ನವ ದೆಹಲಿ: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ದೆಹಲಿಯ ಕರ್ತವ್ಯ ಪಥದಲ್ಲಿ ಭಾರತದ ಮೊದಲ ಹಸಿರು ಹೈಡ್ರೋಜನ್ ಇಂಧನ ಕೋಶ ಚಾಲಿತ ಬಸ್ (Hydrogen fuel cell Bus) ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶದ ನಿಗಿದತ ಮಾರ್ಗಗಳಲ್ಲಿ ಹಸಿರು ಹೈಡ್ರೋಜನ್ ನಿಂದ ಚಾಲಿತ 15 ಬಸ್ ಗಳ ಕಾರ್ಯಾಚರಣೆ ನಡೆಯಲಿದೆ. ಇಂಡಿಯನ್ ಆಯಿಲ್ ಸಂಸ್ಥೆಯು ಪ್ರಯೋಗಾರ್ಥವಾಗಿ ಈ ಬಸ್ಗಳ ಸಂಚಾರವನ್ನು ನಡೆಸಲಿದೆ. ಇಂಡಿಯಾ ಗೇಟ್ ನಲ್ಲಿ ಮೊದಲ ಎರಡು ಫ್ಯೂಯಲ್ ಸೆಲ್ ಬಸ್ಗಳಿಗೆ ಚಾಲನೆ ಸಿಗಲಿದೆ.
ಈ ಯೋಜನೆಯು ಒಂದು ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಲಿದೆ. ಫ್ಯೂಯಲ್ ಸೆಲ್ ಬಸ್ ಕಾರ್ಯಾಚರಣೆಗಾಗಿ 350 ಬಾರ್ ಒತ್ತಡದಲ್ಲಿ ಗ್ರೀನ್ ಹೈಡ್ರೋಜನ್ ಒದಗಿಸುವ ಭಾರತದ ಮೊದಲ ಯೋಜನೆಯಾಗಿದೆ. ಇಂಡಿಯನ್ ಆಯಿಲ್ ಫರಿದಾಬಾದ್ನಲ್ಲಿರುವ ತನ್ನ ಆರ್ &ಡಿ ಕ್ಯಾಂಪಸ್ನಲ್ಲಿ ಇಂಧನ ತುಂಬಿಸುವ ಸೌಲಭ್ಯವನ್ನು ಸ್ಥಾಪಿಸಿದೆ, ಇದು ಸೌರ ಪಿವಿ ಫಲಕಗಳನ್ನು ಬಳಸಿಕೊಂಡು ವಿದ್ಯುದ್ವಿಭಜನೆಯ ಮೂಲಕ ಉತ್ಪಾದಿಸಿದ ಹಸಿರು ಹೈಡ್ರೋಜನ್ ಅನ್ನು ತುಂಬಿಸಲಿದೆ.
ನವೀಕರಿಸಬಹುದಾದ ಇಂಧನ ಮೂಲಗಳನ್ನು ಬಳಸಿಕೊಂಡು ಉತ್ಪಾದಿಸುವ ಹಸಿರು ಹೈಡ್ರೋಜನ್ ಅನ್ನು ಕಡಿಮೆ ಇಂಗಾಲದ ಇಂಧನ ಮತ್ತು ಆಮದು ಮಾಡಲಾಗುವ ಪೆಟ್ರೋಲಿಯಂ ಇಂಧನಗಳಿಗೆ ಪರ್ಯಾಯವೆಂದು ಹೇಳಲಾಗಿದೆ . ಇದು ಭಾರತದ ಹೇರಳವಾದ ನವೀಕರಿಸಬಹುದಾದ ಇಂಧನ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತದೆ. ಪೆಟ್ರೋಲಿಯಂ ಸಂಸ್ಕರಣೆ, ರಸಗೊಬ್ಬರ ಉತ್ಪಾದನೆ ಮತ್ತು ಉಕ್ಕು ಉತ್ಪಾದನೆಯಂತಹ ಕ್ಷೇತ್ರಗಳಿಗೂ ಪೂರಕವಾಗಿದೆ.
