ನವ ದೆಹಲಿ: ಇಂದು (ಅ.1) ಬೆಳಗ್ಗೆ 10 ಗಂಟೆಗೆ ಭಾರತದಲ್ಲಿ 5G ಸೇವೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ಮೂರು ಪ್ರಮುಖ ಟೆಲಿಕಾಂ ಆಪರೇಟರ್‌ಗಳು- Jio, Airtel ಮತ್ತು Vodafone Idea- ಭಾರತದಲ್ಲಿ 5G ತಂತ್ರಜ್ಞಾನದ ಸಾಮರ್ಥ್ಯವನ್ನು ತೋರಿಸಲು ಪ್ರಧಾನ ಮಂತ್ರಿಯ ಮುಂದೆ ತಲಾ ಒಂದು ಬಳಕೆಯನ್ನು ಪ್ರದರ್ಶಿಸಲಿವೆ.
ರಿಲಯನ್ಸ್ ಜಿಯೋ ಮುಂಬೈನ ಶಾಲೆಯೊಂದರ ಶಿಕ್ಷಕರನ್ನು ಮಹಾರಾಷ್ಟ್ರ, ಗುಜರಾತ್ ಮತ್ತು ಒಡಿಶಾದ ಮೂರು ವಿಭಿನ್ನ ಸ್ಥಳಗಳ ವಿದ್ಯಾರ್ಥಿಗಳೊಂದಿಗೆ ಸಂಪರ್ಕಿಸಲಿದೆ. ಶಿಕ್ಷಕರನ್ನು ವಿದ್ಯಾರ್ಥಿಗಳಿಗೆ ಹತ್ತಿರ ತರುವ ಮೂಲಕ, ಅವರ ನಡುವಿನ ಭೌತಿಕ ಅಂತರವನ್ನು ನಿವಾರಿಸುವ ಮೂಲಕ 5G ಶಿಕ್ಷಣವನ್ನು ಹೇಗೆ ಸುಗಮಗೊಳಿಸುತ್ತದೆ ಎಂಬುದನ್ನು ಇದು ತೋರಿಸುತ್ತದೆ.
ಏರ್‌ಟೆಲ್ ಡೆಮೊದಲ್ಲಿ, ಉತ್ತರ ಪ್ರದೇಶದ ಹುಡುಗಿಯೊಬ್ಬಳು ವರ್ಚುವಲ್ ರಿಯಾಲಿಟಿ ಮತ್ತು ಆಗ್ಮೆಂಟೆಡ್ ರಿಯಾಲಿಟಿ ಸಹಾಯದಿಂದ ಸೌರವ್ಯೂಹದ ಬಗೆಗಿನ ಕಲಿಕೆಯ ಅನುಭವ ಪಡೆಯಲಿದ್ದಾಳೆ. ಹೊಲೊಗ್ರಾಮ್ ಮೂಲಕ ಡಯಾಸ್‌ನಲ್ಲಿ ಕಾಣಿಸಿಕೊಂಡು ಹುಡುಗಿ ತನ್ನ ಕಲಿಕೆಯ ಅನುಭವವನ್ನು ಪ್ರಧಾನಿಯೊಂದಿಗೆ ಹಂಚಿಕೊಳ್ಳಲಿದ್ದಾಳೆ.
ವೊಡಾಫೋನ್ ಐಡಿಯಾ ದೆಹಲಿ ಮೆಟ್ರೋದ ನಿರ್ಮಾಣ ಹಂತದಲ್ಲಿರುವ ಸುರಂಗದಲ್ಲಿ ಕಾರ್ಮಿಕರ ಸುರಕ್ಷತೆಯನ್ನು ಪ್ರದರ್ಶಿಸಲಿದೆ. ದೂರದ ಸ್ಥಳದಿಂದ ನೈಜ ಸಮಯದಲ್ಲಿ ಕಾರ್ಮಿಕರಿಗೆ ಸುರಕ್ಷತಾ ಎಚ್ಚರಿಕೆ ನೀಡುವ ತಂತ್ರಜ್ಞಾವನ್ನು ಅದು ಪ್ರದರ್ಶಿಸಲಿದೆ. VR ಮತ್ತು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಕೆಲಸವನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ.
ಇದನ್ನೂ ಓದಿ | India 5G launch | ಪ್ರಧಾನಿ ನರೇಂದ್ರ ಮೋದಿಯಿಂದ ನಾಳೆ 5ಜಿ ಸೇವೆಗೆ ಚಾಲನೆ
ಪ್ರಧಾನಮಂತ್ರಿಗಳು ವಸ್ತುಪ್ರದರ್ಶನಕ್ಕೆ ಭೇಟಿ ನೀಡಿ 5ಜಿ ತಂತ್ರಜ್ಞಾನದ ಬಳಕೆಯ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಲಿದ್ದಾರೆ. ನಿಖರವಾದ ಡ್ರೋನ್ ಆಧಾರಿತ ಕೃಷಿ, ಹೈ ಸೆಕ್ಯುರಿಟಿ ರೂಟರ್‌ಗಳು ಮತ್ತು AI ಆಧಾರಿತ ಸೈಬರ್ ಥ್ರೆಟ್ ಡಿಟೆಕ್ಷನ್ ಪ್ಲಾಟ್‌ಫಾರ್ಮ್, ಸ್ವಯಂಚಾಲಿತ ಮಾರ್ಗದರ್ಶಿ ವಾಹನಗಳು, ಆಂಬ್ಯುಪಾಡ್ ಹೆಸರಿನ ಸ್ಮಾರ್ಟ್ ಆಂಬ್ಯುಲೆನ್ಸ್, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ವರ್ಚುವಲ್ ರಿಯಾಲಿಟಿ ಮಿಶ್ರಣ, ಒಳಚರಂಡಿ ನಿಗಾ ಸಿಸ್ಟಮ್, ಸ್ಮಾರ್ಟ್-ಅಗ್ರಿ ಕಾರ್ಯಕ್ರಮ, ಆರೋಗ್ಯ ರೋಗನಿರ್ಣಯ ಮುಂತಾದವುಗಳ್ನು ವೀಕ್ಷಿಸಲಿದ್ದಾರೆ.
ಭಾರತದಲ್ಲಿ ಇಂಟರ್‌ನೆಟ್‌ನ ಇನ್ನೊಂದು ಸುತ್ತಿನ ಕ್ರಾಂತಿಗೆ ಕಾರಣವಾಗಲಿರುವ 5ನೇ ತಲೆಮಾರಿನ ಸೇವೆಯ ಸಂಪರ್ಕ ಮುಂದಿನ ಎರಡು ವರ್ಷಗಳಲ್ಲಿ ದೇಶಾದ್ಯಂತ ಪೂರ್ಣಗೊಳ್ಳಲಿದೆ.
ಇದನ್ನೂ ಓದಿ | ವಿಸ್ತಾರ TOP 10 NEWS | ರಾಜ್ಯಕ್ಕೆ ಕಾಲಿಟ್ಟ ಭಾರತ್ ಜೋಡೋದಿಂದ 5G ಪದಾರ್ಪಣೆವರೆಗಿನ ಪ್ರಮುಖ ಸುದ್ದಿಗಳಿವು