Site icon Vistara News

ಯುವರಾಜ್‌ ಸಿಂಗ್‌ಗೆ ಟಿ20 ತಂಡದ ನಾಯಕತ್ವ ತಪ್ಪಿದ್ದು ಹೇಗೆ?

ಕ್ರಿಕೆಟ್: ಯುವರಾಜ್‌ ಸಿಂಗ್‌ ಅವರಿಗೆ 2007ರ ಟಿ20 ವಿಶ್ವಕಪ್‌ನಲ್ಲಿ ತಂಡದ ನಾಯಕರಾಗುವ ಅವಕಾಶ ಕೈತಪ್ಪಿದ್ದು ಹೇಗೆ?

ಇದರ ಬಗ್ಗೆ ಅವರೇ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಆಗ ತಂಡದ ವೈಸ್‌ ಕ್ಯಾಪ್ಟನ್‌ ಆಗಿದ್ದ ಯುವರಾಜ್‌ ಸಿಂಗ್‌ ಮುಂದಿನ ಕ್ಯಾಪ್ಟನ್‌ ಆಗುವ ನಿರೀಕ್ಷೆಯಿತ್ತು. ಆದರೆ ಅವರ ಬದಲಿಗೆ ಮಹೇಂದ್ರ ಸಿಂಗ್‌ ಧೋನಿ ನಾಯಕರ ಸ್ಥಾನಕ್ಕೆ ನೇಮಕಗೊಂಡರು. ಯುವರಾಜ್‌ ಸಿಂಗ್‌ ಯಾಕೆ ಕ್ಯಾಪ್ಟನ್‌ ಆಗಲಿಲ್ಲ? ಯುವರಾಜ್‌ ಸಿಂಗ್‌ ತಂಡದ ಸಹ ಆಟಗಾರರ ಪರವಾಗಿ ನಿಂತಿದ್ದ ಕಾರಣಕ್ಕೆ ಕ್ಯಾಪ್ಟನ್‌ ಆಗುವ ಅವಕಾಶ ಕಳೆದುಕೊಂಡರು ಎಂದು ಅವರೇ ತಿಳಿಸಿದ್ದಾರೆ.

ಯುವರಾಜ್‌ ಸಿಂಗ್ ಭಾರತ ಕ್ರಿಕೆಟ್‌ ತಂಡವು ಕಂಡ ಅತ್ಯಂತ ಶ್ರೇಷ್ಠ ಆಟಗಾರರಲ್ಲಿ ‌ಒಬ್ಬರು.‌ ವಿಶ್ವದ ಅತ್ಯುನ್ನತ ಆಲ್-ರೌಂಡರ್‌ಗಳ ಪಟ್ಟಿಯಲ್ಲಿ ಯುವರಾಜ್‌ ಸಿಂಗ್‌ ಅಗ್ರಸ್ಥಾನದಲ್ಲಿದ್ದವರು. ಅವರಿಗೆ ಭಾರತ ಕ್ರಿಕೆಟ್‌ ತಂಡದ ನಾಯಕರಾಗುವ ಸಕಲ ಅರ್ಹತೆಗಳಿತ್ತು. ಆದರೆ ಅವರು ಈ ಅವಕಾಶದಿಂದ ವಂಚಿತರಾದರು. ಈ ಬಗ್ಗೆ ಯುವರಾಜ್‌ ಸಿಂಗ್‌ ಖುದ್ದಾಗಿ ಮಾತನಾಡಿದ್ದಾರೆ. ಅದಕ್ಕೆ ಅವರು ಅಂದು ತೆಗೆದುಕೊಂಡ ನಿರ್ಧಾರವೇ ಕಾರಣವೆಂದು ತಿಳಿಸಿದ್ದಾರೆ.

ಅಂದಿನ ಘಟನೆಯನ್ನು ನೆನಸಿಕೊಂಡ ಯುವರಾಜ್‌ ಸಿಂಗ್ ‌ʼʼಆಸ್ಟ್ರೇಲಿಯಾದ ಗ್ರೆಗ್‌ ಚಾಪೆಲ್ 2005ರಿಂದ 2007ರವರೆಗೆ ಭಾರತ ಕ್ರಿಕೆಟ್‌ ತಂಡದ ಕೋಚ್‌ ಆಗಿದ್ದರು. ಆ ಸಮಯದಲ್ಲಿ ಚಾಪೆಲ್‌ ಹಾಗೂ ತಂಡದ ಹಿರಿಯ ಆಟಗಾರರದ ಸೌರವ್‌ ಗಂಗೂಲಿ ಮತ್ತು ಸಚಿನ್‌ ತೆಂಡುಲ್ಕರ್‌ ಜತೆಗೆ ಮನಸ್ತಾಪ ಉಂಟಾಗಿತ್ತು. 2007ರ ಟಿ20 ವಿಶ್ವಕಪ್‌ ಆರಂಭವಾಗುವ ಒಂದು ಸುಮಾರು ಒಂದು ತಿಂಗಳ ಮುನ್ನ ಚಾಪೆಲ್‌ ತಂಡದ ಬ್ಯಾಟಿಂಗ್‌ ಲೈನ್‌ನಲ್ಲಿ ಅನೇಕ ಬದಲಾವಣೆಯನ್ನು ಮಾಡಿದ್ದರು. ಇದರಿಂದ ತಂಡದಲ್ಲಿ ತಳಮಳ ಉಂಟಾಗಿತ್ತು. ಚಾಪಲ್‌ ಅಥವಾ ಸಚಿನ್‌ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಸಂದರ್ಭವಿತ್ತು. ಈ ಬಗ್ಗೆ ನಿರ್ದಿಷ್ಟ ನಿರ್ಧಾರಕ್ಕೆ ಬಂದ ಏಕೈಕ ಆಟಗಾರ ನಾನಾಗಿದ್ದೆ. ನಾನು ನನ್ನ ಸಹ ಅಟಗಾರರ ಪರವಾಗಿ ನಿಂತಿದ್ದೆʼʼ ಎಂದು ತಿಳಿಸಿದರು.

