ಆಟೋಮೊಬೈಲ್
Mukesh Ambani : ಅಂಬಾನಿ ಮನೆಯ ಗ್ಯಾರೇಜ್ನ ವಿಡಿಯೊ ವೈರಲ್, ಎಷ್ಟೊಂದು ಕಾರುಗಳಿವೆ ನೋಡಿ
ಮುಕೇಶ್ ಅಂಬಾನಿಯ (Mukesh Ambani) ಮನೆಯಲ್ಲಿ 200ಕ್ಕೂ ಅಧಿಕ ಕಾರುಗಳು ಇರಬಹುದು ಎಂದು ಮೂಲಗಳು ತಿಳಿಸಿವೆ.
ಮುಂಬಯಿ : ಇಂಡಿಯನ್ ಪ್ರೀಮಿಯರ್ ಲೀಗ್ನ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಮಾಲೀಕ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ. ಅವರು ವಾಸವಿರುವ ಮನೆ ಅಂಟಿಲ್ಲಾ ದೇಶದ ಅತ್ಯಂತ ದುಬಾರಿ ಮನೆಯೂ ಹೌದು. ಮುಕೇಶ್ ಅವರ ಕುಟುಂಬದ ಸದಸ್ಯರು ಕಾರುಗಳ ಬಗ್ಗೆಯೂ ಅತೀವ ಮೋಹ ಹೊಂದಿರುವುದು ಗೊತ್ತಿರುವ ಸಂಗತಿ. ಹೀಗಾಗಿ ಅವರು ಪ್ರಯಾಣಿಸುವ ಕಾರುಗಳ ಬಗ್ಗೆ ಒಂದಿಷ್ಟು ಕುತೂಹಲಗಳು ಇರುತ್ತವೆ. ಇದೀಗ ಅಂಬಾನಿ ಮನೆಯ ವಾಹನಗಳ ಪಾರ್ಕಿಂಗ್ ಏರಿಯಾದ ವಿಡಿಯೊವೊಂದು ವೈರಲ್ ಆಗಿದೆ. ಅದರಲ್ಲಿ ಹಲವಾರು ಐಷಾರಾಮಿ ಕಾರುಗಳು ನಿಂತಿರುವುದು ಕಂಡು ಬಂದಿದೆ.
ವಿಡಿಯೊ ತುಣುಕು ಕೆಲವು ವರ್ಷಗಳ ಹಿಂದಿನದು ಎಂದು ಹೇಳಲಾಗಿದೆ. ನೆಟ್ಫ್ಲಿಕ್ಸ್ನ ವೆಬ್ ಸರಣಿ “ಕ್ರಿಕೆಟ್ ಫೀವರ್ನಲ್ಲಿ ಕಾಣಿಸಿಕೊಂಡಿದ್ದು ಎನ್ನಲಾಗಿದೆ. ಅದರಲ್ಲಿ ಅತ್ಯಂತ ವಿಭಿನ್ನ ಕಾರುಗಳು ತಂಗಿರುವುದು ಕಂಡು ಬಂದಿದೆ. ಆಂಟಿಲ್ಲಾ ಸಂಗ್ರಹದಲ್ಲಿರುವ ಕಾರುಗಳ ನಿಖರ ಸಂಖ್ಯೆ ತಿಳಿದಿಲ್ಲವಾದರೂ, 200 ವಾಹನಗಳು ಇರಬಹುದು ಎಂದು ಹೇಳಲಾಗಿದೆ.
ಅಂಬಾನಿ ಗ್ಯಾರೇಜ್ನಲ್ಲಿ, ಬೆಂಟ್ಲೆ ಬೆಂಟೈಗಾ, ಮರ್ಸಿಡಿಸ್-ಬೆಂಝ್ ಇ-ಕ್ಲಾಸ್, ಮರ್ಸಿಡಿಸ್-ಎಎಂಜಿ ಜಿ 63, ಬಿಳಿ ಬಣ್ಣದ ಬೆಂಟ್ಲೆ ಮುಲ್ಸಾನ್, ಲ್ಯಾಂಡ್ ರೋವರ್ ರೇಂಜ್ ರೋವರ್, ರೋಲ್ಸ್ ರಾಯ್ಸ್ ಫ್ಯಾಂಟಮ್ ಡ್ರಾಪ್ಹೆಡ್ ಕೂಪ್, ಪೋರ್ಶೆ ಕೇಯೆನ್, ಮತ್ತೊಂದು ರೇಂಜ್ ರೋವರ್ ಮತ್ತು ಇತರ ಹಲವಾರು ಕಾರುಗಳನ್ನು ಕಾಣಬಹುದು.
ಅಂಬಾನಿ ಬುಲೆಟ್ ಪ್ರೂಫ್ ವಾಹನಗಳು
ಸಾಮಾನ್ಯವಾಗಿ ಬುಲೆಟ್ ಪ್ರೂಫ್ ವಾಹನಗಳನ್ನು ಪ್ರಯಾಣಕ್ಕಾಗಿ ಬಳಸುವ ಮುಖೇಶ್ ಅಂಬಾನಿ ತಮ್ಮ ಮೂರನೇ ಮರ್ಸಿಡಿಸ್ ಬೆಂಝ್ ಎಸ್-ಗಾರ್ಡ್ ಅನ್ನು ಖರೀದಿಸಿದ್ದಾರೆ. ಇದು ಇಲ್ಲಿಯವರೆಗೆ ಅವರ ಅತ್ಯಂತ ದುಬಾರಿ ಬುಲೆಟ್ ಪ್ರೂಫ್ ವಾಹನವಾಗಿದೆ. ಕಾರನ್ನು ಕೆಲವು ವರ್ಷಗಳ ಹಿಂದೆ ಆರ್ಡರ್ ಮಾಡಲಾಗಿತ್ತು. ಇದೀಗ ಕೆಲವು ತಿಂಗಳ ಹಿಂದೆ ಅವರಿಗೆ ಡೆಲಿವರಿ ಸಿಕ್ಕಿದೆ.
ಅಂಬಾನಿ ಕುಟುಂಬವು ಭಾರತದಲ್ಲಿ ಝಡ್ ಪ್ಲಸ್ ಶ್ರೇಣಿಯ ರಕ್ಷಣೆಯನ್ನು ಪಡೆಯುತ್ತದೆ. ಐಷಾರಾಮಿ ಕಾರುಗಳ ವ್ಯಾಪಕ ಸಂಗ್ರಹ ಹಾಗೂ ಅವರು ಪ್ರಯಾಣಿಸುವ ವೇಳೆ ರಸ್ತೆಗಳಲ್ಲಿ ಆ ಕಾರುಗಳ ಗಮನ ಸೆಳೆಯುತ್ತದೆ. ಅಂಬಾನಿ ಕುಟುಂಬದ ಪ್ರತಿಯೊಬ್ಬ ಸದಸ್ಯರು ವೈಯಕ್ತಿಕ ಗಾರ್ಡ್ಗಳು ಮತ್ತು ಸಿಐಎಸ್ಎಫ್ ಸಿಬ್ಬಂದಿಯ ಮೀಸಲಾದ ತಂಡದೊಂದಿಗೆ ಪ್ರಯಾಣಿಸುತ್ತಾರೆ.
