಚಿವಾಲಯ ಹಾಗೂ ಇನ್ನಿತರ ಪ್ರಭಾವಿ ಕುಸ್ತಿಪಟುಗಳ ವಿರುದ್ಧ ಹೇಳಿಕೆಗಳನ್ನು ನೀಡಲು ಆರಂಭಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಸಚಿವೆ ಸ್ಮೃತಿ ಇರಾನಿ, ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸೇರಿದಂತೆ ಯಾರೂ ನಮ್ಮ ನೆರವಿಗೆ ಬರುತ್ತಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಇದೀಗ ರಾಜಕೀಯ ಪಕ್ಷಗಳು ಕುಸ್ತಿಪಟುಗಳಿಗೆ ಬೆಂಬಲ ಕೊಡುತ್ತಿದ್ದಾರೆ. ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್​ ಮಲಿಕ್ ಸೇರಿದಂತೆ ಹಲವು ಮುಖಂಡರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಕ್ರೀಡಾಪಟುಗಳು ಕೂಡ ಪ್ರತಿಭಟನಾಕಾರರ ಪರವಾಗಿ ಮಾತನಾಡಲು ಶುರು ಮಾಡಿದ್ದಾರೆ. ಹೀಗಾಗಿ ಪ್ರಕರಣಕ್ಕೆ ಕೊನೆ ಹಾಡಲು ಸರಕಾರ ಮುಂದೆ ಬರಬೇಕಾದ ಅನಿವಾರ್ಯತೆ ಎದುರಾಗಿದೆ.

ದೂರು ಕೊಟ್ಟವರು ಯಾರು? ಪ್ರತಿಭಟನೆಯಲ್ಲಿ ಇರುವವರು ಯಾರು?

ಬ್ರಿಜ್ ಭೂಷಣ್ ವಿರುದ್ಧ ಪೊಲೀಸ್ ದೂರು ದಾಖಲಿಸಿರುವ ಏಳು ಮಹಿಳಾ ಕುಸ್ತಿಪಟುಗಳ ಗುರುತನ್ನು ಬಹಿರಂಗಪಡಿಸಲಾಗಿಲ್ಲ. ದೂರುದಾರರ ಗುರುತನ್ನು ರಕ್ಷಿಸಲು ಅವರ ಹೆಸರುಗಳನ್ನು ನ್ಯಾಯಾಂಗ ದಾಖಲೆಗಳಿಂದ ತೆಗೆದುಹಾಕಲಾಗುವುದು ಎಂದು ಸಿಜೆಐ ಚಂದ್ರಚೂಡ್ ಮಂಗಳವಾರ ಹೇಳಿದ್ದಾರೆ.

ಒಲಿಂಪಿಕ್ ಕಂಚಿನ ಪದಕ ವಿಜೇತರಾದ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪೂನಿಯಾ ಮತ್ತು ವಿಶ್ವ ಪದಕ ವಿಜೇತ ವಿನೇಶ್ ಫೋಗಟ್ ಜನವರಿಯ ಆರಂಭದಿಂದಲೂ ಪ್ರತಿಭಟನೆಯ ಮುಂಚೂಣಿಯಲ್ಲಿದ್ದಾರೆ. ಮೊದಲ ಸುತ್ತಿನ ಪ್ರತಿಭಟನೆಯ ಸಮಯದಲ್ಲಿ, ಅನ್ಶು ಮಲಿಕ್, ಸೋನಮ್ ಮಲಿಕ್, ರವಿ ದಹಿಯಾ ಮತ್ತು ದೀಪಕ್ ಪುನಿಯಾ ಅವರಂತಹ ಯುವ ಕುಸ್ತಿಪಟುಗಳು ಇದ್ದರು. ಆದಾಗ್ಯೂ, ಭಾನುವಾರ ಪ್ರಾರಂಭವಾದ ಎರಡನೇ ಸುತ್ತಿನ ಪ್ರತಿಭಟನೆಯಲ್ಲಿ, ಕಳೆದೊಂದು ದಶಕದಲ್ಲಿ ಭಾರತಕ್ಕಾಗಿ ಡಜನ್​ಗಟ್ಟಲೆ ಪ್ರಶಸ್ತಿ ತಂದುಕೊಟ್ಟಿರುವ ಸಾಕ್ಷಿ ಮಲಿಕ್​, ವಿನೇಶ್ ಫೋಗಟ್​​ ಮತ್ತು ಬಜರಂಗ್ ಪೂನಿಯಾ ಮಾತ್ರ ಇದ್ದಾರೆ. ಇತರ ಕುಸ್ತಿಪಟುಗಳು ಇನ್ನೂ ಕಾಣಿಸಿಕೊಂಡಿಲ್ಲ.

