Site icon Vistara News

Top tech hub | ಏಷ್ಯಾ-ಪೆಸಿಫಿಕ್‌ನಲ್ಲಿ ಬೀಜಿಂಗ್‌ ಬಳಿಕ ಎರಡನೇ ಟೆಕ್‌ ಹಬ್‌ ಬೆಂಗಳೂರು

infoysis

ನವ ದೆಹಲಿ: ಏಷ್ಯಾ-ಪೆಸಿಫಿಕ್‌ ವಲಯದಲ್ಲಿ ಟಾಪ್‌ ಟೆಕ್‌ ಹಬ್‌ಗಳ ಪಟ್ಟಿಯಲ್ಲಿ (Top tech hub) ಬೀಜಿಂಗ್‌ ಬಳಿಕ ಎರಡನೇ ಸ್ಥಾನದಲ್ಲಿ ಬೆಂಗಳೂರು ಸ್ಥಾನ ಗಳಿಸಿದೆ.

ಅಮೆರಿಕದ ರಿಯಾಲ್ಟಿ ಕಂಪನಿ ಕುಶ್‌ಮನ್‌ & ವೇಕ್‌ಫೀಲ್ಡ್ ಪ್ರಕಟಿಸಿರುವ ಟಾಪ್‌ ಟೆಕ್‌ ಹಬ್‌ಗಳ ಪಟ್ಟಿಯಲ್ಲಿ ಚೆನ್ನೈ, ಹೈದರಾಬಾದ್‌ ಮತ್ತು ದಿಲ್ಲಿ ಸ್ಥಾನ ಗಳಿಸಿದೆ. ಕಚೇರಿ ಸ್ಥಳಗಳಿಗೆ ದೇಶಿ-ವಿದೇಶಿ ಕಂಪನಿಗಳ ಬೇಡಿಕೆಯನ್ನು ಆಧರಿಸಿ ಪಟ್ಟಿಯನ್ನು ಸಿದ್ಧಪಡಿಸಿದೆ. ೧೧೫ ತಂತ್ರಜ್ಞಾನ ನಗರಿಗಳನ್ನು ಗುರುತಿಸಿ, ಅವುಗಳಲ್ಲಿ ೪೬ ಟಾಪ್‌ ಟೆಕ್‌ ನಗರಗಳನ್ನು ಆಯ್ಕೆ ಮಾಡಲಾಗಿದೆ. ಏಷ್ಯಾ ಪೆಸಿಫಿಕ್‌ ವಲಯದಲ್ಲಿ ಗುರುತಿಸಿರುವ ೧೪ ಟೆಕ್‌ ನಗರಗಳಲ್ಲಿ ೬ ಭಾರತದಲ್ಲಿವೆ.

ಭಾರತದಲ್ಲಿ ಕಳೆದ ೨೦೨೧-೨೨ರಲ್ಲಿ ೫ ಲಕ್ಷ ಮಾಹಿತಿ ತಂತ್ರಜ್ಞಾನ (ಐಟಿ) ಉದ್ಯೋಗಗಳು ಸೃಷ್ಟಿಯಾಗಿವೆ. ಐಟಿ ಮತ್ತು ತಂತ್ರಜ್ಞಾನ ಆಧಾರಿತ ವಲಯಗಳು ಭಾರತದ ಆರ್ಥಿಕತೆಯ ಚಾಲಕ ಶಕ್ತಿಗಳಾಗುತ್ತಿವೆ. ಒಂದು ಕಡೆ ಪ್ರಬಲ ಮಾರುಕಟ್ಟೆ ಮತ್ತೊಂದು ಕಡೆ ನೀತಿಗಳಲ್ಲಿ ಉಂಟಾಗಿರುವ ಸುಧಾರಣೆಗಳ ಪರಿಣಾಮ ಜಾಗತಿಕ ಐಟಿ ಕಂಪನಿಗಳು ಈ ನಗರಗಳಲ್ಲಿ ಹೆಚ್ಚಿನ ಬಂಡವಾಳ ಹೂಡುತ್ತವೆ ಎಂದು ವರದಿ ತಿಳಿಸಿದೆ.

ಬೆಂಗಳೂರಿನಲ್ಲಿ ಕಚೇರಿ ಸ್ಥಳಗಳ ಲೀಸ್‌, ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು. ರಾಷ್ಟ್ರೀಯ ಸರಾಸರಿ ೩೫% ಆಗಿದ್ದರೆ, ಬೆಂಗಳೂರಿನಲ್ಲಿ ೩೮%-೪೦% ಇದೆ. ಮೈಕ್ರೊಸಾಫ್ಟ್‌ ಮತ್ತು ಫೇಸ್‌ಬುಕ್‌ನ ಕಚೇರಿಯನ್ನು ಒಳಗೊಂಡಿರುವ ಹೈದರಾಬಾದ್‌ನಲ್ಲಿ ೪.೪ ಕೋಟಿ ಚದರ ಅಡಿ ಕಚೇರಿ ಯೋಜನೆಗಳು ನಿರ್ಮಾಣ ಹಂತದಲ್ಲಿದೆ. ಚೆನ್ನೈ ಎರಡನೇ ಅತಿ ದೊಡ್ಡ ಸಾಫ್ಟ್‌ವೇರ್‌ ರಫ್ತುದಾರ ನಗರವಾಗಿದ್ದು, ಭಾರತದ ಅತಿ ದೊಡ್ಡ ಡೇಟಾ ಸೆಂಟರ್‌ ಮಾರುಕಟ್ಟೆಯಲ್ಲೊಂದಾಗಿದೆ. ಐಟಿ ಕಚೇರಿಗಳಿಗೆ ಸ್ಥಳದ ಲೀಸ್‌ ವಹಿವಾಟು ಪ್ರಬಲವಾಗಿಯೇ ಮುಂದುವರಿಯಲಿದೆ ಎಂದು ತಜ್ಞರು ತಿಳಿಸಿದ್ದಾರೆ.

Exit mobile version