ಮುಂಬಯಿ : ಇಂಡಿಯನ್ ಪ್ರೀಮಿಯರ್ ಲೀಗ್ನ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಮಾಲೀಕ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ. ಅವರು ವಾಸವಿರುವ ಮನೆ ಅಂಟಿಲ್ಲಾ ದೇಶದ ಅತ್ಯಂತ ದುಬಾರಿ ಮನೆಯೂ ಹೌದು. ಮುಕೇಶ್ ಅವರ ಕುಟುಂಬದ ಸದಸ್ಯರು ಕಾರುಗಳ ಬಗ್ಗೆಯೂ ಅತೀವ ಮೋಹ ಹೊಂದಿರುವುದು ಗೊತ್ತಿರುವ ಸಂಗತಿ. ಹೀಗಾಗಿ ಅವರು ಪ್ರಯಾಣಿಸುವ ಕಾರುಗಳ ಬಗ್ಗೆ ಒಂದಿಷ್ಟು ಕುತೂಹಲಗಳು ಇರುತ್ತವೆ. ಇದೀಗ ಅಂಬಾನಿ ಮನೆಯ ವಾಹನಗಳ ಪಾರ್ಕಿಂಗ್ ಏರಿಯಾದ ವಿಡಿಯೊವೊಂದು ವೈರಲ್ ಆಗಿದೆ. ಅದರಲ್ಲಿ ಹಲವಾರು ಐಷಾರಾಮಿ ಕಾರುಗಳು ನಿಂತಿರುವುದು ಕಂಡು ಬಂದಿದೆ.
ವಿಡಿಯೊ ತುಣುಕು ಕೆಲವು ವರ್ಷಗಳ ಹಿಂದಿನದು ಎಂದು ಹೇಳಲಾಗಿದೆ. ನೆಟ್ಫ್ಲಿಕ್ಸ್ನ ವೆಬ್ ಸರಣಿ “ಕ್ರಿಕೆಟ್ ಫೀವರ್ನಲ್ಲಿ ಕಾಣಿಸಿಕೊಂಡಿದ್ದು ಎನ್ನಲಾಗಿದೆ. ಅದರಲ್ಲಿ ಅತ್ಯಂತ ವಿಭಿನ್ನ ಕಾರುಗಳು ತಂಗಿರುವುದು ಕಂಡು ಬಂದಿದೆ. ಆಂಟಿಲ್ಲಾ ಸಂಗ್ರಹದಲ್ಲಿರುವ ಕಾರುಗಳ ನಿಖರ ಸಂಖ್ಯೆ ತಿಳಿದಿಲ್ಲವಾದರೂ, 200 ವಾಹನಗಳು ಇರಬಹುದು ಎಂದು ಹೇಳಲಾಗಿದೆ.
ಅಂಬಾನಿ ಗ್ಯಾರೇಜ್ನಲ್ಲಿ, ಬೆಂಟ್ಲೆ ಬೆಂಟೈಗಾ, ಮರ್ಸಿಡಿಸ್-ಬೆಂಝ್ ಇ-ಕ್ಲಾಸ್, ಮರ್ಸಿಡಿಸ್-ಎಎಂಜಿ ಜಿ 63, ಬಿಳಿ ಬಣ್ಣದ ಬೆಂಟ್ಲೆ ಮುಲ್ಸಾನ್, ಲ್ಯಾಂಡ್ ರೋವರ್ ರೇಂಜ್ ರೋವರ್, ರೋಲ್ಸ್ ರಾಯ್ಸ್ ಫ್ಯಾಂಟಮ್ ಡ್ರಾಪ್ಹೆಡ್ ಕೂಪ್, ಪೋರ್ಶೆ ಕೇಯೆನ್, ಮತ್ತೊಂದು ರೇಂಜ್ ರೋವರ್ ಮತ್ತು ಇತರ ಹಲವಾರು ಕಾರುಗಳನ್ನು ಕಾಣಬಹುದು.
ಅಂಬಾನಿ ಬುಲೆಟ್ ಪ್ರೂಫ್ ವಾಹನಗಳು
ಸಾಮಾನ್ಯವಾಗಿ ಬುಲೆಟ್ ಪ್ರೂಫ್ ವಾಹನಗಳನ್ನು ಪ್ರಯಾಣಕ್ಕಾಗಿ ಬಳಸುವ ಮುಖೇಶ್ ಅಂಬಾನಿ ತಮ್ಮ ಮೂರನೇ ಮರ್ಸಿಡಿಸ್ ಬೆಂಝ್ ಎಸ್-ಗಾರ್ಡ್ ಅನ್ನು ಖರೀದಿಸಿದ್ದಾರೆ. ಇದು ಇಲ್ಲಿಯವರೆಗೆ ಅವರ ಅತ್ಯಂತ ದುಬಾರಿ ಬುಲೆಟ್ ಪ್ರೂಫ್ ವಾಹನವಾಗಿದೆ. ಕಾರನ್ನು ಕೆಲವು ವರ್ಷಗಳ ಹಿಂದೆ ಆರ್ಡರ್ ಮಾಡಲಾಗಿತ್ತು. ಇದೀಗ ಕೆಲವು ತಿಂಗಳ ಹಿಂದೆ ಅವರಿಗೆ ಡೆಲಿವರಿ ಸಿಕ್ಕಿದೆ.
