ನವ ದೆಹಲಿ: ಕಿಯಾ ಮೋಟಾರ್ಸ್ ಇಂಡಿಯಾ ತನ್ನ ಬಹುನಿರೀಕ್ಷಿತ ಎಸ್ ಯುವಿಯಾದ 2023 ಕಿಯಾ ಸೆಲ್ಟೋಸ್ ನ ಫೇಸ್ ಲಿಫ್ಟ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡುವ ಮೂಲಕ ಆಟೋಮೋಟಿವ್ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಿದೆ. ಹಲವಾರು ವಿನ್ಯಾಸದ ನವೀಕರಣ ಮತ್ತು ತಾಂತ್ರಿಕ ಅಪ್ಡೇಟ್ಗಳಿಂದ ತುಂಬಿರುವ ಸೆಲ್ಟೋಸ್ ಭಾರತಿಯ ಮಾರುಕಟ್ಟೆಯ ಎಸ್ಯುವಿ ಸೆಗ್ಮೆಂಟ್ನಲ್ಲಿ ಹೊಸ ಹೆಜ್ಜೆ ಇಡುವ ಗುರಿಯನ್ನು ಹೊಂದಿದೆ. ಇದೀಗ ಕಾರಿನ ಬೆಲೆಯನ್ನು ಕಂಪನಿಯು ಪ್ರಕಟಿಸಿದ್ದು, 2023ರ ಸೆಲ್ಟೋಸ್ಗೆ ಎಕ್ಸ್ ಶೋರೂಂ ದರದಂತೆ ರೂ.10.89 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ. ಟಾಪ್ ವೇರಿಯೆಂಟ್ ಕಾರಿನ ಎಕ್ಸ್ಶೋರೂಮ್ ಬೆಲೆ 19.80 ಲಕ್ಷ ರೂಪಾಯಿ. ಇದೇ ವೇಳೆ ಎಕ್ಸ್ಲೈನ್ ಎಂಬ ಇನ್ನೊಂದು ವೇರಿಯೆಂಟ್ಗೆ 20.00 ಲಕ್ಷ ರೂಪಾಯಿ ಎಂದು ಕಂಪನಿ ಘೋಷಿಸಿದೆ.
ಹೊಸ ಸೆಲ್ಟೋಸ್ನ ಬುಕಿಂಗ್ ಈಗಾಗಲೇ ಆರಂಭಗೊಂಡಿದ್ದು. 25,000 ರೂಪಾಯಿ ಪಾವತಿ ಮಾಡಿ ಬುಕಿಂಗ್ ಮಾಡಬಹುದು. ಹಿಂದೆ ಕಿಯಾ ವಾಹನ ಹೊಂದಿರುವ ಗ್ರಾಹಕರ ಕೆ-ಕೋಡ್ ಆಫರ್ನಂತೆ ಅವರಿಗೆ ಬೇಗ ಡೆಲಿವರಿ ಸಿಗಲಿದೆ. ಬುಕಿಂಗ್ ಆರಂಭಗೊಂಡ ಮೊದಲ ದಿನವೇ 13,424 ಬುಕಿಂಗ್ ಗಳನ್ನು ಸ್ವೀಕರಿಸಿದೆ ಎಂದು ಕಿಯಾ ಹೇಳಿದೆ.
