ಬೆಂಗಳೂರು: ಒಂದೆಡೆ ಪೆಟ್ರೋಲ್ ಹಾಗೂ ಡೀಸೆಲ್ ದರ ಗಗನಮುಖಿಯಾಗುತ್ತ ಸಾಗುತ್ತಿದೆ. ನೂರರ ಗಡಿ ದಾಟಿ ಇದೀಗ ಮತ್ತೊಂದು ರ‍್ಯಾಲಿ ಆರಂಭಿಸಿರುವ ಪೆಟ್ರೋಲ್ ಹಾಗೂ ಡೀಸೆಲ್ ಸಹವಾಸವೇ ಬೇಡ ಎಂದು ಗ್ರಾಹಕರು ನಿಧಾನವಾಗಿ ಪರ್ಯಾಯ ಇಂಧನಗಳತ್ತ ಹೊರಳುತ್ತಿದ್ದಾರೆ.
ಪರ್ಯಾಯ ಇಂಧನ ಎಂದ ಕೂಡಲೆ ಮೊದಲಿಗೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಜನಪ್ರಿಯತೆ ಗಳಿಸಿವೆ. ಪೆಟ್ರೋಲ್ ಹಾಗೂ ಡೀಸೆಲ್ ಖರೀದಿಯಿಂದ ದೇಶದ ಬೊಕ್ಕಸಕ್ಕೆ ಬಹುದೊಡ್ಡ ನಷ್ಟವಾಗುತ್ತಿದೆ. ಭಾರತದಲ್ಲಿ ವಾಹನಗಳಿಗೆ ಅಗತ್ಯವಾದ ಶೇ.18 ಇಂಧನ ಮಾತ್ರವೇ ನಮ್ಮಲ್ಲಿ ಉತ್ಪಾದನೆ ಆಗುತ್ತಿದೆ. ಉಳಿದ ಶೇ.82 ಇಂಧನವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. 2017-18ರಲ್ಲಿ ಭಾರತವು ತೈಲ ಆಮದಿಗಾಗಿಯೇ 4.8 ಲಕ್ಷ ಕೋಟಿ ರೂ. ವ್ಯಯ ಮಾಡಿತ್ತು. ದೇಶದ ಬೊಕ್ಕಸಕ್ಕೆ ಆಗುತ್ತಿರುವ ಈ ನಷ್ಟವನ್ನು ಕಡಿಮೆ ಮಾಡಲು ಹಾಗೂ ಸಾಂಪ್ರದಾಯಿಕ ಇಂಧನದಿಂದ ಉಂಟಾಗುವ ಮಾಲಿನ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರವೂ ವಿದ್ಯುತ್ ವಾಹನಗಳಿಗೆ ಉತ್ತೇಜನ ನೀಡುತ್ತಿದೆ.
ಒಂದೆರಡು ವರ್ಷದ ಹಿಂದೆ ಮೂರ್ನಾಲ್ಕು ಇದ್ದ ವಿದ್ಯುತ್‌ಚಾಲಿತ ದ್ವಿಚಕ್ರವಾಹನ ತಯಾರಕ ಕಂಪನಿಗಳು ಈಗ ಹತ್ತರ ಗಡಿ ದಾಟಿವೆ. ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ ಒಕ್ಕೂಟದ(ಎಫ್‌ಎಡಿಎ) ಅಂಕಿ ಅಂಶದ ಪ್ರಕಾರ 2022ರ ಜನವರಿಯಲ್ಲಿ ದೇಶದಲ್ಲಿ ಮಾರಾಟವಾದ ಪ್ರಯಾಣಿಕ ವಿಭಾಗದ ವಿದ್ಯುತ್ ಚಾಲಿತ ವಾಹನಗಳಿಗಿಂತ ಫೆಬ್ರವರಿಯಲ್ಲಿ ಶೇ.58 ಬೆಳವಣಿಗೆ ಕಂಡಿತ್ತು. ಇದು ಕಳೆದ ವರ್ಷದ ಹೋಲಿಕೆಯಲ್ಲಿ ಶೇ. 297 ಹೆಚ್ಚಳವಾಗಿತ್ತು. ಒಟ್ಟಾರೆ ಎಲೆಕ್ಟ್ರಿಕ್ ವಾಹನಗಳ ಮಾರಾಟ ಸಂಖ್ಯೆ ಸದ್ಯಕ್ಕೆ ಕಡಿಮೆ ಇದೆಯಾದರೂ ಅದರ ಬೆಳವಣಿಗೆ ದರ ವೇಗವಾಗಿದೆ.