ಬ್ರಿಜ್ ಭೂಷಣ್ ವಿರುದ್ಧ ಕುಸ್ತಿಪಟುಗಳ ಆರೋಪ ಏನು?

ಡಬ್ಲ್ಯುಎಫ್ಐನ ಕಾರ್ಯನಿರ್ವಹಣೆಯಲ್ಲಿ ಹಣಕಾಸಿನ ದುರುಪಯೋಗ ನಡೆದಿದೆ. ಅಧ್ಯಕ್ಷರು ಸರ್ವಾಧಿಕಾರಿ ಧೋರಣೆ ಪ್ರದರ್ಶಿಸುತ್ತಿದ್ದಾರೆ ಎಂಬುದಾಗಿ ಕುಸ್ತಿಪಟುಗಳು ಆರೋಪಿಸಿದ್ದಾರೆ. ಇಲ್ಲಿ ಮಹಿಳಾ ಕುಸ್ತಿಪಟುಗಳು ಮಾಡಿರುವ ಗಂಭೀರ ಆರೋಪವೆಂದರೆ ಲೈಂಗಿಕ ಕಿರುಕುಳ.

ಮಹಿಳಾ ಕುಸ್ತಿಪಟುಗಳು 2012 ರಿಂದ 2022ರವರೆಗೆ ನಡೆದ ಹಲವಾರು ಘಟನೆಗಳನ್ನು ಉಲ್ಲೇಖಿಸಿದ್ದಾರೆ. ಭಾರತದಲ್ಲಿ ನಡೆದ ಕೆಲವೊಂದು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯ ವೇಳೆ ಮಹಿಳಾ ಕುಸ್ತಿಪಟುಗಳ ಮೇಲೆ ಬ್ರಿಜ್​ ಭೂಷಣ್​ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬುದಾಗಿ ಕುಸ್ತಿಪಟುಗಳು ಆರೋಪಿಸಿದ್ದಾರೆ. ನವದೆಹಲಿಯಲ್ಲಿರುವ ಬ್ರಿಜ್ ಭೂಷಣ್ ಅವರ ಅಧಿಕೃತ ಸಂಸದರ ಬಂಗಲೆಯಲ್ಲಿ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಅನ್ಯಾಯಕ್ಕೆ ಒಳಗಾದವರಲ್ಲಿ ಅಪ್ರಾಪ್ತ ವಯಸ್ಸಿನ ಮಹಿಳಾ ಕುಸ್ತಿಪಟು ಕೂಡ ಇದ್ದಾರೆ ಎಂದು ಪ್ರತಿಭಟನಾಕಾರರು ಅರೋಪಿಸಿದ್ದಾರೆ. ಈ ಕುರಿತು ಪೊಲೀಸ್​ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮಂಗಳವಾರ (ಏಪ್ರಿಲ್​ 25ಂದು) ಕುಸ್ತಿಪಟುಗಳು ಸುಪ್ರೀಂ ಕೋರ್ಟ್ ಮುಂದೆ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ : Wrestlers Protest : ನಮ್ಮ ಮನ್​ಕಿ ಬಾತ್​ ಆಲಿಸಿ ಎಂದು ಪ್ರಧಾನಿ ಮೋದಿಗೆ ಮನವಿ ಮಾಡಿದ ಕುಸ್ತಿಪಟುಗಳು