ಯಶಸ್ವಿ ವ್ಯಾಪಾರಿಗಳ ಕುಟುಂಬಗಳು ಪ್ರತ್ಯೇಕ ವಾಹನಗಳಲ್ಲಿ ಪ್ರಯಾಣಿಸುವುದು ವಿಶ್ವಾದ್ಯಂತ ಅನುಸರಿಸುವ ಸಾಮಾನ್ಯ ಅಭ್ಯಾಸವಾಗಿದೆ. ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆದ ಸಂದರ್ಭದಲ್ಲಿ, ಇತರರು ಸುರಕ್ಷಿತವಾಗಿ ಉಳಿಯಬಹುದು ಎಂಬುದೇ ಇದರ ಉದ್ದೇ. ಜಾಗತಿಕವಾಗಿ ಇದೇ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತದೆ. ಕೆಲವು ದೇಶಗಳಲ್ಲಿ ಗಣ್ಯರ ಕುಟುಂಬದವರೆಲ್ಲರಿಗೂ ಒಂದೇ ವಾಹನದಲ್ಲಿ ಅಥವಾ ಒಂದೇ ವಿಮಾನದಲ್ಲಿ ಒಟ್ಟಿಗೆ ಪ್ರಯಾಣಿಸಲು ಅನುಮತಿ ಸಿಗುವುದಿಲ್ಲ.
ಇದನ್ನೂ ಓದಿ : Mukesh Ambani | ಅರ್ಸೆನಲ್ ಫುಟ್ಬಾಲ್ ಕ್ಲಬ್ ಖರೀದಿಸಲು ಮುಂದಾದ ಮುಕೇಶ್ ಅಂಬಾನಿ!
ಅಂಬಾನಿ ಕುಟುಂಬವು ಬೆಂಟ್ಲಿ ಬ್ರಾಂಡ್ ಬಗ್ಗೆ ಅಪಾರ ಒಲವು ಹೊಂದಿದೆ. ಇತ್ತೀಚೆಗೆ ಕಾಂಟಿನೆಂಟಲ್ ಜಿಟಿಸಿ ಸ್ಪೀಡ್ ಕಾರನ್ನು ಖರೀದಿಸಿದ್ದಾರೆ. ಇದನ್ನು ಅನಂತ್ ಅಂಬಾನಿಗಾಗಿ ಖರೀದಿಸಲಾಗಿದೆ. ಇದರೊಂದಿಗೆ, ಅವರು ಪ್ರತಿಷ್ಠಿತ ಡಬ್ಲ್ಯು 12 ಮಾದರಿ ಸೇರಿದಂತೆ ನಾಲ್ಕು ವಿಭಿನ್ನ ಬೆಂಟೈಗಾ ಎಸ್ ಯುವಿಗಳನ್ನು ಹೊಂದಿದ್ದಾರೆ. ವಿಶೇಷವೆಂದರೆ, ಅಂಬಾನಿ ಕುಟುಂಭ ಭಾರತದಲ್ಲಿ ಬೆಂಟೈಗಾ ಎಸ್ ಯುವಿಯ ಆರಂಭಿಕ ಖರೀದಿದಾರರು. ಇದರ ಡ್ಯಾಶ್ ಬೋರ್ಡ್ ನಲ್ಲಿ ಲಕ್ಷಾಂತರ ರೂಪಾಯಿ ಲಕ್ಷ ಮೌಲ್ಯದ ಐಷಾರಾಮಿ ಮುಲ್ಲಿನರ್ ಗಡಿಯಾರವಿದೆ.
ಬೆಂಟೈಗಾಸ್ ಜೊತೆಗೆ, ಅಂಬಾನಿ ಕುಟುಂಬವು ಫ್ಲೈಯಿಂಗ್ ಸ್ಪರ್, ಕಾಂಟಿನೆಂಟಲ್ ಜಿಟಿ ಮತ್ತು ಮುಲ್ಸಾನ್ ಕಾರನ್ನು ಹೊಂದಿದೆ. ರೋಲ್ಸ್ ರಾಯ್ಸ್, ಲ್ಯಾಂಬೊರ್ಗಿನಿ, ಮರ್ಸಿಡಿಸ್-ಬೆಂಝ್, ಬಿಎಂಡಬ್ಲ್ಯು, ಲ್ಯಾಂಡ್ ರೋವರ್ ಮತ್ತು ಫೆರಾರಿಯಂತಹ ಜನಪ್ರಿಯ ಕಂಪನಿಗಳ ಕಾರುಗಳೂ ಇವೆ. ಮುಂಬೈನ ಗದ್ದಲದ ಬೀದಿಗಳಲ್ಲಿ, ಮುಖೇಶ್ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ಕುಟುಂಬ ಸದಸ್ಯರು ಐಷಾರಾಮಿ ಕಾರುಗಳಲ್ಲಿ ಪ್ರಯಾಣ ಮಾಡುತ್ತಾರೆ.
ಆಟೋಮೊಬೈಲ್
Hydrogen fuel cell Bus : ದೆಹಲಿಯಲ್ಲಿ ಸಂಚರಿಸಲಿದೆ ಅತ್ಯಾಧುನಿಕ ಹೈಡ್ರೋಜನ್ ಬಸ್, ಏನಿದರ ಪ್ರಯೋಜನ?
ದೆಹಲಿಯಲ್ಲಿ ಮೊದಲ ಗ್ರೀನ್ ಹೈಡ್ರೋಜನ್ ಫ್ಯೂಯಲ್ ಸೆಲ್ (Hydrogen fuel cell) ಬಸ್ಗೆ ಕೇಂದ್ರ ಸಚಿವರು ಹಸಿರು ನಿಶಾನೆ ತೋರಲಿದ್ದಾರೆ. ಇಂಡಿಯನ್ ಆಯಿಲ್ 15 ಫ್ಯೂಯಲ್ ಸೆಲ್ ಬಸ್ ಗಳ ಪ್ರಯೋಗಗಳನ್ನು ನಡೆಸಲಿದೆ.
ನವ ದೆಹಲಿ: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ದೆಹಲಿಯ ಕರ್ತವ್ಯ ಪಥದಲ್ಲಿ ಭಾರತದ ಮೊದಲ ಹಸಿರು ಹೈಡ್ರೋಜನ್ ಇಂಧನ ಕೋಶ ಚಾಲಿತ ಬಸ್ (Hydrogen fuel cell Bus) ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶದ ನಿಗಿದತ ಮಾರ್ಗಗಳಲ್ಲಿ ಹಸಿರು ಹೈಡ್ರೋಜನ್ ನಿಂದ ಚಾಲಿತ 15 ಬಸ್ ಗಳ ಕಾರ್ಯಾಚರಣೆ ನಡೆಯಲಿದೆ. ಇಂಡಿಯನ್ ಆಯಿಲ್ ಸಂಸ್ಥೆಯು ಪ್ರಯೋಗಾರ್ಥವಾಗಿ ಈ ಬಸ್ಗಳ ಸಂಚಾರವನ್ನು ನಡೆಸಲಿದೆ. ಇಂಡಿಯಾ ಗೇಟ್ ನಲ್ಲಿ ಮೊದಲ ಎರಡು ಫ್ಯೂಯಲ್ ಸೆಲ್ ಬಸ್ಗಳಿಗೆ ಚಾಲನೆ ಸಿಗಲಿದೆ.
ಈ ಯೋಜನೆಯು ಒಂದು ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಲಿದೆ. ಫ್ಯೂಯಲ್ ಸೆಲ್ ಬಸ್ ಕಾರ್ಯಾಚರಣೆಗಾಗಿ 350 ಬಾರ್ ಒತ್ತಡದಲ್ಲಿ ಗ್ರೀನ್ ಹೈಡ್ರೋಜನ್ ಒದಗಿಸುವ ಭಾರತದ ಮೊದಲ ಯೋಜನೆಯಾಗಿದೆ. ಇಂಡಿಯನ್ ಆಯಿಲ್ ಫರಿದಾಬಾದ್ನಲ್ಲಿರುವ ತನ್ನ ಆರ್ &ಡಿ ಕ್ಯಾಂಪಸ್ನಲ್ಲಿ ಇಂಧನ ತುಂಬಿಸುವ ಸೌಲಭ್ಯವನ್ನು ಸ್ಥಾಪಿಸಿದೆ, ಇದು ಸೌರ ಪಿವಿ ಫಲಕಗಳನ್ನು ಬಳಸಿಕೊಂಡು ವಿದ್ಯುದ್ವಿಭಜನೆಯ ಮೂಲಕ ಉತ್ಪಾದಿಸಿದ ಹಸಿರು ಹೈಡ್ರೋಜನ್ ಅನ್ನು ತುಂಬಿಸಲಿದೆ.
