Site icon Vistara News

Bajaj Freedom 125: ವಿಶ್ವದ ಮೊದಲ ಸಿಎನ್‌ಜಿ ಬೈಕ್‌ ಬಜಾಜ್‌ ಫ್ರೀಡಂ 125 ಇಂದು ಬಿಡುಗಡೆ

Bajaj Freedom 125

Bajaj Freedom 125

ಮುಂಬೈ: ವಿಶ್ವದ ಮೊದಲ ಸಿಎನ್‌ಜಿ ಬೈಕ್‌ (CNG Bike) ಎನ್ನುವ ಖ್ಯಾತಿಯ, ಭಾರತದ ಬಜಾಜ್‌ ಆಟೋ (Bajaj Auto) ಕಂಪನಿ ಆವಿಷ್ಕರಿಸಿರುವ ಫ್ರೀಡಂ 125 (Bajaj Freedom 125) ಬೈಕ್‌ ಇಂದು (ಜುಲೈ 5) ಬಿಡುಗಡೆಯಾಗಲಿದೆ. ಬಜಾಜ್‌ ಬ್ರೂಝರ್‌ ಎಂದೂ ಕರೆಯಲ್ಪಡುವ ಈ ಬೈಕ್‌ ಅನ್ನು ದ್ವಿಚಕ್ರ ವಾಹನ ವಲಯದಲ್ಲಿ ಒಂದು ಮೈಲಿಗಲ್ಲು ಎಂದೇ ಪರಿಗಣಿಸಲಾಗಿದೆ.

ಕಂಪನಿಯು ಮುಂಬೈಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿ ಬೈಕ್‌ ಬಿಡುಗಡೆ ಮಾಡಲಿದ್ದು, ಬಜಾಜ್‌ ಎಂ.ಡಿ. ರಾಜೀವ್‌ ಬಜಾಜ್‌ ಮತ್ತು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಈ ಹಿಂದೆ ಜೂನ್‌ 18ರಂದು ಬೈಕ್‌ ಬಿಡುಗಡೆಗೆ ಮಾಡುವುದಾಗಿ ಕಂಪನಿ ಘೋಷಿಸಿತ್ತು. ಬಳಿಕ ಕಾರಣಾಂತರಗಳಿಂದ ದಿನಾಂಕವನ್ನು ಮುಂದೂಡಲಾಗಿತ್ತು. ಇದೀಗ ಬೈಕ್‌ ಪ್ರಿಯರ ಹಲವು ದಿನಗಳ ಕಾಯುವಿಕೆ ಅಂತ್ಯವಾಗಲಿದೆ. ಈ ಮೂಲಕ ಬಜಾಜ್‌ ಆಟೋ ಸಾಂಪ್ರದಾಯಿಕ ಪೆಟ್ರೋಲ್ ಚಾಲಿತ ಬೈಕುಗಳಿಗೆ ಪರಿಸರ ಸ್ನೇಹಿ ಪರ್ಯಾಯವನ್ನು ಪರಿಚಯಿಸುತ್ತಿದ್ದು, ಬಹುದೊಡ್ಡ ಕ್ರಾಂತಿಯನ್ನುಂಟು ಮಾಡಲು ಸಜ್ಜಾಗಿದೆ.

