Site icon Vistara News

AI Threat: ಅವಾರ್ಡ್‌ ಗಳಿಸಿದ ಈ ಫೋಟೋ ತೆಗೆದವನು ಬಹುಮಾನ ನಿರಾಕರಿಸಿದ; ಕಾರಣವೇನು?

photography award

ಈ ಫೋಟೋ ಕ್ಲಿಕ್ಕಿಸಿದವನು ಇದಕ್ಕೆ ʼಸ್ಯುಡೊಮ್ನೇಸಿಯಾ: ದಿ ಎಲೆಕ್ರ್ಟಿಸಿಯನ್‌ʼ ಎಂಬ ಹೆಸರು ಕೊಟ್ಟಿದ್ದ. ನೆನಪಿನ ಶಕ್ತಿ ಕಳೆದುಕೊಂಡು ಅಮ್ನೀಸಿಯಾದಲ್ಲಿರುವ ವೃದ್ಧೆಯೊಬ್ಬಳು ತನ್ನ ಮಗಳ ಹೆಗಲ ಮೇಲೆ ಮುಖ ಆನಿಸಿರುವಂತೆ ಕಾಣಿಸುವ, ತಲ್ಲಣಿಸುವಂತೆ ಮಾಡುವ ಈ ಫೋಟೋಗೆ ಪ್ರತಿಷ್ಠಿತ ಇಂಟರ್‌ನ್ಯಾಷನಲ್‌ ಅವಾರ್ಡ್‌ (photography award) ಬಂತು. ಆದರೆ ಸ್ಪರ್ಧೆಗೆ ಈ ಫೋಟೋ ಕಳಿಸಿದವನು ಬಹುಮಾನ ಪಡೆಯಲು ನಿರಾಕರಿಸಿದ. ಕಾರಣವೇನು?

ಕಾರಣ ಇಷ್ಟೆ- ಅದು ನಿಜವಾದ ಫೋಟೋ ಆಗಿರಲೇ ಇಲ್ಲ. ಬದಲಾಗಿ ಎಐ (AI) ಮೂಲಕ ಸೃಷ್ಟಿ ಮಾಡಿದ ಚಿತ್ರ ಅದಾಗಿತ್ತು. ಫೋಟೋ ಅವಾರ್ಡ್‌ ಸ್ಪರ್ಧೆಯ ಘಟಾನುಘಟಿ ತೀರ್ಪುಗಾರರ ದೃಷ್ಟಿಯನ್ನೂ ಈ ಫೋಟೋ ವಂಚಿಸಿತ್ತು. ಸ್ಪರ್ಧೆ ಸಂಘಟಿಸಿದವರು ಸೋನಿ ವರ್ಲ್ಡ್‌ ಫೋಟೋಗ್ರಫಿ ಅವಾರ್ಡ್.‌

ಫೋಟೋ ಕಳಿಸಿದ ಕಲಾವಿದ ಜರ್ಮನಿಯವನು, ಬೋರಿಸ್‌ ಎಲ್ದಗ್ಸೇನ್‌ ಎಂಬಾತ. ಅವಾರ್ಡ್‌ ಸ್ವೀಕರಿಸಲು ನಿರಾಕರಿಸಿ ಅವನು ಹೀಗೆ ಹೇಳಿದ- ನಾನು ಸ್ಪರ್ಧೆಯನ್ನೇ ಪರೀಕ್ಷಿಸಲು ಬಯಸಿದ್ದೆ ಹಾಗೂ ಫೋಟೋಗ್ರಫಿಯ ಭವಿಷ್ಯದ ಬಗ್ಗೆ ಚರ್ಚೆಯಾಗಲಿ ಎಂದು ಬಯಸಿದ್ದೇನೆ. ಆತ ಬಯಸಿದಂತೆ ಚರ್ಚೆಯನ್ನಂತೂ ಇದು ಹುಟ್ಟುಹಾಕಿದೆ.

ಸಂಘಟಕರಿಗೆ ಬೇಸರವಾಗಿದೆ; ಬೋರಿಸ್‌ ತಮ್ಮನ್ನು ದಾರಿ ತಪ್ಪಿಸಿದ್ದಾನೆ ಎಂದು ಅವರು ಹೇಳಿದ್ದಾರೆ. ಸ್ಪರ್ಧೆಯಲ್ಲಿ ʼಎಐ ಸಹಕಾರದಿಂದ ಸೃಷ್ಟಿಸಿದ ಫೋಟೋʼಗಳ ಒಂದು ವಿಭಾಗವೂ ಇದೆ. ಆದರೆ ಎಐ ಬಳಕೆ ಎಷ್ಟರ ಮಟ್ಟಿಗಿದೆ ಎಂಬುದೇ ಚರ್ಚಾಸ್ಪದ. ಈ ಫೋಟೋ ಬಹುತೇಕ ಎಐ ಸೃಷ್ಟಿ. ʼʼಎಐ ವಿಸ್ತರಣೆಯ ಬಗ್ಗೆ ನಾವು ಗಂಭೀರವಾಗಿ ಚಿಂತಿಸಬೇಕಿದೆ. ಎಐ ಇಮೇಜ್‌ಗಳು ಹಾಗೂ ಫೋಟೋಗ್ರಫಿ ಎರಡೂ ಬೇರೆ. ಹೀಗಾಗಿ ನಾನು ಈ ಬಹುಮಾನ ಸ್ವೀಕರಿಸಲಾರೆʼʼ ಎಂದಿದ್ದಾನೆ ಬೋರಿಸ್.‌

ಹಾಡು ಸೃಷ್ಟಿಸುವುದು, ಪ್ರಬಂಧ ಬರೆಯುವುದು, ಚಾಲಕರಹಿತ ವಾಹನ ಚಲಾವಣೆ, ಚಾಟ್‌ಬಾಕ್ಸ್‌ ಥೆರಪಿಸ್ಟ್‌, ವೈದ್ಯಕೀಯದ ಬೆಳವಣಿಗೆ ಸೇರಿದಂತೆ ಕೃತಕ ಬುದ್ಧಿಮತ್ತೆಯ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆಗಳು ಎಂದು ಚಾಣಾಕ್ಷ ಮನುಷ್ಯ ಮೆದುಳನ್ನು ವಂಚಿಸುವಂತಿವೆ. ಇದಕ್ಕೆ ಈ ಫೋಟೋವೇ ಉದಾಹರಣೆ. ಈಗಾಗಲೇ ಡೀಪ್‌ಫೇಕ್‌ ಇಮೇಜ್‌ಗಳು ಹಾಗೂ ವಿಡಿಯೋಗಳು ಹಾವಳಿ ಎಬ್ಬಿಸಿವೆ. ಅದರ ಸಾಲಿಗೆ ಈಗ ಎಐ ಪೂರ್ಣಸೃಷ್ಟಿಯೂ ಸೇರಿಕೊಂಡರೆ ಏನಾಗಲಿದೆ ಎಂದು ಹೇಳಬರುವಂತಿಲ್ಲ.

ಇದನ್ನೂ ಓದಿ: Viral News : ಹುಷಾರಿಲ್ಲವೆಂದು ಸುಳ್ಳು ಹೇಳಿ ರಜೆ ತೆಗೆದುಕೊಳ್ಳುವುದೂ ಕಷ್ಟವೇ! ನಿಮ್ಮ ಆರೋಗ್ಯವನ್ನು ಅಳೆಯುತ್ತದೆ ಈ ಎಐ

Exit mobile version