ನವೀಕರಿಸಬಹುದಾದ ಇಂಧನ ಮೂಲಗಳನ್ನು ಬಳಸಿಕೊಂಡು ಉತ್ಪಾದಿಸುವ ಹಸಿರು ಹೈಡ್ರೋಜನ್ ಅನ್ನು ಕಡಿಮೆ ಇಂಗಾಲದ ಇಂಧನ ಮತ್ತು ಆಮದು ಮಾಡಲಾಗುವ ಪೆಟ್ರೋಲಿಯಂ ಇಂಧನಗಳಿಗೆ ಪರ್ಯಾಯವೆಂದು ಹೇಳಲಾಗಿದೆ . ಇದು ಭಾರತದ ಹೇರಳವಾದ ನವೀಕರಿಸಬಹುದಾದ ಇಂಧನ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತದೆ. ಪೆಟ್ರೋಲಿಯಂ ಸಂಸ್ಕರಣೆ, ರಸಗೊಬ್ಬರ ಉತ್ಪಾದನೆ ಮತ್ತು ಉಕ್ಕು ಉತ್ಪಾದನೆಯಂತಹ ಕ್ಷೇತ್ರಗಳಿಗೂ ಪೂರಕವಾಗಿದೆ.
ಇದನ್ನೂ ಓದಿ : Viral Video : ಅಬ್ಬಾ ಏನು ಧೈರ್ಯ; ವೇಗವಾಗಿ ಚಲಿಸುತ್ತಿದ್ದ ಟ್ರಕ್ನ ಚಕ್ರದ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದ !
ಸಂಭಾವ್ಯ ಇಂಧನ, ಶೂನ್ಯ ಮಾಲಿನ್ಯ
ಇ-ಮೊಬಿಲಿಟಿ ಕ್ಷೇತ್ರದಲ್ಲಿ ಹೈಡ್ರೋಜನ್ ಇಂಧನ ಕೋಶ ತಂತ್ರಜ್ಞಾನವು ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ಹೈಡ್ರೋಜನ್ ಕೋಶಗಳನ್ನು ಇಂಧನವಾಗಿ ಪರಿವರ್ತಿಸುವ ತಾಂತ್ರಿಕತೆ ಇದಾಗಿದೆ. ಇಂಧನ ಕೋಶಗಳಲ್ಲಿನ ಎಲೆಕ್ಟ್ರೋ-ರಾಸಾಯನಿಕ ಪ್ರಕ್ರಿಯೆಯು ವಿದ್ಯುತ್ ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಕರೆಂಟ್ ಮೂಲಕ ಬಸ್ಗಳಲ್ಲಿ ಅಳವಡಿಸಿರುವ ಬ್ಯಾಟರಿಗಳನ್ನು ಚಾರ್ಜ್ ಮಾಡಲಾಗುತ್ತದೆ. ಅದರ ಮೂಲಕ ಬಸ್ನ ಮೋಟಾರ್ಗೆ ಚಾಲನೆ ನೀಡಲಾಗುತ್ತದೆ.
ಬ್ಯಾಟರಿ ಚಾಲಿತ ವಾಹನಗಳಿಗೆ ಹೋಲಿಸಿದರೆ ಫ್ಯೂಯಲ್ ಸೆಲ್ ವಾಹನಗಳು ಕಡಿಮೆ ಸಮಯದಲ್ಲಿ ಇಂಧನ ತುಂಬಿಸುವ ಅನುಕೂಲಗಳನ್ನು ಹೊಂದಿವೆ. ಹೈಡ್ರೋಜನ್ ಅನಿಲವನ್ನು ಹೆಚ್ಚಿನ ಒತ್ತಡದಲ್ಲಿ ಸಂಗ್ರಹಿಸಲಾಗುತ್ತದೆ. ಸಾಮಾನ್ಯವಾಗಿ 350 ಬಾರ್ನಲ್ಲಿ ಇರುತ್ತದೆ. ಬ್ಯಾಟರಿ ಚಾಲಿತ ವಾಹನಗಳನ್ನು ಚಾರ್ಜ್ ಮಾಡಲೆಂದು ದೀರ್ಘ ಕಾಲ ನಿಲ್ಲಿಸಬೇಕಾಗುತ್ತದೆ. ಆದರೆ, ಇದರಲ್ಲಿ ಪೆಟ್ರೋಲ್ನಂತೆಯೇ ಹೈಡ್ರೋಜನ್ ತುಂಬಿಸಬಹುದಾಗಿದೆ.
ಈ ಮೊದಲ ಎರಡು ಬಸ್ಸುಗಳು ಬಿಡುಗಡೆಯಾದ ನಂತರ, ದೀರ್ಘಕಾಲೀನ ಕಾರ್ಯಕ್ಷಮತೆ ಮತ್ತು ಬಾಳಿಕೆಯನ್ನು ಪರಿಶೀಲಿಸಲು 300,000 ಕಿಲೋಮೀಟರ್ ಸಂಚಾರ ನಡೆಸಲಿದೆ. ಇದು ಶೂನ್ಯ ಹೊರ ಸೂಸುವಿಕೆಯನ್ನು ಹೊಂದಿದೆ.
ಆಟೋಮೊಬೈಲ್
HSRP Number Plate: ಹಳೇ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಪಡೆಯೋದು ಹೇಗೆ? ಅಳವಡಿಸದಿದ್ರೆ ಭಾರಿ ದಂಡ!
HSRP Number Plate: ರಾಜ್ಯದಲ್ಲಿ 2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ದ್ವಿಚಕ್ರ, ತ್ರಿಚಕ್ರ ಸೇರಿ ಎಲ್ಲಾ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಸುವುದು ಕಡ್ಡಾಯವಾಗಿದೆ. ಎಚ್‌ಎಸ್‌ಆರ್‌ಪಿ ಪಡೆಯುವುದು ಹೇಗೆ ಎಂಬ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಎಲ್ಲಾ ಹಳೆಯ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಕಡ್ಡಾಯವಾಗಿ ಅಳವಡಿಸಬೇಕು ಎಂದು ಈಗಾಗಲೇ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಾಗಿ ಅರ್ಜಿ ಸಲ್ಲಿಸಲು ಇನ್ನು ಕೆಲವೇ ದಿನಗಳು ಅವಕಾಶವಿದೆ. ಹೀಗಾಗಿ ಗಡುವಿನೊಳಗೆ ವಾಹನ ಮಾಲೀಕರು ಹೊಸ ಮಾದರಿಯ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು, ಇಲ್ಲದಿದ್ದರೆ 500ರಿಂದ 1000 ರೂ. ದಂಡ ಕಟ್ಟಬೇಕಾಗುತ್ತದೆ.
2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ಎಲ್ಲಾ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕವನ್ನು (High Security Registration Plate-ಎಚ್‌ಎಸ್‌ಆರ್‌ಪಿ) ಕಡ್ಡಾಯವಾಗಿ ಅಳವಡಿಸಬೇಕು ಎಂದು ಆಗಸ್ಟ್ 17ರಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಅದೇ ರೀತಿ ಆ.18ರಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದರು. ಹೀಗಾಗಿ ಎಲ್ಲಾ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕಾಗಿದೆ.
