Site icon Vistara News

Tesla Plant: ಮೋದಿ ರಾಜ್ಯದಲ್ಲಿ ಟೆಸ್ಲಾ ಕಾರು ಉತ್ಪಾದನಾ ಘಟಕ; ಶೀಘ್ರವೇ ಘೋಷಣೆ

Elon Musk

Elon Musk's Tesla to set up its first India manufacturing plant in Gujarat

ನವದೆಹಲಿ: ಹಲವು ಸುತ್ತಿನ ಮಾತುಕತೆ, ಸರ್ಕಾರದ ದೃಢ ನಿರ್ಧಾರ, ಎಲಾನ್‌ ಮಸ್ಕ್‌ (Elon Musk) ಹಗ್ಗ ಜಗ್ಗಾಟದ ಬಳಿಕ ಕೊನೆಗೂ ಭಾರತದಲ್ಲಿ ಟೆಸ್ಲಾ ಕಾರು ಉತ್ಪಾದನಾ (Tesla Plant In India) ಘಟಕ ಸ್ಥಾಪನೆಗೆ ಕಾಲ ಸನ್ನಿಹಿತವಾಗಿದೆ. ವಿದ್ಯುತ್‌ಚಾಲಿತ ವಾಹನಗಳ (Electric Vehicles) ಉತ್ಪಾದನೆಗೆ ಜಾಗತಿಕವಾಗಿ ಖ್ಯಾತಿ ಗಳಿಸಿರುವ ಟೆಸ್ಲಾ ಕಂಪನಿಯು ಗುಜರಾತ್‌ನಲ್ಲಿ ತನ್ನ ಮೊದಲ ಉತ್ಪಾದನಾ ಘಟಕವನ್ನು ಸ್ಥಾಪಿಸಲಿದೆ ಎಂದು ತಿಳಿದುಬಂದಿದೆ. ಶೀಘ್ರದಲ್ಲಿಯೇ ಈ ಕುರಿತು ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ ಎನ್ನಲಾಗಿದೆ.

“ಗುಜರಾತ್‌ನಲ್ಲಿ ಕಾರು ಉತ್ಪಾದನಾ ಘಟಕ ಸ್ಥಾಪಿಸಲು ಟೆಸ್ಕಾ ಕಂಪನಿಯ ಅಧಿಕಾರಿಗಳು ಸುಸಜ್ಜಿತವಾದ ಜಾಗವನ್ನು ಹುಡುಕಿದ್ದಾರೆ. 2024ರ ಜನವರಿಯಲ್ಲಿ ನಡೆಯಲಿರುವ ಗುಜರಾತ್‌ ವೈಬ್ರೆಂಟ್‌ ಶೃಂಗಸಭೆಯಲ್ಲಿ ಟೆಸ್ಲಾ ಉತ್ಪಾದನಾ ಘಟಕ ಸ್ಥಾಪನೆ ಕುರಿತು ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ. ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಅವರು ಕೂಡ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ” ಎಂದು ಅಹಮದಾಬಾದ್‌ ಮಿರರ್‌ ವರದಿ ಮಾಡಿದೆ.

ದೇಶದಲ್ಲಿ ಮೊದಲ ಟೆಸ್ಲಾ ಕಾರು ಉತ್ಪಾದನಾ ಘಟಕ ಸ್ಥಾಪನೆಗೆ ರಾಜ್ಯ ಸರ್ಕಾರವು ಈಗಾಗಲೇ ಸನಂದ್‌, ಧೋಲೇರಾ ಹಾಗೂ ಬೆಚರಜಿ ಸೇರಿ ಹಲವೆಡೆ ಜಾಗಗಳನ್ನು ತೋರಿಸಿದೆ. ಜಾಗತಿಕ ಹಾಗೂ ವಿದೇಶ ಬೇಡಿಕೆ ಪೂರೈಸುವ ದಿಸೆಯಲ್ಲಿ ಕಾರು ಉತ್ಪಾದಿಸುವುದು ಟೆಸ್ಲಾ ಗುರಿಯಾಗಿರುವುದರಿಂದ ಉತ್ತಮ ಜಾಗಕ್ಕೆ ಪರಿಶೀಲನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಭಾರತದಲ್ಲಿ ಟೆಸ್ಲಾ ಕಂಪನಿ ಸ್ಥಾಪನೆಗೆ ಎಷ್ಟು ಹೂಡಿಕೆ ಮಾಡಲಾಗುತ್ತಿದೆ ಎಂಬುದರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

