ನವದೆಹಲಿ: 5ಜಿ ಯ ರೋಲ್-ಔಟ್ ನಡುವೆ, ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ(TRAI) ಅಕ್ಟೋಬರ್ ತಿಂಗಳ 4ಜಿ ವೇಗ ಪರೀಕ್ಷೆಯ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಹೆಸರಾಂತ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿಯವರ ಕಂಪನಿ ರಿಲಯನ್ಸ್ ಜಿಯೋ (Reliance Jio) ಸರಾಸರಿ 4ಜಿ ಡೌನ್‌ಲೋಡ್ ವೇಗದೊಂದಿಗೆ ಅಪ್‌ಲೋಡ್ ವೇಗದಲ್ಲೂ ಮೊದಲ ಸ್ಥಾನದಲ್ಲಿದೆ. TRAI ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಜಿಯೋದ ಸರಾಸರಿ 4ಜಿ ಡೌನ್‌ಲೋಡ್ ವೇಗದಲ್ಲಿ 1.2 ಎಂಬಿಪಿಎಸ್ ಜಿಗಿತ ಕಂಡು ಬಂದಿದೆ. ಸೆಪ್ಟೆಂಬರ್ ತಿಂಗಳಲ್ಲಿ 19.1 ಎಂಬಿಪಿಎಸ್ ಇದ್ದ ವೇಗ ಅಕ್ಟೋಬರ್ ತಿಂಗಳಲ್ಲಿ 20.3 ಎಂಬಿಪಿಎಸ್ ತಲುಪಿದೆ.
ಅಂಕಿ ಅಂಶಗಳ ಅನ್ವಯ ಸರಾಸರಿ ಡೌನ್‌ಲೋಡ್ ವೇಗದ ವಿಚಾರದಲ್ಲಿ ಏರ್‌ಟೆಲ್ ಮತ್ತು ವಿ (ವೊಡಾಫೋನ್-ಐಡಿಯಾ) ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ. ಅಕ್ಟೋಬರ್‌ನಲ್ಲಿ ಏರ್‌ಟೆಲ್‌ನ ಸರಾಸರಿ 4ಜಿ ಡೌನ್‌ಲೋಡ್ ವೇಗ 15 ಎಂಬಿಪಿಎಸ್ ಆಗಿದ್ದರೆ ವಿ 14.5 ಎಂಬಿಪಿಎಸ್ ವೇಗ ಹೊಂದಿತ್ತು. ಕಳೆದ ತಿಂಗಳಿನಿಂದ ಎರಡೂ ಕಂಪನಿಗಳು ತಮ್ಮ ವೇಗದಲ್ಲಿ ಸುಧಾರಣೆ ಮಾಡಿಕೊಂಡಿವೆ. ಆದರೆ ಏರ್ಟೆಲ್ ಮತ್ತು Vi ಗೆ ಹೋಲಿಸಿದರೆ ರಿಲಯನ್ಸ್ ಜಿಯೋದ ಸರಾಸರಿ 4ಜಿ ಡೌನ್‌ಲೋಡ್ ವೇಗವು 5 ಎಂಬಿಪಿಎಸ್ಗಿಂತ ಹೆಚ್ಚು ಇದೆ.
ರಿಲಯನ್ಸ್ ಜಿಯೋ ಕಳೆದ ತಿಂಗಳು ಸರಾಸರಿ 4ಜಿ ಅಪ್‌ಲೋಡ್ ವೇಗದಲ್ಲಿ ಮೊದಲ ಬಾರಿಗೆ ಪ್ರಥಮ ಸ್ಥಾನ ಪಡೆದಿದೆ. ಕಂಪನಿಯು ಈ ತಿಂಗಳು ಅಂದರೆ ಅಕ್ಟೋಬರ್‌ನಲ್ಲಿ 6.2 ಎಂಬಿಪಿಎಸ್ ವೇಗದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ವಿ (Vodafone-Idea) 4.5 ಎಂಬಿಪಿಎಸ್ ವೇಗದೊಂದಿಗೆ ಎರಡನೇ ಸ್ಥಾನದಲ್ಲಿದೆ. ಇದೇ ವೇಳೆ, ಏರ್‌ಟೆಲ್‌ನ ಅಪ್‌ಲೋಡ್ ವೇಗದಲ್ಲಿ ಗಣನೀಯ ಕುಸಿತ ಕಂಡು ಬಂದಿದೆ. ಏರ್‌ಟೆಲ್‌ನ ಸರಾಸರಿ 4ಜಿ ಅಪ್‌ಲೋಡ್ ವೇಗವು ಅಕ್ಟೋಬರ್‌ನಲ್ಲಿ 2.7 ಎಂಬಿಪಿಎಸ್ ತಲುಪಿದೆ. ಅಂದರೆ ಏರ್‌ಟೆಲ್‌ನ ಅಪ್‌ಲೋಡ್ ವೇಗವು ಜಿಯೋ ಹೊಂದಿರುವ ವೇಗದ ಅರ್ಧಕ್ಕಿಂತ ಕಡಿಮೆ ಮಟ್ಟದಲ್ಲಿದೆ.
ಇದನ್ನೂ ಓದಿ | Jio-BSNL | ಸ್ಥಿರ ದೂರವಾಣಿ ಸೇವೆಯಲ್ಲಿ ಬಿಎಸ್ಎನ್ಎಲ್ ಹಿಂದಿಕ್ಕಿದ ಜಿಯೋ