ಬೆಂಗಳೂರು: ಭಾರತ ವಿರುದ್ಧ ಭಾನುವಾರ ನಡೆದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಶತಕ ಬಾರಿಸಿ ಆಸ್ಟ್ರೇಲಿಯಾದ ಗೆಲುವಿನ ರುವಾರಿಯಾದ ಟ್ರಾವಿಸ್ ಹೆಡ್ ಅವರು ವಿಶ್ವಕಪ್ ಫೈನಲ್(World Cup final) ಪಂದ್ಯದಲ್ಲಿ ಶತಕ ಬಾರಿಸಿದ 7ನೇ ಬ್ಯಾಟರ್ ಎಂಬ ಕೀರ್ತಿಗೆ ಪಾತ್ರರಾದರು. ಇದುವರೆಗಿನ ವಿಶ್ವಕಪ್ ಇತಿಹಾಸದ ಫೈನಲ್ ಪಂದ್ಯದಲ್ಲಿ ಶತಕ ಬಾರಿಸಿದ ಸಾಧಕರ ವಿವರ ಇಂತಿದೆ.
ಕ್ಲೈವ್ ಲಾಯ್ಡ್ (1975)
ಇದು ಚೊಚ್ಚಲ ವಿಶ್ವಕಪ್ ಟೂರ್ನಿಯಾಗಿತ್ತು. 8 ತಂಡಗಳು ಇಲ್ಲಿ ಆಡಲಿಳಿದಿದ್ದವು. ಆರಂಭಿಕ ಸ್ಪರ್ಧೆಯಾದ ಕಾರಣ ಯಾವ ತಂಡದದ ಬಲಾಬಲವೂ ಸ್ಪಷ್ಟವಾಗಿ ಅರಿವಿರಲಿಲ್ಲ. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ದೈತ್ಯರೆನಿಸಿದ್ದ ಕೆರಿಬಿಯನ್ನರು ಏಕದಿನದಲ್ಲೂ ಪ್ರಾಬಲ್ಯ ಮೆರೆದರು. ಆಸ್ಟ್ರೇಲಿಯವನ್ನು 17 ರನ್ನುಗಳಿಂದ ಮಣಿಸಿ ಚಾಂಪಿಯನ್ ಎನಿಸಿದರು. ಫೈನಲ್ ಪಂದ್ಯದಲ್ಲಿ ಕ್ಲೈವ್ ಲಾಯ್ಡ್ 102 ರನ್ ಬಾರಿಸಿ ಗೆಲುವಿನ ಹೀರೊ ಎನಿಸಿಕೊಂಡರು. ಇದು ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಾಖಲಾದ ಮೊದಲ ಶತಕ ಎಂದು ಇತಿಹಾಸದ ಪುಟ ಸೇರಿತು.
ಇದನ್ನೂ ಓದಿ ICC World Cup 2023 : ಅಲ್ಲೇ ಡ್ರಾ, ಅಲ್ಲೇ ಬಹುಮಾನ; ಶಕಿಬ್ ವಿರುದ್ಧ ಸೇಡು ತೀರಿಸಿಕೊಂಡ ಮ್ಯಾಥ್ಯೂಸ್
ವಿವಿಯನ್ ರಿಚರ್ಡ್ಸ್(1979)
ದ್ವಿತೀಯ ಆವೃತ್ತಿಯ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲೂ ಶತಕ ದಾಖಲಾಯಿತು. ಈ ಸಾಧನೆ ಮಾಡಿದ್ದು ವಿಂಡೀಸ್ನ ವಿವಿಯನ್ ರಿಚರ್ಡ್ಸ್. ಇಂಗ್ಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಅವರು ಅಜೇಯ 138 ರನ್ ಬಾರಿಸಿದ್ದರು. ಈ ಪಂದ್ಯದಲ್ಲಿ ನಾಟಕೀಯ ಕುಸಿತ ಅನುಭವಿಸಿದ ಆತಿಥೇಯ ಇಂಗ್ಲೆಡ್ 92 ರನ್ನುಗಳಿಂದ ಶರಣಾಯಿತು. ವೆಸ್ಟ್ ಇಂಡೀಸ್ ತನ್ನ ಪರಾಕ್ರಮ ಮತ್ತೆ ಮೆರೆದು ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
ಅರಂವಿಂದ ಡಿ ಸಿಲ್ವ(1996)
ಶಾಂತಿಗಾಗಿ ವಿಲ್ಸ್ ಪ್ರಾಯೋಜಕತ್ವದಲ್ಲಿ ನಡೆದ ಟೂರ್ನಿ ಇದಾಗಿತ್ತು. ಫೈನಲ್‌ನಲ್ಲಿ ಆಸ್ಟ್ರೇಲಿಯವನ್ನು 7 ವಿಕೆಟ್‌ಗಳಿಂದ ಮಣಿಸಿದ ಶ್ರೀಲಂಕಾ ನೂತನ ಚಾಂಪಿಯನ್ ಎನಿಸಿತು. ಈ ಪಂದ್ಯದಲ್ಲಿ ಅರಂವಿಂದ ಡಿ ಸಿಲ್ವ ಅವರು ಅಜೇಯ 107 ರನ್ ಬಾರಿಸಿ ಲಂಕಾ ತಂಡಕ್ಕೆ ಟ್ರೋಫಿ ತಂದುಕೊಟ್ಟರು. ವಿಶ್ವಕಪ್ ಫೈನಲ್‌ನಲ್ಲಿ ಶತಕ ಬಾರಿಸಿದ ಮೂರನೇ ಆಟಗಾರ ಎಂಬ ದಾಖಲೆ ಬರೆದರು.
ಇದನ್ನೂ ಓದಿ ಮೀಸಲಾತಿ ಇರುತ್ತಿದ್ದರೆ ಭಾರತ ವಿಶ್ವಕಪ್ ಗೆಲ್ಲುತ್ತಿತ್ತು ಎಂದ ಚೇತನ್; ಮತ್ತೆ ವಿವಾದ
ರಿಕಿ ಪಾಂಟಿಂಗ್(2003)
ಆಸ್ಟ್ರೇಲಿಯಾ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕನೆಂದರೆ ಅದು ರಿಕಿ ಪಾಂಟಿಂಗ್ ಅವರು ನಾಯಕನಾಗಿ 2 ಬಾರಿ ಮತ್ತು ಆಟಗಾರನಾಗಿ ಒಂದು ಬಾರಿ ವಿಶ್ವಕಪ್ ಗೆದ್ದ ಸಾಧನೆ ಮಾಡಿದ್ದಾರೆ. 2003ರಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ವಿರುದ್ಧ 140 ರನ್ ಬಾರಿಸಿ ಭಾರತದ ಕಪ್ ಕನಸನ್ನು ಭಗ್ನಗೊಳಿಸಿದ್ದರು. ಅವರು ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಶತಕ ಬಾರಿಸಿದ 4ನೇ ಆಟಗಾರ.
