Site icon Vistara News

ವಿಸ್ತಾರ ಸಂಪಾದಕೀಯ : ಬೆಂಗಳೂರಿನಲ್ಲಿ ಆ್ಯಪಲ್ ಫೋನ್ ನಿರ್ಮಾಣ ಘಟಕ: ಅಭಿವೃದ್ಧಿಯಲ್ಲಿ ರಾಜಕೀಯ ಸಹಮತ ಇರಲಿ

Apple phone manufacturing plant in Bengaluru: There should be political consensus in development

#image_title

ಐಫೋನ್‌ (IPhone) ಉತ್ಪಾದಿಸುವ ಪ್ರಮುಖ ಗುತ್ತಿಗೆದಾರ ಫಾಕ್ಸ್‌ಕಾನ್‌, ಬೆಂಗಳೂರಿನಲ್ಲಿ ತನ್ನ ಮುಂಬರುವ ಪ್ರಾಜೆಕ್ಟ್‌ ಎಲಿಫೆಂಟ್‌ ಯೋಜನೆಯನ್ನು ಜಾರಿಗೊಳಿಸುವುದಾಗಿ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದ ಎರಡು ಪುಟಗಳ ಪತ್ರದಲ್ಲಿ ಖಚಿತಪಡಿಸಿದೆ. ಇದರೊಂದಿಗೆ ಘಟಕದ ಸ್ಥಾಪನೆಯ ಬಗ್ಗೆ ಉಂಟಾಗಿದ್ದ ಊಹಾಪೋಹಗಳಿಗೆ ತೆರೆ ಎಳೆದಿದೆ. ಕಳೆದ ಶುಕ್ರವಾರ ಕಂಪನಿ ಎಂಒಯುಗೆ ಸಹಿ ಹಾಕಿದ್ದರೂ, ಅದು ನೀಡಿದ್ದ ಹೇಳಿಕೆಯಿಂದ ಗೊಂದಲ ಸೃಷ್ಟಿಯಾಗಿತ್ತು. ಫಾಕ್ಸ್‌ಕಾನ್‌ ಅಧ್ಯಕ್ಷ ಯಂಗ್‌ ಲಿಯು ಅವರು ಸಿಎಂಗೆ ಬರೆದಿರುವ ಪತ್ರದಲ್ಲಿ, ಬೆಂಗಳೂರಿನಲ್ಲಿ ಪ್ರಾಜೆಕ್ಟ್‌ ಎಲಿಫೆಂಟ್‌ ಯೋಜನೆಯ ಜಾರಿಗೆ ಕಂಪನಿಯ ತಂಡವು ಸರ್ಕಾರದ ಜತೆಗೆ ನಿಕಟ ಸಂಪರ್ಕ ಇಟ್ಟುಕೊಳ್ಳಲಿದೆ. ಈ ಯೋಜನೆಯು ರಾಜ್ಯದಲ್ಲಿ ಕಂಪನಿಯ ಇತರ ಯೋಜನೆಗಳ ಅನುಷ್ಠಾನಕ್ಕೆ ಬುನಾದಿಯಾಗಲಿದೆ ಎಂದಿದ್ದಾರೆ. ಕಂಪನಿಯ ʼಪ್ರಾಜೆಕ್ಟ್‌ ಎಲಿಫೆಂಟ್‌ʼನಲ್ಲಿ ಮೆಕಾನಿಕಲ್‌, ಎಲೆಕ್ಟ್ರಿಕಲ್‌ ವಾಹನ, ಐಸಿ ಡಿಸೈನ್‌, ಸೆಮಿಕಂಡಕ್ಟರ್‌ ವಲಯದ ಯೋಜನೆಗಳಿವೆ.

