ಬೆಂಗಳೂರು: ರಸ್ತೆ ಮೇಲೆ ಸಾಗುತ್ತಿರುವ ಎಲೆಕ್ಟ್ರಾನಿಕ್ Ev Scooter ಧಗ್ಗನೆಂದು ಬೆಂಕಿ ಹತ್ತಿಕೊಂಡು, ಉರಿದು ಭಸ್ಮವಾಗುವುದಕ್ಕೆ ಏನು ಕಾರಣ ಎಂಬುದು ಪತ್ತೆಯಾಗಿದೆ. ಕೇಂದ್ರ ರಸ್ತೆ ಸಾರಿಗೆ ಇಲಾಖೆ ನೇಮಿಸಿದ್ದ ಸಮಿತಿ ತನಿಖೆ ನಡೆಸಿ, ಬ್ಯಾಟರಿ ಚಾಲಿತ ವಾಹನಗಳ ತಯಾರಿಗೆ ನಿಗದಿಪಡಿಸಿರುವ ಮಾನದಂಡಗಳನ್ನು ಉತ್ಪಾದಕ ಕಂಪನಿಗಳು ಪಾಲಿಸದಿರುವುದೇ ಕಾರಣ ಎಂದು ಹೇಳಿದೆ. ಪ್ರಮುಖವಾಗಿ ಬ್ಯಾಟರಿಗಳು ಬಿಸಿಯಾಗಿ ಸ್ಫೋಟಗೊಳ್ಳುತ್ತವೆ ಎಂದು ವರದಿ ನೀಡಿದೆ.
ಬ್ಯಾಟರಿ ಚಾಲಿತ ವಾಹನಗಳಿಗೆ ಭಾರತದಲ್ಲಿ ಕಳೆದ ಎರಡು ವರ್ಷಗಳಿಂದ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಯಾಗಿತ್ತು. ಅದರಿಂದ ಸಿಗುವ ಲಾಭದ ಬೆನ್ನು ಹತ್ತಿದ ಜನರೂ Ev Scooter ಖರೀದಿ ಮಾಡಿದ್ದರು. ಆದರೆ, ಕಳೆದ ಬೇಸಿಗೆಯಲ್ಲಿ ಅಲ್ಲಲ್ಲಿ ಬ್ಯಾಟರಿ ಚಾಲಿತ ವಾಹನಗಳಿಗೆ ಬೆಂಕಿ ಬೀಳುವ ಪ್ರಕರಣಗಳು ಕಂಡು ಬಂದವು. ಅದರಲ್ಲೂ ಉಷ್ಣಾಂಶ ಹೆಚ್ಚಾಗಿರುವ ಪ್ರದೇಶಗಳಲ್ಲಿ ಬೆಂಕಿ ಅನಾಹುತಗಳು ಹೆಚ್ಚಾದವು. ಘಟನೆಯಲ್ಲಿ ಜೀವ ಹಾನಿಯೂ ಸಂಭವಿಸಿದ್ದವು. ಹೀಗಾಗಿ ಜನರು ಇವಿ ಸಹವಾಸ ಬೇಡ ಎಂದು ತೀರ್ಮಾನಿಸಲು ಆರಂಭಿಸಿದರು. ಹೀಗಾಗಿ ಪ್ರಗತಿಯಲ್ಲಿದ್ದ Ev Scooter ಮಾರುಕಟ್ಟೆ ಮತ್ತೆ ಇಳಿಮುಖ ಕಂಡಿತು.
ಅನಾಹುತಗಳು ಸಂಭವಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಇವಿ ವಾಹನ ಕಂಪನಿಗಳಿಗೆ ಎಚ್ಚರಿಕೆಯನ್ನೂ ನೀಡಿದ್ದರು. ಯಾರಾದರೂ ಕಳಪೆ ವಾಹನಗಳನ್ನು ತಯಾರಿಸಿ ಗ್ರಾಹಕರಿಗೆ ನೀಡಿದರೆ ದೊಡ್ಡ ಮೊತ್ತದ ದಂಡವನ್ನು ಹಾಕಲಾಗುವುದು. ಸಮಸ್ಯೆ ಇರುವ ವಾಹನಗಳನ್ನು ಮಾರಾಟ ಮಾಡಿದ್ದರೆ ತಕ್ಷಣದಲ್ಲೇ ಅದನ್ನು ವಾಪಸ್ ಪಡೆಯಬೇಕು ಎಂದು ಸೂಚನೆ ನೀಡಿದ್ದರು.
ಬಿಸಿಯಿಂದ ಸಮಸ್ಯೆ
ಪ್ರಮುಖವಾಗಿ Ev Scooter ತಯಾರಿ ವೇಳೆ ಬ್ಯಾಟರಿ ಬಿಸಿಯಾಗುವುದನ್ನು ತಡೆಯಲು ಯಾವುದೇ ವಿಧಾನವನ್ನು ಅಳವಡಿಸಿಕೊಂಡಿರಲಿಲ್ಲ. ಹೀಗಾಗಿ ಬ್ಯಾಟರಿ ಸೆಲ್‌ಗಳು ಬಿಸಿಯಾಗಿ ಸ್ಫೋಟಗೊಳ್ಳುತ್ತಿದ್ದವು. ಅದೇ ರೀತಿ ವಿಫಲಗೊಂಡ ಬ್ಯಾಟರಿ ಸೆಲ್‌ಗಳನ್ನು ಕಾಪಿಡಲು ವ್ಯವಸ್ಥೆಯನ್ನೂ ಮಾಡಿರಲಿಲ್ಲ. ಹೀಗಾಗಿ ಉಷ್ಣಾಂಶ ಹೆಚ್ಚು ಇರುವ ಪ್ರದೇಶಗಳಲ್ಲಿ ಬೆಂಕಿ ಬೀಳುವುದು ಸಾಮಾನ್ಯವಾಗಿತ್ತು.