ಅರ್ಜಿ ಸಲ್ಲಿಕೆಗೆ ನವೆಂಬರ್ 17 ಕೊನೇ ದಿನ
ರಾಜ್ಯದಲ್ಲಿ 2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ (ಹಳೆಯ / ಅಸ್ತಿತ್ವದಲ್ಲಿರುವ ವಾಹನಗಳು) ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಲಘು ಮೋಟಾರು ವಾಹನ, ಪ್ರಯಾಣಿಕ ಕಾರು, ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನ, ಟ್ರೈಲರ್, ಟ್ರ್ಯಾಕ್ಟರ್ ಇತ್ಯಾದಿ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು ಅಳವಡಿಸುವುದು ಕಡ್ಡಾಯವಾಗಿದೆ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಯೋಗೇಶ್ ಎ.ಎಂ ಅವರು ವಿಸ್ತಾರ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ.
ಏನಿದು ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್?
ಎಚ್‌ಎಸ್‌ಆರ್‌ಪಿ ಎಂದರೆ ಅತಿ ಸುರಕ್ಷಿತ ನೋಂದಣಿ ಫಲಕವಾಗಿದೆ. ಇವುಗಳನ್ನು ಅಲ್ಯೂಮಿನಿಯಂ ಲೋಹದಿಂದ ಮಾಡಿರುತ್ತಾರೆ. ಈ ಪ್ಲೇಟ್‌ನ ಮೇಲ್ಭಾಗದ ಎಡಬದಿಯಲ್ಲಿ ಅಶೋಕ ಚಕ್ರ ಮುದ್ರೆಯ 20X20 ಮಿ.ಮೀ ಅಳತೆಯ ಕ್ರೋಮಿಯಂ ಹೋಲೋಗ್ರಾಮ್ ಇರುತ್ತದೆ. ಇಂಗ್ಲಿಷ್ ಅಕ್ಷರಗಳು ಹಾಗೂ ನಂಬರ್‌ಗಳು ಉಬ್ಬಿಕೊಂಡಿರುವ ರೀತಿ ಅಚ್ಚಾಗಿರುತ್ತವೆ. ಈ ನಂಬರ್ ಪ್ಲೇಟ್‌ಗಳನ್ನು ಎರಡು ಲಾಕ್ ಪಿನ್‌ಗಳನ್ನು ಬಳಸಿ ಅಳವಡಿಸುತ್ತಾರೆ. ಇದರಿಂದ ಒರಿಜಿನಲ್ ಯಾವುದು, ನಕಲಿ ಯಾವುದು ಎಂದು ಸುಲಭವಾಗಿ ಗುರುತಿಸಬಹುದು.
ಎಚ್ಎಸ್ಆರ್‌ಪಿ ಪಡೆಯುವುದು ಹೇಗೆ?
- ಕರ್ನಾಟಕ ಸಾರಿಕೆ ಇಲಾಖೆ ವೆಬ್‌ಸೈಟ್ ಅಥವಾ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (ಎಸ್‌ಐಎಎಂ) ವೆಬ್‌ಸೈಟ್ ಭೇಟಿ ನೀಡಿ ಮತ್ತು Book HSRP ಅನ್ನು ಕ್ಲಿಕ್ ಮಾಡಿ.
- ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ.
- ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಿ.
- HSRP ಅಳವಡಿಕೆಗಾಗಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಡೀಲರ್ ಸ್ಥಳವನ್ನು ಆಯ್ಕೆ ಮಾಡಿ.
- HSRP ಶುಲ್ಕವನ್ನು ಅನ್‌ಲೈನ್‌ನಲ್ಲಿ ಪಾವತಿಸಿ, ಶುಲ್ಕ ಪಾವತಿಯನ್ನು ನಗದು ರೂಪದಲ್ಲಿ ಮಾಡುವಂತಿಲ್ಲ.
- ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಒ.ಟಿ.ಪಿ ರವಾನಿಸಲಾಗುವುದು.
- ನಿಮ್ಮ ಅನುಕೂಲಕ್ಕೆ ತಕ್ಕಂತಹ HSRP ಅಳವಡಿಕೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆಮಾಡಿ.
- ನಿಮ್ಮ ವಾಹನದ ಯಾವುದೇ ತಯಾರಕ/ಡೀಲರ್ ಸಂಸ್ಥೆಗೆ ಭೇಟಿ ನೀಡಿ.
- ವಾಹನ ಮಾಲೀಕರ ಕಚೇರಿ ಆವರಣ / ಮನೆಯ ಸ್ಥಳದಲ್ಲಿ HSRP ಅಳವಡಿಕೆಗಾಗಿ ಆಯ್ಕೆ.
ಇದನ್ನೂ ಓದಿ | HSRP Number Plate : ಹಳೆ ವಾಹನಗಳಿಗೂ ಇನ್ನು HSRP ನಂಬರ್ ಪ್ಲೇಟ್ ಕಡ್ಡಾಯ; ನ. 17ರ ನಂತ್ರ ಬೀಳುತ್ತೆ ದಂಡ!
ಪ್ರಮುಖ ಅಂಶಗಳು
- ಕರ್ನಾಟಕ ಸಾರಿಗೆ ಇಲಾಖೆ ವೆಬ್‌ಸೈಟ್ ಅಥವಾ ಎಸ್‌ಐಎಎಂ ವೆಬ್‌ಸೈಟ್ ಮೂಲಕ HSRP ಅಳವಡಿಕೆಗೆ ಕಾಯ್ದಿರಿಸಿಕೊಳ್ಳಿ.
- ಯಾವುದೇ ತೆರೆದ ಮಾರುಕಟ್ಟೆಯ ರಸ್ತೆ ಬದಿಯ ಮಾರಾಟಗಾರರಿಂದ ನಕಲಿ ಹೊಲೊಗ್ರಾಮ್ / IND ಮಾರ್ಕ್ ಇಂಡಿಯಾ ಎಂದು ಕೆತ್ತಲಾದ ಅಥವಾ ಕೆತ್ತಿದಂತಹ ಅನುಕರಣೆಯ HSRP, ಒಂದೇ ರೀತಿಯ ಪ್ಲೇಟ್‌ಗಳು, ಸ್ಮಾರ್ಟ್ ನಂಬರ್ ಪ್ಲೇಟ್‌ಗಳನ್ನು ಅಳವಡಿಸುವಂತಿಲ್ಲ. ಅವುಗಳು HSRP ಫಲಕಗಳಾಗಿರುವುದಿಲ್ಲ.
- HSRP ಅಳವಡಿಸದ ಹೊರತು, ವಾಹನ ಮಾಲೀಕತ್ವ ವರ್ಗಾವಣೆ, ವಿಳಾಸ ಬದಲಾವಣೆ, ಕಂತು ಕರಾರು, ನಮೂದು, ರದ್ದತಿ, ಅರ್ಹತಾಪತ್ರ ನವೀಕರಣ ಇತ್ಯಾದಿ ಯಾವುದೇ ಸೇವೆಗಳಿಗೆ ಅನುಮತಿಸುವುದಿಲ್ಲ.
- ಶುಲ್ಕ ಪಾವತಿಸಿರುವ ಪ್ರಕರಣದಲ್ಲಿ HSRP ಅಳವಡಿಕೆಗೆ ನಿಗದಿತ ದಿನಾಂಕದಿಂದ 30 ದಿನಗಳವರೆಗೆ ಮಾನ್ಯವಾದ ಎಚ್‌ಎಸ್‌ಆರ್‌ಪಿ ರಸೀದಿಯನ್ನು ಪ್ರಸ್ತುತಪಡಿಸುವ ವಾಹನಗಳಿಗೆ ಯಾವುದೇ ದಂಡವಿರುವುದಿಲ್ಲ.