ಇದನ್ನೂ ಓದಿ : Viral Video : ಅಬ್ಬಾ ಏನು ಧೈರ್ಯ; ವೇಗವಾಗಿ ಚಲಿಸುತ್ತಿದ್ದ ಟ್ರಕ್ನ ಚಕ್ರದ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದ !
ಸಂಭಾವ್ಯ ಇಂಧನ, ಶೂನ್ಯ ಮಾಲಿನ್ಯ
ಇ-ಮೊಬಿಲಿಟಿ ಕ್ಷೇತ್ರದಲ್ಲಿ ಹೈಡ್ರೋಜನ್ ಇಂಧನ ಕೋಶ ತಂತ್ರಜ್ಞಾನವು ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ಹೈಡ್ರೋಜನ್ ಕೋಶಗಳನ್ನು ಇಂಧನವಾಗಿ ಪರಿವರ್ತಿಸುವ ತಾಂತ್ರಿಕತೆ ಇದಾಗಿದೆ. ಇಂಧನ ಕೋಶಗಳಲ್ಲಿನ ಎಲೆಕ್ಟ್ರೋ-ರಾಸಾಯನಿಕ ಪ್ರಕ್ರಿಯೆಯು ವಿದ್ಯುತ್ ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಕರೆಂಟ್ ಮೂಲಕ ಬಸ್ಗಳಲ್ಲಿ ಅಳವಡಿಸಿರುವ ಬ್ಯಾಟರಿಗಳನ್ನು ಚಾರ್ಜ್ ಮಾಡಲಾಗುತ್ತದೆ. ಅದರ ಮೂಲಕ ಬಸ್ನ ಮೋಟಾರ್ಗೆ ಚಾಲನೆ ನೀಡಲಾಗುತ್ತದೆ.
ಬ್ಯಾಟರಿ ಚಾಲಿತ ವಾಹನಗಳಿಗೆ ಹೋಲಿಸಿದರೆ ಫ್ಯೂಯಲ್ ಸೆಲ್ ವಾಹನಗಳು ಕಡಿಮೆ ಸಮಯದಲ್ಲಿ ಇಂಧನ ತುಂಬಿಸುವ ಅನುಕೂಲಗಳನ್ನು ಹೊಂದಿವೆ. ಹೈಡ್ರೋಜನ್ ಅನಿಲವನ್ನು ಹೆಚ್ಚಿನ ಒತ್ತಡದಲ್ಲಿ ಸಂಗ್ರಹಿಸಲಾಗುತ್ತದೆ. ಸಾಮಾನ್ಯವಾಗಿ 350 ಬಾರ್ನಲ್ಲಿ ಇರುತ್ತದೆ. ಬ್ಯಾಟರಿ ಚಾಲಿತ ವಾಹನಗಳನ್ನು ಚಾರ್ಜ್ ಮಾಡಲೆಂದು ದೀರ್ಘ ಕಾಲ ನಿಲ್ಲಿಸಬೇಕಾಗುತ್ತದೆ. ಆದರೆ, ಇದರಲ್ಲಿ ಪೆಟ್ರೋಲ್ನಂತೆಯೇ ಹೈಡ್ರೋಜನ್ ತುಂಬಿಸಬಹುದಾಗಿದೆ.
ಈ ಮೊದಲ ಎರಡು ಬಸ್ಸುಗಳು ಬಿಡುಗಡೆಯಾದ ನಂತರ, ದೀರ್ಘಕಾಲೀನ ಕಾರ್ಯಕ್ಷಮತೆ ಮತ್ತು ಬಾಳಿಕೆಯನ್ನು ಪರಿಶೀಲಿಸಲು 300,000 ಕಿಲೋಮೀಟರ್ ಸಂಚಾರ ನಡೆಸಲಿದೆ. ಇದು ಶೂನ್ಯ ಹೊರ ಸೂಸುವಿಕೆಯನ್ನು ಹೊಂದಿದೆ.