ದ್ವಿಚಕ್ರ ವಾಹನಗಳ ಜತೆಗೆ ಟಾಟಾ, ಎಂಜಿ, ಜಾಗ್ವಾರ್, ಮರ್ಸಿಡೀಸ್‌ನಂತಹ ಕಂಒನಿಗಳು ನಾಳ್ಕು ಚಕ್ರದ ವಾಹನ ವಿಭಾಗದಲ್ಲೂ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಿವೆ. ಇವುಗಳು ಸಾಕಷ್ಟು ಜನಪ್ರಿಯವಾಗುತ್ತಿದ್ದು, ಸದ್ಯಕೆಕ ಚಾರ್ಜಿಂಗ್ ಸ್ಟೇಷನ್‌ಗಳ ಸಮಸ್ಯೆ ಇದ್ದೇ ಇದೆ. ಮುಖ್ಯವಾಗಿ 150-200 ಮೀರಿ ಪ್ರಯಾಣ ಮಾಡಬೇಕಾದರೆ ನಡುವೆ ಚಾರ್ಜ್ ಮಾಡುವ ಸಮಸ್ಯೆ ಇದೆ. ಸರ್ಕಾರ ಈಗಾಗಲೆ ಇದಕ್ಕಾಗಿ ವಿಶೇಷ ಯೋಜನೆ ರೂಪಿಸಿದ್ದು, ಯಾವುದೇ ಪರವಾನಗಿ ಅಗತ್ಯವಿಲ್ಲದೆ ಅತ್ಯಂತ ಸುಲಭ ನೋಂದಣೀ ವಿಧಾನದಲ್ಲಿ ಸಾರ್ವಜನಿಕರು ಚಾರ್ಜಿಂಗ್ ಸ್ಟೇಷನ್ ಉದ್ಯಮ ಆರಂಭಿಸಲು ಉತ್ತೇಜನ ನೀಡುತ್ತಿದೆ. ಮುಂಬರುವ ದಿನಗಳಲ್ಲಿ ಎಲ್ಲ ಪೆಟ್ರೋಲ್ ಬಂಕ್‌ಗಳಲ್ಲೂ ಚಾರ್ಜಿಂಗ್ ಸ್ಟೇಷನ್‌ಗಳು ಕಾಣುವ ಸಾಧ್ಯತೆಯಿದೆ. ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಹಾಗೂ ಮಾರಾಟದ ಸಂಖ್ಯೆ ಹೆಚ್ಚಾದಂತೆ ದರವು ಕಡಿಮೆಯಾಗುತ್ತದೆ, ಇನ್ನೊಂದೆರಡು ವರ್ಷದಲ್ಲಿ ಸಾಂಪ್ರದಾಯಿಕ ಹಾಗೂ ಎಲೆಕ್ಟ್ರಿಕ್ ಕಾರುಗಳ ದರದಲ್ಲಿ ಸಾಮ್ಯತೆ ಇರುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಇತ್ತೀಚೆಗೆ ಹೇಳಿದ್ದರು.
ಹೈಡ್ರೋಜನ್ ಕಡೆಗೂ ಒಲವು
ಒಂದೆಡೆ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ಲಭಿಸುತ್ತಿದ್ದರೆ ಮತ್ತೊಂದೆಡೆ ಹೈಡ್ರೋಜನ್ ಇಂಧನಕ್ಕೂ ಸರ್ಕಾರ ಗಮನ ನೀಡುತ್ತಿದೆ. ಹೈಡ್ರೋಜನ್ ಆಧರಿತ ವಾಹನಗಳು ಈಗಾಗಲೆ ಕೆಲವು ಮಾರುಕಟ್ಟೆಯಲ್ಲಿವೆ. ಇಂತಹದ್ದೇ ಟೊಯೋಟಾ ಕಂಪನಿಯ ಹೈಡ್ರೋಜನ್ ಇಂಧನ ಆಧಾರಿತ ಫ್ಯುಯೆಲ್ ಸೆಲ್ ಎಲೆಕ್ಟ್ರಿಕ್ ವೆಹಿಕಲ್(ಎಫ್‌ಸಿಇವಿ) “ಮಿರಾಯ್”ನಲ್ಲಿ ನಿತಿನ್ ಗಡ್ಕರಿ ಅವರು ಸಂಸತ್ ಕಲಾಪಕ್ಕೆ ಆಗಮಿಸಿದರು. ಹೈಡ್ರೋಜನ್ ಆಧರಿತ ವಾಹನಗಳ ಕುರಿತು ಮತ್ತಷ್ಟು ಜಾಗೃತಿ ಮೂಡಿಸುವ ಅಗತ್ಯವನ್ನು ಪ್ರಚುರಪಡಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಗಡ್ಕರಿ, ಭಾರತವು ಸದ್ಯದಲ್ಲೆ ಹಸಿರು ಹೈಡ್ರೋಜನ್ ರಫ್ತು ರಾಷ್ಟ್ರವಾಗಿ ಹೊರಹೊಮ್ಮಲಿದೆ. ಸ್ವಚ್ಛ ಹಾಗೂ ಅತ್ಯಾಧುನಿಕ ಸಾರಿಗೆ ವ್ಯವಸ್ಥೆಯನ್ನು ರೂಪಿಸುವ ಪ್ರಧಾನಿ ನರೇಂದ್ರ ಮೋದಿಯವರ ದೂರದರ್ಶಿತ್ವಕ್ಕೆ ಅನುಗುಣವಾಗಿ ರಾಷ್ಟ್ರೀಯ ಹೈಡ್ರೋಜನ್ ಮಿಷನ್ ಮೂಲಕ ಸರ್ಕಾರ ಗಮನಹರಿಸುತ್ತಿದೆ ಎಂದಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಹೈಡ್ರೋಜನ್ ಆಧಾರಿತ ವಾಹನಗಳೂ ಮುನ್ನೆಲೆಗೆ ಬರಲಿವೆ.