- HSRP ಅಳವಡಿಕೆಗೆ ನವೆಂಬರ್ 17 ಆಗಿದ್ದು, ಕೂಡಲೇ ಅರ್ಜಿ ಸಲ್ಲಿಸಿ.
ಆಟೋಮೊಬೈಲ್
Nissan Motors : ಕ್ರಿಕೆಟ್ ವಿಶ್ವ ಕಪ್ ಹಿನ್ನೆಲೆಯಲ್ಲಿ ಮ್ಯಾಗ್ನೈಟ್ ಕುರೊ ಆವೃತ್ತಿ ಬಿಡುಗಡೆ
ನಿಸ್ಸಾನ್ ಮ್ಯಾಗ್ನೈಟ್ ಕುರೊ ಅವೃತ್ತಿಯು ಪುರುಷರ ಏಕದಿನ ವಿಶ್ವ ಕಪ್ ಹಿನ್ನೆಲೆಯಲ್ಲಿ ನಿಸಾನ್ ಮೋಟರ್ (Nissan Motors) ಬಿಡುಗಡೆ ಮಾಡಿದೆ.
ಬೆಂಗಳೂರು: ಐಸಿಸಿ ಪುರುಷರ ಕ್ರಿಕೆಟ್ ವಿಶ್ವ ಕಪ್ 2023ನ ಅಧಿಕೃತ ಪಾಲುದಾರಿಕೆ ಪಡೆದಿರುವ ನಿಸಾನ್ (Nissan Motors) ತನ್ನ ಮ್ಯಾಗ್ಹೈಟ್ ಕಾರಿನ ಕುರೊ (KURO)) ವಿಶೇಷ ಆವೃತ್ತಿಯ ಕಾರನ್ನು ಮಾರುಕಟ್ಟೆಗೆ ಇಳಿಸಿದೆ. ಐಸಿಸಿ ವಿಶ್ವಕಪ್ನೊಂದಿಗಿನ ಒಡಂಬಡಿಕೆಯನ್ನು ಎತ್ತಿ ತೋರಿಸುವ ಉದ್ದೇಶದಿಂದ ಗ್ರಾಹಕರಿಗೆ ಪ್ರೀಮಿಯಂ ಆಯ್ಕೆ ಎನಿಸುವ Magnite KURO ಪರಿಚಯಿಸಲಾಗಿದೆ ಎಂದು ನಿಸಾನ್ ಮೋಟರ್ ಇಂಡಿಯಾ (NMIPL) ಹೇಳಿದೆ.
ಸೆಪ್ಟೆಂಬರ್ 14ರಿಂದ ಈ ವಿಶೇಷ ಆವೃತ್ತಿಯ ಕಾರಿನ ಮುಂಗಡ ಬುಕಿಂಗ್ ಅನ್ನು ಆರಂಭಿಸಲಾಗಿದೆ. ‘ ಕುರೊ ಎಂದರೆ ಜಪಾನಿ ಭಾಷೆಷಯಲ್ಲಿ ಕಪ್ಪು ಎಂದರ್ಥ. ಹೀಗಾಗಿ ಕಪ್ಪು ಬಣ್ಣದ ಕುರೊ ಆವೃತ್ತಿಯಲ್ಲಿ ನಿಸಾನ್ ಬಿಡುಗಡೆ ಮಾಡಿದೆ. KURO ಥೀಮ್ ಹೊಂದಿರುವ ಎಸ್ಯುವಿ ಪ್ರೀಮಿಯಂ ಗುಣಮಟ್ಟ ಹಾಗೂ ವಿಶ್ವಾಸಾರ್ಹತೆಯ ಪ್ರತೀಕವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ನಿಸಾನ್ ಮ್ಯಾಗ್ನೈಟ್ KURO ವಿಶೇಷ ಆವೃತ್ತಿಯು ಈಗಾಗಲೇ ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ಆರಂಭಿಸಿದೆ. ಈ ಬಹುನಿರೀಕ್ಷಿತ ವಾಹನವನ್ನು ಅಕ್ಟೋಬರ್ 2023 ರಲ್ಲಿ ಅಧಿಕೃತವಾಗಿ ರಸ್ತೆಗಿಳಿಯಲಿದೆ. ಆ ಸಂದರ್ಭದಲ್ಲಿಯೇ ಇದರ ಬೆಲೆಯೂ ಪ್ರಕಟವಾಗಲಿದೆ. ಮ್ಯಾಗ್ನೈಟ್ XV MT, ಮ್ಯಾಗ್ನೈಟ್ ಟರ್ಬೋ XV MT ಮತ್ತು ಮ್ಯಾಗ್ನೈಟ್ ಟರ್ಬೋ XV CVT ಸೇರಿದಂತೆ ಎಲ್ಲಾ ವೇರಿಯೆಂಟ್ಗಳಿಎ 11,000 ರೂಪಾಯಿ ಪಾವತಿಸಿ ಮುಂಗಡ ಬುಕಿಂಗ್ ಮಾಡಿಕೊಳ್ಳಬಹುದಾಗಿದೆ.
ನಿಸಾನ್ ಮೋಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶ್ರೀವಾಸ್ತವ ಅವರು ಮಾತನಾಡಿ “ಮೌಲ್ಯ ಮತ್ತು ನಾವೀನ್ಯತೆಯನ್ನು ಬಯಸುವ ವಿವೇಚನಾಶೀಲ ಗ್ರಾಹಕರಿಗಾಗಿ ಈ ಹಬ್ಬದ ಸೀಸನ್ ನಲ್ಲಿ ನಿಸಾನ್ ಮ್ಯಾಗ್ನೈಟ್ KURO ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ. ಇದು ಅಸಾಧಾರಣ ಚಾಲನಾ ಅನುಭವಕ್ಕಾಗಿ ಸುರಕ್ಷತೆಯನ್ನು ಹೆಚ್ಚಿಸಲಾಗಿದೆ. ಪ್ರೀಮಿಯಂ ಫೀಚರ್ಗಳನ್ನು ನೀಡಲಾಗಿದೆ ಎಂದು ಹೇಳಿದರು.
ಕಪ್ನು ನೋಟ
ನಿಸಾನ್ ಮ್ಯಾಗ್ನೈಟ್ KURO ಆವೃತ್ತಿಯು ಆಕರ್ಷಕ ಆಲ್-ಬ್ಲ್ಯಾಕ್ ಎಕ್ಸ್ಟೀರಿಯರ್ ಹಾಗೂ ಇಂಟೀರಿಯರ್ ಹೊಂದಿದೆ. ಪ್ರೀಮಿಯಂ ಲುಕ್ ಇರುವ ಇದು ಸ್ಟೈಲಿಶ್ ಆಗಿರಲಿದೆ. ಪ್ರಭಾವಶಾಲಿ ಮತ್ತು ಬೋಲ್ಡ್ ವಿನ್ಯಾಸವನ್ನು ಹೊಂದಿರುವ ಕಾರಿನ ಹೊರ ಭಾಗದಲ್ಲಿ ಬ್ಲ್ಯಾಕ್ ಗ್ರಿಲ್, ಸ್ಕಿಡ್ ಪ್ಲೇಟ್, ರೂಫ್ ರೇಲ್ಸ್, ಬ್ಲ್ಯಾಕ್ ಅಲಾಯ್ಸ್, ಬ್ಲ್ಯಾಕ್ ಫಿನಿಶರ್ ಅನ್ನು ಹೊಂದಿರುವ ಹೆಡ್ ಲ್ಯಾಂಪ್ಗಳಿವೆ ವಿಶಿಷ್ಟವಾದ ಬ್ಯಾಡ್ಜ್ ಕೂಡ ನೀಡಲಾಗಿದೆ.
