ನವ ದೆಹಲಿ: ಆ್ಯಪ್ ಆಧಾರಿತ ಕ್ಯಾಬ್ ಸೇವೆ ಒದಗಿಸುವ ಓಲಾ ತನ್ನ ಸಾಫ್ಟ್‌ವೇರ್ ತಂತ್ರಜ್ಞಾನ ವಿಭಾಗದಲ್ಲಿ 200 ಉದ್ಯೋಗಿಗಳನ್ನು ವಜಾ ಮಾಡುವ ಸಾಧ್ಯತೆ ಇದೆ. ಈ ಉದ್ಯೋಗಿಗಳು (Ola lay off ) ಎಎನ್‌ಐ ಟೆಕ್ನಾಲಜೀಸ್‌ನಲ್ಲಿ ಓಲಾ ಆ್ಯಪ್‌ನ ನಾನಾ ಆಯಾಮಗಳಿಗೆ ಸಂಬಂಧಿಸಿ ಕಾರ್ಯನಿರ್ವಹಿಸುತ್ತಿದ್ದರು.
ಓಲಾ ಎಲೆಕ್ಟ್ರಿಕ್ ಸ್ಕೂಟರ್‌ನ ಮಾರಾಟ ಇಳಿಕೆಯಾಗುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಓಲಾ ಕಳೆದ ವರ್ಷ ಡಿಸೆಂಬರ್‌ನಲ್ಲಿ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿತ್ತು. ಕಂಪನಿಯಲ್ಲಿ ಕಳೆದ ಕೆಲ ತಿಂಗಳುಗಳಿಂದ ಪುನಾರಚನೆ ಪ್ರಕ್ರಿಯೆ ನಡೆಯುತ್ತಿದೆ. ಪ್ರಾಡಕ್ಟ್, ಮಾರ್ಕೆಟಿಂಗ್, ಸೇಲ್ಸ್, ತಂತ್ರಜ್ಞಾನ, ಬಿಸಿನೆಸ್ ಇತ್ಯಾದಿ ವಿಭಾಗಗಳಲ್ಲಿ ಇದು ಪ್ರಭಾವ ಬೀರುವ ಸಾಧ್ಯತೆ ಇದೆ.
ಕಳೆದ ಎರಡು ವರ್ಷಗಳಲ್ಲಿ 30 ಹಿರಿಯ ಅಧಿಕಾರಿಗಳು ಸೇರಿದಂತೆ ಹಲವರು ಓಲಾದಿಂದ ನಿರ್ಗಮಿಸಿದ್ದಾರೆ. ಓಲಾ ಈಗ 2000 ಎಂಜಿನಿಯರ್‌ಗಳ ತಂಡವನ್ನು ಒಳಗೊಂಡಿದ್ದು, 200 ಹುದ್ದೆ ಕಡಿತವಾದರೆ 10% ಇಳಿಕೆಯಾದಂತಾಗಲಿದೆ. ಈ ಹಿಂದೆ ೫೦೦ ಉದ್ಯೋಗಿಗಳ ಹುದ್ದೆ ನಷ್ಟವಾಗಲಿದೆ ಎಂಬ ವರದಿಯಾಗಿತ್ತು. ಆದರೆ ಓಲಾ ನಿರಾಕರಿಸಿತ್ತು.