ನವ ದೆಹಲಿ: ಭಾರತದ ಆಟೊಮೊಬೈಲ್ ವಲಯದಲ್ಲಿ ಕಳೆದ ಜುಲೈನಲ್ಲಿ ೩.೪೨ ಲಕ್ಷಕ್ಕೂ ಹೆಚ್ಚು ಪ್ರಯಾಣಿಕರ ವಾಹನಗಳು (passenger vehicle) ಮಾರಾಟವಾಗಿವೆ. ಬಿಡಿಭಾಗಗಳು ಹಾಗೂ ಸೆಮಿಕಂಡಕ್ಟರ್ ಚಿಪ್‌ಗಳ ಪೂರೈಕೆಯಲ್ಲಿ ಉಂಟಾಗಿರುವ ಚೇತರಿಕೆಯಿಂದ ಆಟೊಮೊಬೈಲ್ ಉತ್ಪಾದನೆ ಮತ್ತು ಮಾರಾಟ ಚುರುಕಾಗಿದೆ. ಟ್ರ್ಯಾಕ್ಟರ್‌ಗಳು ಹೊರತುಪಡಿಸಿ ಉಳಿದ ಎಲ್ಲ ವಾಹನಗಳ ಮಾರಾಟದಲ್ಲಿ ಕಳೆದ ಜುಲೈನಲ್ಲಿ ಪ್ರಗತಿ ದಾಖಲಾಗಿದೆ. ಈ ಸಲದ ಹಬ್ಬದ ಋತುವಿನಲ್ಲಿ ಭರ್ಜರಿ ಮಾರಾಟ ನಿರೀಕ್ಷಿಸಲಾಗಿದೆ.
೨೦೨೧ರ ಜುಲೈನಲ್ಲಿ ೨.೯೫ ಲಕ್ಷ ಪ್ರಯಾಣಿಕರ ವಾಹನಗಳು ಮಾರಾಟವಾಗಿತ್ತು. ಹೀಗಾಗಿ ಈ ಸಲ ೧೬% ಹೆಚ್ಚಳವಾದಂತಾಗಿದೆ. ೨೦೨೦ರ ಅಕ್ಟೋಬರ್‌ನಲ್ಲಿ ೩.೩೪ ಲಕ್ಷ ವಾಹನಗಳು ಗ್ರಾಹಕರ ಕೈಸೇರಿತ್ತು. ಕಳೆದ ಒಂದೂವರೆ ವರ್ಷಗಳಿಂದ ಆಟೊಮೊಬೈಲ್ ತಯಾರಕರಿಗೆ ಬಿಡಿ ಭಾಗ ಹಾಗೂ ಸೆಮಿಕಂಡಕ್ಟರ್ ಚಿಪ್‌ಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು.
ಭಾರತದಲ್ಲಿ ಪ್ರಯಾಣಿಕರ ವಾಹನ ಮಾರಾಟದ ಚೇತರಿಕೆ ಹೀಗೆ
2022 ಜುಲೈನಲ್ಲಿ | 3,42,300 ವಾಹನಗಳ ಮಾರಾಟ |
2021ರ ಜುಲೈನಲ್ಲಿ | 2,95,000 |
2020ರ ಅಕ್ಟೋಬರ್‌ನಲ್ಲಿ | 3,34,000 |
ಆಟೊಮೊಬೈಲ್ ಬಿಡಿ ಭಾಗಗಳ ಇಂಡಸ್ಟ್ರಿ ಚೇತರಿಕೆ
ಭಾರತದಲ್ಲಿ ಆಟೊಮೊಬೈಲ್ ಬಿಡಿಭಾಗಗಳ ಇಂಡಸ್ಟ್ರಿಯ ಮೌಲ್ಯ ೩.೪ ಲಕ್ಷ ಕೋಟಿ ರೂ.ಗೂ ಹೆಚ್ಚು. ಕಳೆದ ಎರಡು ವರ್ಷಗಳ ವಹಿವಾಟು ಕುಸಿತದ ಬಳಿಕ ಈ ವರ್ಷ ೧೦-೧೫% ವಹಿವಾಟು ಏರಿಕೆಯನ್ನು ದಾಖಲಿಸುವ ನಿರೀಕ್ಷೆ ಇದೆ. ಆಟೊಮೊಬೈಲ್ ಬಿಡಿಭಾಗಗಳನ್ನು ಉತ್ಪಾದಿಸುವ ಕಂಪನಿಗಳು ತಮ್ಮ ಹೂಡಿಕೆಯನ್ನು ಹೆಚ್ಚಿಸುತ್ತಿವೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.
ಬಾಷ್ ನಿವ್ವಳ ಲಾಭದಲ್ಲಿ ೨೮% ಹೆಚ್ಚಳ: ಆಟೊಮೊಬೈಲ್ ಬಿಡಿಭಾಗಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಬಾಷ್ ಕಂಪನಿ ಕಳೆದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ೩೩೪ ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ೨೮% ಹೆಚ್ಚಳ ದಾಖಲಿಸಿದೆ. ಆಟೊಮೊಬೈಲ್ ವಲಯದ ಚೇತರಿಕೆಯನ್ನು ಇದು ಬಿಂಬಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿ ೨೬೦ ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಬಾಷ್‌ನ ಆದಾಯದಲ್ಲೂ ೪೫% ಹೆಚ್ಚಳವಾಗಿದ್ದು, ಆಟೊಮೊಬೈಲ್ ವಲಯ ಚೇತರಿಕೆಯ ಹಾದಿಯಲ್ಲಿರುವುದನ್ನು ಬಿಂಬಿಸಿದೆ ಎನ್ನುತ್ತಾರೆ ತಜ್ಞರು.