ಮ್ಯಾಗ್ನೈಟ್ KURO ವಿಶೇಷ ಆವೃತ್ತಿಯು ಪ್ರೀಮಿಯಂ ಗ್ಲಾಸ್ ಬ್ಲ್ಯಾಕ್ ಇನ್ ಸ್ಟ್ರುಮೆಂಟ್ ಪ್ಯಾನೆಲ್, ಬ್ಲ್ಯಾಕ್ ಇಂಟೀರಿಯರ್ ಅಸೆಂಟ್ಸ್, ಬ್ಲ್ಯಾಕ್ ಡೋರ್ ಟ್ರಿಮ್ ಇನ್ವರ್ಟ್ಸ್ಗಳಿವೆ ವಿಶಿಷ್ಟವಾದ ಇಂಟೀರಿಯರ್ ಅನ್ನು ಇದು ಒಳಗೊಂಡಿದೆ. ಈ ವಿಶೇಷ ಆವೃತ್ತಿಯು 360 ಡಿಗ್ರಿ ಅರೌಂಡ್ ವ್ಯೂವ್ ಮಾನಿಟರ್ (AVM), ವಿಶಾಲವಾದ IRVM, ಥೀಮ್ಡ್ ಫ್ಲೋರ್ ಮ್ಯಾಟ್ಗಳಿವೆ. ಸೆಂಟರ್ ಕನ್ಸೋಲ್ ಆರ್ಮ್ ರೆಸ್ಟ್ ಮತ್ತು ಹೆಚ್ಚು ಅನುಕೂಲತೆ ಹಾಗೂ ಸ್ಟೈಲ್ ಗಾಗಿ ವೈರ್ ಲೆಸ್ ಚಾರ್ಜರ್ ಸೇರಿದಂತೆ ಅನೇಕ ಫೀಚರ್ಗಳನ್ನು ಕೊಡಲಾಗಿದೆ.
ಇದನ್ನೂ ಓದಿ : Tata Nexon EV : ಟಾಟಾ ನೆಕ್ಸಾನ್ ಇವಿ ಫೇಸ್ಲಿಫ್ಟ್ ಭಾರತದಲ್ಲಿ ಬಿಡುಗಡೆ
ನಿಸಾನ್ ಮ್ಯಾಗ್ನೈಟ್ ಅತ್ಯುತ್ತಮ ಸುರಕ್ಷತಾ ಮಾನದಂಡಗಳನ್ನು ಹೊಂದಿದೆ. ಇದು ಗ್ಲೋಬಲ್ NCAP ಯಿಂದ ಸೇಫ್ಟಿ ರೇಟಿಂಗ್ ಫಾರ್ ಅಡಲ್ಟ್ ಆಕ್ಯುಪೆಂಟ್ ಮಾನದಂಡದಲ್ಲಿ 4 ಸ್ಟಾರ್ ಗಳನ್ನು ಪಡೆದುಕೊಂಡಿದೆ. ಇತ್ತೀಚೆಗೆ ನಿಸಾನ್ ಅನ್ನು ಹೆಚ್ಚುವರಿ ಸುರಕ್ಷತಾ ವೈಶಿಷ್ಟ್ಯತೆಗಳನ್ನು ಪರಿಚಯಿಸುವ ಮೂಲಕ ಮ್ಯಾಗ್ನೈಟ್ ಅನ್ನು ಮೇಲ್ದರ್ಜೆಗೇರಿಸಿದೆ.
ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), · ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ (TCS), ಹಿಲ್ ಸ್ಟಾರ್ಟ್ ಅಸಿಸ್ಟ್ (HAS), · ಟೈರ್ ಪ್ರೆಸರ್ ಮಾನಿಟರಿಂಗ್ ಸಿಸ್ಟಂ (TPMS) ಸೇರಿದಂತೆ ಅನೇಕ ಫೀಚರ್ಗಳಿವೆ.
ಜಪಾನ್ ವಿನ್ಯಾಸ
ಭಾರತದ B-SUV ವಿಭಾಗದಲ್ಲಿ ಮ್ಯಾಗ್ನೈಟ್ ಅತ್ಯುತ್ತಮವಾದ ಆಯ್ಕೆಯಾಗಿ ಪರಿಗಣಿಸಲ್ಪಟ್ಟಿದೆ. ಈ ವಾಹನವನ್ನು ಡಿಸೆಂಬರ್ 2020 ರಲ್ಲಿ ಬಿಡುಗಡೆ ಮಾಡಲಾಗಿದ್ದು, ಜಪಾನ್ ನ ವಿನ್ಯಾಸವನ್ನು ಬಳಸಿಕೊಂಡು ಭಾರತದಲ್ಲಿ ಉತ್ಪಾದನೆ ಮಾಡುವುದರೊಂದಿಗೆ `ಮೇಕ್-ಇನ್-ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್’ ತತ್ವವನ್ನು ಅಳವಡಿಸಿಕೊಂಡಿದೆ.
ನಿಸಾನ್ ಇತ್ತೀಚೆಗೆ ನಿಸಾನ್ ಮ್ಯಾಗ್ನೈಟ್ GEZA ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಿತ್ತು. ಇದರ ಆರಂಭಿಕ ಬೆಲೆ 7,39,000 (ಎಕ್ಸ್ ಶೋರೂಂ, ದೆಹಲಿ) ರೂಪಾಯಿಗಳಾಗಿತ್ತು. ನಿಸಾನ್ ಮ್ಯಾಗ್ನೈಟ್ GEZA ವಿಶೇಷ ಆವೃತ್ತಿಯು ಸುಧಾರಿತ ಇನ್ಫೋಟೇನ್ಮೆಂಟ್ ಸಿಸ್ಟಂ, ಪವರ್ –ಪ್ಯಾಕ್ಡ್ ಪರ್ಫಾರ್ಮೆನ್ಸ್, ಸುಧಾರಿತ ವೈಶಿಷ್ಟ್ಯತೆಗಳು ಮತ್ತು ಸುರಕ್ಷತಾ ಅಂಶಗಳನ್ನು ಮೇಲ್ದರ್ಜೆಗೇರಿಸಿ ಭಾರತೀಯ ಗ್ರಾಹಕರ ಪ್ರಯಾಣವನ್ನು ಮತ್ತಷ್ಟು ಸುಖಕರವಾಗುವಂತೆ ಮಾಡಿತ್ತು.
ಆಟೋಮೊಬೈಲ್
Tata Nexon EV : ಟಾಟಾ ನೆಕ್ಸಾನ್ ಇವಿ ಫೇಸ್ಲಿಫ್ಟ್ ಭಾರತದಲ್ಲಿ ಬಿಡುಗಡೆ
ಟಾಟಾ ಮೋಟಾರ್ಸ್ ಅಪ್ಡೇಟ್ ಮಾಡಿರುವ ನೆಕ್ಸಾನ್ ಇವಿ ಫೇಸ್ ಲಿಫ್ಟ್ (Tata Nexon EV) ಅನ್ನು ಹೊಸ ವಿನ್ಯಾಸ, ಹೊಸ ವೈಶಿಷ್ಟ್ಯಗಳು ಮತ್ತು ಸುಧಾರಿತ ಎಲೆಕ್ಟ್ರಿಕ್ ಪವರ್ ಟ್ರೇನ್ನೊಂದಿಗೆ ಪರಿಚಯಿಸಿದೆ. ಬೆಲೆ 14.74 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ.
