Site icon Vistara News

ವಿಸ್ತಾರ Explainer | FIFA ban: ಪ್ರಫುಲ್‌ ಪಟೇಲ್‌ ಕಳ್ಳಾಟಕ್ಕೆ ಫಿಫಾದ ಕಾಲ್ಚೆಂಡಾದ ಭಾರತೀಯ ಫುಟ್ಬಾಲ್‌

football

ಅಖಿಲ ಭಾರತ ಫುಟ್ಬಾಲ್‌ ಒಕ್ಕೂಟ (AIFF) ವನ್ನು ಅಂತಾರಾಷ್ಟ್ರೀಯ ಫುಟ್ಬಾಲ್‌ ಸಂಸ್ಥೆಗಳ ಒಕ್ಕೂಟ (FIFA) ವಜಾ ಮಾಡಿದೆ. ಕೂಡಲೇ ಈ ಕುರಿತು ಮಧ್ಯಸ್ಥಿಕೆ ವಹಿಸಿ ವಾತಾವರಣ ತಿಳಿಗೊಳಿಸುವಂತೆ, ಭಾರತದಲ್ಲಿ ಮುಂದಿನ ಅಕ್ಟೋಬರ್‌ನಲ್ಲಿ ನಡೆಯಬೇಕಿದ್ದ 17 ವರ್ಷದೊಳಗಿನ ಮಹಿಳೆಯರ ಫುಟ್ಬಾಲ್‌ ವಿಶ್ವಕಪ್‌ ಪಂದ್ಯಾಟ ನಡೆಯುವಂತೆ ನೋಡಿಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ತಾಕೀತು ಮಾಡಿದೆ.

ಭಾರತೀಯ ಸಂಘಟನೆಯನ್ನು ವಜಾ ಮಾಡಲು ಫಿಫಾಗೆ ಇರುವ ಹಕ್ಕೇನು? ಯಾಕೆ ಈ ವಜಾ? ಇದಕ್ಕೆ ಕಾರಣ ಏನು, ಯಾರು? ಭಾರತೀಯ ಫುಟ್ಬಾಲ್‌ ಕ್ಷೇತ್ರಕ್ಕೆ ಇದರಿಂದ ಏನು ಹಾನಿ? ಇದರಿಂದ ಪಾರಾಗುವುದು ಹೇಗೆ?

ಎಐಎಫ್‌ಎಫ್‌ ವಜಾ ಬೆದರಿಕೆ

ಎಲ್ಲ ದೇಶಗಳ ಫುಟ್ಬಾಲ್‌ ತಂಡಗಳೂ ಅಂತಾರಾಷ್ಟ್ರೀಯ ಫುಟ್ಬಾಲ್‌ ಸಂಸ್ಥೆಗಳ ಒಕ್ಕೂಟ (FIFA) ದ ಅಡಿ ಬರುತ್ತದೆ. ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕಿದ್ದರೆ ಯಾವುದೇ ದೇಶಕ್ಕೆ ಫಿಫಾದ ಅನುಮತಿ ಅಗತ್ಯ.

ಆಗಸ್ಟ್‌ 16ರಂದು ಫಿಫಾ ಒಂದು ಪ್ರಕಟಣೆ ನೀಡಿತು: ʻʻಎಐಎಫ್‌ಎಫ್‌ ಅನ್ನು ವಜಾ ಮಾಡಲು ಫಿಫಾ ಆಡಳಿತ ಮಂಡಳಿ ಸರ್ವಾನುಮತದಿಂದ ತೀರ್ಮಾನಿಸಿದೆ. ಎಐಎಫ್‌ಎಫ್‌ನಲ್ಲಿ ಮೂರನೇ ವ್ಯಕ್ತಿಗಳ ಅನಗತ್ಯ ಹಸ್ತಕ್ಷೇಪವನ್ನು ಅನುಲಕ್ಷಿಸಿ, ಅದು ಫಿಫಾ ನಿಯಮಾವಳಿಗಳ ಗಂಭೀರ ಉಲ್ಲಂಘನೆಯಾಗಿರುವುದರಿಂದ ಹೀಗೆ ಮಾಡಲಾಗಿದೆ. ಇದರ ಹಿನ್ನೆಲೆಯಲ್ಲಿ, 2022ರ ಅಕ್ಟೋಬರ್‌ 11ರಿಂದ 30ರವೆಗೆ ನಡೆಯಲಿದ್ದ 17 ವರ್ಷದೊಳಗಿನ ಮಹಿಳೆಯರ ಫುಟ್ಬಾಲ್‌ ವಿಶ್ವಕಪ್ ಪಂದ್ಯಾಟಗಳು ಭಾರತದಲ್ಲಿ ನಡೆಯುವುದಿಲ್ಲ. ಎಐಎಫ್‌ಎಫ್‌ಗೆ ನೇಮಿಸಲಾಗಿರುವ ಆಡಳಿತಾಧಿಕಾರಿಗಳ ಸಮಿತಿಯನ್ನು ವಜಾ ಮಾಡಿ, ಮೊದಲಿನ ಆಡಳಿತದ ಅಧಿಕಾರವನ್ನು ಮರಳಿಸಿದರೆ ಈ ವಜಾ ಹಿಂದೆಗೆದುಕೊಳ್ಳಲಾಗುತ್ತದೆ. ಫಿಫಾ ಆಡಳಿತ ಮಂಡಳಿಯು ಭಾರತ ಸರ್ಕಾರದ ಯುವಜನ ಮತ್ತು ಕ್ರೀಡಾ ಇಲಾಖೆಯ ಜತೆಗೆ ಸಂಪರ್ಕದಲ್ಲಿದ್ದು, ಈ ವಿಚಾರದಲ್ಲಿ ಧನಾತ್ಮಕ ಬೆಳವಣಿಗೆಯ ಕುರಿತು ಭರವಸೆ ಹೊಂದಿದೆ.ʼʼ ಎಂದು ಈ ಪ್ರಕಟಣೆಯಲ್ಲಿ ತಿಳಿಸಿದೆ.

ಫಿಫಾದ 85 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಫುಟ್ಬಾಲ್‌ ಒಕ್ಕೂಟವನ್ನು ನಿಷೇಧಿಸಲಾಗುತ್ತಿದೆ. 2017ರಲ್ಲಿ 17 ವರ್ಷದೊಳಗಿನ ಪುರುಷರ ಫುಟ್ಬಾಲ್‌ ಪಂದ್ಯಾಟಗಳನ್ನು ಭಾರತ ಯಶಸ್ವಿಯಾಗಿ ಸಂಘಟಿಸಿ ಸೈ ಎನಿಸಿಕೊಂಡಿತ್ತು. ಇದೇ ವರ್ಷ ಅಕ್ಟೋಬರ್‌ನಲ್ಲಿ ಮಹಿಳೆಯರ (17 ವರ್ಷದೊಳಗಿನ) ಫುಟ್ಬಾಲ್‌ ಪಂದ್ಯಾವಳಿ ಸಂಘಟಿಸಲಿತ್ತು. ಸದ್ಯ ಈ ಪಂದ್ಯಾವಳಿಯ ಮೇಲೆ ಗ್ರಹಣ ಬಿದ್ದಿದೆ. 2017ರಲ್ಲಿ ಕಾಣದ ಯಾವ ʼಅನ್ಯ ವ್ಯಕ್ತಿಗಳ ಕೈವಾಡʼವನ್ನು ಫಿಫಾ ಇಂದು ಕಂಡಿತು?

ಯಾಕೆ ಈ ನಿಷೇಧ ?

ಈ ಬೆಳವಣಿಗೆಯ ಹಿಂದೆ ಎಐಎಫ್‌ಎಫ್‌ನ ಮಾಜಿ ಅಧ್ಯಕ್ಷ ಪ್ರಫುಲ್‌ ಪಟೇಲ್‌ ಅವರ ಕೈವಾಡವಿದೆ ಎಂದು ಆರೋಪಿಸಲಾಗುತ್ತಿದೆ. ಅದಕ್ಕೆ ಕಾರಣವೂ ಇದೆ.

ಮೇ 18ರಲ್ಲಿ ಸುಪ್ರೀಂ ಕೋರ್ಟ್‌ ಒಂದು ತೀರ್ಪು ನೀಡಿತು- 12 ವರ್ಷಗಳಿಂದ ಭಾರತೀಯ ಫುಟ್ಬಾಲ್‌ ಒಕ್ಕೂಟದ ಅಧ್ಯಕ್ಷ ಗಾದಿಯಲ್ಲಿ ಪೀಠಭದ್ರರಾಗಿ ಕುಳಿತ ಎನ್‌ಸಿಪಿ ನಾಯಕ ಪ್ರಫುಲ್‌ ಪಟೇಲ್‌ ಅವರನ್ನು ವಜಾ ಮಾಡಿ, ಆಡಳಿತ ಮಂಡಳಿಗೆ ಚುನಾವಣೆ ನಡೆಸುವಂತೆ ಕೋರ್ಟ್‌ ಸಾರಿತು. 2009ರಲ್ಲಿ ಪಟೇಲ್‌ ಈ ಒಕ್ಕೂಟವನ್ನು ಹಿಡಿತಕ್ಕೆ ತೆಗೆದುಕೊಂಡಿದ್ದರು. ನಮ್ಮ ದೇಶದ ಕ್ರೀಡಾ ಸಂಹಿತೆಯ ಪ್ರಕಾರ ಕ್ರೀಡಾ ಒಕ್ಕೂಟದ ಒಮ್ಮೆ ಚುನಾಯಿತ ಆಡಳಿತ ಮಂಡಳಿಯ ಗರಿಷ್ಠ ಆಡಳಿತಾವಧಿ 12 ವರ್ಷ. ಆದರೆ ಪಟೇಲ್‌ ಕೆಳಗಿಳಿಯಲು ಒಪ್ಪಿರಲಿಲ್ಲ, ಚುನಾವಣೆಗೂ ಮುಂದಾಗಿರಲಿಲ್ಲ. ಇದಕ್ಕೂ ಮುನ್ನ 1988- 2008 (ಭರ್ತಿ 20 ವರ್ಷ) ಕಾಂಗ್ರೆಸ್‌ ನಾಯಕ ಪ್ರಿಯರಂಜನ್‌ ದಾಸ್‌ ಮುನ್ಷಿ ಇದರ ಅಧ್ಯಕ್ಷರಾಗಿ ಝಂಡಾ ಹೂಡಿದ್ದರು. ಪಟೇಲ್‌ ಅವರ ಅಧ್ಯಕ್ಷತೆಗೆ ಬ್ರೇಕ್‌ ಬಿದ್ದಿದ್ದೇ ತಡ, ಫುಟ್ಬಾಲ್‌ ಒಕ್ಕೂಟದಲ್ಲಿ ಪೀಠಭದ್ರರಾಗಿದ್ದ ಶಕ್ತಿಗಳ ಬುಡಕ್ಕೆ ಬೆಂಕಿ ಇಟ್ಟಂತಾಯಿತು.

ಇದನ್ನೂ ಓದಿ: ವಿಸ್ತಾರ Explainer | ಮೈನಸ್ 60 ಡಿಗ್ರಿ ಚಳಿಯಲ್ಲಿ ವಾಸ, 3 ತಿಂಗಳಿಗೊಮ್ಮೆ ಸ್ನಾನ: ಇದು ಸಿಯಾಚಿನ್‌ ಯೋಧರ ಸ್ಥಿತಿ!

ಈ ಮಧ್ಯೆ, ಫುಟ್ಬಾಲ್‌ ಒಕ್ಕೂಟದ ಸಂವಿಧಾನಕ್ಕೆ ಸಂಬಂಧಿಸಿದ ಪ್ರಕರಣ ಕೋರ್ಟ್‌ನಲ್ಲಿತ್ತು. ಈ ಸಂವಿಧಾನದ ಅಂಗೀಕಾರ ಇನ್ನೂ ಆಗಿಲ್ಲ. ಇದರ ನಡುವೆ, ಇರುವ ಆಡಳಿತ ಮಂಡಳಿಯನ್ನು ಕೆಳಗಿಳಿಸಿದ ಬಳಿಕ, ನೂತನ ಆಡಳಿತಾಧಿಕಾರಿ ಸಮಿತಿಯನ್ನು ಸುಪ್ರೀಂ ಕೋರ್ಟ್‌ ನೇಮಿಸಿತು. ಜುಲೈ ಅಂತ್ಯದಲ್ಲಿ ಸಂವಿಧಾನವನ್ನು ಅಂತಿಮಗೊಳಿಸಿ ಮುಂದಿಡುವುದಾಗಿ ಸಮಿತಿ ಹೇಳಿತು.

ಈ ನಡುವೆ ಏಷ್ಯನ್‌ ಫುಟ್ಬಾಲ್‌ ಕಾನ್‌ಫೆಡರೇಶನ್‌ (ಎಎಫ್‌ಸಿ) ಕೂಡ ರಂಗ ಪ್ರವೇಶಿಸಿತು. ಎಫ್‌ಸಿ, ಫಿಫಾ ಪ್ರತಿನಿಧಿಗಳು ಹಾಗೂ ಎಐಎಫ್‌ಏಫ್‌ ಪ್ರತಿನಿಧಿಗಳ ನಡುವೆ ಜೂನ್‌ 21ರಂದು ಒಂದು ಸಭೆ ನಡೆದು, ಒಕ್ಕೂಟದ ಸಂವಿಧಾನದ ಅಂಗೀಕಾರದ ಚರ್ಚೆ ನಡೆಯಿತು. ಜುಲೈ 31ರೊಳಗೆ ನೂತನ ಸಂವಿಧಾನದ ಅಂಗೀಕಾರ ಹಾಗೂ ಸೆಪ್ಟೆಂಬರ್‌ ಅಂತ್ಯದೊಳಗೆ ಚುನಾವಣೆ ನಡೆಯಲಿದೆ ಎಂದು ಭರವಸೆ ಪಡೆದು ಫಿಫಾ ಪ್ರತಿನಿಧಿಗಳು ನಿರ್ಗಮಿಸಿದರು.

ಕ್ರೀಡಾಳುಗಳಿಗೆ ಹೆಚ್ಚಿನ ಅವಕಾಶ

ನೂತನ ಸಂವಿಧಾನದಲ್ಲಿ, ʼʼಎಐಎಫ್‌ಎಫ್‌ ಆಡಳಿತ ಮಂಡಳಿಯಲ್ಲಿ ಹಿರಿಯ ಫುಟ್ಬಾಲ್‌ ಕ್ರೀಡಾಳುಗಳಿಗೆ ಶೇ.50 ಸ್ಥಾನ ಇರಬೇಕುʼʼ ಎಂದು ನಿಯಮವನ್ನು ಸೇರಿಸಲಾಗಿತ್ತು. ಆದರೆ ಎಐಎಫ್‌ಎಫ್‌ನಲ್ಲಿ ಈಗಾಗಲೇ ನೆಲೆಯೂರಿದ್ದ ಪ್ರಫುಲ್‌ ಪಟೇಲ್‌ ಕಡೆಯವರು ತಮ್ಮ ಹಿಡಿತ ಬಿಟ್ಟುಕೊಡಲು ಸಿದ್ಧರಿರಲಿಲ್ಲ. ಹೀಗಾಗಿ ಅವರು ಫಿಫಾ ಮೇಲೆ ಒತ್ತಡ ತಂದು, ʼʼಕ್ರೀಡಾಳುಗಳಿಗೆ ಶೇ. 50 ಮೀಸಲು ಹೆಚ್ಚಾಯಿತು. ಅವರಿಗೆ ಶೇ.25ರಷ್ಟು ಮೀಸಲು ಸಾಕು. ಈಗಾಗಲೇ ಇರುವ ಆಡಳಿತ ಮಂಡಳಿಗೆ ನೂತನ ಆಡಳಿತದಲ್ಲೂ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕುʼʼ ಎಂದು ಹೇಳಿಸಿತು. ಇದು ಒಂದು ರೀತಿಯಲ್ಲಿ ಭಾರತದ ಕ್ರೀಡೆ, ಇಲ್ಲಿನ ಸಾರ್ವಭೌಮತೆಯ ಮೇಲೆ ಅಂತಾರಾಷ್ಟ್ರೀಯ ಕ್ರೀಡಾ ಒಕ್ಕೂಟದ ದಬ್ಬಾಳಿಕೆಯೇ ಆಗಿದೆ. ಮತ್ತು, ಇದರ ಹಿನ್ನೆಲೆಯಲ್ಲಿ ಭಾರತೀಯ ಪುಢಾರಿಗಳೇ ಇದ್ದಾರೆ ಎಂಬುದು ವಿಷಾದನೀಯ ಅಂಶ.

ಇದನ್ನೂ ಓದಿ: ವಿಸ್ತಾರ Explainer | ಸಲ್ಮಾನ್‌ ರಶ್ದಿಗೇಕೆ ಇರಿತ? 6 ತಿಂಗಳಲ್ಲಿ 56 ಬಾರಿ ಮನೆ ಬದಲಿಸಿದ್ದ ಅಜ್ಞಾತವಾಸಿ ಲೇಖಕ

ಜುಲೈ 16ರಂದು ನೂತನ ಸಂವಿಧಾನದ ಅಂತಿಮ ಕರಡನ್ನು ಸುಪ್ರೀಂ ಕೋರ್ಟಿಗೆ ಆಡಳಿತಾಧಿಕಾರಿ ಸಮಿತಿ ಸಲ್ಲಿಸಿತು. ಅದರಲ್ಲಿ, 36 ರಾಜ್ಯ ಪ್ರತಿನಿಧಿಗಳು, 36 ಹಿರಿಯ ಕ್ರೀಡಾಳುಗಳು (24 ಪುರುಷರು, 12 ಸ್ತ್ರೀಯರು) ಇರುತ್ತಾರೆ ಎಂದು ನಿಗದಿಪಡಿಸಲಾಗಿದೆ. ಇದನ್ನು ಕೋರ್ಟ್‌ ಒಪ್ಪಿದೆ. ಆದರೆ ಇದು ಫಿಫಾಗೆ ಒಪ್ಪಿಗೆಯಾಗದ ಅಂಶ.

ಆಗಸ್ಟ್‌ 3ರಂದು ಸುಪ್ರೀಂ ಕೋರ್ಟ್‌ ಸಂವಿಧಾನ ಹಾಗೂ ಚುನಾವಣೆ ಕುರಿತಂತೆ ಮಧ್ಯಂತರ ತೀರ್ಪು ನೀಡಿತು. ಅದರಲ್ಲಿ, ಅಕ್ಟೋಬರ್‌ನಲ್ಲಿ ನಡೆಯಲಿರುವ ಮಹಿಳಾ ಪಂದ್ಯಾವಳಿಯನ್ನು ಆದ್ಯತೆಯಾಗಿಟ್ಟುಕೊಂಡು ಮುಂದಿನ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿತು. 27 ದಿನಗಳಲ್ಲಿ ಆಡಳಿತ ಸಮಿತಿಯ ಚುನಾವಣೆ ಮುಗಿಸಿಕೊಳ್ಳುವಂತೆ ಸೂಚಿಸಿತು. ಆದರೆ ಆಗಸ್ಟ್‌ 6ರಂದು ಎಐಎಫ್‌ಎಫ್‌ಗೆ ಪತ್ರ ಬರೆದ ಫಿಫಾ, ವಿಶ್ವಕಪ್‌ ಪಂದ್ಯಾವಳಿ ರದ್ದುಪಡಿಸುವುದಾಗಿ ಬೆದರಿಸಿತು. ಆದರೆ, ಚುನಾವಣೆ ನಡೆಸುವ ಉಪಕ್ರಮ ನಡೆದಿದೆ ಎಂದು ಫಿಫಾಗೆ ಭರವಸೆ ನೀಡಲಾಯಿತು.

ಇದರ ಹಿನ್ನೆಲೆಯಲ್ಲಿಯೇ ಭಾರತೀಯ ಫುಟ್ಬಾಲ್‌ ಒಕ್ಕೂಟಕ್ಕೆ ಸುಪ್ರೀಂ ಕೋರ್ಟ್‌ ನೇಮಿಸಿರುವ ಆಡಳಿತಾಧಿಕಾರಿ ಸಮಿತಿಯು ಮತ್ತೊಮ್ಮೆ ಕೋರ್ಟ್‌ ಮೊರೆ ಹೋಯಿತು. ಪ್ರಫುಲ್‌ ಪಟೇಲ್‌ ಮೇಲೆ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಲು ಆಗ್ರಹಿಸಿತು. ʼʼಪಟೇಲ್‌ ಪ್ರಭಾವ ಬೀರಿ ಫಿಫಾದಿಂದ ಎಐಎಫ್‌ಎಫ್‌ ಮೇಲೆ ಕಳಂಕ ಹೊರಿಸಲು ಈ ಪತ್ರ ಬರೆಸಿದ್ದಾರೆ. ಇದು ನ್ಯಾಯಾಂಗದ ನಡೆಯ ಮೇಲಿನ ದಾಳಿ, ಉದ್ಧಟತನಕ್ಕೆ ಸಾಕ್ಷಿ. ಪಟೇಲ್‌ ಅವರನ್ನು ಫುಟ್ಬಾಲ್‌ಗೆ ಸಂಬಂಧಿಸಿದ ಯಾವುದೇ ಹುದ್ದೆಗಳಿಂದ ದೂರವಿಡಬೇಕುʼʼ ಎಂದು ಆಗ್ರಹಿಸಿತು.

ಪ್ರಫುಲ್ಲ ಪಟೇಲ್‌ ಸಂಚು

ಫಿಫಾದ ಪತ್ರ ಪಟೇಲ್‌ರದೇ ಸಂಚು ಎಂಬುದಕ್ಕೆ ಸಾಕ್ಷಿಯನ್ನೂ ಆಡಳಿತಾಧಿಕಾರಿ ಸಮಿತಿ ಒದಗಿಸಿದೆ. ಫಿಫಾದ ಪತ್ರ ತಯಾರಾಗುತ್ತಿದ್ದಾಗ, ಅಂದರೆ ಆಗಸ್ಟ್‌ 6ರಂದು, ಎಐಎಫ್‌ಎಫ್‌ನ ರಾಜ್ಯ ಸಂಘಟನೆಗಳ ಪ್ರತಿನಿಧಿಗಳ ಸಭೆಯನ್ನು ಪಟೇಲ್‌ ಆಯೋಜಿಸಿದ್ದರು. ಅದರಲ್ಲಿ ʼʼನನ್ನನ್ನು ನಂಬಿ. ನಾನು ಈ ವಿಷಯದಲ್ಲಿ ತುಂಬಾ ಹೇಳಬಹುದು, ಆದರೆ ಎಲ್ಲವನ್ನೂ ಹೇಳಲಾಗದು. ಆ ಪತ್ರದ ಉದ್ದೇಶ ನಿಮಗೆ ನೆರವಾಗುವುದೇ ಆಗಿದೆʼʼ ಎಂದು ಹೇಳಿದ್ದರು. ಇದಕ್ಕೆ ಸಭೆಯ ನಡಾವಳಿಯ ಉಲ್ಲೇಖಗಳನ್ನು ಸಾಕ್ಷಿಯಾಗಿ ಕೋರ್ಟ್‌ ಮುಂದಿಡಲಾಗಿದೆ.

ಇದನ್ನೂ ಓದಿ: ವಿಸ್ತಾರ Explainer |‌ ಏರ್‌ ಟಿಕೆಟ್‌ ದರದ ಮಿತಿ ತೆಗೆದರೆ ಬೆಲೆಗಳು ಇಳಿಯುವುದು ಹೇಗೆ?

ಆಗಸ್ಟ್‌ 13ರಂದು, ಒಕ್ಕೂಟದ ಆಡಳಿತ ಮಂಡಳಿ ಚುನಾವಣೆಗೆ ಸ್ಪರ್ಧಿಸಲು ಸುಬ್ರತಾ ದತ್ತಾ ಮತ್ತು ಲಾರ್ಸಿಂಗ್‌ ಮಿಂಗ್‌ ಎಂಬ ಇಬ್ಬರು ಸಲ್ಲಿಸಿದ ಅರ್ಜಿಯನ್ನು ಚುನಾವಣಾಧಿಕಾರಿ ಉಮೇಶ್‌ ಸಿನ್ಹಾ ತಿರಸ್ಕರಿಸಿದರು. ಯಾಕೆಂದರೆ ಇವರಿಬ್ಬರೂ ಈಗಾಗಲೇ ಮೂರು ಬಾರಿ ಒಕ್ಕೂಟದ ಆಡಳಿತ ಸಮಿತಿಯ ಸದಸ್ಯರಾಗಿ ಅಧಿಕಾರ ಅನುಭವಿಸಿದ್ದರು. ಮತ್ತು ಇವರಿಬ್ಬರೂ ಪ್ರಫುಲ್‌ ಪಟೇಲ್‌ ಕಡೆಯವರು.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈಗ ಭಾರತೀಯ ಫುಟ್ಬಾಲ್‌ ಒಕ್ಕೂಟದ ಮೇಲೆ ವಜಾ ಬೆದರಿಕೆ ಒಡ್ಡಿರುವ ಫಿಫಾದ ಆಡಳಿತ ಮಂಡಳಿಯ ಕಾರ್ಯಕಾರಿ ಸಮಿತಿಯಲ್ಲಿ ಪ್ರಫುಲ್‌ ಪಟೇಲ್‌ ಕೂಡ ಇದ್ದಾರೆ. ಜತೆಗೆ ಅವರು, ಏಷ್ಯನ್‌ ಫುಟ್ಬಾಲ್‌ ಕಾನ್‌ಫೆಡರೇಶನ್‌ (ಎಎಫ್‌ಸಿ) ಸಂಘಟನೆಯ ಉಪಾಧ್ಯಕ್ಷರೂ ಆಗಿದ್ದಾರೆ. ಅಂದರೆ, ಪಟೇಲ್‌ ಅವರೇ ಪ್ರಭಾವ ಬೀರಿ ಭಾರತೀಯ ಫುಟ್ಬಾಲ್‌ ಮೇಲೆ ಮಾರಕ ಹೊಡೆತ ನೀಡಲು ಮುಂದಾಗಿರುವುದು ಗೊತ್ತಾಗುತ್ತದೆ.

ವಜಾದಿಂದ ಏನು ಪರಿಣಾಮ?

ಫುಟ್ಬಾಲ್‌ ವಿಚಾರದಲ್ಲಿ ಭಾರತ ಕ್ರಿಕೆಟ್‌ನಂತಲ್ಲ. ಭಾರತ ಕ್ರಿಕೆಟ್‌ನ ಅತಿ ದೊಡ್ಡ ಮಾರುಕಟ್ಟೆ ಆಗಿರುವುದರಿಂದ, ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ಕೂಡ ಬಿಸಿಸಿಐ ಹೇಳಿದಂತೆ ಕೇಳುತ್ತದೆ. ಆದರೆ ಅಂಥ ಯಾವುದೇ ಪ್ರಭಾವ ಫಿಫಾ ಮೇಲೆ ಭಾರತಕ್ಕೆ ಇಲ್ಲ. ಭಾರತದಲ್ಲಿ ಫುಟ್ಬಾಲ್‌, ಕ್ರಿಕೆಟ್‌ನಷ್ಟು ಜನಪ್ರಿಯವೂ ಅಲ್ಲ, ಕ್ರಿಕೆಟ್‌ನಂಥ ಸಾಧನೆಗಳೂ ಇತ್ತೀಚೆಗೆ ಫುಟ್ಬಾಲ್‌ನಲ್ಲಿ ನಮ್ಮಲ್ಲಿ ಆಗಿಲ್ಲ. ಹೀಗಾಗಿ ಫಿಫಾದ ಆಗ್ರಹಕ್ಕೆ ಮಣಿಯದೆ ಹೋದರೆ, ಅಕ್ಟೋಬರ್‌ನಲ್ಲಿ ನಿಗದಿಯಾಗಿದ್ದ ಮಹಿಳೆಯರ ಫುಟ್ಬಾಲ್‌ ಪಂದ್ಯಾಟ ನಮ್ಮ ಕೈತಪ್ಪಬಹುದು. ನಮ್ಮ ದೇಶದ ತಂಡಗಳು ಅಂತಾರಾಷ್ಟ್ರೀಯ ಫುಟ್ಬಾಲ್‌ ಪಂದ್ಯಾವಳಿಗಳಲ್ಲಿ ಆಡುವುದರಿಂದ ವಂಚಿತವಾಗಬೇಕಾಗಬಹುದು. ಇಂಡಿಯನ್‌ ಕ್ಲಬ್‌ಗಳು ಖಂಡಾಂತರ ಪಂದ್ಯಾವಳಿಯಲ್ಲಿ ಆಡುವುದು ಸಾಧ್ಯವಾಗಲಿಕ್ಕಿಲ್ಲ. ಮುಂದಿನ ತಿಂಗಳಲ್ಲಿ ನಮ್ಮ ಪುರುಷರ ಟೀಮ್‌ಗಳು ಸಿಂಗಾಪುರ ಹಾಗೂ ವಿಯೆಟ್ನಾಮ್‌ನಲ್ಲಿ ಆಡಬೇಕಾಗಿತ್ತು. ಈಗ ಅದೂ ಅನಿಶ್ಚಿತವಾಗಿದೆ. ಮುಂದಿನ ತಿಂಗಳ ಎಎಫ್‌ಸಿ ಮಹಿಳಾ ಕ್ಲಬ್‌ ಚಾಂಪಿಯನ್‌ಶಿಪ್‌ನಲ್ಲಿ ನಮ್ಮ ಕೇರಳದ ತಂಡ, ಎಸ್‌ಎಎಫ್‌ಎಫ್‌ ಚಾಂಪಿಯನ್‌ಶಿಪ್‌ನಲ್ಲಿ ನಮ್ಮ ಮಹಿಳಾ ತಂಡ ಆಡುವುದರಿಂದ ವಂಚಿತವಾಗಬೇಕಾಗಬಹುದು.

ಕ್ರೀಡಾ ಸುಧಾರಣೆಗೆ ಹೊಡೆತ

ಫುಟ್ಬಾಲ್‌ ಸೇರಿದಂತೆ ದೇಶದ ಎಲ್ಲ ಕ್ರೀಡೆಗಳ ಕ್ರಾಂತಿಕಾರಿ ಸುಧಾರಣೆಗೆ ಕೇಂದ್ರ ಸರ್ಕಾರ ಮುಂದಾಗಿರುವುದು ಕಳೆದ ಕೆಲವು ವರ್ಷಗಳಿಂದ ವ್ಯಕ್ತವಾಗಿದೆ. ಕುಸ್ತಿ ಮುಂತಾದ ಕ್ರೀಡೆಗಳನ್ನು ಶಿಸ್ತುಬದ್ಧವಾದ ಆಡಳಿತಾತ್ಮಕ ಸಂವಿಧಾನಕ್ಕೆ ಒಳಪಡಿಸಲಾಗಿದ್ದು, ದೇಶಾದ್ಯಂತ ಪ್ರತಿಭೆಗಳ ಶೋಧನೆ, ಅವರ ಪೋಷಣೆ, ಗರಡಿಮನೆಗಳ ಸುಧಾರಣೆಗೆ ಗಮನ ನೀಡಲಾಗಿದೆ. ಇದರಿಂದಾಗಿ ನಮ್ಮ ಕುಸ್ತಿಪಟುಗಳು ಒಲಿಂಪಿಕ್ಸ್‌, ಕಾಮನ್‌ವೆಲ್ತ್ ಸೇರಿದಂತೆ ಅಂತಾರಾಷ್ಟ್ರೀಯ ಕ್ರೀಡಾವಳಿಗಳಲ್ಲಿ ಪದಕಗಳನ್ನು ಬಾಚಿಕೊಂಡು ಬರುತ್ತಿದ್ದಾರೆ. ಇದೇ ರೀತಿಯ ಸುಧಾರಣೆ ಬ್ಯಾಡ್ಮಿಂಟನ್‌, ಟೆನ್ನಿಸ್‌ ಮುಂತಾದವುಗಳಲ್ಲೂ ಆಗಿದೆ. ಕ್ರಿಕೆಟ್‌ ಮಂಡಳಿಯ ನೇತೃತ್ವವನ್ನು ಹಿರಿಯ ಕ್ರೀಡಾಳುವಾದ ಸೌರವ್‌ ಗಂಗೂಲಿ ವಹಿಸಿದ್ದಾರೆ. ಹಿರಿಯ ಕ್ರೀಡಾಳುಗಳೇ ಕ್ರೀಡಾ ಸಂಸ್ಥೆಗಳು ಆಡಳಿತಾತ್ಮಕ ಹುದ್ದೆಯನ್ನೂ ನಿರ್ವಹಿಸಿದಾಗ, ಕ್ರೀಡಾಪ್ರತಿಭೆಗಳ ಶೋಧ ಹಾಗೂ ತರಬೇತಿಯತ್ತ ಹೆಚ್ಚಿನ ಗಮನ ನೀಡಲು, ಅದರಿಂದ ಅತ್ಯುತ್ತಮ ಫಲ ಪಡೆಯಲು ಸಾಧ್ಯವಾಗಿದೆ.

ಆದರೆ ಇದು ಫುಟ್ಬಾಲ್‌ನಲ್ಲಿ ಇದುವರೆಗೂ ಸಾಧ್ಯವಾಗಿಲ್ಲ. ಅದಕ್ಕೆ ಕಾರಣ ಪ್ರಫುಲ್‌ ಪಟೇಲ್‌ ಅವರಂಥ ಪುಢಾರಿಗಳು ಕ್ರೀಡಾ ಸಂಸ್ಥೆಗಳಲ್ಲಿ ಗೂಟ ಹೊಡೆದುಕೊಂಡು ದಶಕಗಳಿಂದ ಕುಳಿತಿರುವುದು. ಇವರನ್ನು ಹುದ್ದೆಯಿಂದ ಕೆಳಗಿಳಿಸಿ ಸಂವಿಧಾನಬದ್ಧವಾದ ಉಪಕ್ರಮಗಳನ್ನು ತೆಗೆದುಕೊಳ್ಳಲು ಮುಂದಾದರೆ ಅಂತಾರಾಷ್ಟ್ರೀಯ ಒಕ್ಕೂಟಗಳಿಂದ ಒತ್ತಡ ಹೇರುವ ಕೆಲಸಕ್ಕೆ ಮುಂದಾಗುತ್ತಾರೆ. ಇದು ದೇಶದ ವರ್ಚಸ್ಸನ್ನು ಕುಗ್ಗಿಸುವ, ರಾಷ್ಟ್ರದ ಸಾರ್ವಭೌಮತ್ವವನ್ನು ಪ್ರಶ್ನಿಸುವ, ಭಾರತ ಸರ್ಕಾರಕ್ಕೆ ಕಳಂಕ ಹಚ್ಚುವ ಕೆಲಸ ಎಂದೇ ಹೇಳಬಹುದು.

ಪ್ರಸ್ತುತ ಪ್ರಕರಣದಲ್ಲಿ ಭಾರತೀಯ ಫುಟ್ಬಾಲ್‌ ಒಕ್ಕೂಟವೂ ಫಿಫಾ ಒತ್ತಡಕ್ಕೆ ಮಣಿಯಲಿದೆಯೇ? ಪ್ರಫುಲ್‌ ಪಟೇಲ್‌ ಹೊಂದಿರುವ ಪ್ರಭಾವನ್ನು ಮಣಿಸಲು ಸಾಧ್ಯವಾಗಲಿದೆಯಾ? ಕಾದು ನೋಡಬೇಕಿದೆ.

Exit mobile version