ಪವರ್ ಟ್ರೇನ್ ಮಾಹಿತಿ
ಸೆಲ್ಟೋಸ್ ಫೇಸ್ ಲಿಫ್ಟ್ನಲ್ಲಿರುವ 1.5-ಲೀಟರ್ ಪೆಟ್ರೋಲ್ ಎಂಜಿನ್ 115 ಬಿಹೆಚ್ ಪಿ, 144 ಎನ್ಎಂ ಟಾರ್ಕ್ ಬಿಡುಗಡೆ ಮಾಡುತ್ತದೆ. 1.5-ಲೀಟರ್ ಟರ್ಬೊ-ಡೀಸೆಲ್ ಎಂಜಿನ್ 116 ಬಿಹೆಚ್ ಪಿ, 250 ಎನ್ಎಂ ಟಾರ್ಕ್ ನೀಡುತ್ತದೆ. ಮೊದಲನೆಯದು 6-ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿಯನ್ನು ಟ್ರಾನ್ಸ್ಮಿಷನ್ ಪಡೆದರೆ, ಎರಡನೆಯದು 6-ಸ್ಪೀಡ್ ಐಎಂಟಿ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ನೊಂದಿಗೆ ರಸ್ತೆಗೆ ಇಳಿಯಲಿದೆ. ಇದೇ ವೇಳೆ ಹೊಸ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಸಹ ಪರಿಚಯಿಸಲಾಗಿದ್ದು, ಇದು ಈ ಸೆಗ್ಮೆಂಟ್ನಲ್ಲಿಯೇ ಅತಿ ಹೆಚ್ಚು ಅಂದರೆ 160 ಬಿಎಚ್ಪಿ ಮತ್ತು 253 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡ್ ಐಎಂಟಿ ಅಥವಾ 7-ಸ್ಪೀಡ್ ಡಿಸಿಟಿ ಗೇರ್ ಬಾಕ್ಸ್ ಇದಕ್ಕೆ ಜೋಡಿಸಲಾಗಿದೆ.
ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರುವ 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಎಚ್ಟಿಇ, ಎಚ್ಟಿಕೆ, ಎಚ್ ಟಿಕೆ + ಮತ್ತು ಎಚ್ ಟಿಎಕ್ಸ್ ಟ್ರಿಮ್ ಗಳಲ್ಲಿ ಲಭ್ಯವಿದೆ. ಸಿವಿಟಿ ಗೇರ್ ಬಾಕ್ಸ್ ಎಚ್ಟಿಎಕ್ಸ್ ಟ್ರಿಮ್ ನಲ್ಲಿ ಮಾತ್ರ ಲಭ್ಯವಿದೆ. 1.5-ಲೀಟರ್ ಡೀಸೆಲ್ ಎಂಜಿನ್ ಬಗ್ಗೆ ಹೇಳುವುದಾದರೆ, ಇದು ಎಲ್ಲಾ ಟೆಕ್ ಲೈನ್ ಟ್ರಿಮ್ಗಳಾದ ಎಚ್ಟಿಇ, ಎಚ್ಟಿಕೆ, ಎಚ್ಟಿಕೆ +, ಎಚ್ಟಿಎಕ್ಸ್, ಎಚ್ಟಿಎಕ್ಸ್ + ಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಐಎಂಟಿ ಗೇರ್ ಬಾಕ್ಸ್ ನೊಂದಿಗೆ ಲಭ್ಯವಿದೆ. ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಅನ್ನು ಎಚ್ಟಿಎಕ್ಸ್, ಜಿಟಿಎಕ್ಸ್ + ಮತ್ತು ಎಕ್ಸ್-ಲೈನ್ ಟ್ರಿಮ್ಗಳಲ್ಲಿ ನೀಡಲಾಗಿದೆ.
ಹೊಸ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಈಗ ಟೆಕ್ ಲೈನ್ ಟ್ರಿಮ್ಗಳಲ್ಲಿ ಲಭ್ಯವಿದೆ. ಪ್ರೀ-ಫೇಸ್ಲಿಫ್ಟ್ ಮಾಡೆಲ್ನಲ್ಲಿ ಇದನ್ನು ಜಿಟಿ ಲೈನ್ ಮತ್ತು ಎಕ್ಸ್ಲೈನ್ ಟ್ರಿಮ್ ಗಳಲ್ಲಿ ಮಾತ್ರ ನೀಡಲಾಗಿತ್ತು.