ಕ್ರೀಡಾ ಸಚಿವಾಲಯವು ಭಾರತೀಯ ಒಲಿಂಪಿಕ್ ಸಂಸ್ಥೆಗೆ ಪತ್ರವೊಂದನ್ನು ಕಳುಹಿಸಿದ್ದು ಅದರಲ್ಲಿಯೂ ಕುಸ್ತಿಪಟುಗಳ ಆರೋಪಗಳು ಸೇರಿಕೊಂಡಿವೆ. ಅದರ ಪ್ರಕಾರ ಬ್ರಿಜ್ ಭೂಷಣ್ ಮಾತ್ರವಲ್ಲದೆ, ಫೆಡರೇಶನ್​ನ ಇತರ ಅಧಿಕಾರಿಗಳು ಮತ್ತು ತರಬೇತುದಾರರೂ ದೌರ್ಜನ್ಯ ಎಸಗಿದ್ದಾರೆ. ಪೊಲೀಸ್ ದೂರಿನಲ್ಲಿ ಬ್ರಿಜ್ ಭೂಷಣ್ ಬೆದರಿಕೆ ಒಡ್ಡಿರುವ ಆರೋಪವನ್ನೂ ಹೊರಿಸಲಾಗಿದೆ.

ಪ್ರತಿಭಟನಾ ನಿರತ ಕುಸ್ತಿಪಟುಗಳು ಏನು ಒತ್ತಾಯಿಸುತ್ತಿದ್ದಾರೆ?

ತಮ್ಮ ಪೊಲೀಸ್ ದೂರಿನ ಆಧಾರದ ಮೇಲೆ ಬ್ರಿಜ್ ಭೂಷಣ್ ವಿರುದ್ಧ ಎಫ್ಐಆರ್ ದಾಖಲಿಸಬೇಕು ಮತ್ತು ದೂರುದಾರರಲ್ಲಿ ಒಬ್ಬರು ಅಪ್ರಾಪ್ತ ವಯಸ್ಕರಾಗಿರುವುದರಿಂದ ಅವರನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಬಂಧಿಸಬೇಕು ಎಂದು ಕುಸ್ತಿಪಟುಗಳು ಒತ್ತಾಯಿಸುತ್ತಿದ್ದಾರೆ. ಅವರನ್ನು ಡಬ್ಲ್ಯುಎಫ್ಐ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಬೇಕು ಮತ್ತು ಒಕ್ಕೂಟವನ್ನು ವಿಸರ್ಜಿಸಬೇಕು ಎಂದೂ ಪಟ್ಟು ಹಿಡಿದಿದ್ದಾರೆ.

ಮತ್ತೆ ಪ್ರತಿಭಟಿಸಲು ಕಾರಣವೇನು?

ಕುಸ್ತಿಪಟುಗಳು ಜನವರಿಯಲ್ಲಿ ಪ್ರತಿಭಟನೆ ಮಾಡಿದಾಗ ಕ್ರೀಡಾ ಸಚಿವಾಲಯದ ಮಧ್ಯಸ್ಥಿಕೆಯಲ್ಲಿ ತನಿಖೆಗೆ ಮೇಲುಸ್ತುವಾರಿ ಸಮಿತಿ ರಚನೆ ಮಾಡಿತ್ತು. ತನಿಖೆ ನಡೆಸಿದ ಸಮಿತಿಯು, ವರದಿಯನ್ನು ಬಿಡುಗಡೆ ಮಾಡಲು ವಿಳಂಬ ಮಾಡುತ್ತಿದೆ ಎಂದು ಕುಸ್ತಿಪಟುಗಳು ಮತ್ತೆ ಪ್ರತಿಭಟನೆ ನಡೆಸುತ್ತಿದ್ದಾರೆ.

ತನಿಖೆಯ ನಡುವೆಯೂ ಡಬ್ಲ್ಯುಎಫ್ಐ ತನ್ನ ಚಟುವಟಿಕೆಗಳನ್ನು ಪುನರಾರಂಭಿಸಿದೆ. ಬ್ರಿಜ್ ಭೂಷಣ್ ಇನ್ನೂ ನಮ್ಮ ಮೇಲೆ ಪ್ರತಿಕಾರ ತೀರಿಸುತ್ತಿದ್ದಾರೆ. ವಿವಾದ ಭುಗಿಲೆದ್ದ ನಡುವೆಯೂ ರಾಷ್ಟ್ರೀಯ ಮಟ್ಟದ ಕುಸ್ತಿ ಟೂರ್ನಿ ಅವರ ಊರು ಗೊಂಡಾದಲ್ಲಿ ಜಮೀನಿನಲ್ಲಿ ನಡೆದಿದೆ. ಹೀಗಾಗಿ ಎಲ್ಲರ ಬಗ್ಗೆ ನಂಬಿಕೆ ಕಳೆದುಕೊಂಡಿದ್ದೇವೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಬಿಡಬ್ಲ್ಯುಎಫ್​ ಅಧ್ಯಕ್ಷ ಬ್ರಿಜ್​ ಭೂಷಣ್ ಶರಣ್​ ಸಿಂಗ್​ ಯಾರು?