ಬೆಂಗಳೂರು: ಟಾಟಾ ಮೋಟಾರ್ಸ್ ನೆಕ್ಸಾನ್ ಇವಿ (Tata Nexon EV) ಫೇಸ್ ಲಿಫ್ಟ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದರ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ (Ex Showroom) ದರದಂತೆ 14.74 ಲಕ್ಷ ರೂಪಾಯಿಗಳ ಈ ಪರಿಚಯಾತ್ಮಕ ಬೆಲೆಗಳು ಸೀಮಿತ ಅವಧಿಗೆ ಮಾತ್ರ ಇರುತ್ತದೆ. ನಿರ್ದಿಷ್ಟ ಸಂಖ್ಯೆಯ ಬುಕ್ಕಿಂಗ್ ಆದ ಬಳಿಕ ಬೆಲೆಯೇ ಏರಿಕೆಯಾಗಲಿದೆ ಎಂಬ ಸೂಚನೆಯನ್ನು ಕಂಪನಿ ನೀಡಿದೆ. ಹೊಸ ವಿನ್ಯಾಸ, ಹಲವಾರು ಹೊಸ ಫೀಚರ್ಗಳೊಂದಿಗೆ ಹೊಸ ನೆಕ್ಸಾನ್ ಇವಿ ಫೇಸ್ಲಿಫ್ಟ್ ಬಂದಿದೆ.
ಟಾಟಾ ನೆಕ್ಸಾನ್ ಭಾರತದ ಮಾರುಕಟ್ಟೆಯ ಜನಪ್ರಿಯ ಕಾಂಪ್ಯಾಕ್ಟ್ ಎಸ್ ಯುವಿ (Compact SUV) . ಇದರ ಎಲೆಕ್ಟ್ರಿಕ್ ರೂಪಾಂತರವು ನವೀಕರಿಸಿದ ವಿನ್ಯಾಸ, ಹೊಸ ವೈಶಿಷ್ಟ್ಯಗಳು ಮತ್ತು ಸುಧಾರಿತ ಎಲೆಕ್ಟ್ರಿಕ್ ಪವರ್ ಟ್ರೇನ್ ಸೇರಿದಂತೆ ಹಲವು ಹೊಸತನಗಳೊಂದಿಗೆ ಬಂದಿದೆ.
ಹೊಸ ವಿನ್ಯಾಸ
ಈ ಎಲೆಕ್ಟ್ರಿಕ್ ಎಸ್ ಯುವಿಯು ಹೊಸ ಬಾಹ್ಯ ವಿನ್ಯಾಸ, ನವೀಕರಿಸಿದ ಒಳಾಂಗಣ ಮತ್ತು ಹೊಸ ಎಲೆಕ್ಟ್ರಿಕ್ ಮೋಟರ್ ಅನ್ನು ಒಳಗೊಂಡಿರುವ ಪೂರ್ತಿ ಮೇಕ್ ಓವರ್ ಗೆ ಒಳಗಾಗಿದೆ. ಟಾಟಾ ಮೋಟಾರ್ಸ್ ಈಗಾಗಲೇ ನೆಕ್ಸಾನ್ ಇವಿಯ 53,000ಕ್ಕೂ ಹೆಚ್ಚು ಯುನಿಟ್ ಗಳ ಮಾರಾಟ ಮಾಡಿದೆ. ಹೀಗಾಗಿ ಫೇಸ್ ಲಿಫ್ಟ್ ಮೂಲಕ ಯಶಸ್ಸನ್ನು ಮತ್ತಷ್ಟು ವಿಸ್ತರಿಸುವ ಗುರಿಯನ್ನು ಹೊಂದಿದೆ.
2023ರ ಟಾಟಾ ನೆಕ್ಸಾನ್ ಇವಿ ಫೇಸ್ ಲಿಫ್ಟ್ ತನ್ನ ಆಂತರಿಕ ದಹನಕಾರಿ ಎಂಜಿನ್ (ಐಸಿಇ ಎಂಜಿನ್) ಪ್ರತಿರೂಪದೊಂದಿಗೆ ಪಾದಾರ್ಪಣೆ ಮಾಡಿದೆ. ಪೆಟ್ರೋಲ್ ಕಾರು ಬೆಲೆ 8.10 ಲಕ್ಷಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತದೆ. ಐಸಿಇ ಚಾಲಿತ ನೆಕ್ಸಾನ್ ಫೇಸ್ ಲಿಫ್ಟ್ ನಂತೆಯೇ, ಇವಿ ರೂಪಾಂತರವು ಟಾಟಾದ ಕರ್ವ್ ಪರಿಕಲ್ಪನೆಯಿಂದ ವಿನ್ಯಾಸ ಸ್ಫೂರ್ತಿ ಪಡೆದಿದೆ. ಆದಾಗ್ಯೂ, ವಿಭಿನ್ನ ಏರ್ ಡ್ಯಾಮ್ ಮತ್ತು ಪೂರ್ಣ-ಅಗಲದ ಎಲ್ಇಡಿ ಲೈಟ್ ಬಾರ್ ಸೇರಿದಂತೆ ವಿಶಿಷ್ಟ ವೈಶಿಷ್ಟ್ಯಗಳಿವೆ. ಇದು ಏಳು ವಿಭಿನ್ನ ಪೇಂಟ್ ಆಯ್ಕೆಯನ್ನು ನೀಡುತ್ತದೆ: ಎಂಪವರ್ಡ್ ಆಕ್ಸೈಡ್, ಪ್ರಿಸ್ಟೈನ್ ವೈಟ್, ಇಂಟೆನ್ಸಿ ಟೀಲ್, ಫ್ಲೇಮ್ ರೆಡ್, ಡೇಟೋನಾ ಗ್ರೇ, ಫಿಯರ್ಲೆಸ್ ಪರ್ಪಲ್ ಮತ್ತು ಕ್ರಿಯೇಟಿವ್ ಓಷನ್ ಎಂಬ ಬಣ್ಣಗಳಿವೆ.
12. ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್
ನೆಕ್ಸಾನ್ ಇವಿ ಫೇಸ್ ಲಿಫ್ಟ್ ನ ಕ್ಯಾಬಿನ್ ನಲ್ಲಿ, ಹೊಸ ಫೀಚರ್ಗಳನ್ನು ನೀಡಲಾಗಿದೆ. ವಿಶೇಷವೆಂದರೆ, ಎರಡು ದೊಡ್ಡ ಟಚ್ಸ್ಕ್ರಿನ್ ಸಿಸ್ಟಮ್ಗಳಿವೆ. 12.3-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್ ಮತ್ತು 10.25-ಇಂಚಿನ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಇದರಲ್ಲಿದೆ. ಇದು ಕ್ಯಾಬಿನ್ ನ ಪ್ರೀಮಿಯಂ ಅನುಭವವನ್ನು ಹೆಚ್ಚಿಸುತ್ತದೆ.
ಹೊಸ ಸ್ಟೀರಿಂಗ್-ಮೌಂಟೆಡ್ ಪ್ಯಾಡಲ್ ಶಿಫ್ಟರ್, 360 ಡಿಗ್ರಿ ಕ್ಯಾಮೆರಾ, ಬ್ಲೈಂಡ್ ಸ್ಪಾಟ್ ಮಾನಿಟರ್, ವೈರ್ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್, ವಾಯ್ಸ್ ಕಮಾಂಡ್ ಫಂಕ್ಷನಾಲಿಟಿ, ಎತ್ತರ-ಸರಿಹೊಂದಿಸಬಹುದಾದ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ಏರ್ ಪ್ಯೂರಿಫೈಯರ್, ಸಬ್ ವೂಫರ್ ಹೊಂದಿರುವ ಜೆಬಿಎಲ್ ಆಡಿಯೊ ಸಿಸ್ಟಮ್ ಮತ್ತು ಸನ್ ರೂಫ್ ನೀಡಲಾಗಿದೆ.