ವೈಶಿಷ್ಟ್ಯ

ಮೊದಲೇ ಹೇಳಿದಂತೆ ಫ್ರೀಡಂ 125 ವಿಶ್ವದ ಮೊದಲ ಸಿಎನ್‌ಜಿ ಬೈಕ್‌ ಆಗಿದ್ದು, ಇದು ಪೆಟ್ರೋಲ್ ಮತ್ತು ಸಿಎನ್‌ಜಿ ಎರಡರಲ್ಲೂ ಕಾರ್ಯ ನಿರ್ವಹಿಸುತ್ತದೆ. ಈ ಬೈಕ್‌ನ ಉದ್ದಕ್ಕೂ ಸಿಎನ್‌ಜಿ ಟ್ಯಾಂಕ್ ಅನ್ನು ಅಳವಡಿಸಲಾಗಿದೆ. ಹಾಗೇ ಇದನ್ನು ನಿರ್ವಹಿಸುವ ವಿಶಿಷ್ಟವಾದ ಚಾಸಿಸ್ ಸೆಟಪ್ ಅನ್ನು ಬೈಕ್ ಹೊಂದಿದೆ. ಸಿಎನ್‌ಜಿ ಬೈಕ್‌ನ ಆಯಿಲ್ ಟ್ಯಾಂಕ್ ಚಿಕ್ಕದಾಗಿದ್ದರೂ, ಬೈಕ್‌ಗೆ ಹೆಚ್ಚುವರಿ ಮೈಲೇಜ್ ನೀಡುತ್ತದೆ. ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್‌ನೊಂದಿಗೆ ಜೋಡಿಸಲಾದ 125 ಸಿಸಿ ಎಂಜಿನ್‌ನೊಂದಿಗೆ ಈ ಬೈಕ್‌ ಬರುವ ನಿರೀಕ್ಷೆ ಇದೆ. ಅಲ್ಲದೇ ಈ ಬೈಕ್ ಅನ್ನು ನಗರ ಪ್ರದೇಶಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಎರಡೂ ಕಡೆ ಆರಾಮವಾಗಿ ಓಡಿಸಬಹುದು. ಈ ಬೈಕ್ ಕ್ಲಚ್ ಗಾರ್ಡ್, ಹ್ಯಾಂಡಲ್ ಬಾರ್ ಬ್ರೇಸ್ ಮತ್ತು ಸಂಪ್ ಗಾರ್ಡ್ ಅನ್ನು ಹೊಂದಿರುವುದರಿಂದ ಇದರಲ್ಲಿ ಕಳಪೆ ರಸ್ತೆಯಲ್ಲೂ ಕೂಡ ಆರಾಮವಾಗಿ ಸವಾರಿ ಮಾಡಬಹುದು.

ದರ ಎಷ್ಟು?

ಈ ಬೈಕ್ ಬೆಲೆ ಸುಮಾರು 90,000 ರೂ. ಆಗಿರುವ ನಿರೀಕ್ಷೆ ಇದೆ. ಬಜಾಜ್ ಫ್ರೀಡಂ 125 ಬೈಕ್ ಟಿವಿಎಸ್ ರೇಡಿಯನ್, ಹೋಂಡಾ ಸಿಬಿ ಶೈನ್, ಹೀರೋ ಹೆಚ್ ಎಫ್ 100, ಟಿವಿಎಸ್ ಸ್ಪೋರ್ಟ್, ಬಜಾಜ್ ಸಿಟಿ 110 ಮತ್ತು ಬಜಾಜ್ ಪ್ಲಾಟಿನಾಗಳಂತಹ ಇತರ ಮೋಟಾರ್ ಸೈಕಲ್‌ಗಳ ಎದುರು ಸ್ಪರ್ಧೆಗಿಳಿಯುವ ಸಾಧ್ಯತೆ ಇದೆ.

ಈಗಾಗಲೇ ಈ ಬೈಕ್‌ ಅನ್ನು ಬಿಗುಡೆಗೆ ಮುನ್ನವೇ ಹಲವು ಬಾರಿ ಸಾರ್ವಜನಿಕ ರಸ್ತೆಯಲ್ಲಿ ಓಡಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ಅಲ್ಲದೆ ಸಿಎನ್‌ಜಿ ತಂತ್ರಜ್ಞಾನಕ್ಕೆ ಬಜಾಜ್ ಆಟೋ ಪ್ರವೇಶಿಸುತ್ತಿರುವುದು ಇದು ಹೊಸತೇನಲ್ಲ. ಕಂಪನಿಯು ಈಗಾಗಲೇ ತನ್ನ ಸಿಎನ್‌ಜಿ ಚಾಲಿತ ತ್ರಿಚಕ್ರ ವಾಹನಗಳೊಂದಿಗೆ ಯಶಸ್ಸನ್ನು ಸಾಧಿಸಿದೆ. ಇದು ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು ಶೇ. 60ರಷ್ಟು ಪಾಲನ್ನು ಹೊಂದಿದೆ. ಬಜಾಜ್ ಫ್ರೀಡಂ 125 ಮೂಲಕ ಕಂಪನಿ ತನ್ನ ಯಶಸ್ಸನ್ನು ಪುನರಾವರ್ತಿಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: Tata Motors: ನೆಕ್ಸಾನ್, ಪಂಚ್‌ ಮೂಲಕ ಎಸ್‌ಯುವಿ ಮಾರುಕಟ್ಟೆಯಲ್ಲಿ ಮುನ್ನಡೆ ಸಾಧಿಸಿದ ಟಾಟಾ ಮೋಟಾರ್ಸ್

Exit mobile version