ಮುಂಬಯಿ: ಬ್ಯಾಟರಿ ಚಾಲಿತ ವಾಹನಗಳಿಗೆ ಬೆಂಕಿ ಬೀಳುತ್ತಿವೆ ಎಂಬುದು ಸದ್ಯದ ಆತಂಕ. ಹಲವಾರು ಇವಿ ಸ್ಕೂಟರ್‌ಗಳಿಗೆ ಬೆಂಕಿ ಬಿದ್ದಿರುವುದೇ ಈ ಭಯಕ್ಕೆ ಕಾರಣ. ಆದರೆ, ಇಷ್ಟವರೆಗೆ ಸ್ಕೂಟರ್‌ಗಳು ಮಾತ್ರ ಅಗ್ನಿ ಅನಾಹುತಗಳಿಗೆ ಒಳಗಾಗುತ್ತಿದ್ದ ಘಟನೆಗಳು ನಡೆಯುತ್ತಿದ್ದವು. ಆದರೆ, ಗುರುವಾರ ಟಾಟಾ ಮೋಟರ್ಸ್‌ನ TATA NEXON EV ಕಾರೊಂದಕ್ಕೆ ಬೆಂಕಿ ಬಿದ್ದಿರುವ ವಿಡಿಯೊವೊದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದೆ.
ಮಹಾರಾಷ್ಟ್ರದ ಮುಂಬಯಿ ನಗರದಲ್ಲಿ ಬೆಂಕಿ ಬಿದ್ದಿರುವ ಘಟನೆ ನಡೆದಿದೆ ಎನ್ನಲಾಗಿದೆ. ಆದರೆ, ತಾಂತ್ರಿಕ ದೋಷವೇ ಅಥವಾ ಬೇರೆ ಯಾವ ಕಾರಣಕ್ಕೆ ಬೆಂಕಿ ಬಿದ್ದಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಘಟನೆ ಬಗ್ಗೆ ಟಾಟಾ ಮೋಟಾರ್ಸ್ ತಕ್ಷಣದಲ್ಲೇ ಪ್ರತಿಕ್ರಿಯೆ ನೀಡಿದ್ದು, ತನಿಖೆ ನಡೆಸಿ ನೈಜ ವಿಷಯವನ್ನು ತಿಳಿಸವುದಾಗಿ ಪ್ರಕಟಣೆ ಹೊರಡಿಸಿದೆ.
“ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೊ ಕುರಿತು ಘಟನೆ ಕುರಿತು ವಿಸ್ತೃತ ತನಿಖೆ ನಡೆಸಲು ಆದೇಶ ಹೊರಡಿಸಲಾಗಿದೆ. ತನಿಖೆಯ ಮಾಹಿತಿಯನ್ನು ಬಹಿರಂಗ ಮಾಡಲಾಗುವುದು. ನಾವು ಇವಿ ಕಾರುಗಳ ಮಾಲೀಕರು ಹಾಗೂ ಅದರ ಬಳಕೆದಾರರ ಸುರಕ್ಷತೆ ಸಂಪೂರ್ಣವಾಗಿ ಬದ್ಧರಾಗಿದ್ದೇವೆ. ಕಳೆದ ನಾಲ್ಕು ವರ್ಷಗಳಲ್ಲಿ ನಾವು ೩೦ ಸಾವಿರಕ್ಕೂ ಅಧಿಕ ಇವಿ ಕಾರುಗಳನ್ನು ತಯಾರಿಸಿ ಬಿಡುಗಡೆ ಮಾಡಿದ್ದು, ದೇಶದಾದ್ಯಂತ ೧೦ ಲಕ್ಷ ಕಿಲೋ ಮೀಟರ್ ಒಡಾಟ ನಡೆಸಿದ್ದು, ನಮ್ಮ ಗಮನಕ್ಕೆ ಬಂದಿರುವ ಮೊದಲ ಬೆಂಕಿ ಬಿದ್ದಿರುವ ಘಟನೆಯಾಗಿದೆ,ʼʼ ಎಂದು ಹೇಳಿದರು.
ವಿಡಿಯೊದಲ್ಲಿ ಏನಿದೆ?
ಮುಂಬಯಿಯ ಪಶ್ಚಿಮ ವಾಸಿಯಲ್ಲಿ ಘಟನೆ ಟಾಟಾ ನೆಕ್ಸಾನ್ ಇವಿ ಕಾರಿಗೆ ಬೆಂಕಿ ಬಿದ್ದಿರುವುದಾಗಿ ಹೇಳಲಾಗುತ್ತಿದೆ. ಬೆಂಕಿ ಬಿದ್ದಿರುವ ಕಾರಿಗೆ ನೀರು ಸಿಂಪಡಿಸುತ್ತಿರುವ ದೃಶ್ಯಗಳೂ ಕಾಣಿಸುತ್ತಿವೆ. ಟ್ವಿಟರ್ ಬಳಕೆದಾರರು, ಎಲೆಕ್ಟ್ರಿಕ್ ಕಾರಿಗೆ ಬೆಂಕಿ ಬಿದ್ದರೆ ನೀರು ಹಾಕಿ ನಂದಿಸಲು ಯತ್ನಿಸುವುದು ಸರಿಯಲ್ಲ ಎಂಬುದಾಗಿಯೂ ಅಭಿಪ್ರಾಯಪಟ್ಟಿದ್ದಾರೆ.
