ನವದೆಹಲಿ: ದೇಶದಲ್ಲಿ ದ್ವಿಚಕ್ರ ವಾಹನಗಳ ಬೇಡಿಕೆ ಒಮ್ಮಿಂದೊಮ್ಮೆಗೇ ಹೆಚ್ಚಿದೆ. ಕಳೆದ 10 ತಿಂಗಳಲ್ಲಿ ನಾನಾ ಕಾರಣಗಳಿಗಾಗಿ ನಿಧಾನ ಗತಿಯಲ್ಲಿದ್ದ ಟೂವೀಲರ್ ಮಾರಾಟ ಏಪ್ರಿಲ್ ತಿಂಗಳಲ್ಲಿ ವೇಗವನ್ನು ಪಡೆದುಕೊಂಡಿದೆ. ಹೀಗಾಗಿ ಉದ್ಯಮದಲ್ಲಿ ಸಂಭ್ರಮ ಕಾಣಿಸಿಕೊಂಡಿದೆ. ಗ್ರಾಮೀಣ ಭಾಗದಲ್ಲಿ ದ್ವಿಚಕ್ರ ವಾಹನ ಖರೀದಿ ಕಡಿಮೆಯಾಗಿದ್ದರಿಂದ ಮಾರಾಟಕ್ಕೆ ಹಿನ್ನಡೆಯಾಗಿತ್ತು. ಈಗ ಕೊರೊನಾ ಕಡಿಮೆಯಾದ ಬಳಿಕ ಗ್ರಾಮೀಣ ಮಾರ್ಕೆಟ್ ತೆರೆದುಕೊಳ್ಳುತ್ತಿರುವುದು ದ್ವಿಚಕ್ರ ವಾಹನಗಳ ಡಿಮ್ಯಾಂಡ್ ಹೆಚ್ಚಲು ಮುಖ್ಯ ಕಾರಣ ಎಂದು ಉದ್ಯಮದ ಮೂಲಗಳು ಹೇಳಿವೆ.
ಯಾರಿಗೆ ದೊಡ್ಡ ಗೆಲುವು?
ಬೇಡಿಕೆ ಹೆಚ್ಚಿಸಿಕೊಂಡಿರುವ ಮಾರುಕಟ್ಟೆಯಲ್ಲಿ ಯಾರಿಗೆ ಹೆಚ್ಚು ಲಾಭವಾಗಿದೆ ಎನ್ನುವುದು ಕುತೂಹಲಕಾರಿ ಸಂಗತಿ.
ಟೂ ವೀಲರ್ ಮಾರ್ಕೆಟ್‌ನ ಲೀಡರ್ ಎಂದೇ ಗುರುತಿಸಲಾಗಿರುವ ಹೀರೊ ಮೋಟಾರ್ ಕಾರ್ಪ್ ಸಂಸ್ಥೆ 2021ರ ಏಪ್ರಿಲ್‌ನಲ್ಲಿ 342490 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ್ದರೆ ಈ ಏಪ್ರಿಲ್‌ನಲ್ಲಿ ಅದು 398490ಕ್ಕೇರಿದೆ. ಅಂದರೆ ಶೇಕಡಾ 16ರಷ್ಟು ಹೆಚ್ಚಳ ಕಂಡಿದೆ.
ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಮಾರ್ಕೆಟ್ ಈ ಬಾರಿ ಶೇಕಡಾ 33ರಷ್ಟು ವಿಸ್ತರಣೆಯಾಗಿದೆ. ಕಳೆದ ವರ್ಷದ ಏಪ್ರಿಲ್‌ನಲ್ಲಿ 240122 ಯುನಿಟ್ ಮಾರಾಟವಾಗಿದ್ದರೆ ಈ ಬಾರಿ ಅದು 318732 ವಾಹನಗಳು ಮಾರಾಟವಾಗಿವೆ.
ಇದನ್ನೂ ಓದಿ I ಮಾರುಕಟ್ಟೆಗೆ ಬರಲಿದೆ ಟಾಟಾ ‘ಅವಿನ್ಯ’ EV
ಅತಿ ಹೆಚ್ಚು ಲಾಭ ಟಿವಿಎಸ್‌ಗೆ
ಶೇಕಡಾವಾರು ಲೆಕ್ಕಾಚಾರ ನೋಡಿದರೆ ಅತಿ ಹೆಚ್ಚು ಲಾಭ ಆಗಿರುವುದು ತಮಿಳುನಾಡು ಮೂಲದ ಟಿವಿಎಸ್ ಮೋಟಾರ್ ಕಂಪನಿಗೆ. ಅದು ಶೇ. 37ರಷ್ಟು ವ್ಯಾಪಾರ ಪ್ರಗತಿ ಕಂಡಿದೆ. ಕಳೆದ ವರ್ಷ 131386 ದ್ವಿಚಕ್ರ ವಾಹನ ಮಾರಾಟವಾಗಿದ್ದರೆ ಈ ವರ್ಷ ಅದು 18೦533 ಆಗಿದೆ. ವಿಶೇಷವೆಂದರೆ ಟಿವಿಎಸ್ ವಾಹನಗಳ ಬೇಡಿಕೆ ಕಳೆದ ಸೆಪ್ಟೆಂಬರ್‌ವರೆಗೂ ಒಂದು ಹದದಲ್ಲೇ ಇತ್ತು. ಬಳಿಕ ಸ್ವಲ್ಪ ಕಳೆಗುಂದಿದ್ದು, ಈ ಏಪ್ರಿಲ್‌ನಲ್ಲಿ ಮತ್ತೆ ಚೇತರಿಸಿಕೊಂಡಿದೆ. ರಾಯಲ್ ಎನ್‌ಫೀಲ್ಡ್ ತನ್ನ ಮಾರಾಟ ಸಂಖ್ಯೆಯನ್ನು 48789ರಿಂದ 53852ಕ್ಕೇರಿಸಿಕೊಂಡಿದೆ.
