ಬೆಂಗಳೂರು : ಕೋವಿಡ್ 19 ಸಾಂಕ್ರಾಮಿಕ ಕೊನೆಗೊಂಡ ಬಳಿಕ ಭಾರತದ ಕಾರು ಮಾರುಕಟ್ಟೆಯಲ್ಲಿ ಭರ್ಜರಿ ಸಂಚಲನ ಉಂಟಾಗಿದೆ. ಸ್ವಂತ ವಾಹನಗಳ ಬಳಕೆ ಹೆಚ್ಚಾದ ಹಿನ್ನೆಲೆಯಲ್ಲಿ ಕಾರುಗಳನ್ನು ಕೊಳ್ಳುವವರ ಸಂಖ್ಯೆ ಒಂದೇ ಸಮನೆ ಏರಿಕೆ ಕಂಡಿತು. ಮಾರುಕಟ್ಟೆಯಲ್ಲಿ ಚೈತನ್ಯ ಮೂಡಿದ ತಕ್ಷಣ ಕಾರು ತಯಾರಿಕಾ ಕಂಪನಿಗಳೂ ಅದಕ್ಕೆ ಪೂರಕವಾಗಿ ಬಗೆಬಗೆಯ ಕಾರುಗಳನ್ನು ರಸ್ತೆಗೆ ಇಳಿಸಿದವು. ಹೀಗೆ 2022ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಐದು ಬೆಸ್ಟ್ ಕಾರುಗಳ ಪಟ್ಟಿಯನ್ನು ಇಲ್ಲಿ ಕೊಡಲಾಗಿದೆ.
ಮಹೀಂದ್ರಾ ಸ್ಕಾರ್ಪಿಯೊ ಎನ್
ಭಾರತದ ಕಾರು ಮಾರುಕಟ್ಟೆಯಲ್ಲಿ ಕಳೆದ 20 ವರ್ಷಗಳಿಂದ ಒಂದೇ ತೆರನಾಗಿ ಬೇಡಿಕೆ ಉಳಿಸಿಕೊಂಡಿರುವ ಕಾರು ಮಹೀಂದ್ರಾ ಸ್ಕಾರ್ಪಿಯೊ. ಸಿಟಿಯ ಗಲ್ಲಿಯಲ್ಲಿ, ಕೆಟ್ಟ ರಸ್ತೆಗಳಲ್ಲಿ ಹಾಗೂ ಬೆಟ್ಟ ಗುಡ್ಡಗಳ ಪ್ರದೇಶದಲ್ಲೂ ಸ್ಕಾರ್ಪಿಯೊ ಕಾರನ್ನು ನೋಡಿದ್ದೇವೆ. ಈ ಜನಪ್ರಿಯ ಕಾರಿನ ಸುಧಾರಿತ ಆವೃತ್ತಿ ಸ್ಕಾರ್ಪಿಯೊ-ಎನ್ ಈ ವರ್ಷ ಬಿಡುಗಡೆಗೊಂಡಿದೆ.
ಈ ಹಿಂದಿನ ಸ್ಕಾರ್ಪಿಯೊಗಿಂತ ಭಿನ್ನ ಪ್ಲಾಟ್ಫಾರ್ಮ್ನಲ್ಲಿ ಬಿಡುಗಡೆಯಾಗಿರುವ ಸ್ಕಾರ್ಪಿಯೊ ಎನ್, ರಗಡ್ ಲುಕ್ ಅನ್ನು ಹಾಗೆಯೇ ಉಳಿಸಿಕೊಂಡಿದೆ. ಜತೆಗೆ ಇನ್ನೂ ಹೆಚ್ಚು ಐಷಾರಾಮಿ ನೋಟವನ್ನು ನೀಡುತ್ತಾ ಮಾರುಕಟ್ಟೆಗೆ ಪ್ರವೇಶ ಪಡೆದಿದೆ. ಇದರಲ್ಲಿ ಪರ್ಫಾಮೆನ್ಸ್ ಆಧಾರಿತ ಎಂಜಿನ್ ಆಯ್ಕೆ ನೀಡಲಾಗಿದ್ದು, 200 ಬಿಎಚ್ಪಿ ಪವರ್ ನೀಡುವ ಪೆಟ್ರೋಲ್ ಹಾಗೂ 130 ಮತ್ತು 172 ಬಿಎಚ್ಪಿ ಪವರ್ ಕೊಡುವ ಡೀಸೆಲ್ ಎಂಜಿನ್ಗಳನ್ನು ನೀಡಲಾಗಿದೆ. ಹೊಸ ಫೀಚರ್ಗಳಿಂದಲೂ ಈ ಕಾರು ಸಾಕಷ್ಟು ಜನಪ್ರಿಯತೆ ಗಳಿಸಿದೆ.