ಭಾರತದ ರಸ್ತೆಗಳಲ್ಲಿ ಟಾಟಾ ಮೋಟಾರ್ಸ್, ಎಂಜಿ ಹೆಕ್ಟರ್ ಹಾಗೂ ಹ್ಯುಂಡೈ ಕಂಪನಿಯ ಇವಿ ಕಾರುಗಳು ಹೆಚ್ಚಾಗಿ ಕಾಣುತ್ತವೆ. ಇದೀಗ ಐಷಾರಾಮಿ ಕಾರು ತಯಾರಕ ಕಂಪನಿಗಳೂ ಭಾರತದಲ್ಲಿ ತನ್ನ ಇವಿ ಕಾರುಗಳನ್ನು ಮಾರುಕಟ್ಟೆಗೆ ಇಳಿಸಿದೆ. ಆದರೆ, ಟಾಟಾ ಸೇರಿದಂತೆ ಯಾವುದೇ ಕಂಪನಿಗಳ ಕಾರಿಗೆ ಬೆಂಕಿ ಹಿಡಿದ ಘಟನೆಗಳು ನಡೆದಿಲ್ಲ. ಹೀಗಾಗಿ ಗುರುವಾರ ವೈರಲ್ ಆದ ವಿಡಿಯೊ ದೊಡ್ಡ ಮಟ್ಟಿನ ಸಂಚಲನ ಸೃಷ್ಟಿಸಿದೆ. ಆದರೆ, ಜಾಗತಿಕವಾಗಿ ಎಲೆಕ್ಟ್ರಿಕ್ ಮತ್ತು ಸ್ವಯಂಚಾಲಿತ ಕಾರುಗಳ ತಯಾರಿಕೆಯಲ್ಲಿ ಬೃಹತ್ ಕಂಪನಿ ಎನಿಸಿಕೊಂಡಿರುವ ಟೆಸ್ಲಾದ ಕಾರುಗಳು ಬೆಂಕಿಗೆ ಆಹುತಿಯಾಗುವ ಹಲವು ಘಟನೆಗಳು ನಡೆದಿದೆ. ಇತ್ತೀಚೆಗೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಟೆಸ್ಲಾ ಕಾರಿಗೆ ಬೆಂಕಿ ಬಿದ್ದ ಘಟನೆ ನಡೆದಿತ್ತು. ಅಂತೆಯೇ ಕಳೆದ ಮೇನಲ್ಲಿ ಕೆನಡಾದಲ್ಲೂ ಚಲಿಸುತ್ತಿದ್ದ ಟೆಸ್ಲಾ ಕಾರು ಬೆಂಕಿ ಹಿಡಿದು ಸಂಪೂರ್ಣವಾಗಿ ಸುಟ್ಟು ಹೋಗಿತ್ತು.
೨೦೧೯ರಲ್ಲಿ ಹ್ಯುಂಡೈ ಕಂಪನಿಯ ಕೋನಾ ಕಾರು ಕೆನಡಾದ ಮಾಂಟ್ರಿಯಲ್‌ನಲ್ಲಿ ಬೆಂಕಿಗೆ ಆಹುತಿಯಾಗಿತ್ತು. ಅದಾದ ಬಳಿಕ ಚೀನಾದಲ್ಲಿ ನಿಯೊ ಕಂಪನಿಯ ಕಾರಿಗೆ ಬೆಂಕಿ ಬಿದ್ದಿತ್ತು. ಬಳಿಕ ಆ ಕಂಪನಿ ೪,೮೦೩ ಕಾರುಗಳನ್ನು ವಾಪಸ್ ಪಡೆದುಕೊಂಡಿತ್ತು.
ಸಾರ್ವಜನಿಕರೊಬ್ಬರು ಕಾರಿಗೆ ಬೆಂಕಿ ಬಿದ್ದಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
ನೆಕ್ಸಾನ್ ಸಾಮರ್ಥ್ಯವೇನು?
ಟಾಟಾದವರ ನೆಕ್ಸಾನ್ ಕಾರು ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಗೆ ದೊರೆಯುವ ಬ್ಯಾಟರಿ ಚಾಲಿತ ಎಸ್‌ಯುವಿ. ಸಾಮರ್ಥ್ಯ ಹಾಗೂ ಆಕರ್ಷಕ ನೋಟದಿಂದಾಗಿ ನೆಕ್ಸಾನ್ ಅತಿ ವೇಗದಲ್ಲಿ ಜನಪ್ರಿಯತೆ ಗಳಿಸಿದೆ. ದೇಶಿ ತಂತ್ರಜ್ಞಾನದ ಮೂಲಕ ಕಾರು ನಿರ್ಮಿಸುವ ಟಾಟಾ ನೆಕ್ಸಾನ್ ಇವಿಯನ್ನೂ ಕಡಿಮೆ ಖರ್ಚಿನಲ್ಲಿ ತಯಾರಿಸಿ ಜನರಿಗೆ ನೀಡುತ್ತಿವೆ. ಈ ಕಾರಿನಲ್ಲಿ ೩೦.೨ ಕೆ.ವಿ ಸಾಮರ್ಥ್ಯದ ಬ್ಯಾಟರಿಗಳಿವೆ.
ಇದನ್ನೂ ಓದಿ | TaTa Motors ವಾಹನಗಳ ಮಾರಾಟ ಮೇನಲ್ಲಿ 3 ಪಟ್ಟು ಹೆಚ್ಚಳ, 76,210 ಕಾರುಗಳ ಸೇಲ್ಸ್