ಅಮೆರಿಕದ ಬಿಲಿಯನೇರ್ ಉದ್ಯಮಿ ಎಲಾನ್ ಮಸ್ಕ್ ಸೇರಿದಂತೆ ಇನ್ನೂ ಕೆಲವರು ಟೆಕ್ ಉದ್ಯಮಿಗಳು ಇತ್ತೀಚೆಗೆ ಸೂಪರ್ ಆ್ಯಪ್‌ಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಟ್ವಿಟರ್ ಕೊಳ್ಳುವ ಯೋಚನೆಯಿಂದ ಮಸ್ಕ್ ಹಿಂದೆ ಸರಿದಿರುವ ಹಿನ್ನೆಲೆಯಲ್ಲಿ ಇದು ಕೂಡ ಒಂದು ಕಾರಣ ಆಗಿರಬಹುದು.
ಏನು ಈ ಸೂಪರ್ ಆ್ಯಪ್‌ಗಳೆಂದರೆ?
ಇದನ್ನು ಅರ್ಥ ಮಾಡಿಕೊಳ್ಳುವುದು ಸುಲಭ. ನಾವೀಗ ನಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳುವ ಆ್ಯಪ್‌ಗಳು ಒಂದು ಕಾರ್ಯವನ್ನು ಮಾತ್ರ ಮಾಡಲು ಸಮರ್ಥವಾದವು. ಉದಾಹರಣೆಗೆ ಟ್ವಿಟರ್, ಫೇಸ್‌ಬುಕ್ ಮುಂತಾದವು ಸಾಮಾಜಿಕ ಜಾಲತಾಣಗಳು. ಇವು ಮನುಷ್ಯರನ್ನು ಒಂದು ವೇದಿಕೆಗೆ ತರುತ್ತವೆ. ಪಾವತಿ ಆ್ಯಪ್‌ಗಳು ಹಣ ಪಾವತಿ ಮಾಡಲು ಸಹಕರಿಸುತ್ತವೆ. ಗೂಗಲ್ ಮ್ಯಾಪ್ ಮೂಲಕ ದಾರಿ ನೋಡುತ್ತೇವೆ. ಆದರೆ ಸೂಪರ್ ಆ್ಯಪ್‌ಗಳು ಬಹು ಕಾರ್ಯಗಳನ್ನು ಒಂದೇ ವೇದಿಕೆಯಲ್ಲಿ ಮಾಡುತ್ತವೆ. ಟ್ವಿಟರ್ ಮೂಲಕ ಹಣ ಪಾವತಿ ಮಾಡುವುದು, ಮ್ಯಾಪ್ ನೋಡುವುದು, ಎಫ್‌ಎಂ ರೇಡಿಯೋ ಕೇಳುವುದನ್ನು ಕಲ್ಪಿಸಿಕೊಳ್ಳಿ- ಅದೇ ಸೂಪರ್ ಆ್ಯಪ್.
ಸದ್ಯಕ್ಕೆ ಇದು ಚಿಂತನೆಯ ಹಂತದಲ್ಲಿ ಇದೆಯಾದರೂ, ದೊಡ್ಡ ದೊಡ್ಡ ಟೆಕ್ ಕಂಪನಿಗಳು ಆಗಲೇ ರಂಗಕ್ಕೆ ಇಳಿದಿವೆ. ಉಬರ್, ಸ್ಪೋಟಿಫೈ, ಪೇಪಲ್, ಸ್ನ್ಯಾಪ್, ಬ್ಲಾಕ್ ಮುಂತಾದವು ಇದರ ಬಗ್ಗೆ ಯೋಚನೆ ಮಾಡಿವೆ. ತಮ್ಮ ವೇದಿಕೆಯಲ್ಲೇ ಗ್ರಾಹಕ ಹೆಚ್ಚು ಕಾಲ ಕಳೆಯುವಂತೆ ಮಾಡುವುದು ಇದರ ಉದ್ದೇಶ. ಗ್ರಾಹಕ ಹೆಚ್ಚು ಕಾಲ ಒಂದೇ ಕಡೆ ಇದ್ದಷ್ಟೂ ಜಾಹೀರಾತು ಆದಾಯ ಹೆಚ್ಚುತ್ತದೆ.
ಆರಂಭೀಕ ಹಂತದಲ್ಲಿ ಪೇಮೆಂಟ್, ಬೈ ನೌ ಪೇ ಲೇಟರ್, ಕ್ರಿಪ್ಟೋಕರೆನ್ಸಿ ಉದ್ದೇಶಗಳು ಒಂದುಗೂಡಲಿವೆ. ನಂತರ ಸೋಶಿಯಲ್ ಮೀಡಿಯಾ ಹಾಗೂ ಶಾಪಿಂಗ್ ಜತೆಗೂಡಬಹುದು. ಡೆಲಿವರಿ ಮತ್ತು ರೈಡ್ ನೀಡುವ ರಂಗಗಳು ಕೈಜೋಡಿಸಬಹುದು.