ಕೆಲವು ಕಂಪನಿಗಳಿಗೆ ಹಿನ್ನಡೆ
ದ್ವಿಚಕ್ರ ವಾಹನಗಳ ಮಾರಾಟ ಒಟ್ಟಾರೆಯಾಗಿ ಹೆಚ್ಚಾಗಿದ್ದರೂ ಬಜಾಜ್ ಕಂಪನಿಯ ಪಲ್ಸರ್, ಸುಝುಕಿ ಕಂಪನಿಯ ಸ್ಕೂಟರ್‌ಗಳ ಮಾರಾಟ ಕಡಿಮೆಯಾಗಿದೆ. ಪಲ್ಸರ್ ಮಾರಾಟ ಕಳೆದ ವರ್ಷದ ಏಪ್ರಿಲ್ (126570)ಗೆ ಹೋಲಿಸಿದರೆ, ಈ ವರ್ಷ ಕಡಿಮೆ (93233) ಆಗಿದೆ. ಶೇ. ೨೬ರಷ್ಟು ಕುಸಿತ ಕಂಪನಿಗೆ ಆಘಾತ ನೀಡಿದೆ. ಸುಝುಕಿ ವಾಹನಗಳು ಶೇಕಡಾ ೧೫ರಷ್ಟು ಮಾರಾಟ ಕುಸಿತ ಕಂಡಿವೆ.
ಮುಂದುವರಿದ ಸಂಕಷ್ಟದ ಸ್ಥಿತಿ
ಸಮಗ್ರವಾಗಿ ನೋಡಿದರೆ ಮಾರಾಟ ಹೆಚ್ಚಿದ್ದರೂ ದ್ವಿಚಕ್ರ ವಾಹನಗಳ ಉದ್ಯಮದ ಸವಾಲು ತೀವ್ರಗೊಳ್ಳುತ್ತಲೇ ಇದೆ. ಕೊರೊನಾ ಮತ್ತು ಸೆಮಿ ಕಂಡಕ್ಟರ್‌ಗಳ ಕೊರತೆ ಹಲವು ರೀತಿಯ ಹೊಡೆತಗಳನ್ನು ನೀಡುತ್ತಲೇ ಇದೆ.
ಬೇಡಿಕೆ ಕೊರತೆಯೊಂದೇ ಕಾರಣವಲ್ಲ
ಕೊರೊನಾ ಮತ್ತಿತರ ಕಾರಣಕ್ಕೆ ಸ್ವಲ್ಪ ಮಟ್ಟಿಗೆ ಟೂ ವೀಲರ್‌ಗಳ ಡಿಮ್ಯಾಂಡ್ ಕಡಿಮೆಯಾಗಿದೆ ಎನ್ನುವುದು ನಿಜವೇ ಆದರೂ ಕೆಲವೊಂದು ಕಂಪನಿಗಳು ಬೇಡಿಕೆಯಷ್ಟು ಪ್ರಮಾಣದ ದ್ವಿಚಕ್ರ ಪೂರೈಸಲು ಸಾಧ್ಯವಾಗದೆ ಹಿನ್ನಡೆಯಾಗಿದೆ ಎಂದು ಟಿವಿಎಸ್ ಮತ್ತು ಎನ್‌ಫೀಲ್ಡ್ ಕಂಪನಿಗಳು ಹೇಳಿಕೊಂಡಿವೆ. ಅವುಗಳನ್ನು ಪ್ರಮುಖವಾಗಿ ಕಾಡಿದ್ದು ಸೆಮಿ ಕಂಡಕ್ಟರ್‌ಗಳ ಕೊರತೆ. ಈ ನಡುವೆ, ಇನ್ನೊಂದು ಮೂಲದ ಪ್ರಕಾರ, ದ್ವಿಚಕ್ರ ವಾಹನಗಳ ಬೆಲೆ ವಿಪರೀತ ಏರಿದ್ದರಿಂದ ಜನರು ಖರೀದಿಗೆ ಯೋಚನೆ ಮಾಡುತ್ತಿರುವುದು ಹಿನ್ನಡೆಗೆ ಇರುವ ಕಾರಣಗಳಲ್ಲಿ ಒಂದು.