Site icon Vistara News

ಏಪ್ರಿಲ್‌ನಲ್ಲಿ ಎರಡಂಕಿಯ ಪ್ರಗತಿ ದಾಖಲಿಸಿದ ವಾಹನಗಳ ಮಾರಾಟ ವಹಿವಾಟು

car sale

car sale

ಹೊಸದಿಲ್ಲಿ: ಭಾರತದಲ್ಲಿ ಕಳೆದ ಏಪ್ರಿಲ್‌ ನಲ್ಲಿ ವಾಹನಗಳ ಮಾರಾಟ ಎರಡಂಕಿಯ ಬೆಳವಣಿಗೆ ದಾಖಲಿಸಿದೆ.
ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (ಆರ್‌ಟಿಒ) ವಾಹನಗಳ ನೋಂದಣಿಯಲ್ಲಿ ಶೇ.37 ಚೇತರಿಕೆ ಕಂಡು ಬಂದಿದೆ. ಏಪ್ರಿಲ್‌ನಲ್ಲಿ 1,627,975 ವಾಹನಗಳು ನೋಂದಣಿಯಾಗಿದೆ. ಇದು ಶೇ.37ರಷ್ಟು ಹೆಚ್ಚಳವಾಗಿದೆ ಎಂದು ಆಟೊಮೊಬೈಲ್‌ ಡೀಲರ್‌ಗಳ ಸಂಘಟನೆ ಎಫ್‌ಎಡಿಎ ತಿಳಿಸಿದೆ.‌ ಆರ್ಥಿಕ ಚಟುವಟಿಕೆಗಳಲ್ಲಿ ಚೇತರಿಕೆ, ಗ್ರಾಹಕರಿಂದ ಬೇಡಿಕೆಯಲ್ಲಿ ಸುಧಾರಣೆ ಕಂಡು ಬಂದಿದೆ. ಹೀಗಿದ್ದರೂ 2019ರ ಏಪ್ರಿಲ್‌ನ ಕೋವಿಡ್‌ ಪೂರ್ವ ಮಟ್ಟಕ್ಕೆ ಈಗಲೂ ವಾಹನ ಮಾರಾಟ ಚೇತರಿಸಿಲ್ಲ.

ವಾಹನಗಳ ಎಲ್ಲ ಕೆಟಗರಿಗಳಲ್ಲಿ ನೋಂದಣಿ ವೃದ್ಧಿಸಿದೆ ಎಂದು ಎಫ್‌ಎಡಿಎ ಅಧ್ಯಕ್ಷ ವಿಂಕೇಶ್‌ ಗುಲಾಟಿ ತಿಳಿಸಿದ್ದಾರೆ.
2021ಮತ್ತು 2020ರ ಏಪ್ರಿಲ್‌ನಲ್ಲಿ ಕೋವಿಡ್‌ ಬಿಕ್ಕಟ್ಟಿನ ಪರಿಣಾಮ ವಾಹನ ಮಾರಾಟ ಕುಸಿದಿತ್ತು. ಆದ್ದರಿಂದ 2019ರ ಏಪ್ರಿಲ್‌ ಅನ್ನು ಹೋಲಿಸುವುದು ಸೂಕ್ತ ಎನ್ನುತ್ತಾರೆ ತಜ್ಞರು.

ಏಪ್ರಿಲ್‌ನಲ್ಲಿ ದ್ವಿಚಕರ ವಾಹನಗಳ ಮಾರಾಟ ಅಲ್ಪ ಹೆಚ್ಚಳವಾಗಿದೆ. ಪ್ರಯಾಣಿಕರ ಕಾರುಗಳ ಮಾರಾಟ ಗಣನೀಯ ಬೆಳವಣಿಗೆ ಕಂಡಿತ್ತು. ಹೀಗಿದ್ದರೂ ಚೀನಾದಲ್ಲಿನ ಲಾಕ್‌ ಡೌನ್‌ ಆಟೊಮೊಬೈಲ್‌ ಉತ್ಪಾದನೆ ಮೇಲೆ ಪ್ರಭಾವ ಬೀರುವ ನಿರೀಕ್ಷೆ ಇದೆ.

ಟೊಯೊಟಾ ಉತ್ಪಾದನೆ ಕಡಿತ
ಟೊಯೊಟಾ ಮೋಟಾರ್‌ ಕಾರ್ಪ್‌ ಜೂನ್‌ನಲ್ಲಿ ತನ್ನ ಕಾರುಗಳ ಉತ್ಪಾದನೆಯಲ್ಲಿ ಸುಮಾರು 1 ಲಕ್ಷ ಕಡಿತಗೊಳಿಸಲಿದೆ. ಸೆಮಿಕಂಡಕ್ಟರ್‌ ಚಿಪ್‌ಗಳ ಕೊರತೆ ಇದಕ್ಕೆ ಕಾರಣ ಎಂದು ಕಂಪನಿಯು ಮಂಗಳವಾರ ತಿಳಿಸಿದೆ.
ಹೀಗಿದ್ದರೂ 2023ರ ಮಾರ್ಚ್‌ ಒಳಗಾಗಿ 97 ಲಕ್ಷ ವಾಹನಗಳನ್ನು ಉತ್ಪಾದಿಸುವ ಗುರಿಯನ್ನು ಕಂಪನಿಯು ಬದಲಿಸಿಲ್ಲ. ಕೋವಿಡ್-‌19 ಲಾಕ್‌ ಡೌನ್‌ ಪರಿಣಾಮ ಟೊಯೊಟಾಕ್ಕೆ ಪೂರೈಕೆಯಲ್ಲಿ ಕೊರತೆ ಉಂಟಾಗಿದ್ದು, ಜೂನ್‌ನಲ್ಲಿ ಉತ್ಪಾದನೆ ಕಡಿತವಾಗಲಿದೆ. ಜೂನ್ ನಿಂದ ಆಗಸ್ಟ್‌ ತನಕ ಮಾಸಿಕ ಸರಾಸರಿ 8.5 ಲಕ್ಷ ವಾಹನಗಳನ್ನು ಉತ್ಪಾದಿಸಲು ಟೊಯೊಟಾ ಉದ್ದೇಶಿಸಿದೆ. ಚಿಪ್‌ ಕೊರತೆ ಮತ್ತು ಇತರ ಕಾರಣಗಳಿಂದಾಗಿ ಮುನ್ನೋಟವನ್ನು ಅಂದಾಜಿಸುವುದು ಕಷ್ಟಕರವಾಗಿದೆ ಎಂದು ಕಂಪನಿ ತಿಳಿಸಿದೆ.

ಇದನ್ನೂ ಓದಿ: ತಂತ್ರಜ್ಞಾನ: ಕಾರು ಖರೀದಿಗೆ ಪರಿಗಣಿಸುವ 3 ಹೊಸ ಅಂಶಗಳು ನಿಮಗೆ ಗೊತ್ತೆ?

Exit mobile version