ಮಾರುತಿ ಸುಜುಕಿ ಗ್ರಾಂಡ್ ವಿಟಾರ
ಭಾರತದ ಎಲ್ಲ ಕಾರು ಕಂಪನಿಗಳು ಮಿಡ್ ಸೈಜ್ ಎಸ್ಯುವಿ ಕಾರುಗಳನ್ನು ಮಾರುಕಟ್ಟೆಗೆ ಬಿಟ್ಟ ಹೊರತಾಗಿಯೂ ಜನಪ್ರಿಯ ಬ್ರಾಂಡ್ ಮಾರುತಿ ಆ ಕಡೆಗೆ ಗಮನ ಹರಿಸಿರಲಿಲ್ಲ. ಅದರ ಕೊರತೆ ಅವರ ಮಾರಾಟದ ಮೇಲೆ ಪರಿಣಾಮ ಬೀರಿದ ಹಿನ್ನೆಲೆಯಲ್ಲಿ ಗ್ರಾಂಡ್ ವಿಟಾರವನ್ನು ರಸ್ತೆಗಿಳಿಸಿದೆ. ಇದರಲ್ಲಿ ಆಲ್ ವೀಲ್ ಡ್ರೈವ್ (ಎಡಬ್ಲ್ಯುಡಿ) ಆಯ್ಕೆಯೂ ಇರುವುದರಿಂದ ಗ್ರಾಹಕರನ್ನು ಬೇಗನೆ ಸೆಳೆಯಿತು. ಇದು ಟೊಯೋಟಾ ಹೈರೈಡರ್ನ ಪ್ಲಾಟ್ಫಾರ್ಮ್ ಅನ್ನು ಹಂಚಿಕೊಂಡಿದೆ. ಇದರಲ್ಲಿ ಹೈಬ್ರಿಡ್ ಎಂಜಿನ್ ಆಯ್ಕೆಯನ್ನೂ ನೀಡಲಾಗಿದ್ದು, ಗಮನಾರ್ಹ ಮೈಲೇಜ್ ನೀಡುತ್ತದೆ. ಆಲ್ವೀಲ್ ಡ್ರೈವ್ ಹಾಗೂ ಇದರ ಮೈಲೇಜ್ ಸುಲಭದಲ್ಲಿ ಗಮನ ಸೆಳೆಯುತ್ತಿದೆ.
ಮಹೀಂದ್ರಾ ಎಕ್ಸ್ಯುವಿ 300 ಟರ್ಬೊಸ್ಪೋರ್ಟ್ಸ್
ಪವರ್ಫುಲ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹೀಂದ್ರಾ ಕಂಪನಿಯು ತನ್ನ ಎಕ್ಸ್ಯುವಿ 300 ಕಾರಿನಲ್ಲಿ ಟರ್ಬೊಚಾರ್ಜರ್ ಅನ್ನು ಬಳಸಿ ಇನ್ನಷ್ಟು ಶಕ್ತಿಶಾಲಿಯನ್ನಾಗಿ ಮಾಡಿತು. ಹೀಗಾಗಿ ಪ್ರತಿಸ್ಪರ್ಧಿ ಕಂಪನಿಗಳ 4 ಮೀಟರ್ ಎಸ್ಯುವಿ ಕಾರುಗಳಿಗಿಂತ ಹೆಚ್ಚು ಪವರ್ಪುಲ್ ಆಗಿದೆ. ಉಳಿದ ಕಾರುಗಳೆಲ್ಲವೂ 110 ಬಿಎಚ್ಪಿ ಆಸುಪಾಸಿನಲ್ಲಿ ಇರುವಾಗ ಹೊಸ ಟರ್ಬೊಚಾರ್ಜರ್ ಹೊಂದಿರುವ ಎಕ್ಸ್ಯುವಿ 129 ಬಿಎಚ್ಪಿ ಪವರ್ ಬಿಡುಗಡೆ ಮಾಡುತ್ತಿದೆ.
ಕಾರಿನಲ್ಲಿ ಹಿಂದಿನ 1.2 ಲೀಟರ್ ಎಂಜಿನ್ ಅನ್ನು ಬಳಸಿದ್ದರೂ, ಟರ್ಬೊಚಾರ್ಜರ್ ಇನ್ನಷ್ಟು ಪವರ್ ಉತ್ಪಾದನೆ ಮಾಡಲು ಅನುಕೂಲ ಮಾಡಿಕೊಟ್ಟಿದೆ. ಇದರಿಂದಾಗಿ ಈ ಸೆಗ್ಮೆಂಟ್ನ ಅತ್ಯಂತ ಪವರ್ಫುಲ್ ಕಾರು ಎನಿಸಿಕೊಂಡಿದೆ.
