Site icon Vistara News

Car Sales: ಆಟೊಮೊಬೈಲ್‌ ವಲಯ ಚೇತರಿಕೆ, ಸೆಪ್ಟೆಂಬರ್‌ನಲ್ಲಿ ಕಾರುಗಳ ಸಾರ್ವಕಾಲಿಕ ದಾಖಲೆ ಮಾರಾಟ

Car Sales

ಹೊಸದಿಲ್ಲಿ: ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ಕಾರುಗಳ ಮಾರಾಟ (Car Sales) ದಾಖಲೆ ಸಂಖ್ಯೆ ಮುಟ್ಟಿದ್ದು, ಆಟೊಮೊಬೈಲ್‌ ವಲಯದಲ್ಲಿ (Automobile industry) ಹರ್ಷ ಮೂಡಿಸಿದೆ. ಬಹುತೇಕ ಎಲ್ಲ ಕಂಪನಿಗಳ ಕಾರುಗಳ ಮಾರಾಟದಲ್ಲಿ ಏರಿಕೆ ಕಂಡುಬಂದಿದೆ.

ಭಾರತೀಯ ಪ್ರಯಾಣಿಕ ವಾಹನ (Passenger Vehicles) ಮಾರುಕಟ್ಟೆಯ ವಹಿವಾಟಿನಲ್ಲಿ ಸೆಪ್ಟೆಂಬರ್‌ನಲ್ಲಿ ಬಹಳಷ್ಟು ಹೆಚ್ಚಳ ಕಂಡುಬಂತು. ಕಳೆದ ಎರಡು ವರ್ಷಗಳಲ್ಲಿ ಆಟೊಮೊಬೈಲ್‌ ಕ್ಷೇತ್ರ ಕೋವಿಡ್‌ ಸಂದರ್ಭದ ಲಾಕ್‌ಡೌನ್‌ ಪರಿಣಾಮ ತತ್ತರಿಸಿತ್ತು. ನಂತರ ಸೆಮಿ ಕಂಡಕ್ಟರ್‌ಗಳ (Semi conductor) ಕೊರತೆ ಉಂಟಾಗಿತ್ತು. ಇದೀಗ ಆಟೊಮೊಬೈಲ್‌ ತಯಾರಿಕರಿಗೆ ಸಿಹಿ ಸುದ್ದಿ ಬಂದಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಕಾರುಗಳ ಮಾರಾಟ ದಾಖಲೆ ಬರೆದಿದೆ. ಮಾರಾಟವಾದ ಎಲ್ಲ ಕಂಪನಿಗಳ ಕಾರುಗಳ ಒಟ್ಟಾರೆ ಸಂಖ್ಯೆ 3,63,733. ಇದು ಮಾಸಿಕ ಮಾರಾಟದ ಸಾರ್ವಕಾಲಿಕ ದಾಖಲೆ. ಇನ್ನಷ್ಟು ಸಂತಸದ ಸಂಗತಿಯೆಂದರೆ ಬೇಡಿಕೆಯು ಏರುತ್ತಿದೆ ಮತ್ತು ಉತ್ಪಾದನಾ ನಿರ್ಬಂಧಗಳು ಈಗ ಮರೆಯಾಗುತ್ತಿವೆ.

ಮಾರುತಿ ಸುಜುಕಿಯನ್ನೇ (Maruti Suzuki) ತೆಗೆದುಕೊಂಡರೆ, ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಯಾದ ಇದು 1,81,343 ಕಾರುಗಳನ್ನು ಮಾರಿದೆ. ಇದು ಹೊಸ ವೈಯಕ್ತಿಕ ದಾಖಲೆ. ಇದು ಒಂದು ತಿಂಗಳ ಇದುವರೆಗಿನ ಗರಿಷ್ಠ. ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವೆ ಕಂಪನಿಯ ಒಟ್ಟು ಮಾರಾಟ 10 ಲಕ್ಷ ಯುನಿಟ್‌ಗಳನ್ನು ಮೀರಿದೆ.