ಮಾರುತಿ ಸುಜುಕಿಯ ೧.42 ಲಕ್ಷ ಕಾರುಗಳ ಮಾರಾಟ
ದೇಶದ ಅತಿ ದೊಡ್ಡ ಕಾರುಗಳ ಉತ್ಪಾದಕ ಮಾರುತಿ ಸುಜುಕಿಯ ೧,42,850 ಕಾರುಗಳು ೨೦೨೨ರ ಜುಲೈನಲ್ಲಿ ಮಾರಾಟವಾಗಿದೆ. ಕಳೆದ ವರ್ಷದ ಇದೇ ಅವಧಿಗಿಂತ 7% ಏರಿಕೆಯಾಗಿದೆ. ಜೂನ್‌ಗೆ ಹೋಲಿಸಿದರೆ ೧೫% ಏರಿಕೆಯಾಗಿದೆ. ಆಲ್ಟೊ, ಎಸ್-ಪ್ರೆಸ್ಸೊ, ಬಲೆನೊ, ಡಿಸೈರ್, ಇಗ್ನಿಸ್, ಸ್ವಿಫ್ಟ್, ಟೂರ್ ಎಸ್, ವ್ಯಾಗನ್‌ಆರ್ ಮಾದರಿಯ ಕಾರುಗಳ ಮಾರಾಟ ಭರ್ಜರಿಯಾಗಿದೆ. ಸಿಯಾಜ್, ಬ್ರೆಜಾ, ಎರ್ಟಿಗಾ, ಎಸ್-ಕ್ರಾಸ್, ಎಕ್ಸ್‌ಎಲ್‌೬ ಮಾರಾಟ ತಗ್ಗಿದೆ. ಹುಂಡೈ ಮೋಟಾರ್ ಇಂಡಿಯಾ ೫೦,೫೦೦ ಕಾರುಗಳನ್ನು ಮಾರಾಟ ಮಾಡಿದೆ. ಟಾಟಾ ಮೋಟಾರ್ಸ್ ೪೭,೫೦5 ಕಾರುಗಳನ್ನು ಮಾರಾಟ ಮಾಡಿದೆ. ಮಹೀಂದ್ರಾ ಆಂಡ್ ಮಹೀಂದ್ರಾ ೨8,053 ವಾಹನಗಳನ್ನು ಮಾರಾಟ ಮಾಡಿದೆ. ಕಿಯಾ ಇಂಡಿಯಾ ೨೨,೦೨೨, ಟೊಯೊಟಾ ಕಿರ್ಲೋಸ್ಕರ್ ೧೯,೯೬೩ ವಾಹನಗಳನ್ನು ಮಾರಾಟ ಮಾಡಿದೆ.
ಜುಲೈನಲ್ಲಿ ಪ್ರಮುಖ ಆಟೊಮೊಬೈಲ್ ಕಂಪನಿಗಳ ವಾಹನ ಮಾರಾಟ
ಕಂಪನಿ | ಜುಲೈನಲ್ಲಿ ಮಾರಾಟ | ಹೆಚ್ಚಳ (%) |
ಮಾರುತಿ ಸುಜುಕಿ ಇಂಡಿಯಾ | 1,42,850 | 7% |
ಹುಂಡೈ ಮೋಟಾರ್ ಇಂಡಿಯಾ | 50,500 | 5% |
ಟಾಟಾ ಮೋಟಾರ್ ಇಂಡಿಯಾ | 47,505 | 57% |
ಮಹೀಂದ್ರಾ & ಮಹೀಂದ್ರಾ | 28,053 | 33% |
ಕಿಯಾ ಇಂಡಿಯಾ | 22,022 | 47% |
೫-೬ ವರ್ಷದಲ್ಲಿ ೧ ಕೋಟಿ ಉದ್ಯೋಗ
ಆಟೊಮೊಬೈಲ್ ವಲಯದಲ್ಲಿ ಮುಂದಿನ ೫-೬ ವರ್ಷಗಳಲ್ಲಿ ೧ ಕೋಟಿ ಉದ್ಯೋಗಗಳು ಸೃಷ್ಟಿಯಾಗಲಿದೆ ಎಂದು ಕೇಂದ್ರ ಕೌಶಲ ಅಭಿವೃದ್ಧಿ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ. ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಮತ್ತು ಆಟೊಮೇಟಿವ್ ಸ್ಕಿಲ್ಸ್ ಡೆವಲಪ್‌ಮೆಂಟ್ ಕೌನ್ಸಿಲ್‌ನ ನಡುವೆ ಒಪ್ಪಂದಕ್ಕೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಅವರು ಈ ವಿಷಯ ತಿಳಿಸಿದರು.