ಬೆಂಗಳೂರು ವಿಮಾನ ನಿಲ್ದಾಣ ಬಳಿ, ಸುಮಾರು 700 ದಶಲಕ್ಷ ಡಾಲರ್‌ ವೆಚ್ಚದಲ್ಲಿ, 300 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುವ ಈ ಯೋಜನೆಯಿಂದ ಸುಮಾರು 1 ಲಕ್ಷದಷ್ಟು ಉದ್ಯೋಗ ಸೃಷ್ಟಿಯಾಗಲಿದೆ ಎಂಬ ಅಂದಾಜು. ಇಷ್ಟು ದೊಡ್ಡ ಉತ್ಪಾದನಾ ಘಟಕ ಚೀನಾದಿಂದ ಭಾರತಕ್ಕೆ, ಅದರಲ್ಲೂ ಬೆಂಗಳೂರಿಗೆ ವರ್ಗಾವಣೆ ಆಗುತ್ತಿರುವುದು ಮಹತ್ವದ ವಿದ್ಯಮಾನ. ಚೀನಾ-ಅಮೆರಿಕ ನಡುವೆ ಸಂಘರ್ಷ ಉಲ್ಬಣಿಸಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆಯಾಗಿದೆ. ಇದರ ಲಾಭ ಕರ್ನಾಟಕಕ್ಕೆ ಆಗುತ್ತಿದೆ. ಇದೇ ರೀತಿ ಹೊಸೂರಿನಲ್ಲಿ ಕೂಡ ಇನ್ನೊಂದು ಐಫೋನ್‌ ಘಟಕ ನಿರ್ಮಾಣವಾಗಲಿದೆ ಎಂದು ಇತ್ತೀಚೆಗೆ ವರ್ತಮಾನ ದೊರೆತಿತ್ತು. ಇದನ್ನು ಟಾಟಾ ಸಂಸ್ಥೆ ನಿರ್ಮಿಸುತ್ತಿದೆ. ಇಲ್ಲಿ 60,000ದಷ್ಟು ಉದ್ಯೋಗ ಸೃಷ್ಟಿಯಾಗುತ್ತಿದ್ದು, ಅದರಲ್ಲಿ 6000 ಉದ್ಯೋಗಗಳು ಬುಡಕಟ್ಟು ಸಮುದಾಯಗಳ ಮಹಿಳೆಯರಿಗೆ ಹೋಗಲಿವೆ. ಇದು ಆರ್ಥಿಕ ಬೆಳವಣಿಗೆಯ ಜತೆಗೆ ಸಾಮಾಜಿಕ ಕಳಕಳಿಯೂ ಸೇರಿದ ವಿಶಿಷ್ಟ ಬೆಳವಣಿಗೆ.

ಫಾಕ್ಸ್‌ಕಾನ್‌ ಯೋಜನೆಯ ಕುರಿತಂತೆ ಕಳೆದ ಎರಡು ದಿನಗಳಿಂದ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಕೆಸರೆರಚಾಟ ನಡೆದಿತ್ತು. ಈ ಯೋಜನೆಯಿಂದ ಸಾಕಷ್ಟು ಉದ್ಯೋಗಾವಕಾಶ ಸಿಗಲಿದೆ ಎಂದು ಆಡಳಿತ ಪಕ್ಷ ಹೇಳಿದರೆ, ಸರ್ಕಾರದ ಮುಖಭಂಗಕ್ಕಾಗಿಯೇ ಕಾಯುತ್ತಿದ್ದ ಪ್ರತಿಪಕ್ಷಗಳು ಇಂಥ ಯೋಜನೆಯೇ ಇಲ್ಲ, ಇದು ಬೋಗಸ್ ಹೇಳಿಕೆ ಎಂದು ಗೇಲಿ ಮಾಡಿದ್ದವು. ಪ್ರತಿಪಕ್ಷಗಳ ಮುಖಂಡರ ಹೇಳಿಕೆಗಳಲ್ಲಿ ಮೆಗಾ ಯೋಜನೆಯೊಂದು ರಾಜ್ಯದ ಕೈತಪ್ಪಿತಲ್ಲ ಎಂಬ ವಿಷಾದಕ್ಕಿಂತಲೂ ಸರ್ಕಾರಕ್ಕೆ ಮುಖಭಂಗವಾಯಿತು ಎಂಬ ಆನಂದವೇ ಹೆಚ್ಚು ಇದ್ದಂತಿತ್ತು. ಇಂಥ ರಾಜಕೀಯ ಸರಿಯೇ? ಯಾವುದೇ ಪಕ್ಷದ ಸರ್ಕಾರ ಇದ್ದರೂ ರಾಜ್ಯದ ಪ್ರಗತಿಯಾಗಬೇಕು ಎಂದು ಆಶಿಸುವುದು ಎಲ್ಲ ಪಕ್ಷಗಳ ಆಶಯ ಆಗಿರಬೇಕು. ಮೆಗಾ ವಿದೇಶಿ ಕಂಪನಿಯೊಂದು ರಾಜ್ಯಕ್ಕೆ ಬರುವ ಪ್ರಸ್ತಾಪ ಮಾಡುತ್ತಿರುವ ಹಂತದಲ್ಲಿ ರಾಜಕೀಯ ಪಕ್ಷಗಳು ಹೀಗೆ ಕಚ್ಚಾಟ ನಡೆಸುವುದು ಸರಿಯಲ್ಲ. ಬಹುರಾಷ್ಟ್ರೀಯ ಕಂಪನಿಗಳ ಬಂಡವಾಳ ಹೂಡಿಕೆ ವಿಚಾರದಲ್ಲಿ ರಾಜಕೀಯ ಪಕ್ಷಗಳು ಸಹಮತ ಹೊಂದಿರುವುದು ಅಗತ್ಯ. ಪೂರಕವಾದ ಅಭಿಪ್ರಾಯ ಮೂಡಿಸಲೂ ಯತ್ನಿಸಬೇಕು.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ದೇಶ ವಿರೋಧಿಗಳಿಗೆ ನಡುಕ ಹುಟ್ಟಿಸುತ್ತಿರುವ ಎನ್‌ಐಎ