2022ರಲ್ಲಿಯೇ ಟೆಸ್ಲಾ ಭಾರತದಲ್ಲಿ ಆಮದು ಮೂಲಕ ಕಾರುಗಳ ಮಾರಾಟಕ್ಕೆ ಮುಂದಾಗಿತ್ತು. ಆದರೆ, ಭಾರತ ಸರ್ಕಾರವು ಆಮದು ಕಾರುಗಳ ಮೇಲೆ ಶೇ.100 ತೆರಿಗೆ ವಿಧಿಸುವ ನಿರ್ಧಾರ ಕೈಗೊಂಡಿತ್ತು. ಅಂತಿಮವಾಗಿ ಮಾತುಕತೆ ಮುರಿದು ಬಿದ್ದ ಪರಣಾಮ ಭಾರತದಲ್ಲಿ ವಿದ್ಯುತ್ ಚಾಲಿತ ಕಾರುಗಳ ಮಾರಾಟದಿಂದ ಟೆಸ್ಲಾ ಹಿಂದೆ ಸರಿದಿತ್ತು. ಈ ಕುರಿತು ಹಲವು ಬಾರಿ ವದಂತಿ, ಚರ್ಚೆಗಳು ಆರಂಭವಾದರೂ ಅಂತಿಮ ಹಂತದ ಒಪ್ಪಂದ ಸಾಧ್ಯವಾಗಿರಲಿಲ್ಲ.

ಇದನ್ನೂ ಓದಿ: Tesla Inc: ಟೆಸ್ಲಾ ಕಂಪನಿಗೆ ಭಾರತೀಯ ಮೂಲದ ವೈಭವ್ ತನೇಜಾ ಹೊಸ ಸಿಎಫ್ಒ

ಈ ಹಿಂದೆ ಭಾರತವು, ದೇಶಿ ಮಾರುಕಟ್ಟೆಯಲ್ಲೇ ಟೆಸ್ಲಾ ತನ್ನ ಕಾರುಗಳನ್ನು ಉತ್ಪಾದಿಸಬೇಕೆಂದು ಬಯಸಿತ್ತು. ಆದರೆ, ಸರ್ಕಾರದ ಈ ಪ್ರಸ್ತಾಪಕ್ಕೆ ಟೆಸ್ಲಾ ಒಪ್ಪಿರಲಿಲ್ಲ. ಹಾಗಾಗಿ, ಈ ನಿಟ್ಟಿನಲ್ಲಿ ಯಾವುದೇ ಬೆಳವಣಿಗೆಗಳು ಕಂಡು ಬಂದಿರಲಿಲ್ಲ. ಹೀಗಿದ್ದೂ, ಭಾರತದಲ್ಲಿ ಟೆಸ್ಲಾ ಕಾರುಗಳ ಮೇಲಿನ ತೆರಿಗೆಯನ್ನು ಕಡಿಮೆಗೊಳಿಸುವ ಬಗ್ಗೆ ಯಾವುದೇ ಮಾತುಕತೆ ನಡೆದಿರಲಿಲ್ಲ. ಸರ್ಕಾರವು ತೆರಿಗೆ ಇಳಿಸುವ ಯಾವುದೇ ಸುಳಿವು ಸಿಗದ ಕಾರಣ ಹಾಗೂ ಭಾರತದ ಕಾರು ಮಾರುಕಟ್ಟೆಯು ದೊಡ್ಡದಾಗಿರುವ ಕಾರಣ ಕೊನೆಗೆ ಭಾರತದಲ್ಲಿಯೇ ಟೆಸ್ಲಾ ಕಾರು ಉತ್ಪಾದನಾ ಘಟಕ ಸ್ಥಾಪಿಸಲು ಟೆಸ್ಲಾ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version