ಯುವರಾಜ್‌ ಸಿಂಗ್‌ ಕೈಗೊಂಡ ನಿರ್ಧಾರದ ಹಿನ್ನೆಲೆ ಬಗ್ಗೆ ಮಾತನಾಡಿ ʼʼನನಗೆ ತಿಳಿದಂತೆ ನನ್ನ ಈ ನಿರ್ಧಾರ ಬಿಸಿಸಿಐನ ಅನೇಕ ಮುಖ್ಯಸ್ಥರಿಗೆ ಅಸಮಾಧಾನ ಮೂಡಿಸಿರಬಹುದು. ಆಗಲೇ ನಾನು ತಂಡದ ಏಕದಿನ ಶ್ರೇಣಿಗೆ ವೈಸ್‌ ಕ್ಯಾಪ್ಟನ್‌ ಆಗಿದ್ದೆ. ಅಲ್ಲದೆ, ಹಿರಿಯ ಆಟಗಾರ ವಿರೇಂದ್ರ ಸೆಹ್ವಾಗ್‌ ಇಂಗ್ಲೆಂಡ್‌ ಪ್ರವಾಸದಿಂದ ಹೊರಗಿದ್ದರು. ಹಾಗಾಗಿ ಮುಂದಿನ ಟಿ20 ವಿಶ್ವಕಪ್‌ಗೆ ನಾಯಕ ನಾನು ಅಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಇದ್ದಕ್ಕಿದ್ದಂತೆಯೇ ಮಹೇಂದ್ರ ಸಿಂಗ್‌ ಧೋನಿಯವರನ್ನು ತಂಡದ ನಾಯಕರೆಂದು ಘೋಷಿಸಲಾಗಿತ್ತುʼʼ ಎಂದು ತಿಳಿಸಿದರು.

ತಮ್ಮ ನಿರ್ಧಾರದ ಬಗ್ಗೆ ದೃಢವಾಗಿ ನಿಂತಿದ್ದ ಯುವರಾಜ್‌ ಸಿಂಗ್‌, ಈಗಲೂ ಅಂತಹ ಸಂದರ್ಭ ಎದುರಾಗಿದ್ದರೂ ತಂಡದ ಸಹ ಆಟಗಾರರ ಪರವಾಗಿ ನಿಲ್ಲುವದಾಗಿ ಹೇಳಿದರು.‌

ಧೋನಿ ಶ್ರೇಷ್ಠ ಕ್ಯಾಪ್ಟನ್:‌ ಯುವರಾಜ್‌ ಸಿಂಗ್‌

ಬಿಸಿಸಿಐನ ತೀರ್ಮಾನದಿಂದ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಯುವರಾಜ್‌ ಸಿಂಗ್‌ ತಿಳಿಸಿದರು. ʼʼಮಹೇಂದ್ರ ಸಿಂಗ್‌ ಧೋನಿ ತಂಡವನ್ನು ಮುನ್ನೆಡಸಲು ಸಾಮರ್ಥ್ಯ ಹೊಂದಿರುವ ವ್ಯಕ್ತಿ. ಹಾಗಾಗಿ ಅವರು ಭಾರತದ ಕ್ರಿಕೆಟ್‌ ತಂಡದ ನಾಯಕರಾಗಿದ್ದು ಸೂಕ್ತ. ನಾನು ನಾಯಕನಾಗಿದ್ದರೂ ದೀರ್ಘಾವಧಿ ನಾಯಕನಾಗಿ ಉಳಿಯಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಅನಾರೋಗ್ಯದ ಕಾರಣದಿಂದ ನಾನು ದೀರ್ಘಾವಧಿ ನಾಯಕನಾಗಿ ಮುಂದುವರಿಯಲು ಸಾಧ್ಯವಾಗುತ್ತಿರಲಿಲ್ಲ. ಭಾರತದ ಕ್ರಿಕೆಟ್‌ ತಂಡದ ನಾಯಕನ ಸ್ಥಾನ ಎಂದರೆ ನನಗೆ ನಿಜಕ್ಕೂ ಹೆಮ್ಮೆಯ ವಿಷಯ. ಆದರೆ ಈ ಅವಕಾಶ ನನ್ನ ಪಾಲಿಗೆ ಒದಗಿಬಂದಿಲ್ಲ ಎಂದು ಯಾವುದೇ ಪಶ್ಚಾತ್ತಾಪವಿಲ್ಲʼʼ ಎಂದು ಯವರಾಜ್‌ ಸಿಂಗ್‌ ಹೇಳಿದರು.

ಇದನ್ನೂ ಓದಿ:  IPL22| ಎಲ್ಲಿ ಹೋಯ್ತು ʼವಿರಾಟ್‌ʼರೂಪ: 100 ಬಾರಿಸಿ 100 ಆಟವಾಯಿತು

Exit mobile version