ನವ ದೆಹಲಿ: ದೇಶದ ಆರ್ಥಿಕ ಚಟುವಟಿಕೆಗಳ ಬೆಳವಣಿಗೆಯನ್ನು ಬಿಂಬಿಸುವ ಮಾನದಂಡಗಳಲ್ಲಿ ಪ್ರತಿ ತಿಂಗಳಿನ ಕಾರುಗಳ ಮಾರಾಟವೂ ಒಂದು. ಆಗಸ್ಟ್ ತಿಂಗಳಿನ ಕಾರುಗಳ ಮಾರಾಟದಲ್ಲಿ ಬಂಪರ್ ಏರಿಕೆ (Car sales up) ದಾಖಲಾಗಿದ್ದು, 30% ಹೆಚ್ಚಳ ಸಂಭವಿಸಿದೆ ಎಂದು ಆಟೊಮೊಬೈಲ್ ಉದ್ದಿಮೆ ತಿಳಿಸಿದೆ.
ಆಟೊಮೊಬೈಲ್ ವಲಯದ ಪ್ರಕಾರ 2022ರ ಆಗಸ್ಟ್‌ನಲ್ಲಿ ಪ್ರಯಾಣಿಕರ ವಾಹನಗಳ ಮಾರಾಟ (passenger vehicles) 29-31 % ಹೆಚ್ಚಳವಾಗಿದೆ. 3,35,000-3,40,000 ವಾಹನಗಳು ಮಾರಾಟವಾಗಿದೆ.
ಮಾರುತಿ ಸುಜುಕಿಯ ಭರ್ಜರಿ ವಹಿವಾಟು: ದೇಶದ ಅತಿ ದೊಡ್ಡ ಕಾರು ಉತ್ಪಾದಕ ಮಾರುತಿ ಸುಜುಕಿ 2022 ರ ಆಗಸ್ಟ್‌ನಲ್ಲಿ ಒಟ್ಟು 1,65,173 ಕಾರುಗಳನ್ನು ಮಾರಾಟ ಮಾಡಿದೆ. 2021ರ ಆಗಸ್ಟ್‌ನಲ್ಲಿ ಕಂಪನಿ 1,30,699 ಕಾರುಗಳನ್ನು ಮಾರಾಟ ಮಾಡಿತ್ತು. ಆಲ್ಟೊ ಮತ್ತು ಎಸ್-ಪ್ರೆಸ್ಸೊದ 22,162 ಕಾರುಗಳು ಆಗಸ್ಟ್‌ನಲ್ಲಿ ವಿಕ್ರಯವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 20,461 ಕಾರುಗಳು ಬಿಕರಿಯಾಗಿತ್ತು. ಬಲೆನೊ, ಸ್ವಿಫ್ಟ್, ಡಿಸೈರ್, ಇಗ್ನಿಸ್ ಮತ್ತು ವ್ಯಾಗನ್ ಆರ್ ಕಾರುಗಳ ಒಟ್ಟು ಮಾರಾಟ 71,557 ಕ್ಕೆ ಏರಿಕೆಯಾಗಿದೆ. 2021ರ ಆಗಸ್ಟ್‌ನಲ್ಲಿ 45,577 ಇತ್ತು.
ಟಾಟಾ ಮೋಟಾರ್ಸ್ ವಹಿವಾಟು ಹೆಚ್ಚಳ: ಟಾಟಾ ಮೋಟಾರ್ಸ್‌ನ 47,166 ಕಾರುಗಳು ಆಗಸ್ಟ್‌ನಲ್ಲಿ ಮಾರಾಟವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 28 ಸಾವಿರ ಕಾರುಗಳ ಮಾರಾಟವಾಗಿತ್ತು. ಟಾಟಾ ಮೋಟಾರ್ಸ್ ಆಗಸ್ಟ್‌ನಲ್ಲಿ 3,845 ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿತ್ತು.
ಮಹೀಂದ್ರಾದ ಎಸ್‌ಯುವಿಗಳ ಮಾರಾಟದಲ್ಲೂ ಆಗಸ್ಟ್‌ನಲ್ಲಿ ಏರಿಕೆ ದಾಖಲಾಗಿದೆ. 29,852 ವಾಹನಗಳನ್ನು ಕಂಪನಿ ವಿಕ್ರಯಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 15,786 ವಾಹನಗಳನ್ನು ಮಾರಾಟ ಮಾಡಿತ್ತು.