ಅಂಬಾನಿ ಕುಟುಂಬವು ಭಾರತದಲ್ಲಿ ಝಡ್ ಪ್ಲಸ್ ಶ್ರೇಣಿಯ ರಕ್ಷಣೆಯನ್ನು ಪಡೆಯುತ್ತದೆ. ಐಷಾರಾಮಿ ಕಾರುಗಳ ವ್ಯಾಪಕ ಸಂಗ್ರಹ ಹಾಗೂ ಅವರು ಪ್ರಯಾಣಿಸುವ ವೇಳೆ ರಸ್ತೆಗಳಲ್ಲಿ ಆ ಕಾರುಗಳ ಗಮನ ಸೆಳೆಯುತ್ತದೆ. ಅಂಬಾನಿ ಕುಟುಂಬದ ಪ್ರತಿಯೊಬ್ಬ ಸದಸ್ಯರು ವೈಯಕ್ತಿಕ ಗಾರ್ಡ್ಗಳು ಮತ್ತು ಸಿಐಎಸ್ಎಫ್ ಸಿಬ್ಬಂದಿಯ ಮೀಸಲಾದ ತಂಡದೊಂದಿಗೆ ಪ್ರಯಾಣಿಸುತ್ತಾರೆ.
ಯಶಸ್ವಿ ವ್ಯಾಪಾರಿಗಳ ಕುಟುಂಬಗಳು ಪ್ರತ್ಯೇಕ ವಾಹನಗಳಲ್ಲಿ ಪ್ರಯಾಣಿಸುವುದು ವಿಶ್ವಾದ್ಯಂತ ಅನುಸರಿಸುವ ಸಾಮಾನ್ಯ ಅಭ್ಯಾಸವಾಗಿದೆ. ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆದ ಸಂದರ್ಭದಲ್ಲಿ, ಇತರರು ಸುರಕ್ಷಿತವಾಗಿ ಉಳಿಯಬಹುದು ಎಂಬುದೇ ಇದರ ಉದ್ದೇ. ಜಾಗತಿಕವಾಗಿ ಇದೇ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತದೆ. ಕೆಲವು ದೇಶಗಳಲ್ಲಿ ಗಣ್ಯರ ಕುಟುಂಬದವರೆಲ್ಲರಿಗೂ ಒಂದೇ ವಾಹನದಲ್ಲಿ ಅಥವಾ ಒಂದೇ ವಿಮಾನದಲ್ಲಿ ಒಟ್ಟಿಗೆ ಪ್ರಯಾಣಿಸಲು ಅನುಮತಿ ಸಿಗುವುದಿಲ್ಲ.
ಇದನ್ನೂ ಓದಿ : Mukesh Ambani | ಅರ್ಸೆನಲ್ ಫುಟ್ಬಾಲ್ ಕ್ಲಬ್ ಖರೀದಿಸಲು ಮುಂದಾದ ಮುಕೇಶ್ ಅಂಬಾನಿ!
ಅಂಬಾನಿ ಕುಟುಂಬವು ಬೆಂಟ್ಲಿ ಬ್ರಾಂಡ್ ಬಗ್ಗೆ ಅಪಾರ ಒಲವು ಹೊಂದಿದೆ. ಇತ್ತೀಚೆಗೆ ಕಾಂಟಿನೆಂಟಲ್ ಜಿಟಿಸಿ ಸ್ಪೀಡ್ ಕಾರನ್ನು ಖರೀದಿಸಿದ್ದಾರೆ. ಇದನ್ನು ಅನಂತ್ ಅಂಬಾನಿಗಾಗಿ ಖರೀದಿಸಲಾಗಿದೆ. ಇದರೊಂದಿಗೆ, ಅವರು ಪ್ರತಿಷ್ಠಿತ ಡಬ್ಲ್ಯು 12 ಮಾದರಿ ಸೇರಿದಂತೆ ನಾಲ್ಕು ವಿಭಿನ್ನ ಬೆಂಟೈಗಾ ಎಸ್ ಯುವಿಗಳನ್ನು ಹೊಂದಿದ್ದಾರೆ. ವಿಶೇಷವೆಂದರೆ, ಅಂಬಾನಿ ಕುಟುಂಭ ಭಾರತದಲ್ಲಿ ಬೆಂಟೈಗಾ ಎಸ್ ಯುವಿಯ ಆರಂಭಿಕ ಖರೀದಿದಾರರು. ಇದರ ಡ್ಯಾಶ್ ಬೋರ್ಡ್ ನಲ್ಲಿ ಲಕ್ಷಾಂತರ ರೂಪಾಯಿ ಲಕ್ಷ ಮೌಲ್ಯದ ಐಷಾರಾಮಿ ಮುಲ್ಲಿನರ್ ಗಡಿಯಾರವಿದೆ.
ಬೆಂಟೈಗಾಸ್ ಜೊತೆಗೆ, ಅಂಬಾನಿ ಕುಟುಂಬವು ಫ್ಲೈಯಿಂಗ್ ಸ್ಪರ್, ಕಾಂಟಿನೆಂಟಲ್ ಜಿಟಿ ಮತ್ತು ಮುಲ್ಸಾನ್ ಕಾರನ್ನು ಹೊಂದಿದೆ. ರೋಲ್ಸ್ ರಾಯ್ಸ್, ಲ್ಯಾಂಬೊರ್ಗಿನಿ, ಮರ್ಸಿಡಿಸ್-ಬೆಂಝ್, ಬಿಎಂಡಬ್ಲ್ಯು, ಲ್ಯಾಂಡ್ ರೋವರ್ ಮತ್ತು ಫೆರಾರಿಯಂತಹ ಜನಪ್ರಿಯ ಕಂಪನಿಗಳ ಕಾರುಗಳೂ ಇವೆ. ಮುಂಬೈನ ಗದ್ದಲದ ಬೀದಿಗಳಲ್ಲಿ, ಮುಖೇಶ್ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ಕುಟುಂಬ ಸದಸ್ಯರು ಐಷಾರಾಮಿ ಕಾರುಗಳಲ್ಲಿ ಪ್ರಯಾಣ ಮಾಡುತ್ತಾರೆ.