ಆಡಂ ಗಿಲ್ ಕ್ರಿಸ್ಟ್(2007)
ಭಾರತದ ಪಾಲಿಗೆ ಇದು ವಿಶ್ವಕಪ್ ಇತಿಹಾಸದ ದುರಂತಮಯ ಕೂಟ. ಭಾರತ ತಂಡ ಲೀಗ್ ಹಂತದಲ್ಲೇ ನಿರ್ಗಮಿಸಿತ್ತು. ಆಸ್ಟ್ರೇಲಿಯಾ ಮತ್ತೆ ಫೈನಲ್‌ಗೆ ಲಗ್ಗೆ ಇರಿಸಿತು. ಮಳೆಪೀಡಿತ ಪ್ರಶಸ್ತಿ ಸಮರದಲ್ಲಿ ಶ್ರೀಲಂಕಾವನ್ನು ಡಿ-ಎಲ್ ನಿಯಮದನ್ವಯ ಸೋಲಿಸಿ ಹ್ಯಾಟ್ರಿಕ್ ಕಪ್ ಗೆದ್ದ ಸಾಧನೆ ಮಾಡಿತ್ತು. ಇಡೀ ಟೂರ್ನಿಯಲ್ಲಿ ಘೋರ ವೈಫಲ್ಯ ಕಂಡಿದ್ದ ಆಡಂ ಗಿಲ್ ಕ್ರಿಸ್ಟ್ ಫೈನಲ್ ಪಂದ್ಯದಲ್ಲಿ ರೌದ್ರಾವತಾರ ತೋರುವ ಮೂಲಕ 149 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇದನ್ನೂ ಓದಿ ODI World Cup Team: ಐಸಿಸಿ ವಿಶ್ವಕಪ್ ತಂಡಕ್ಕೆ ರೋಹಿತ್ ಶರ್ಮ ನಾಯಕ, ಟೀಮ್ ಹೀಗಿದೆ…
ಮಹೇಲಾ ಜಯವರ್ಧನೆ(2011)
ಏಷ್ಯಾದ ಮೂರು ರಾಷ್ಟ್ರಗಳ ಆತಿಥ್ಯದಲ್ಲಿ ನಡೆದ ಪಂದ್ಯಾವಳಿ ಇದಾಗಿತ್ತು. 2007ರ ಟಿ20 ವಿಶ್ವಕಪ್ ಗೆದ್ದ ಮಹೇಂದ್ರ ಸಿಂಗ್ ಧೋನಿ ಸಾರಥ್ಯದಲ್ಲಿ ಕಣಕ್ಕಿಳಿದ ಭಾರತ ತಂಡ 2ನೇ ಸಲ ಕಪ್ ಎತ್ತಿ 28 ವರ್ಷಗಳ ಬಳಿಕ ವಿಶ್ವಕಪ್ ತನ್ನದಾಗಿಸಿಕೊಂಡಿತು. ಫೈನಲ್‌ನಲ್ಲಿ ಶ್ರೀಲಂಕಾವನ್ನು 6 ವಿಕೆಟ್‌ಗಳಿಂದ ಉರುಳಿಸಿ ಟ್ರೋಫಿಯನ್ನು ಕ್ರಿಕೆಟ್ ದೇವರಿಗೆ ಅರ್ಪಿಸಿತು. ಇದೇ ಪಂದ್ಯದಲ್ಲಿ ಲಂಕಾದ ಮಹೇಲಾ ಜಯವರ್ಧನೆ ಅಜೇಯ 103 ರನ್ ಬಾರಿಸಿದ್ದರು. ಫೈನಲ್ ಪಂದ್ಯದಲ್ಲಿ ಶತಕ ಬಾರಿಸಿದರೂ ಸೋಲು ಕಂಡ ಮೊದಲ ತಂಡ ಎಂಬ ಕೆಟ್ಟ ದಾಖಲೆ ಲಂಕಾ ಪಾಲಾಯಿತು.
ಟ್ರಾವಿಸ್ ಹೆಡ್(2023)
ಟೂರ್ನಿಯುದ್ದಕ್ಕೂ ಒಂದೂ ಸೋಲು ಕಾಣದೆ ಫೈನಲ್ ತಲುಪಿದ್ಧ ಭಾರತಕ್ಕೆ ಅಡ್ದಗಾಲಿಟ್ಟದ್ದು ಟ್ರಾವಿಸ್ ಹೆಡ್. ಅಹಮದಾಬಾದ್ನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತದ ಬೌಲಿಂಗ್ ಯೋಜನೆಯನ್ನು ತಲೆ ಕೆಳಗಾಗಿಸಿ 137 ರನ್ ಹೊಡೆದು ಆಸೀಸ್ಗೆ ಸ್ಮರಣೀಯ ಗೆಲುವು ತಂದುಕೊಟ್ಟರು. ಜತೆಗೆ ಫೈನಲ್ ಪಂದ್ಯದಲ್ಲಿ ಶತಕ ಬಾರಿಸಿದ 7ನೇ ಆಟಗಾರ ಎನಿಸಿಕೊಂಡರು. ಈ ಪಂದ್ಯದಲ್ಲಿ ಭಾರತ 6 ವಿಕೆಟ್ ಅಂತರದ ಸೋಲು ಕಂಡಿತು.