ರಾಜ್ಯ ಸರ್ಕಾರ ಈಗ ದೊರೆತಿರುವ ಇಂಥ ಅಪೂರ್ವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಈ ಹಿಂದೆ ಕೆಲವು ದೊಡ್ಡ ಕಂಪನಿಗಳು ಮೂಲ ಸೌಕರ್ಯ ಕೊರತೆಯ ಕಾರಣ ನೀಡಿ ಬೆಂಗಳೂರು ತೊರೆದು ನೆರೆಯ ಚೆನ್ನೈ ಮತ್ತು ಹೈದರಾಬಾದ್‌ಗೆ ವಲಸೆ ಹೋಗಿದ್ದವು. ಕಳೆದ ವರ್ಷ ಮಳೆಗಾಲದಲ್ಲಿ ಉಂಟಾದ ಅನಾಹುತದಿಂದ ಬೆಚ್ಚಿದ ಕೆಲವು ದೊಡ್ಡ ಕಂಪನಿಗಳು ಬೆಂಗಳೂರು ತೊರೆಯುವ ಮಾತನಾಡಿದ್ದನ್ನು ನೆನಪಿಸಿಕೊಳ್ಳಬಹುದು. ಆದರೆ ನಂತರ ಅವು ಸ್ಪಷ್ಟನೆ ನೀಡಿ, ಅಂಥ ಉದ್ದೇಶವೇನೂ ತಮಗಿಲ್ಲ ಎಂದವೇನೋ ನಿಜ; ಆದರೆ ಬೆಂಗಳೂರಿನಿಂದ ಎಂಎನ್‌ಸಿಗಳನ್ನು ಸೆಳೆದು ತಮ್ಮಲ್ಲಿ ಹೂಡಿಕೆ ಮಾಡುವಂತೆ ಮಾಡಲು ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳು ಸಾಕಷ್ಟು ಪ್ರಯತ್ನ ಮಾಡುತ್ತಲೇ ಇವೆ. ನಮ್ಮ ಪ್ರಮಾದಗಳು ಅವರಿಗೆ ಲಾಭ ಆಗಬಾರದು. ಈ ಬಾರಿ ಮೂಲಸೌಕರ್ಯ ಕಲ್ಪಿಸುವ ವಿಚಾರದಲ್ಲಿ ಯಾವುದೇ ಪ್ರಮಾದ ಆಗದಂತೆ ಎಚ್ಚರ ವಹಿಸಬೇಕು. ಇಂಥ ಇನ್ನಷ್ಟು ಬೃಹತ್ ಉತ್ಪಾದನಾ ಘಟಕಗಳು ರಾಜ್ಯಕ್ಕೆ ಬರುವಂತೆ ನೋಡಿಕೊಳ್ಳಬೇಕು. ಈ ಮೂಲಕ ರಾಜ್ಯದ ಯುವ ಜನತೆಗೆ ಹೆಚ್ಚು ಹೆಚ್ಚು ಉದ್ಯೋಗ ಸಿಗಲು ಅನುಕೂಲ ಮಾಡಿ ಕೊಡಬೇಕು.

Exit mobile version