Site icon Vistara News

ರಾಕೆಟ್‌ ಉಡಾಯಿಸುವಷ್ಟು ಶಕ್ತಿಶಾಲಿ ಜೈವಿಕ ಇಂಧನ ಬ್ಯಾಕ್ಟೀರಿಯಾದಿಂದ ಸೃಷ್ಟಿ

bio fuel

ಬ್ಯಾಕ್ಟೀರಿಯಾ ನಿರ್ಮಿತ ಅಣುವೊಂದರಿಂದ ಪ್ರಬಲವಾದ ಜೈವಿಕ ಇಂಧನವನ್ನು ತಯಾರಿಸುವುದರಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ರಾಕೆಟ್‌ಗಳನ್ನೂ ಉಡಾಯಿಸುವಷ್ಟು ಕಾರ್ಯಕ್ಷಮತೆ ಈ ಜೈವಿಕ ಇಂಧನಕ್ಕಿದೆ ಎಂದು ಹೇಳಲಾಗಿದೆ. ಅಮೆರಿಕದ ಲಾರೆನ್ಸ್‌ ಬರ್ಕಲಿ ರಾಷ್ಟ್ರೀಯ ಪ್ರಯೋಗಾಲಯದ ನೇತೃತ್ವದಲ್ಲಿ ಜೈವಿಕ ಇಂಧನ ತಜ್ಞರ ತಂಡವೊಂದು ಈ ನಿಟ್ಟಿನಲ್ಲಿ ಪ್ರಯೋಗಶೀಲವಾಗಿದ್ದು, ಸ್ಟ್ರೆಪ್ಟೋಮೈಸಸ್‌ ಬ್ಯಾಕ್ಟೀರಿಯಾದಿಂದ ನಿರ್ಮಿತವಾದ ಶಿಲೀಂಧ್ರರೋಧಕ ಅಣುವೊಂದರಿಂದ ಈ ಇಂಧನವನ್ನು ತಯಾರಿಸಲಾಗಿದೆ. ಇಂದಿನ ದಿನಗಳಲ್ಲಿ ಉಪಯೋಗಿಸುತ್ತಿರುವ ಯಾವ ಪ್ರಬಲ ಇಂಧನಗಳಿಗೂ, ಉಪಗ್ರಹ ಇಂಧನಗಳಿಗೂ ಸೇರಿದಂತೆ, ಕಡಿಮೆ ಇಲ್ಲದಷ್ಟು ಶಕ್ತಿ ಸಾಂದ್ರತೆ ಈ ಜೈವಿಕ ಇಂಧನದಲ್ಲಿರುವುದನ್ನು ಗುರುತಿಸಲಾಗಿದೆ.

ʻಈ ಜೈವಿಕ ಸಂಶ್ಲೇಷಣೆಯ ಮಾರ್ಗ ಅತ್ಯಂತ ಸ್ವಚ್ಛ ಮತ್ತು ಪರಿಸರ ಸ್ನೇಹಿ. ಇದಕ್ಕಿಂತ ಮೊದಲು, ಇಷ್ಟೊಂದು ಕಾರ್ಯಕ್ಷಮತೆಯ ಇಂಧನವನ್ನು ಸಂಶ್ಲೇಷಿಸುವುದಕ್ಕೆ ಪೆಟ್ರೋಲಿಯಂ ಬಳಸಿ, ಕಲುಷಿತ ಮಾರ್ಗಗಳಿಂದ ಮಾತ್ರವೇ ಸಾಧ್ಯವಿತ್ತುʼ ಎಂದು ಈ ಯೋಜನೆಯ ಮುಖ್ಯಸ್ಥರಾಗಿರುವ ಜೇಯ್‌ ಕೀಸ್ಲಿಂಗ್‌ ತಿಳಿಸಿದ್ದಾರೆ. ʻಈ ಇಂಧನವನ್ನು ತಯಾರಿಸುವುದಕ್ಕೆ ಅಗತ್ಯವಾದ ಬ್ಯಾಕ್ಟೀರಿಯಾಗಳು ಸಸ್ಯಾಹಾರಿಗಳು. ಇಂಥ ಇಂಧನವನ್ನು ಸುಡುವುದರಿಂದ ಯಾವ ಪೆಟ್ರೋಲಿಯಂ ಉತ್ಪನ್ನಗಳನ್ನು ಉರಿಸುವುದಕ್ಕಿಂತಲೂ ಅತಿ ಕಡಿಮೆ ಪ್ರಮಾಣದ ಹಸಿರುಮನೆ ಅನಿಲಗಳು ವಾತಾವರಣಕ್ಕೆ ಸೇರುತ್ತವೆʼ ಎಂಬುದು ಅವರ ಅಭಿಪ್ರಾಯ.