ಆರು ಏರ್ಬ್ಯಾಗ್ಗಳು
ಸುರಕ್ಷತಾ ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ 2023 ಟಾಟಾ ನೆಕ್ಸಾನ್ ಇವಿ ಫೇಸ್ ಲಿಫ್ಟ್ ಈಗ ಆರು ಏರ್ ಬ್ಯಾಗ್ ಗಳು ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್ ಸಿ) ಅನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿದೆ. ಹೆಚ್ಚುವರಿಯಾಗಿ, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಹಿಲ್ ಆರೋಹಣ ಮತ್ತು ಇಳಿಯುವಿಕೆ ನಿಯಂತ್ರಣ, ಜೊತೆಗೆ ಹಿಂಭಾಗದ ಡಿಸ್ಕ್ ಬ್ರೇಕ್ ಗಳನ್ನು ಹೊಂದಿದೆ.
ಇದನ್ನೂ ಓದಿ :
ಪವರ್ಟ್ರೇನ್ ಹೇಗಿದೆ?
ಪವರ್ ಟ್ರೇನ್ ಗೆ ಹೋಗುವುದಾದರೆ, ಎಲೆಕ್ಟ್ರಿಕ್ ಎಸ್ ಯುವಿ ಈಗ ಹೊಸ ಜೆನ್ 2 ಮೋಟರ್ ಹೊಂದಿದೆ, ಇದು ಅದರ ಹಿಂದಿನದಕ್ಕಿಂತ 20 ಕೆ.ಜಿ ಹಗುರವಾಗಿದೆ. ಈ ನವೀಕರಿಸಿದ ಎಲೆಕ್ಟ್ರಿಕ್ ವಾಹನವು ಒಂದು ಬಾರಿ ಚಾರ್ಜ್ ಮಾಡಿದರೆ 465 ಕಿ.ಮೀ ವರೆಗೆ ರೇಂಜ್ ನೀಡುತ್ತದೆ. ಲಾಂಗ್ ರೇಂಜ್ ವೇರಿಯೆಂಟ್ನಲ್ಲಿ ಇವಿ 143 ಬಿಹೆಚ್ ಪಿ ಗರಿಷ್ಠ ಶಕ್ತಿ ಮತ್ತು 215 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪವರ್ ಔಟ್ ಪುಟ್ ಸಣ್ಣ ಹೆಚ್ಚಳವನ್ನು ಕಂಡಿದೆ. ಅದೇ ರೀತಿ ಹೊಸ ಮಾಡೆಲ್ನಲ್ಲಿ ಟಾರ್ಕ್ ಸ್ವಲ್ಪ ಕಡಿಮೆ ಮಾಡಲಾಗಿದೆ. ಇದು ಕೇವಲ 8.9 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ಪಡೆಯುತ್ತದೆ. ಸಿಟಿ, ಇಕೋ ಮತ್ತು ಸ್ಪೋರ್ಟ್ ಎಂಬ ಮೂರು ವಿಭಿನ್ನ ಚಾಲನಾ ಮೋಡ್ ಗಳನ್ನು ನೀಡಲಾಗಿದೆ.
ಕಾರ್ಯಕ್ಷಮತೆ ಹೆಚ್ಚಳ
ನೆಕ್ಸಾನ್ ಇವಿ ಸುಧಾರಿತ ವಾಯುಬಲವಿಜ್ಞಾನವನ್ನು ಪಡೆಯುತ್ತದೆ. ಇದರ ಪರಿಣಾಮವಾಗಿ ವರ್ಧಿತ ಕಾರ್ಯಕ್ಷಮತೆ ಉಂಟಾಗುತ್ತದೆ ಎಂದು ವಾಹನ ತಯಾರಕರು ಪ್ರತಿಪಾದಿಸುತ್ತಾರೆ. ಲಾಂಗ್ ರೇಂಜ್ ಫೇಸ್ ಲಿಫ್ಟ್ ಮಾದರಿಯು ನೆಕ್ಸಾನ್ ಇವಿ ಮ್ಯಾಕ್ಸ್ನಂತೆಯೆ 40.5 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಉಳಿಸಿಕೊಂಡಿದೆ. ಆದರೆ ಇದು ಹಿಂದಿನ 437 ಕಿ.ಮೀ ನಿಂದ ಈಗ 465 ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ.
ಟಾಟಾ ಹೊಸ ನೆಕ್ಸಾನ್ ಇವಿಯ ಬ್ಯಾಟರಿ ಮತ್ತು ಮೋಟರ್ ಎರಡಕ್ಕೂ ಎಂಟು ವರ್ಷಗಳ ಅಥವಾ 160,000 ಕಿ.ಮೀ ವಾರಂಟಿಯನ್ನು ನೀಡುತ್ತದೆ. ಹೆಚ್ಚುವರಿಯಾಗಿ, ನೆಕ್ಸಾನ್ ಇವಿ ಫೇಸ್ ಲಿಫ್ಟ್ ವಿ2 ಎಲ್ (ವೆಹಿಕಲ್-ಟು-ಲೋಡ್) ಮತ್ತು ವಿ 2 ವಿ (ವೆಹಿಕಲ್-ಟು-ವೆಹಿಕಲ್) ತಂತ್ರಜ್ಞಾನಗಳನ್ನು ಹೊಂದಿದೆ, ಇದು ವಿದ್ಯುತ್ ಉಪಕರಣಗಳಿಗೆ ಶಕ್ತಿ ನೀಡಲು ಮತ್ತು ಇತರ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ಕಾರಿಗೆ ಅನುವು ಮಾಡಿಕೊಡುತ್ತದೆ.
-
ಕರ್ನಾಟಕ23 hours ago
Heart Attack: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ಸದ್ದಿಗೆ ಹಾರಿಹೋಯ್ತು ಯುವಕನ ಪ್ರಾಣ!
-
ಸುವಚನ17 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಕರ್ನಾಟಕ8 hours ago
Suspicious death : ಮನೆಯಲ್ಲಿ ನೇತಾಡುತ್ತಿತ್ತು ಹೆಂಡ್ತಿ ಶವ; ಚಿತೆಯ ಫೋಟೊ ಹಾಕಿದ ಗಂಡ!
-
ದೇಶ13 hours ago
Kamal Haasan: ಸನಾತನ ಧರ್ಮದ ವಿಷಯದಲ್ಲಿ ‘ಮಗು’ ಉದಯನಿಧಿ ಮೇಲೆ ದಾಳಿ ಎಂದ ಕಮಲ್ ಹಾಸನ್
-
ಅಂಕಣ16 hours ago
ವಿಸ್ತಾರ ಅಂಕಣ: ಮಣ್ಣು ಬರೀ ಮಣ್ಣಲ್ಲ, ಅದು ನಮ್ಮ ಭಾವಕೋಶ, ನಾವು ಮಣ್ಣಿನ ಮಕ್ಕಳು!
-
ದೇಶ22 hours ago
‘ದ್ವೇಷದ ಸಂತೆಯಲ್ಲಿ ಪ್ರೀತಿಯ ಅಂಗಡಿ’! ಡ್ಯಾನಿಶ್ ಅಲಿಯನ್ನು ಭೇಟಿಯಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
-
South Cinema5 hours ago
Silk Smitha: ಸಿಲ್ಕ್ ಸ್ಮಿತಾ ಶವದ ಮೇಲೆ ಅತ್ಯಾಚಾರ ; ನಟಿಯ ಪುಣ್ಯತಿಥಿಯಂದು ಅಚ್ಚರಿಯ ಸತ್ಯ ಹೊರಬಿತ್ತು!
-
ವೈರಲ್ ನ್ಯೂಸ್3 hours ago
Viral Video : ಅಬ್ಬಾ ಏನು ಧೈರ್ಯ; ವೇಗವಾಗಿ ಚಲಿಸುತ್ತಿದ್ದ ಟ್ರಕ್ನ ಚಕ್ರದ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದ !