ಬೆಂಗಳೂರು: ಕತಾರ್ ಫಿಫಾ ಫುಟ್ಬಾಲ್ ವಿಶ್ವ ಕಪ್ನಲ್ಲಿ ಅರ್ಜೆಂಟೀನಾ ತಂಡ ಫ್ರಾನ್ಸ್ ತಂಡವನ್ನು ಸೋಲಿಸಿದ್ದು ಈ ವರ್ಷದ ಕ್ರೀಡಾ ಕ್ಯಾಲೆಂಡರ್‌ನ ಮುಕ್ತಾಯದ ಕೊನೆಯ(Year Ender) ಸ್ಮರಣೀಯ ಕ್ಷಣವಾಗಿದೆ. ಲಿಯೋನೆಲ್ ಮೆಸ್ಸಿಯ ಬಹುಕಾಲದ ವಿಶ್ವ ಕಪ್ ಆಸೆ ಈ ಬಾರಿ ಕತಾರ್ನಲ್ಲಿ ಕೈಗೂಡಿತು. ಈ ಕ್ಷಣಕ್ಕಾಗಿ ಇಡೀ ವಿಶ್ವವೇ ಕಾದಿದ್ದು ವಿಶೇಷ. ಅದರಂತೆ ಈ ಸ್ಮರಣೀಯ ಗೆಲುವಿನಿಂದ ಹಿಡಿದು ಟೆನಿಸ್ ದಂತಕಥೆ ರೋಜರ್ ಫೆಡರರ್ ನಿವೃತ್ತಿ ಘೋಷಿಸುವವರೆಗೆ, 2022 ಕ್ರೀಡಾ ಜಗತ್ತಿನಲ್ಲಿ ನಡೆದ ಹಲವಾರು ಗಮನಾರ್ಹ ಕ್ಷಣಗಳ ಸಂಪೂರ್ಣ ಮೆಲುಕು ಈ ಕೆಳಗಿನಂತಿದೆ.
ಈಡೇರಿದ ಲಿಯೋನೆಲ್ ಮೆಸ್ಸಿಯ ಫಿಫಾ ವಿಶ್ವ ಕಪ್ ಕನಸು
37 ಕ್ಲಬ್ ಟ್ರೋಫಿಗಳು, 7 ಬ್ಯಾಲನ್ ಡಿ ಓರ್ ಪ್ರಶಸ್ತಿ, 6 ಯುರೋಪಿಯನ್ ಗೋಲ್ಡನ್ ಬೂಟ್ಸ್, ಒಂದು ಕೊಪಾ ಅಮೆರಿಕ ಚಾಂಪಿಯನ್ ಪಟ್ಟ, ಒಂದು ಒಲಿಂಪಿಕ್ ಚಿನ್ನದ ಪದಕ 18 ವರ್ಷಗಳ ಈ ಸುದೀರ್ಘ ಫುಟ್ಬಾಲ್ ಬಾಳ್ವೆಯಲ್ಲಿ ಇಷ್ಟೆಲ್ಲ ಪ್ರಶಸ್ತಿ ಪಡೆದರೂ ಮೆಸ್ಸಿ ಪಾಲಿಗೆ ವಿಶ್ವಕಪ್ ಎಂಬುದು ಮರೀಚಿಕೆಯೇ ಆಗಿ ಉಳಿದಿತ್ತು. ಈ ಕೊರಗು ಮೆಸ್ಸಿಯನ್ನು ಪ್ರತಿ ವಿಶ್ವ ಕಪ್ ಟೂರ್ನಿ ಆಡುವಾಗಲೂ ಕಾಡುತ್ತಲೇ ಇತ್ತು. ಆದರೆ ಇದೀಗ ಈ ಕೊರಗು ನೀಗಿದೆ. ಹೌದು ಕತಾರ್ ಫಿಫಾ ವಿಶ್ವಕಪ್ನಲ್ಲಿ ಮೆಸ್ಸಿ ಸಾರಥ್ಯದ ಅರ್ಜೆಂಟೀನಾ ಕಪ್ ಎತ್ತಿ ಮೆರದಾಟಿತು. ಈ ಮೂಲಕ ಅರ್ಜೆಂಟೀನಾ 36 ವರ್ಷದ ಬಳಿಕ ಚಾಂಪಿಯನ್ ಪಟ್ಟ ಅಲಂಕರಿಸಿತು. ಜತೆಗೆ ಮೆಸ್ಸಿಯ ಬಹುಕಾಲದ ಆಸೆಯೂ ಈಡೇರಿತು. ಜತೆಗೆ ಮೆಸ್ಸಿ ಫುಟ್ಬಾಲ್ನ ಶ್ರೇಷ್ಠರಲ್ಲಿ ಒಬ್ಬರು ಎಂಬುದನ್ನು ಸಾಬೀತುಪಡಿಸಿದರು. ಕೂಟದಲ್ಲಿ ಮೆಸ್ಸಿ ಒಟ್ಟು ಏಳು ಗೋಲುಗಳನ್ನು ದಾಖಲಿಸಿ. ಅತ್ಯುತ್ತಮ ಆಟಗಾರನಾಗಿ ಗೋಲ್ಡನ್ ಬಾಲ್ ಪ್ರಶಸ್ತಿಯನ್ನು ಗೆದ್ದರು.
ಚೊಚ್ಚಲ ಪ್ರಯತ್ನದಲ್ಲೇ ಟಿ20 ವಿಶ್ವ ಕಪ್ ಗೆದ್ದ ಜಾಸ್ ಬಟ್ಲರ್
ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆದ ಪುರುಷರ ಟಿ20 ವಿಶ್ವ ಕಪ್ 2022ರ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ್ದ ಜೋಸ್ ಬಟ್ಲರ್ ತಮ್ಮ ಚೊಚ್ಚಲ ಪ್ರಯತ್ನದಲ್ಲೇ ತಂಡವನ್ನು ಚಾಂಪಿಯನ್ ಆಗಿ ಹೊರಹೊಮ್ಮಿಸಿದರು. ಇದರೊಂದಿಗೆ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬಳಿಕ ಈ ಸಾಧನೆ ಮಾಡಿದ ಕೀರ್ತಿ ಬಟ್ಲರ್ ಪಾಲಾಯಿತು. ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಇಂಗ್ಲೆಂಡ್ ತನ್ನ ಎರಡನೇ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಸೆಮಿಫೈನಲ್‌ನಲ್ಲಿ ಟೀಮ್ ಇಂಡಿಯಾವನ್ನು 10 ವಿಕೆಟ್ಗಳಿಂದ ಸೋಲಿಸಿ ಇಂಗ್ಲೆಂಡ್ ಫೈನಲ್ ಪ್ರವೇಶಿಸಿತ್ತು.
ಟೆನಿಸ್‌ಗೆ ವಿದಾಯ ಹೇಳಿದ ರೋಜರ್ ಫೆಡರರ್
ಟೆನಿಸ್ ಲೋಕದ ದಿಗ್ಗಜರಲ್ಲಿ ಒಬ್ಬರಾದ ರೋಜರ್ ಫೆಡರರ್ ವೃತ್ತಿಪರ ಟೆನಿಸ್‌ನಿಂದ ನಿವೃತ್ತಿ ಘೋಷಿಸಿದ್ದು 2022ರ ಪ್ರಮುಖ ಕ್ರೀಡಾ ಕ್ಷಣಗಳಲ್ಲಿ ಒಂದಾಗಿದೆ. ಗಾಯದಿಂದ ಚೇತರಿಕೆ ಕಂಡು ವಿಂಬಲ್ಡನ್ 2021ರಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಾಗ, ಅವರು 2022ರಲ್ಲಿಯೂ ಮತ್ತೆ ಟೆನಿಸ್ ಅಂಗಳಕ್ಕೆ ಮರಳುವ ನಿರೀಕ್ಷೆ ಇತ್ತು. ಆದರೆ ಮತ್ತೆ ಗಾಯದ ಸಮಸ್ಯೆ ಕಾಡಿದ ಕಾರಣ ಅಂತಿಮವಾಗಿ ಅವರು ಟೆನಿಸ್‌ಗೆ ವಿದಾಯ ಘೋಷಿಸಿದರು. 20 ಬಾರಿಯ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಫೆಡರರ್, ಲೇವರ್ ಕಪ್ 2022ರಲ್ಲಿ ಆಡುವ ಮೂಲಕ ವೃತ್ತಿಪರ ಟೆನಿಸ್‌ಗೆ ನಿವೃತ್ತಿ ಘೋಷಿಸಿದರು.
ಕಾರ್ಲೋಸ್ ಅಲ್ಕರಾಜ್‌ಗೆ ಕನಸಿನ ವರ್ಷ
2022ರ ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸ್ಪೇನ್‌ನ 19ರ ಹರೆಯದ ಯುವಕ ಕಾರ್ಲೋಸ್ ಅಲ್ಕರಾಜ್ ಚೊಚ್ಚಲ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಈ ಮೂಲಕ ಟೆನಿಸ್‌ನಲ್ಲಿ ಸೆನ್ಸೇಷನ್ ಸೃಷ್ಟಿಸಿದ ಅಲ್ಕರಾಜ್, ಪ್ರತಿಷ್ಠಿತ ಟ್ರೋಫಿ ಗೆದ್ದು ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೆ ಏರಿದರು. ಕೇವಲ 19 ವರ್ಷ ಮತ್ತು ನಾಲ್ಕು ತಿಂಗಳ ವಯಸ್ಸಿನಲ್ಲಿ ಈ ಮಹೋನ್ನತ ಸಾಧನೆ ಮಾಡಿದ ಅಲ್ಕರಾಜ್, ಎಟಿಪಿ ಪ್ರಶಸ್ತಿಯನ್ನು ಗೆದ್ದ ಅತ್ಯಂತ ಕಿರಿಯ ಆಟಗಾರರಾಗಿದ್ದಾರೆ. ಈ ಎಲ್ಲ ಸಾಧನೆ ಮಾಡಿದ ಕಾರಣ ಅಲ್ಕರಾಜ್‌ಗೆ 2022 ಕನಸಿನ ವರ್ಷವಾಗಿ ನೆನಪುಳಿಯಲಿದೆ.
ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಗೆದ್ದ ಭಾರತ ಪುರುಷರ ಹಾಕಿ ತಂಡ
ಭಾರತ ಪುರುಷರ ಹಾಕಿ ತಂಡವು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ 2022ರ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ ಪದಕಕ್ಕೆ ಜಯಿಸಿತ್ತು. ಟೋಕಿಯೊ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದ ಸಾಧನೆಯ ಬಳಿಕ ಭಾರತೀಯ ಪುರುಷರ ತಂಡ ಸಾಧಿಸಿದ ಎರಡನೇ ಮೈಲಿಗಲ್ಲಿನ ಪ್ರದರ್ಶನ ಇದಾಗಿದೆ. ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಸೋಲು ಕಂಡಿತ್ತು.
ಇದನ್ನೂ ಓದಿ | Year Ender | ಹೊಸ ಪದಕಗಳು, ವಿಶ್ವ ದಾಖಲೆಗಳು; ಭಾರತದ ಕ್ರೀಡಾ ಕ್ಷೇತ್ರಕ್ಕೆ ಚೈತನ್ಯ ತಂದ 2022