ಈ ಬಗೆಗಿನ ತಾಂತ್ರಿಕ ಪರಿಕರಗಳನ್ನು ವಿವರಿಸಿದ ಅವರು, ಉಪಗ್ರಹ ಇಂಧನವಾಗಿ ಬಳಸಲು ಇದು ಅನುಕೂಲಕರವಾಗಿದೆ. ಈ ಇಂಧನಕ್ಕೆ ಅಗತ್ಯವಾಗಿ ಬೇಕಾದ್ದು ಪಾಲಿಸೈಕ್ಲೋಪ್ರೊಪನೇಟೆಡ್‌ ಫ್ಯಾಟಿಆಸಿಡ್‌ ಮಿಥೈಲ್‌ ಎಸ್ಟರ್ಸ್‌ (ಪಿಒಪಿ-ಎಫ್‌ಎಎಂಇ) ಅಣುಗಳು. ಇದಕ್ಕಾಗಿ ಸ್ಟ್ರೆಪ್ಟೋಮೈಸಸ್‌ ಕುಟುಂಬದ ಬ್ಯಾಕ್ಟೀರಿಯಾಗಳ ಮೇಲೆ ಅಧ್ಯಯನ ನಡೆಸಿದಾಗ, ಎಸ್‌. ಆಲ್ಬಿರೆಟಿಕ್ಯುಲಿ ಸ್ಟ್ರೇನ್‌ನಲ್ಲಿ ಪಿಒಪಿ-ಎಫ್‌ಎಎಂಇ ಅಣುಗಳು ಪತ್ತೆಯಾದವು. ಆದರೆ ಅಗತ್ಯವಾದ ಪ್ರಮಾಣದಲ್ಲಿ ಪಿಒಪಿ-ಎಫ್‌ಎಎಂಇ ತಯಾರಿಸಲು ಈ ಬ್ಯಾಕ್ಟೀರಿಯಾಗಳಿಗೆ ಸಾಧ್ಯವಾಗದಿದ್ದಾಗ, ಅದಕ್ಕಾಗಿ ವಂಶವಾಹಿಗಳನ್ನು ಸೂಕ್ತ ಸ್ವರೂಪಕ್ಕೆ ಮಾರ್ಪಾಡುಗೊಳಿಸಲಾಯಿತು ಎಂದರು.

ಈ ಪ್ರಯೋಗದ ಮುಂದಿನ ಹಂತವಾಗಿ, ಅಗತ್ಯ ಪ್ರಮಾಣದ ಅಣುಗಳ ಉತ್ಪಾದನೆ ಮಾಡಬೇಕಾಗಿದೆ. ಇದರಿಂದ ಮಾತ್ರವೇ ರಾಕೆಟ್‌ ಇಂಧನದ ತಯಾರಿಕೆ ಸಾಧ್ಯವಿದ್ದು, ಕನಿಷ್ಟ ೧೦ ಕೆ.ಜಿ. ಉತ್ಪಾದನೆಯಿಂದ ಮಾತ್ರ ನಿಗದಿತ ಪರೀಕ್ಷೆಗಳು ಸಾಧ್ಯ. ಆದರೆ ವಿಜ್ಞಾನಿಗಳು ಆ ಹಂತವನ್ನಿನ್ನೂ ತಲುಪಿಲ್ಲವಾದ್ದರಿಂದ, ಈ ಸಂಶೋಧನೆ ಮತ್ತು ಪ್ರಯೋಗಗಳ ಮುಂದಿನ ಹಂತಗಳ ಬಗ್ಗೆ ಯಾವುದೂ ನಿರ್ಣಯವಾಗಿಲ್ಲ. ಆದರೆ ಸ್ವಚ್ಛ ಮತ್ತು ಪರಿಸರ ಸ್ನೇಹಿಯಾದ ಇಂಧನದ ಉತ್ಪಾದನೆ ಬಗ್ಗೆ ವಿಜ್ಞಾನಿಗಳು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವಿಸ್ತಾರ Explainer: ʼನಂಬಿʼ ಕೆಟ್ಟವರಲ್ಲ! ದೇಶ ಪ್ರೇಮಿ ವಿಜ್ಞಾನಿ ದೇಶ ದ್ರೋಹಿ ಆಗಿದ್ದು ಹೇಗೆ?

Exit mobile version