ನವ ದೆಹಲಿ: ಆ್ಯಪಲ್ ತನ್ನ ಸ್ವಂತ ಎಐ ಚಾಟ್‌ಬೋಟ್ ಆ್ಯಪಲ್ ಜಿಪಿಟಿ (Apple GPT) ಅನ್ನು ಪರೀಕ್ಷಿಸಿದೆ. ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಆಧರಿಸಿದ ಚಾಟ್ ಬೋಟ್ ಇದಾಗಿದೆ. ಓಪನ್ ಎಐ ಕಂಪನಿಯ ಚಾಟ್‌ಜಿಪಿಟಿ, ಗೂಗಲ್‌ನ ಬಾರ್ಡ್ ಮಾದರಿಯಲ್ಲಿ ಆ್ಯಪಲ್ ಜಿಪಿಟಿಯನ್ನು ಆ್ಯಪಲ್ ಸಿದ್ಧಪಡಿಸುತ್ತಿದೆ.
ಆ್ಯಪಲ್ ತನ್ನದೇ ಆದ ಅಜಾಕ್ಸ್ (Ajax) ಎಂಬ ಫ್ರೇಮ್‌ವರ್ಕ್ ಅನ್ನು ಹೊಂದಿದ್ದು, ಲಾರ್ಜ್ ಲಾಂಗ್ವೇಜ್ ಮಾಡೆಲ್‌ಗಳನ್ನು (large language model) ಸೃಷ್ಟಿಸಲಿದೆ. ಇದರೊಂದಿಗೆ ಚಾಟ್‌ಜಿಪಿಟಿ ಮತ್ತು ಗೂಗಲ್ ಬಾರ್ಡ್‌ಗೆ (Google Bard) ಆ್ಯಪಲ್ ಪೈಪೋಟಿ ಕೊಡಲಿದೆ.
ಆ್ಯಪಲ್ ಈಗಾಗಲೇ ನಾನಾ ಸೇವೆಗಳಿಗೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮತ್ತು ಮೆಶೀನ್ ಲರ್ನಿಂಗ್ ತಂತ್ರಜ್ಞಾನವನ್ನು ಬಳಸುತ್ತದೆ. ಆದರೆ ಪ್ರತಿಸ್ಪರ್ಧಿಗಳ ಎದುರು ತನ್ನದೇ ಆದ ಚಾಟ್ ಬೋಟ್ ರಚನೆಗೆ ಕಾರ್ಯಪ್ರವೃತ್ತವಾಗಿದೆ. ಆ್ಯಪಲ್ ಇದನ್ನು ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಆ್ಯಪಲ್ ಕಳೆದ ವರ್ಷ ಅಜಾಕ್ಸ್ ಫ್ರೇಮ್ ವರ್ಕ್ ಬಗ್ಗೆ ಕೆಲಸ ಶುರು ಮಾಡಿತ್ತು ಎಂದು ವರದಿಯಾಗಿದೆ.
ಬಹು ನಿರೀಕ್ಷಿತ ಐಫೋನ್ 15 ಇನ್ನೆರಡು ತಿಂಗಳಿನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಐಫೋನ್ 14 ಸೀರೀಸ್‌ನಂತೆಯೇ ಐಫೋನ್ 15 ಕೂಡ ಐಫೋನ್ 15 ಪ್ಲಸ್, ಐಫೋನ್ 15 ಪ್ರೊ, ಐಫೋನ್ 15 ಪ್ರೊ ಮ್ಯಾಕ್ಸ್ ಎಂಬುದಾಗಿ ಬಿಡುಗಡೆಯಾಗುವ ನಿರೀಕ್ಷೆ ಇದೆ.