“ಸೆಮಿಕಂಡಕ್ಟರ್ ಸಮಸ್ಯೆ ಕಡಿಮೆಯಾಗಿದೆ. ಬೇಡಿಕೆ ಹೆಚ್ಚುತ್ತಿದೆ. ನಮ್ಮ ಹೊಸ ಮಾಡೆಲ್‌ಗಳು, ವಿಶೇಷವಾಗಿ ವಿಟಾರಾ ಬ್ರೆಝಾ ಹೆಚ್ಚು ಬೇಡಿಕೆ ಹೊಂದಿದೆ” ಎಂದು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಮಾರ್ಕೆಟಿಂಗ್ ಮತ್ತು ಸೇಲ್ಸ್‌ನ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಶಶಾಂಕ್ ಶ್ರೀವಾಸ್ತವ ಹೇಳಿದ್ದಾರೆ. ಸದ್ಯ 40,000 ಬ್ರೆಝಾ, 23,000 ವಿಟಾರಾ ಬ್ರೆಝಾ, 20,000 ಫ್ರಾಂಕ್ಸ್‌, 10,000 ಜಿಮ್ಮಿ, 7,500 ಇನ್‌ವಿಕ್ಟೊಗಳಿಗೆ ಬೇಡಿಕೆ ಇದೆ.

ಇತರ ಕಂಪನಿಗಳಾದ ಹ್ಯುಂಡೈ, ಮಹಿಂದ್ರ, ಟೊಯೊಟಾ ಕೂಡ ದಾಖಲೆ ಮಾರಾಟ ಮಾಡಿವೆ. ಹ್ಯುಂಡೈ ಕಂಪನಿ 71,641 ಕಾರುಗಳನ್ನು ಮಾರಿದೆ. ಇದರಲ್ಲಿ ಕ್ರೆಟಾ, ವೆನ್ಯೂ, ಎಕ್ಸ್‌ಟರ್‌ ಸೇರಿವೆ.
ಮಹಿಂದ್ರದ ಎಸ್‌ಯುವಿಗಳು 41,267ರಷ್ಟು ಮಾರಾಟವಾಗಿವೆ.

ಹೆಚ್ಚಿನ ಕಾರುಗಳ ಮಾರಾಟ ಆಗಿರುವುದು ಎಸ್‌ಯುವಿಗಳ ವಿಭಾಗದಲ್ಲಿ. ಸಣ್ಣ ಕಾರುಗಳ ಮಾರಾಟ ಸ್ವಲ್ಪ ಕಡಿಮೆ ಇದೆ. ಮಾರುತಿಯನ್ನು ಸಣ್ಣ ಮತ್ತು ಕೈಗೆಟುಕುವ ಕಾರುಗಳ ಚಾಂಪಿಯನ್ ಎಂದು ದೀರ್ಘಕಾಲದಿಂದ ಪರಿಗಣಿಸಲಾಗಿದೆ. ಮಾರಾಟದಲ್ಲೂ ಅದು ನಿಜವಾಗಿದೆ. ಅದರ ಆಲ್ಟೊ ಮತ್ತು ಎಸ್-ಪ್ರೆಸ್ಸೊ ಮಾದರಿಗಳು 2022ರ ಸೆಪ್ಟೆಂಬರ್‌ಗೆ ಹೋಲಿಸಿದರೆ ಈ ಸೆಪ್ಟೆಂಬರ್‌ನಲ್ಲಿ 65 ಪ್ರತಿಶತದಷ್ಟು ಕುಸಿದಿವೆ. ಅಂದರೆ ಇಲ್ಲೂ ಎಸ್‌ಯುವಿಗಳದೇ ಪ್ರಾಬಲ್ಯ.

ಹೆಚ್ಚು ಹೆಚ್ಚು ಭಾರತೀಯರು ಸಮೂಹ- ಮಾರುಕಟ್ಟೆ ವಿಭಾಗದಲ್ಲಿ ಹೆಚ್ಚು ಪ್ರೀಮಿಯಂ ವಾಹನಗಳನ್ನು ಖರೀದಿಸುತ್ತಿದ್ದರೂ ಸಹ, ತಯಾರಕರು ಇನ್ನಷ್ಟು ಹೆಚ್ಚಿನ ವ್ಯಾಪಾರವನ್ನು ಅಕ್ಟೋಬರ್‌ನಲ್ಲಿ ನಿರೀಕ್ಷಿಸುತ್ತಿದ್ದಾರೆ. ಸಾಕಷ್ಟು ಹಬ್ಬಗಳು ಹಾಗೂ ಫೆಸ್ಟಿವ್‌ ಆಫರ್‌ಗಳು ಈ ಮಾಸದಲ್ಲಿವೆ.

ಇದನ್ನೂ ಓದಿ: Car sales up | ಆಗಸ್ಟ್‌ನಲ್ಲಿ ಕಾರುಗಳ ಬಂಪರ್‌ ಮಾರಾಟ, 30% ಹೆಚ್ಚಳ

Exit mobile version