ಹಿರಿಯ ರಾಜಕಾರಣಿ ಬ್ರಿಜ್ ಭೂಷಣ್ ಆರು ಬಾರಿ ಸಂಸದರಾಗಿ ಆಯ್ಕೆಗೊಂಡವರು. 1991 ಮತ್ತು 1999ರಲ್ಲಿ ಗೊಂಡಾ ಲೋಕಸಭಾ ಕ್ಷೇತ್ರದಲ್ಲಿ, 2004ರಲ್ಲಿ ಬಲರಾಂಪುರ ಮತ್ತು 2009, 2014 ಮತ್ತು 2019ರಲ್ಲಿ ಕೈಸರ್​ಗಂಜ್​ನಲ್ಲಿ ಗೆದ್ದಿದ್ದಾರೆ. ಅವರು 2009ರಲ್ಲಿ ಎಸ್ಪಿಯಲ್ಲಿ ಗೆದ್ದಿರುವುದು ಹೊರತುಪಡಿಸಿ ಉಳಿದೆಲ್ಲ ಬಾರಿಯೂ ಬಿಜೆಪಿ.

ಗೊಂಡಾ ಮೂಲದ 66 ವರ್ಷದ ಬ್ರಿಜ್ ಭೂಷಣ್ ಅವರು ರಾಮ ಜನ್ಮಭೂಮಿ ಚಳವಳಿಯೊಂದಿಗೆ ಪ್ರಖ್ಯಾತಿ ಪಡೆದವರು. 2019ರ ಚುನಾವಣಾ ಅಫಿಡವಿಟ್ ಪ್ರಕಾರ, ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಅವರ ಹೆಸರಿತ್ತು.

ಸ್ವಯಂ ಘೋಷಿತ ಕುಸ್ತಿ ಪ್ರೇಮಿಯಾಗಿರುವ ಅವರು ಡಬ್ಲ್ಯುಎಫ್ಐ ಅಧ್ಯಕ್ಷರಾಗಿ, ಏಷ್ಯನ್ ರಸ್ಲಿಂಗ್​ ಫೆಡರೇಷನ್​ ಉಪಾಧ್ಯಕ್ಷರಾಗಿ ಮತ್ತು ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆಗೆ ಕ್ರೀಡಾಪಟುಗಳನ್ನು ಗುರುತಿಸುವ ಮತ್ತು ಅವರ ತರಬೇತಿ ನೀಡುವ ಸರ್ಕಾರದ ಮಿಷನ್ ಒಲಿಂಪಿಕ್ ಸೆಲ್​ನ ಸದಸ್ಯರಾಗಿ ಕೆಲಸ ಮಾಡಿದ್ದರು. ಅಲ್ಲದೆ, ಹಲವು ಕ್ರೀಡಾ ಕ್ಷೇತ್ರಗಳ ಆಡಳಿತಾತ್ಮಕ ಕೆಲಸ ಮಾಡಿದ್ದಾರೆ.

ರಾಜಕೀಯ ಪ್ರಬಲ ವ್ಯಕ್ತಿ ಎಂದು ಕರೆಯಲ್ಪಡುವ ಬ್ರಿಜ್ ಭೂಷಣ್, ದೇಶೀಯವಾಗಿ ಕ್ರೀಡಾ ಕ್ಷೇತ್ರದ ಮೇಲೆ ಹೆಚ್ಚು ಪ್ರಭಾವ ಹೊಂದಿದ್ದಾರೆ. ಭಾರತೀಯ ಕುಸ್ತಿ ಕ್ಷೇತ್ರದ ವಿಚಾರಕ್ಕೆ ಬಂದಾಗ ಅವರ ಮಾತೇ ಕೊನೆ.

