ನವ ದೆಹಲಿ : ಉಗ್ರಗಾಮಿ ಸಂಘಟನೆಯಾಗಿರುವ ತಾಲಿಬಾನ್ (Taliban Rule) ಇತ್ತೀಚಿನ ದಿನಗಳಲ್ಲಿ ನಾನಾ ಕಾರಣಗಳಿಗೋಸ್ಕರ ಸದ್ದು ಮಾಡುತ್ತಿದೆ. 2021ರಲ್ಲಿ ಅಪಘಾನಿಸ್ತಾನದ ಆಡಳಿತ ಚುಕ್ಕಾಣಿ ಹಿಡಿದ ಬಳಿಕ ತನ್ನ ಮೂಲಭೂತವಾದಿ ಧೋರಣೆಯನ್ನು ಹೇರಿ ತನ್ನ ದೇಶದ ಪ್ರಜೆಗಳನ್ನು ಸಂಕಷ್ಟಕ್ಕೆ ಈಡು ಮಾಡಿರುವ ತಾಲಿಬಾನಿಗಳು ಈಗ ಹೊಸ ಆವಿಷ್ಕಾರಕ್ಕೂ ಹೊರಟಿದ್ದಾರೆ. ಅದರಲ್ಲೊಂದು ಇತ್ತೀಚೆಗೆ ಬಿಡುಗಡೆ ಮಾಡಿರುವ ಕಾರು. ಹೊಚ್ಚ ಹೊಸ ಕಾರಿನ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಟ್ಟಿದ್ದಾರೆ ತಾಲಿಬಾನಿಗಳು.
ತಾಲಿಬಾನಿಗಳು ಬಿಡುಗಡೆ ಮಾಡಿರುವುದು ಅಂತಿಂಥ ಕಾರಲ್ಲ. ಸೂಪರ್ ಕಾರು. ಲ್ಯಾಂಬೊರ್ಗಿನಿ ರೀತಿಯಲ್ಲಿ ಅತ್ಯಾಕರ್ಷಕ ನೋಟ ಹಾಗೂ ಅಷ್ಟೇ ಪವರ್ ಹೊಂದಿರುವ ಕಾರು. ಕಾರಿನ ಮಾದ 9 (Mada 9) ಎಂದು ಹೆಸರಿಸಿಟ್ಟಿದ್ದು, ಅಲ್ಲಿನ ಉನ್ನತ ಶಿಕ್ಷಣ ಸಚಿವ ಅಬ್ದುಲ್ ಬಾಖಿ ಹಕಾಕಿ ಅನಾವರಣ ಮಾಡಿದ್ದಾರೆ.
ಎಂಟೋಪ್ (ENTOP.) ಎಂಬ ಕಂಪನಿಯು ಕಾರನ್ನು ತಯಾರಿಸಿದ್ದು, 30 ಎಂಜಿನಿಯರ್ಗಳು ಕಾರಿನ ನಿರ್ಮಾಣದಲ್ಲಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಹೇಳಲಾಗಿದೆ. ಕಾರು ಈಗ ಪ್ರೊಟೊಟೈಪ್ ಸ್ಥಿತಿಯಲ್ಲಿದೆ. ಐದು ವರ್ಷಗಳ ಕಾಲ ಕೆಲಸ ಮಾಡಿ ಇದನ್ನು ನಿರ್ಮಿಸಲಿದ್ದು, ಕೆಲವೇ ದಿನಗಳಲ್ಲಿ ನಿಜವಾದ ಕಾರು ರಸ್ತೆಗೆ ಇಳಿಯಲಿದೆ ಎಂದು ತಾಲಿಬಾನ್ ಸರಕಾರ ಹೇಳಿದೆ.
ಕಾರಿಗೆ ಟೊಯೋಟಾ ಕೊರೊಲ್ಲಾದ ಎಂಜಿನ್ ಬಳಲಾಗಿದೆ. ಆದರೆ ಸೂಪರ್ ಕಾರಿನ ವೇಗಕ್ಕೆ ತಕ್ಕ ಹಾಗೆ ಮಾರ್ಪಾಟು ಮಾಡಲಾಗಿದೆ. ಅಫಘಾನಿಸ್ತಾನ ಟೆಕ್ನಿಕಲ್ ಒಕೆಶನಲ್ ಇನ್ಸ್ಟಿಟ್ಯೂಟ್ನ ಮುಖ್ಯಸ್ಥ ಗುಲಾಮ್ ಹೈದರ್ ಈ ಕುರಿತು ಮಾತನಾಡಿ, ಎಂಟೊಪ್ ಕಂಪನಿಯು ಕಾರುಗಳನ್ನು ನಿರ್ಮಿಸುವ ಬೃಹತ್ ಯೋಜನೆಯನ್ನು ಹೊಂದಿದೆ. ಅದೇ ರೀತಿ ಬ್ಯಾಟರಿ ಚಾಲಿತ ಕಾರುಗಳನ್ನೂ ನಿರ್ಮಿಸಲಿದೆ ಎಂದು ಹೇಳಿದೆ.
ಸೂಪರ್ ಕಾರುಗಳನ್ನು ಜಗತ್ತಿಗೆ ಪರಿಚಯಿಸುವ ಮೂಲಕ ಅಪಘಾನಿಸ್ತಾನದ ಮೌಲ್ಯವನ್ನು ಹೆಚ್ಚಿಸಲಿದ್ದೇವೆ. ಅಪಘಾನಿಸ್ತಾನದಲ್ಲಿರುವ ಉದ್ಯಮಿಗಳಿಗೆ ಇದರಿಂದ ಗೌರವ ಹೆಚ್ಚಲಿದೆ. ಕಾರನ್ನು ಎಂಜಿನಿಯರ್ಗಳು ಪರೀಕ್ಷೆ ಮಾಡಿದ್ದು, ಓಡಾಟಕ್ಕೆ ಅನುಕೂಲಕರವಾಗಿದೆ ಎಂದು ಅವರು ಗುಲಾಮ್ ಹೈದರ್ ಹೇಳಿದ್ದಾರೆ.
ಇದನ್ನೂ ಓದಿ | Taliban | ಅಫಘಾನಿಸ್ತಾನದಲ್ಲಿ ಹೆಣ್ಣು ಮಕ್ಕಳಿಗೆ ಆಸ್ಪತ್ರೆಯ ಚಿಕಿತ್ಸೆಯೂ ದೂರ! ತಾಲಿಬಾನ್ ಹೊಸ ನಿಯಮಕ್ಕೆ ತತ್ತರಿಸಿದ ದೇಶ