ವಿನ್ಯಾಸ ಹೇಗಿದೆ
ಹೊಸ ಸೆಲ್ಟೋಸ್ನಲ್ಲಿ ಮುಂಭಾಗ ಮತ್ತು ಹಿಂಭಾಗದ ವಿನ್ಯಾಸ ಬದಲಿಸಲಾಗಿದೆ. ದೊಡ್ಡ ಗ್ರಿಲ್ನೊಂದಿಗೆ ಹೊಸ ಬಂಪರ್, ಗ್ರಿಲ್ ಪೂರ್ತಿ ವಿಸ್ತರಿಸುವ ಹೊಸ ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್, ಮರುವಿನ್ಯಾಸಗೊಳಿಸಿದ ಹೆಡ್ ಲೈಟ್ಗಳು ಮತ್ತು ಫಾಗ್ ಲ್ಯಾಂಪ್ಗಳಿಗಾಗಿ ನಾಲ್ಕು ಬ್ಲಾಕ್ ವಿನ್ಯಾಸವನ್ನು ನೀಡಲಾಗಿದೆ. ಹಿಂಭಾಗದಲ್ಲಿ, ಎಲ್ಇಡಿ ಲೈಟ್ ಬಾರ್ನಿಂದ ಸಂಪರ್ಕಿಸಲಾದ ಹೊಸ ಇನ್ವರ್ಟೆಡ್ ಎಲ್-ಆಕಾರದ ಟೈಲ್ ಲೈಟ್ಗಳಿವೆ. ಸ್ಪೋರ್ಟಿಯರ್-ಲುಕ್ ಬಂಪರ್ ಇದೆ.
ಸೆಲ್ಟೋಸ್ ಫೇಸ್ ಲಿಫ್ಟ್ ಹೊಸ ಬಣ್ಣವನ್ನು ಪಡೆದುಕೊಂಡಿದೆ. ಪ್ಯೂಟರ್ ಆಲಿವ್ – ಮತ್ತು ಇತರ ಎಂಟು ಬಣ್ಣಗಳು ಮತ್ತು ಎರಡು ಡ್ಯುಯಲ್-ಟೋನ್ ಬಣ್ಣಗಳೊಂದಿಗೆ ನೀಡಲಾಗಿದೆ. ಟರ್ಬೊ ಪೆಟ್ರೋಲ್ ಟ್ರಿಮ್ ಗಳು ಡ್ಯುಯಲ್ ಎಕ್ಸಾಸ್ಟ್ ಪಡೆದುಕೊಂಡಿದೆ. ಜಿಟಿ ಲೈನ್ ಮತ್ತು ಎಕ್ಸ್ ಲೈನ್ ಟೆಕ್ಲೈನ್ ಟ್ರಿಮ್ ಗಳಿಗಿಂತ ಸ್ವಲ್ಪ ವಿಭಿನ್ನ ಬಾಡಿ ಕಿಟ್ ಅನ್ನು ಪಡೆಯುತ್ತವೆ. ಜಿಟಿ ಲೈನ್ ಮತ್ತು ಎಕ್ಸ್-ಲೈನ್ ಟ್ರಿಮ್ ಗಳು ಕ್ಲಾಸ್ ಲೀಡಿಂಗ್ 18 ಇಂಚಿನ ಮಿಶ್ರಲೋಹಗಳ ವೀಲ್ಗಳ ಮೇಲೆ ನಿಂತಿವೆ.
ಇದನ್ನೂ ಓದಿ : Electric Scooter with Highest Range : ಒಂದು ಚಾರ್ಜ್ಗೆ ಗರಿಷ್ಠ ಕಿಲೋಮೀಟರ್ ಓಡುವ ಇವಿ ಸ್ಕೂಟರ್ಗಳಿವು
ಇಂಟೀರಿಯರ್ ಅಪ್ಡೇಟ್ ಇನ್ನೂ ಹೆಚ್ಚು ಸಮಗ್ರವಾಗಿವೆ. ಇನ್ಫೋಟೈನ್ಮೆಂಟ್ ಮತ್ತು ಇನ್ಸ್ಟ್ರುಮೆಂಟ್ ಕ್ಲಸ್ಟರ್ಗಾಗಿ ಡ್ಯುಯಲ್ 10.25-ಇಂಚಿನ ಟಚ್ ಸ್ಕ್ರಿನ್ ನೀಡಲಾಗಿದೆ. ಸೆಂಟರ್ ಕನ್ಸೋಲ್ ಅನ್ನು ತೆಳುವಾದ ಎಸಿ ವೆಂಟ್ ಗಳು ಮತ್ತು ಹೊಸ ಎಚ್ವಿಎಸಿಯೊಂದಿಗೆ ಮರುವಿನ್ಯಾಸಗೊಳಿಸಲಾಗಿದೆ. ಕ್ಯಾಬಿನ್ ಸುತ್ತಲೂ ಹೆಚ್ಚು ಸಾಫ್ಟ್-ಟಚ್ ವಸ್ತುಗಳು ಸಹ ಇವೆ.