ದಶಕದಷ್ಟು ಹಳೆಯ ಪ್ರಕರಣ ಈಗ ಹೊರ ಬಂದಿದ್ದು ಯಾಕೆ?

ಇದಕ್ಕೆ ಸ್ಪಷ್ಟ ಕಾರಣ ಯಾರೂ ಕೊಟ್ಟಿಲ್ಲ. ಅದರೆ, ಜನವರಿಯಲ್ಲಿ ಪ್ರತಿಭಟನೆ ನಡೆಸುವ ವೇಳೆ ಮಾತನಾಡಿದ್ದ ಪ್ರತಿಭಟನಾಕಾರರು, ಲಖನೌನಲ್ಲಿ ಕೆಲವು ಮಹಿಳಾ ಕುಸ್ತಿಪಟುಗಳು ನಮಗೆ ಕರೆ ಮಾಡಿ ನಾವು ಅಸುರಕ್ಷಿತ ವಾತಾವರಣದಲ್ಲಿದ್ದೇವೆ ಎಂದು ತಿಳಿಸಿದ್ದಾರೆ. ಆ ಬಳಿಕ ವಿನೇಶ್ ಫೋಗಟ್​, ಸಾಕ್ಷಿ ಮಲಿಕ್ ಜತೆಯಾಗಿ ಇದರ ವಿರುದ್ಧ ಸೆಟೆದು ನಿಲ್ಲುವ ನಿರ್ಧಾರ ಕೈಗೊಂಡರು ಎಂದು ಹೇಳಿದ್ದರು. ಅಲ್ಲದೆ ಮೂರು ಬಾರಿ ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಬ್ರಿಜ್​ ಭೂಷಣ್ ಅವರು ಮತ್ತೆ ಸ್ಪರ್ಧಿಸಲು ಅನರ್ಹ. ಇದೀಗ ಅವರ ಪುತ್ರ ಕರಣ್​ ಭೂಷಣ್​ ಸಿಂಗ್ ಅವರನ್ನು ಹುದ್ದೆಗೇರಿಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಡಬ್ಲ್ಯುಎಫ್ಐ ಹೇಗೆ ಪ್ರತಿಕ್ರಿಯಿಸಿದೆ?

ಬ್ರಿಜ್ ಭೂಷಣ್ ಅವರು ಲೈಂಗಿಕ ಕಿರುಕುಳದ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಆರೋಪ ಸಾಬೀತಾದರೆ ಗಲ್ಲಿಗೇರಲು ಸಿದ್ಧ ಎಂದು ಜನವರಿಯಲ್ಲಿ ಹೇಳಿದ್ದಾರೆ. ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಕೋರಿ ಮಾಡಿದ ಕರೆಗಳಿಗೆ ಅವರು ಪ್ರತಿಕ್ರಿಯಿಸುತ್ತಿಲ್ಲ. ತನ್ನ ಕಾರ್ಯನಿರ್ವಹಣೆಯಲ್ಲಿ ಹಣಕಾಸಿನ ದುರುಪಯೋಗವನ್ನು ಡಬ್ಲ್ಯುಎಫ್ಐ ಕೂಡ ನಿರಾಕರಿಸಿದೆ.

ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಂಡಿದೆ?

ಜನವರಿಯಲ್ಲಿ ಕುಸ್ತಿಪಟುಗಳನ್ನು ಮನವೊಲಿಸಿದ್ದ ಸರ್ಕಾರ, ಬ್ರಿಜ್ ಭೂಷಣ್ ವಿರುದ್ಧದ ಆರೋಪಗಳನ್ನು ಪರಿಶೀಲಿಸುವ ಮತ್ತು ಡಬ್ಲ್ಯುಎಫ್ಐನ ದೈನಂದಿನ ವ್ಯವಹಾರಗಳನ್ನು ನಿರ್ವಹಿಸುವ ಮೇಲ್ವಿಚಾರಣಾ ಸಮಿತಿ ರಚಿಸಿತ್ತು. ಬಾಕ್ಸಿಂಗ್ ದಂತಕಥೆ ಎಂ.ಸಿ.ಮೇರಿ ಕೋಮ್ ನೇತೃತ್ವದ ಆರು ಸದಸ್ಯರ ಸಮಿತಿಗೆ ವರದಿ ನೀಡಲು ನಾಲ್ಕು ವಾರಗಳ ಕಾಲಾವಕಾಶ ನೀಡಿತ್ತು. ಅದು ತನ್ನ ವರದಿಯನ್ನು ಏಪ್ರಿಲ್ ಮೊದಲ ವಾರದಲ್ಲಿ ಸಲ್ಲಿಸಿದೆ. ಅಂದಿನಿಂದ ಸಮಿತಿಯನ್ನು ವಿಸರ್ಜಿಸಲಾಗಿದೆ.