ಬೇಡಿಕೆ ಹೆಚ್ಚು, ಗುಣಮಟ್ಟ ಕಡಿಮೆ
ಕಳೆದ ಕೆಲವು ವರ್ಷಗಳಿಂದ ಎಲೆಕ್ಟ್ರಾನಿಕ್ ಸ್ಕೂಟರ್‌ಗಳಿಗೆ ಬೇಡಿಕೆ ಹೆಚ್ಚಾಗಿವೆ. ಸ್ಕೂಟರ್ ತಯಾರಿಸುವ ಕಂಪನಿಗಳಿಗೂ ಸಿಕ್ಕಾಪಟ್ಟೆ ಆರ್ಡರ್‌ಗಳು ಬಂದಿವೆ. ಹೀಗಾಗಿ ಬೇಡಿಕೆಗೆ ತಕ್ಕ ಹಾಗೆ ಪೂರೈಕೆ ಮಾಡುವ ಗುರಿಯೊಂದಿಗೆ ಗುಣಮಟ್ಟವನ್ನು ಗಾಳಿಗೆ ತೂರಿ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಿದ್ದಾರೆ. ಜತೆಗೆ ದರ ಪೈಪೋಟಿಗೆ ಇಳಿದ ಕಂಪನಿಗಳು ಕಡಿಮೆ ದರ್ಜೆಯ ವಸ್ತುಗಳನ್ನು ಬಳಸಿಕೊಂಡಿವೆ. ಇದೂ ಬೆಂಕಿ ಅವಘಡಗಳಿಗೆ ಕಾರಣ ಎಂದು ತಜ್ಞರ ಸಮಿತಿ ಹೇಳಿದೆ.
ಒಕಿನೊವಾ ಆಟೋಟೆಕ್, ಪ್ಯೂರ್ ಇವಿ, ಜೆತೇಂದ್ರ ಎಲೆಕ್ಟ್ರಿಕ್ ವೆಹಿಕಲ್ಸ್, ಒಲಾ ಎಲೆಕ್ಟ್ರಿಕ್ಸ್ ಹಾಗೂ ಬೂಮ್ ಮೋಟಾರ್ಸ್ ತಯಾರಿಸುವ ಇವಿ ಸ್ಕೂಟರ್‌ಗಳಿಗೆ ಹೆಚ್ಚು ಬೆಂಕಿ ಬಿದ್ದಿದ್ದವು ಹಾಗೂ ಈ ಕಂಪನಿಗಳು ನಿಯಮಗಳನ್ನು ಪಾಲಿಸಿರಲಿಲ್ಲ.
ಘಟನೆಗಳು ನಡೆಯಲು ಆರಂಭಿಸಿದ ದಿನಗಳಲ್ಲೇ ಡಿಆರ್‌ಡಿಒ ಸಮಿತಿ ತನಿಖೆ ನಡೆಸಿ ಎಲೆಕ್ಟ್ರಾನಿಕ್ ಸ್ಕೂಟರ್‌ಗಳ ತಯಾರಿಯಲ್ಲೇ ಸಾಕಷ್ಟು ಸಮಸ್ಯೆಗಳಿವೆ ಎಂದು ಹೇಳಿತ್ತು.
ಬಿಐಎಸ್ ಹೊಸ ನಿಯಮ
ಬ್ಯೂರೂ ಆಫ್ ಇಂಡಿಯನ್ ಸ್ಟಾಂಡರ್ಡ್ (ಬಿಐಎಸ್) ಇದೀಗ ಲೀಥಿಯಮ್ ಬ್ಯಾಟರಿಗಳ ಬಳಕೆ ವೇಳೆ ಗ್ರಾಹಕರ ಹಿತರಕ್ಷಣೆ ಕಾಪಾಡುವ ಉದ್ದೇಶದಿಂದ ಹೊಸ ಮಾನದಂಡವನ್ನು ಬಿಡುಗಡೆ ಮಾಡಿದೆ. ಬಿಐಎಸ್ ಕೇಂದ್ರ ಸಾರಿಗೆ ಇಲಾಖೆಯ ಅಡಿಯಲ್ಲಿ ಬರುತ್ತಿದ್ದು, ಎಲೆಕ್ಟ್ರಾನಿಕ್ ವಾಹನಗಳ ಬ್ಯಾಟರಿಗಳ ಕಾರ್ಯನಿರ್ವಹಣಾ ಮಾನದಂಡ, ಬಿಡುಗಡೆ ಮಾಡಿದ್ದು, ವಾಹನಗಳ ಉತ್ಪಾದನೆಯ ಮೇಲೆ ನಿಗಾ ಇಡಲು ಮುಂದಾಗಿದೆ.
ಇದನ್ನೂ ಓದಿ: TATA NEXON EV ಕಾರಿಗೆ ಬೆಂಕಿ ಬಿದ್ದಿದ್ಯಾಕೆ? ತನಿಖೆಗೆ ಆದೇಶಿಸಿದ ಟಾಟಾ ಮೋಟರ್ಸ್