ಕಿಯಾ ಇವಿ6
ದಕ್ಷಿಣ ಕೊರಿಯಾದ ಬ್ರಾಂಡ್ ಕಿಯಾ ಭಾರತದಲ್ಲಿ ಮೊದಲು ಬಿಡುಗಡೆ ಮಾಡಿರುವ ಕಾರು ಸೆಲ್ಟೋಸ್. ಅದು ಕನಿಷ್ಠ ಅವಧಿಯಲ್ಲಿ ಗರಿಷ್ಠ ಜನಪ್ರಿಯತೆ ಪಡೆದುಕೊಂಡಿತು. ಅದರ ಬಳಿಕ ಸೋನೆಟ್ ಹಾಗೂ ಕರೆನ್ಸ್ ಬಂತು. ಎರಡೂ ಜನಮನದಲ್ಲಿ ಛಾಪು ಮೂಡಿಸಿದೆ. ಇವೆಲ್ಲದರ ನಡುವೆ ಕಿಯಾ ಭಾರತದಲ್ಲಿ ಬ್ಯಾಟರಿ ಚಾಲಿತ ಕಾರು ಕಿಯಾ ಇವಿ6 ಬಿಡುಗಡೆ ಮಾಡಿದೆ. ಇದರಲ್ಲಿ 77.4 ಕಿಲೋ ವ್ಯಾಟ್ನ ಬ್ಯಾಟರಿ ಪ್ಯಾಕ್ ಇದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 528 ಕಿಲೋ ಮೀಟರ್ ಚಲಿಸುತ್ತದೆ. ಇದು ಸೊನ್ನೆಯಿಂದ 100 ಕಿ. ಮೀ ವೇಗ ಪಡೆಯಲು ಕೇವಲ 5.2 ಸೆಕೆಂಡುಗಳನ್ನು ಮಾತ್ರ ತೆಗೆದುಕೊಳ್ಳುತ್ತದೆ. ಮೊದಲ ಬಾರಿಗೆ 100 ಇವಿ 6 ಕಾರನ್ನು ಕಿಯಾ ತಯಾರಿಸಿತ್ತು. ಬಿಡುಗಡೆಯಾದ ದಿನವೇ ಅದು ಸೋಲ್ಡ್ ಔಟ್ ಆಯಿತು. ಈಗ ಇನ್ನಷ್ಟು ಕಾರುಗಳನ್ನು ತಯಾರಿಸಲು ಮುಂದಾಗಿದೆ.
ಟಾಟಾ ಟಿಯಾಗೊ ಇವಿ
ಭಾರತದ ಗ್ರಾಹಕರಿಗೆ ಬಜೆಟ್ ಕಾರುಗಳನ್ನು ನೀಡುವ ಮೂಲಕ ಜನಪ್ರಿಯತೆ ಪಡೆದ ಟಾಟಾ ಮೋಟಾರ್ಸ್ ಪ್ರಸ್ತುತ ಇವಿ ಮಾರುಕಟ್ಟೆಯಲ್ಲಿನ ಅಗ್ರಗಣ್ಯ. ಕಡಿಮೆ ಬೆಲೆಗೆ ನೆಕ್ಸಾನ್ ಇವಿಯನ್ನು ನೀಡುವ ಮೂಲಕ ಕ್ರಾಂತಿ ಮಾಡಿತು. ಇದೀಗ ತನ್ನ ಇನ್ನೊಂದು ಬಜೆಟ್ ಕಾರಾದ ಟಿಯಾಗೊವನ್ನು ಕೂಡ ಇವಿ ಮಾದರಿಯಲ್ಲಿ ಬಿಡುಗಡೆ ಮಾಡಿದೆ. ಅದರ ಬೆಲೆ 8.49 ಲಕ್ಷ ರೂಪಾಯಿಯಿಂದ ಆರಂಭವಾಗುತ್ತದೆ. ಇದರಲ್ಲಿ 19.2 ಹಾಗೂ 24 ಕಿಲೋ ವ್ಯಾಟ್ನ ಎರಡು ಬ್ಯಾಟರಿ ಆಯ್ಕೆಗಳಿವೆ. ಇದು ಈಗ ಕಡಿಮೆ ಬೆಲೆಗೆ ದೊರೆಯುವ ಉತ್ತಮ ಎಲೆಕ್ಟ್ರಾನಿಕ್ ಕಾರು. ಈ ಕಾರಿಗೆ ಪ್ರತಿಸ್ಪರ್ಧಿಗಳೇ ಇಲ್ಲ
ಇದನ್ನೂ ಓದಿ | Royal Enfield | ಟ್ಯೂಬ್‌ಲೆಸ್ ಸ್ಪೋಕ್ಡ್ ರಿಮ್‌ನೊಂದಿಗೆ ಬರಲಿದೆ ಹಿಮಾಲಯನ್ 450