ಮುಂಬೈ, ಮಹಾರಾಷ್ಟ್ರ: ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ರಿಲಯನ್ಸ್ ಜಿಯೋ (Reliance Jio) ಇದೀಗ ಮತ್ತೊಂದು ಸಾಹಸಕ್ಕೆ ಮುಂದಾಗಿದೆ. 4ಜಿ ಇಂಟರ್ನೆಟ್ ಸಕ್ರಿಯ ಜಿಯೋ ಭಾರತ್ (Jio Bharat) ಫೋನ್‌ಗಳನ್ನು ಲಾಂಚ್ ಮಾಡಲಿದೆ. ವಿಶೇಷ ಏನೆಂದರೆ ಈ ಫೋನುಗಳು ನಿಮಗೆ ಕೇವಲ 999 ರೂಪಾಯಿಯಲ್ಲಿ ದೊರೆಯಲಿವೆ. ಅಂದರೆ, ಅತ್ಯಂತ ಅಗ್ಗದ ದರದಲ್ಲಿ ಫೋನುಗಳನ್ನು ಮಾರಾಟ ಮಾಡಲು ಕಂಪನಿಯು ಮುಂದಾಗಿದೆ. ಜುಲೈ 7ರಿಂದ ಫೋನ್ ಮಾರಾಟ ಶುರುವಾಗಲಿದೆ. 2ಜಿ ಮುಕ್ತ ಭಾರತ್ ಪರಿಕಲ್ಪನೆಯೊಂದಿಗೆ ರಿಲಯನ್ಸ್ ಈ ಫೋನುಗಳನ್ನು ಲಾಂಚ್ ಮಾಡುತ್ತಿದೆ.
ಜಿಯೋ ಭಾರತ್ ಫೋನ್ ಅತ್ಯಂತ ಅಗ್ಗದ ಬೆಲೆಯ ಎಂಟ್ರಿ ಲೇವಲ್ ಇಂಟರ್ನೆಟ್ ಸಕ್ರಿಯಗೊಳಿಸಿದ ಫೋನ್ ಎಂದು ರಿಲಯನ್ಸ್ ಜಿಯೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ವಿಶೇಷ ಎಂದರೆ, 30 ಪ್ರತಿಶತ ಅಗ್ಗದ ಮಾಸಿಕ ಯೋಜನೆ ಮತ್ತು ಇತರ ಆಪರೇಟರ್‌ಗಳ ಫೀಚರ್ ಫೋನ್ ಕೊಡುಗೆಗಳಿಗೆ ಹೋಲಿಸಿದರೆ 7 ಪಟ್ಟು ಹೆಚ್ಚು ಡೇಟಾಗೆ ಅರ್ಹರಾಗಿರುತ್ತಾರೆ ಎಂದು ಕಂಪನಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಮೂಲ ರೀಚಾರ್ಜ್ ಯೋಜನೆಯು ಅನಿಯಮಿತ ಧ್ವನಿ ಕರೆಗಳು ಮತ್ತು 14 ಜಿಬಿ ಡೇಟಾಗೆ ತಿಂಗಳಿಗೆ 123 ರೂ. ಬೆಲೆಯನ್ನು ಹೊಂದಿದೆ. ಇದೇ ಸೌಲಭ್ಯವನ್ನು ಗ್ರಾಹಕರು ಇತರ ಆಪರೇಟರ್‌ಗಳ 179 ಶುಲ್ಕವನ್ನು ಪಡೆದುಕೊಳ್ಳುತ್ತಾರೆಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಜಿಯೋ ಭಾರತ್‌ಗಾಗಿ ಕಂಪನಿಯು ವಾರ್ಷಿಕ ಪ್ಲ್ಯಾನ್ ಕೂಡ ಹೊಂದಿದೆ. ಇದಕ್ಕಾಗಿ ಗ್ರಾಹಕರು 1234 ರೂ. ನೀಡಬೇಕಾಗುತ್ತದೆ. ಅನ್‌ಲಿಮಿಟಿಡ್ ಕಾಲ್ಸ್, 168 ಜಿಬಿ ಡೇಟಾ, ಅಂದರೆ ದಿನಕ್ಕೆ ಅರ್ಧ ಜಿಬಿ ಡೇಟಾ ದೊರೆಯಲಿದೆ. ಇತರ ಟೆಲಿಕಾಂ ಆಪರೇಟರ್‌ಗಳ ಪ್ಲ್ಯಾನ್‌ಗೆ ಹೋಲಿಸಿದರೆ ಇದು ಶೇ. 25ರಷ್ಟು ಅಗ್ಗವಾಗಿದೆ. ಇತರ ಟೆಲಿಕಾಂ ಕಂಪನಿಗಳು 1,799 ರೂ. ಮತ್ತು ವಾಯ್ಸ್ ಕಾಲ್ ಹಾಗೂ 24 ಜಿಬಿ ಡೇಟಾ ಒದಗಿಸುತ್ತವೆ.
ಮೊದಲ 10 ಲಕ್ಷ ಜಿಯೋ ಭಾರತ್ ಫೋನ್‌ಗಳ ಬೀಟಾ ಪ್ರಯೋಗವು ಜುಲೈ 7ರಿಂದ ಪ್ರಾರಂಭವಾಗುತ್ತದೆ. ದೇಶದ ಒಟ್ಟು 6,500 ತಹಸಿಲ್‌ಗಳಲ್ಲಿ ಈ ಬೀಟಾ ವರ್ಷನ್ ಪರೀಕ್ಷೆಯನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಸುದ್ದಿಯನ್ನೂ ಓದಿ: ಎಂಜಿ ಕಾಮೆಟ್ ಇವಿ ಕಾರಿಗೆ ಜಿಯೋದಿಂದ ‘ಹಿಂಗ್ಲಿಷ್’ ವಾಯ್ಸ್ ಅಸಿಸ್ಟಂಟ್ ಸರ್ವೀಸ್!
ಭಾರತದಲ್ಲಿ ಈಗಲೂ ಸುಮಾರು 25 ಕೋಟಿ ಜನರು 2ಜಿ ಇಂಟರ್ನೆಟ್ ಸಕ್ರಿಯಗೊಂಡ ಫೋನುಗಳನ್ನು ಬಳಸುತ್ತಿದ್ದಾರೆ. ಈ ಗ್ರಾಹಕರನ್ನು ಗುರಿಯಾಗಿಸಿಕೊಂಡು ಜಿಯೋ ಭಾರತ್ ಫೋನುಗಳ್ನು ಲಾಂಚ್ ಮಾಡಲಾಗಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಭಾರತದಲ್ಲಿ ಇನ್ನೂ 25 ಕೋಟಿ ಮೊಬೈಲ್ ಫೋನ್ ಬಳಕೆದಾರರು 2G ಯುಗದಲ್ಲಿ ಸಿಕ್ಕಿಬಿದ್ದಿದ್ದಾರೆ. ಪ್ರಪಂಚವು 5G ಕ್ರಾಂತಿಯ ತುದಿಯಲ್ಲಿರುವಾಗ ಇಂಟರ್ನೆಟ್‌ನ ಮೂಲಭೂತ ವೈಶಿಷ್ಟ್ಯಗಳನ್ನು ಪಡೆಯಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ ಹೇಳಿದ್ದಾರೆ.
ತಂತ್ರಜ್ಞಾನ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.