ಆದರೆ ನಿಜವಾಗಿಯೂ ಒಂದೇ ಕಂಪನಿ ಎಲ್ಲ ಸೇವೆಗಳನ್ನೂ ನೀಡಲು ಪ್ರಾಯೋಗಿಕವಾಗಿ, ಆಡಳಿತಾತ್ಮಕವಾಗಿ, ಕಾನೂನಾತ್ಮಕವಾಗಿ ಸಾಧ್ಯವಿದೆಯೇ ಎಂಬ ಪ್ರಶ್ನೆಯಿದೆ. ಎಲ್ಲ ಕಂಪನಿಗಳ ಆದಾಯದ ಮಾದರಿ ಕೂಡ ಆಯಾ ಸೇವೆಗಳ ಮೇಲೆ ನಿಂತಿದೆ. ಇವುಗಳನ್ನು ಕಲಸುಮೇಲೋಗರ ಮಾಡಿಕೊಳ್ಳಲು ಇವು ಮುಂದಾಗುತ್ತವೆಯೇ ಎಂಬುದೀಗ ಪ್ರಶ್ನೆ.
ಸರಿಯಾಗಿ ಜಾರಿಗೆ ಬಂದರೆ ಈ ಸೂಪರ್ ಆ್ಯಪ್‌ಗಳು ಗ್ರಾಹಕನಿಗೆ ತುಂಬಾ ಅನುಕೂಲವಾಗಬಹುದು. ಆದರೆ ಅದೇ ರೀತಿ ಇ- ಕಾಮರ್ಸ್ ರಂಗದಲ್ಲಿ ಇನ್ನೊಂದು ಬಗೆಯ ಸರ್ವಾಧಿಪತ್ಯಕ್ಕೂ ಕಾರಣವಾಗಬಹುದು.
ಇದನ್ನೂ ಓದಿ: ವಿಶ್ವದ TOP 10 ಶ್ರೀಮಂತರ ಪಟ್ಟಿ ಔಟ್, ಇದರಲ್ಲಿದ್ದಾರೆ ಇಬ್ಬರು ಭಾರತೀಯರು!
Wechat ಎಂಬ ಸೂಪರ್ ಆ್ಯಪ್
ಈ ಕಲ್ಪನೆ ಹೊಸತಲ್ಲ. ಚೀನಾದ ದೈತ್ಯ ಇಂಟರ್‌ನೆಟ್ ಕಂಪನಿ ಟೆನ್ಸೆಂಟ್ 2011ರಲ್ಲಿ ಸೃಷ್ಟಿಸಿರುವ Wechat, ಒಂದು ರೀತಿಯಲ್ಲಿ ಸೂಪರ್ ಆ್ಯಪ್ ಆಗಿದೆ. ಇದು ಮೆಸೇಜಿಂಗ್ ಮತ್ತು ಸೋಶಿಯಲ್ ಮೀಡಿಯಾದ ಮಿಶ್ರತಳಿಯಾಗಿ ಉತ್ಪನ್ನವಾಯಿತು. ನಂತರ ಅದೀಗ ರೈಡ್ ನೀಡುವ, ಇ- ಕಾಮರ್ಸ್‌ನ, ಮೊಬೈಲ್ ಪೇಮೆಂಟ್‌ನ, ಸರಕಾರಿ ಸೇವೆ ಒದಗಿಸುವ ಆ್ಯಪ್ ಆಗಿಯೂ ಬೆಳೆದಿದೆ. ಸುಮಾರು 130 ಕೋಟಿ ಬಳಕೆದಾರರು ಚೀನಾದಲ್ಲಿ ಇದಕ್ಕಿದ್ದಾರೆ.
ವಿಚ್ಯಾಟ್‌ನಂತೆಯೇ ಇನ್ನೂ ಕೆಲವು ಆ್ಯಪ್‌ಗಳೂ ಇವೆ. ಉದಾಹರಣೆಗೆ ಚೀನಾದಲ್ಲಿ Alipay, ದಕ್ಷಿಣ ಏಷ್ಯಾದಲ್ಲಿ Gojek ಮತ್ತು Grab, ಜಪಾನ್‌ನಲ್ಲಿ Line. ಆದರೆ ಇವು ಯಾವುದೂ ವಿಚ್ಯಾಟ್‌ನಷ್ಟು ಜನಪ್ರಿಯವಿಲ್ಲ. ಅಮೆರಿಕ ಸೇರಿದಂತೆ ಪಶ್ಚಿಮದಲ್ಲಿ ಹೆಚ್ಚಿನವರು ಇಂಟರ್ನೆಟ್ ಬಳಕೆ ಕಲಿತದ್ದು ಡೆಸ್ಕ್‌ಟಾಪ್‌ನಲ್ಲಿ. ಆದರೆ ಚೀನಾದಲ್ಲಿ ಮೊದಲ ಬಳಕೆದಾರರೇ ಸ್ಮಾರ್ಟ್‌ಫೋನ್ ಬಳಸಿದವರು. ಹೀಗಾಗಿ ಆ್ಯಪ್‌ಗಳಿಂದ ಹೆಚ್ಚಿನ ನಿರೀಕ್ಷೆ ಪಶ್ಚಿಮದಲ್ಲಿ ಇರಲಿಲ್ಲ.
ಟ್ವಿಟರ್ ಖರೀದಿಯ ಮಾತುಕತೆಯ ಮೊದಲ ಹಂತದಲ್ಲಿ ಎಲಾನ್ ಮಸ್ಕ್, ಸಂಸ್ಥೆಯ ಉದ್ಯೋಗಿಗಳ ಜತೆ ನಡೆಸಿದ ಸಂವಾದದಲ್ಲಿ, ಕಂಪನಿಯನ್ನು ಸೂಪರ್ ಆ್ಯಪ್ ಆಗಿ ಬೆಳೆಸುವ ಉದ್ದೇಶವನ್ನು ಎಲಾನ್ ಮಸ್ಕ್ ಹಂಚಿಕೊಂಡಿದ್ದರು. ಇದನ್ನು ಸ್ನ್ಯಾಪ್‌ನ ಸಿಇಒ ಇವಾನ್ ಸ್ಪೀಗೆಲ್ ಶ್ಲಾಘಿಸಿದ್ದರು. ನಂತರ ಬ್ಲಾಕ್‌ನ ಸಿಇಒ ನಿಕ್ ಮೋಲ್ನರ್ ತಮ್ಮ ಆ್ಯಪ್‌ನಲ್ಲಿ ಇತರ ಸೇವೆಗಳನ್ನು ಆರಂಭಿಸುವ ಕುರಿತು ಮಾತನಾಡಿದ್ದರು.
ಹಾಗೆ ನೋಡಿದರೆ ಝುಕರ್ಬರ್ಗ್ ಉದ್ದೇಶಿಸಿರುವ ʼಮೆಟಾʼ ಕೂಡ ಒಂದು ಸೂಪರ್ ಆ್ಯಪ್. ಫೇಸ್‌ಬುಕ್ ತನ್ನ ಇನ್‌ಸ್ಟಾಗ್ರಾಮ್, ವಾಟ್ಸ್ಯಾಪ್‌ಗಳು ಒಂದೆಡೆಗೆ ತರುತ್ತಿದೆ. ವಾಟ್ಸ್ಯಾಪ್‌ನಲ್ಲಿ ಇ- ಕಾಮರ್ಸ್, ಗೇಮಿಂಗ್, ಡೇಟಿಂಗ್, ಪಾಡ್‌ಕ್ಯಾಸ್ಟ್ ಮತ್ತು ಪಾವತಿ ಸೇವೆಗಳು ಕೂಡ ಆರಂಭವಾಗಿವೆ.
ಸೂಪರ್ ಆ್ಯಪ್‌ಗಳ ಸೃಷ್ಟಿಗೆ ಒಂದು ಕಾರಣವೆಂದರೆ, ಚಂಚಲವಾದ ಗ್ರಾಹಕರನ್ನು ನಾನಾ ಉದ್ದೇಶಗಳಿಗಾಗಿ ತಮ್ಮ ವೇದಿಕೆಯಲ್ಲೇ ಬಹುಕಾಲ ಹಿಡಿದಿಡುವುದು. ಇನ್ನೊಂದು ಕಾರಣ, ಆಡಳಿತಾತ್ಮಕ ನಿಯಂತ್ರಣಗಳು ಹೆಚ್ಚಾಗುತ್ತಿರುವುದರಿಂದ ಕಂಪನಿಗಳ ಜಾಹೀರಾತು ಟಾರ್ಗೆಟ್‌ಗಳು ಕಡಿಮೆಯಾಗುತ್ತಿರುವುದು.
ಇದನ್ನೂ ಓದಿ: ನಕಲಿ ಖಾತೆಗಳ ವಿವರ ಕೊಡದಿದ್ದರೆ ಟ್ವಿಟರ್ ಖರೀದಿಸಲ್ಲ ಎಂದು ಎಚ್ಚರಿಸಿದ ಎಲಾನ್ ಮಸ್ಕ್