ಹೊಸ ಪ್ರತಿಭಟನೆ ಆರಂಭಗೊಂಡ ಬಳಿಕ, ಮೇ 7ರಂದು ನಿಗದಿಯಾಗಿದ್ದ ಡಬ್ಲ್ಯುಎಫ್ಐ ಚುನಾವಣೆ ಪ್ರಕ್ರಿಯೆಯನ್ನು ಸರ್ಕಾರ ಅನೂರ್ಜಿತಗೊಳಿಸಿದೆ. 45 ದಿನಗಳಲ್ಲಿ ಚುನಾವಣೆಗಳನ್ನು ನಡೆಸುವ ಮತ್ತು ಹೊಸ ಸದಸ್ಯರು ಅಧಿಕಾರ ವಹಿಸಿಕೊಳ್ಳುವವರೆಗೆ ಡಬ್ಲ್ಯುಎಫ್ಐನ ದೈನಂದಿನ ವ್ಯವಹಾರಗಳನ್ನು ನಿರ್ವಹಿಸುವ ತಾತ್ಕಾಲಿಕ ಸಮಿತಿಯನ್ನು ರಚಿಸುವಂತೆ ಸೂಚನೆ ನೀಡಿದೆ.

ಮೇಲ್ವಿಚಾರಣಾ ಸಮಿತಿಯ ವಿವರಣೆ ಏನು?

ಮೇರಿಕೋಮ್​ ನೇತೃತ್ವದ ಸಮಿತಿ ನೀಡಿದ ವರದಿ ಪರಿಶೀಲನೆಯಲ್ಲಿದೆ. ಇನ್ನೂ ಬಹಿರಂಗಗೊಂಡಿಲ್ಲ. ಕ್ರೀಡಾ ಸಚಿವಾಲಯವು ಸೋಮವಾರ ವರದಿಯ ಪ್ರಮುಖ ಅಂಶಗಳನ್ನು ಹಂಚಿಕೊಂಡಿದೆ. ಲೈಂಗಿಕ ಕಿರುಕುಳ ತಡೆ ಕಾಯ್ದೆ 2013 ರ ಅಡಿಯಲ್ಲಿ ದೂರು ಸಲ್ಲಿಸಲು ಸಮಿತಿ ಇಲ್ಲ ಹಾಗೂ ಕ್ರೀಡಾಪಟುಗಳಿಗೆ ಜಾಗೃತಿ ಮೂಡಿಸುವ ಕ್ರಮವೂ ಸರಿಯಿಲ್ಲ ಎಂದಷ್ಟೇ ಹೇಳಿದೆ. ಕುಸ್ತಿ ಪಟುಗಳು ಮಾಡಿರುವ ಆರೋಪಗಳು ಹಾಗೂ ಆ ಕುರಿತ ತನಿಖಾ ಪ್ರಗತಿಯನ್ನು ವಿವರಿಸಿಲ್ಲ.

ಮುಂದೆ ಏನಾಗಬಹುದು?

ಏಪ್ರಿಲ್ 28ರ ಶುಕ್ರವಾರ ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಲಿದೆ. ತಮ್ಮ ಬೇಡಿಕೆಗಳು ಈಡೇರುವವರೆಗೂ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಕುಸ್ತಿಪಟುಗಳು ಹೇಳಿದ್ದಾರೆ. ಮಂಗಳವಾರದಿಂದ ರಾಜಕೀಯ ಮುಖಂಡರು ಪ್ರತಿಭಟನೆ ಬರಲು ಆರಂಭಿಸಿರುವ ಕಾರಣ ಪ್ರಕರಣ ಇನ್ನಷ್ಟು ಬಿಗಡಾಯಿಸಲಿದೆ.

Exit mobile version