ಅಡಾಸ್ ಫೀಚರ್
ಎಡಿಎಎಸ್ ಸೂಟ್ ಮತ್ತು ಪನೋರಮಿಕ್ ಸನ್ ರೂಫ್ ಎರಡು ದೊಡ್ಡ ಸೇರ್ಪಡೆಗಳಾಗಿವೆ. ಎಡಿಎಎಸ್ ಪ್ಯಾಕೇಜ್ ತನ್ನೊಂದಿಗೆ ಮುಂಬದಿ ಘರ್ಷಣೆ ಎಚ್ಚರಿಕೆ ಅಸಿಸ್ಟ್, ಸ್ವಯಂ ತುರ್ತು ಬ್ರೇಕಿಂಗ್ ಮತ್ತು ಲೇನ್ ಕೀಪ್ ಅಸಿಸ್ಟ್ ಅನ್ನು ನೀಡಲಾಗಿದೆ. ಆರು ಏರ್ ಬ್ಯಾಗ್ಗಳು, ಇಎಸ್ಸಿ, ಹಿಲ್-ಸ್ಟಾರ್ಟ್ ಅಸಿಸ್ಟ್, ಆಲ್-ವ್ಹೀಲ್ ಡಿಸ್ಕ್ ಬ್ರೇಕ್ಗಳು, ಮೂರು-ಪಾಯಿಂಟ್ ಸೀಟ್ ಬೆಲ್ಟ್ ಗಳು ಎಲ್ಲಾ ಟ್ರಿಮ್ ಸ್ಟಾಂಡರ್ಡ್ ಅಗಿವೆ. 360 ಡಿಗ್ರಿ ಕ್ಯಾಮೆರಾ, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, 8 ಇಂಚಿನ ಹೆಡ್-ಅಪ್ ಡಿಸ್ಪ್ಲೇ, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ರೇನ್ ಸೆನ್ಸಿಂಗ್ ವೈಪರ್ಗಳು ಮತ್ತು ಸೌಂಡ್ ಮೂಡ್ ಲ್ಯಾಂಪ್ನೊಂದಿಗೆ ಬೋಸ್ ಟ್ಯೂನ್ಡ್ 8 ಸ್ಪೀಕರ್ ಸಿಸ್ಟಮ್ ಇತರ ಗಮನಾರ್ಹ ವೈಶಿಷ್ಟ್ಯಗಳಾಗಿವೆ.
ಕಿಯಾ ಸೆಲ್ಟೋಸ್ ಫೇಸ್ ಲಿಫ್ಟ್: ಪ್ರತಿಸ್ಪರ್ಧಿಗಳು
ಸೆಲ್ಟೋಸ್ ಫೇಸ್ಲಿಫ್ಟ್ ಹ್ಯುಂಡೈ ಕ್ರೆಟಾ, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಅರ್ಬನ್ ಕ್ರೂಸರ್ ಹೈರಿಡರ್, ಎಂಜಿ ಆಸ್ಟರ್, ಫೋಕ್ಸ್ ವ್ಯಾಗನ್ ಟೈಗನ್ ಮತ್ತು ಸ್ಕೋಡಾ ಕುಶಾಕ್ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಮುಂಬರುವ ತಿಂಗಳುಗಳಲ್ಲಿ ಇದು ಮುಂಬರುವ ಹೋಂಡಾ ಎಲಿವೇಟ್ ಮತ್ತು ಸಿಟ್ರೋನ್ ಸಿ 3 ಏರ್ ಕ್ರಾಸ್ ಗಳಿಂದ ಸ್ಪರ್ಧೆಯನ್ನು ಎದುರಿಸಲಿದೆ.