ನವದೆಹಲಿ: ದೇಶದಲ್ಲೀಗ ೫ಜಿ ಜಮಾನ ಶುರುವಾಗಿದೆ. ಮುಂಬೈ, ದೆಹಲಿ, ವಾರಾಣಸಿ ಸೇರಿ ಕೆಲವು ನಗರಗಳಲ್ಲಿ ಈಗಾಗಲೇ ೫ಜಿ ನೆಟ್‌ವರ್ಕ್ ಲಭ್ಯವಾಗಿದೆ. ಶೀಘ್ರದಲ್ಲಿಯೇ ಬೆಂಗಳೂರಿನಲ್ಲೂ ೫ಜಿ ಸೇವೆ ಸಿಗಲಿದೆ. ಹಾಗಾಗಿಯೇ, ಮೊಬೈಲ್ ಕಂಪನಿಗಳು ಕಡಿಮೆ ಬೆಲೆಗೆ ೫ಜಿ ಮೊಬೈಲ್‌ಗಳನ್ನು ಮಾರಾಟ ಮಾಡುತ್ತಿವೆ. ದಿನದಿಂದ ದಿನಕ್ಕೆ ಹೆಚ್ಚಿನ ಆಫರ್‌ಗಳನ್ನು ನೀಡುತ್ತಿವೆ. ೫ಜಿ ನೆಟ್‌ವರ್ಕ್‌ಗೆ ಜನರ ಬೇಡಿಕೆ ಹೆಚ್ಚಾಗಿರುವ ಬೆನ್ನಲ್ಲೇ ಆನ್‌ಲೈನ್ ಸ್ಕ್ಯಾಮ್ (5G SIM Scam) ಮಾಡುವವರ ಸಂಖ್ಯೆಯೂ ಏರಿಕೆಯಾಗಿದೆ.
ಹೌದು, ನಿಮ್ಮ ಸಿಮ್ ಕಾರ್ಡ್‌ಅನ್ನು ೪ಜಿಯಿಂದ ೫ಜಿಗೆ ಅಪ್‌ಗ್ರೇಡ್ ಮಾಡಿ ಕೊಡಲಾಗುವುದು ಎಂದು ಆಮಿಷ ಒಡ್ಡುವ ಮೂಲಕ ಹಲವರು ಜನರ ವೈಯಕ್ತಿಕ ಮಾಹಿತಿ ಕದಿಯುತ್ತಿದ್ದಾರೆ ಎಂಬುದಾಗಿ ಚೆಕ್ ಪಾಯಿಂಟ್ ಸಾಫ್ಟ್‌ವೇರ್ (Check Point Software) ಸಂಸ್ಥೆ ವರದಿ ತಿಳಿಸಿದೆ. ದೇಶದ ಹಲವೆಡೆ ಸಿಮ್ ಕಾರ್ಡ್ ಅಪ್‌ಗ್ರೇಡ್ ಹೆಸರಿನಲ್ಲಿ ಅಕ್ರಮ ನಡೆಯುತ್ತಿರುವ ಕಾರಣ ಜನ ಎಚ್ಚರದಿಂದ ಇರಬೇಕು ಎಂದು ಸೂಚಿಸಿದೆ. ಮಾಹಿತಿ ಖದಿಯುವ ಜತೆಗೆ ಹಣವನ್ನೂ ಲಪಟಾಯಿಸಲಾಗುತ್ತಿದೆ ಎಂಬುದು ವರದಿಯಿಂದ ಬಹಿರಂಗವಾಗಿದೆ.
ಹೇಗೆ ನಡೆಯುತ್ತದೆ ಸ್ಕ್ಯಾಮ್?
ನಿಮ್ ಸಿಮ್ ಅನ್ನು ೪ಜಿಯಿಂದ ೫ಜಿಗೆ ಅಪ್‌ಗ್ರೇಡ್ ಮಾಡಲಾಗುತ್ತದೆ ಎಂದು ಆನ್‌ಲೈನ್ ವಂಚಕರು ಮೊಬೈಲ್‌ಗೆ ಲಿಂಕ್ ಮೆಸೇಜ್ ಮಾಡುತ್ತಾರೆ. ಹಾಗೊಂದು ವೇಳೆ, ಆ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ವೈಯಕ್ತಿಕ ಮಾಹಿತಿ ನೀಡಬೇಕಾಗುತ್ತದೆ. ೫ಜಿ ಆಸೆಗೆ ಬಿದ್ದು ಎಲ್ಲ ಮಾಹಿತಿ ನೀಡಿದರೆ ವೈಯಕ್ತಿಕ ಮಾಹಿತಿ ಕದಿಯುತ್ತಾರೆ. ಹಾಗೆಯೇ, ಬ್ಯಾಂಕ್ ಪಾಸ್‌ವರ್ಡ್ ಹಾಗೂ ಒನ್ ಟೈಮ್ ಪಾಸ್‌ವರ್ಡ್ (OTP) ಪಡೆದು, ಬ್ಯಾಂಕ್ ಖಾತೆಯಲ್ಲಿರುವ ಹಣವನ್ನೆಲ್ಲ ಲಪಟಾಯಿಸುತ್ತಿದ್ದಾರೆ.
ಎಚ್ಚರಿಕೆ ನೀಡಿದ ಪೊಲೀಸರು
ಸಿಮ್ ಅಪ್‌ಗ್ರೇಡ್ ಹಗರಣದ ಕುರಿತು ಹಲವು ರಾಜ್ಯಗಳ ಪ್ರಮುಖ ನಗರಗಳ ಪೊಲೀಸರು ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಮುಂಬೈ, ಪುಣೆ, ಹೈದರಾಬಾದ್, ಗುರುಗ್ರಾಮ ಪೊಲೀಸರು ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಸಿಮ್ ಅಪ್‌ಗ್ರೇಡ್ ಕುರಿತು ಮೆಸೇಜ್ ಬಂದರೆ, ಲಿಂಕ್ ಕಳುಹಿಸಿದರೆ ಅದರ ಮೇಲೆ ಕ್ಲಿಕ್ ಮಾಡಬೇಡಿ ಎಂದು ಕೋರಿದ್ದಾರೆ.
ಒಟ್ಟಿನಲ್ಲಿ ತಂತ್ರಜ್ಞಾನವು ಮನುಷ್ಯನ ಕೆಲಸಗಳನ್ನು ಸುಲಭ ಮಾಡುವ ಜತೆಗೆ ಇದು ಹಗರಣ, ಅಕ್ರಮಗಳಿಗೂ ಕಾರಣವಾಗುತ್ತಿದೆ. ಈಗ ೫ಜಿ ನೂತನ ತಂತ್ರಜ್ಞಾನದ ವಿಷಯದಲ್ಲೂ ಇದೇ ಆಗುತ್ತಿದೆ. ಹಾಗಾಗಿ, ಜನರು ಮೆಸೇಜ್, ಕರೆ ಮೂಲಕ ಯಾರಾದರೂ ವೈಯಕ್ತಿಕ ಮಾಹಿತಿ ನೀಡಬಾರದು. ಈ ಕುರಿತು ಹೆಚ್ಚಿನ ಎಚ್ಚರಿಕೆ ವಹಿಸುವುದು ಕೂಡ ಅನಿವಾರ್ಯವಾಗಿದೆ.
ಇದನ್ನೂ ಓದಿ | Online fraud : ಆನ್‌ಲೈನ್ ವಂಚನೆ ಜಾಲಕ್ಕೆ ಪೊಲೀಸರ ಬಲೆ, 70 ಜನ ವಶಕ್ಕೆ