Site icon Vistara News

BSNL Data Hack: ಬಿಎಸ್ಸೆನ್ನೆಲ್ ಬಳಕೆದಾರರ ಡೇಟಾ ಹ್ಯಾಕ್; ಡಾರ್ಕ್‌ ವೆಬ್‌ನಲ್ಲಿ ಮಾರಾಟ!

BSNL users data hack and sold on dark web

ನವದೆಹಲಿ: ನೀವು ಬಿಎಸ್ಸೆನ್ನೆಲ್ (BSNL Users) ಇಂಟರ್ನೆಟ್ (Internet users) ಮತ್ತು ಲ್ಯಾಂಡ್‌ಲೈನ್ (Landline users) ಬಳಸುತ್ತಿದ್ದೀರಾ ? ಹಾಗಿದ್ದರೆ, ನಿಮ್ಮ ಮಾಹಿತಿ ಕೂಡ ಮಾರಾಟವಾಗಿರುವ ಸಾಧ್ಯತೆ ಇದೆ! ಹೌದು, ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿ.(BSNL)ನ ಬಳಕೆದಾರರ ಡೇಟಾ ಕದ್ದಿರುವ (BSNL Data Hack:) ಹ್ಯಾಕರ್ಸ್, ಡಾರ್ಕ್‌ ವೆಬ್‌ನಲ್ಲಿ (Dark Web) ಮಾರಾಟ ಮಾಡುತ್ತಿದ್ದಾರೆಂದು ಹೇಳಲಾಗುತ್ತಿದೆ.

ಡಾರ್ಕ್ ವೆಬ್‌ನಲ್ಲಿ “ಪೆರೆಲ್” ಎಂದು ಕರೆಯಲಾಗುವ ಹ್ಯಾಕರ್, ಬಿಎಸ್ಸೆನ್ನೆಲ್ ಬಳಕೆದಾರರ ಡೇಟಾ ಕದ್ದಿರುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಟೆಲಿಕಾಂ ಕಂಪನಿಯ ಸೇವೆಗಳ ಬಳಕೆದಾರರ ಕಂಪನಿಗಳು ನಿರ್ದಿಷ್ಟವಾಗಿ ಬಿಎಸ್ಸೆನ್ನೆಲ್ ಫೈಬರ್ ಮತ್ತು ಲ್ಯಾಂಡ್‌ಲೈನ್ ಸಂಪರ್ಕಗಳನ್ನು ಬಳಸುವವರ ಬಗ್ಗೆ ನಿರ್ಣಾಯಕ ಮಾಹಿತಿಯನ್ನು ಪಡೆದುಕೊಂಡಿದ್ದೇನೆ ಹ್ಯಾಕರ್ ಹೇಳಿಕೊಂಡಿದ್ದಾನೆ.

ಪೆರಿಲ್ ಎಂದು ಹೇಳಿಕೊಳ್ಳುವ ಈ ಹ್ಯಾಕರ್, ಡಾರ್ಕ್ ವೆಬ್‌ನಲ್ಲಿ ಕದ್ದ ಡೇಟಾದ ಒಂದು ಭಾಗವನ್ನು ಬಹಿರಂಗಪಡಿಸಿದ್ದಾರೆ. ಡೇಟಾಸೆಟ್ ಇಮೇಲ್ ವಿಳಾಸಗಳು, ಬಿಲ್ಲಿಂಗ್ ಮಾಹಿತಿ, ಸಂಪರ್ಕ ಸಂಖ್ಯೆಗಳು ಮತ್ತು ಬಿಎಸ್ಸೆನ್ನೆಲ್‌ನ ಫೈಬರ್ ಮತ್ತು ಲ್ಯಾಂಡ್‌ಲೈನ್ ಬಳಕೆದಾರರಿಗೆ ಲಿಂಕ್ ಮಾಡಲಾದ ಇತರ ಖಾಸಗಿ ಡೇಟಾದಂತಹ ಸೂಕ್ಷ್ಮ ವಿವರಗಳನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ, ಮೊಬೈಲ್ ಸರ್ವೀಸ್ ಔಟೇಜ್ ರೆಕಾರ್ಡ್ಸ್, ನೆಟ್‌ವರ್ಕ್ ನಿರ್ದಿಷ್ಟತೆಗಳು, ಪೂರ್ಣಗೊಂಡ ಆದೇಶಗಳು ಮತ್ತು ಗ್ರಾಹಕರ ಮಾಹಿತಿಯಂತಹ ಹೆಚ್ಚು ನಿರ್ಣಾಯಕ ಮಾಹಿತಿಯನ್ನು ಕದ್ದಿರುವಂತೆ ಕಾಣುತ್ತಿದೆ.

ಡೇಟಾ ಕಳವು ತಕ್ಷಣಕ್ಕೆ ಬಿಎಸ್ಸೆನ್ನೆಲ್ ಬಳಕೆದಾರರ ಖಾಸಗಿ ಮತ್ತು ಭದ್ರತೆಗೆ ಬೆದರಿಕೆಯನ್ನು ಒಡ್ಡಿದೆ. ಹ್ಯಾಕರ್ ಹಂಚಿಕೊಂಡ ಡೇಟಾವು ಸುಮಾರು 32,000 ಲೈನ್‌ಗಳ ಮಾಹಿತಿಯನ್ನು ಒಳಗೊಂಡಿದೆ, ಆದರೆ “ಪೆರೆಲ್” ಬಿಎಸ್ಸೆನ್ನೆಲ್ ಗ್ರಾಹಕರ ಜಿಲ್ಲಾವಾರು ವಿವರಗಳನ್ನು ಒಳಗೊಂಡಂತೆ ಎಲ್ಲಾ ಡೇಟಾಬೇಸ್‌ಗಳಿಂದ ಸರಿಸುಮಾರು 29 ಲಕ್ಷ ಲೈನ್‌ಗಳ ಡೇಟಾವನ್ನು ಪಡೆದುಕೊಂಡಿದೆ ಎಂದು ಹೇಳಿಕೊಂಡಿದೆ.

2 ತಿಂಗಳ ಹಿಂದೆ ಕೋವಿಡ್‌ ಪರೀಕ್ಷಾ ಮಾಹಿತಿ ರಹಸ್ಯ ಮಾರಾಟ ವರದಿಯಾಗಿತ್ತು

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಬಳಿ ಇದ್ದ ಸುಮಾರು 81.5 ಕೋಟಿ ಭಾರತೀಯ ನಾಗರಿಕರ Covid-19 ಪರೀಕ್ಷಾ ಮಾಹಿತಿ ಮಾರಾಟವಾಗಿದೆ ಎಂಬ ರಹಸ್ಯ ಎರಡು ತಿಂಗಳ ಹಿಂದೆ ಬಹಿರಂಗವಾಗಿತ್ತು. ಇದುವರೆಗೆ ಭಾರತದಲ್ಲಿ ನಡೆದಿರಬಹುದಾದ ಡೇಟಾ ಸೋರಿಕೆ ಅವ್ಯವಹಾರಗಳಲ್ಲೇ ಅತಿ ದೊಡ್ಡದು ಎಂದು ಈ ಪ್ರಕರಣವನ್ನು ಶಂಕಿಸಲಾಗಿತ್ತು.

ಎಕ್ಸ್ ವೇದಿಕೆಯಲ್ಲಿ ಹೊಂದಿರುವ ಸೈಬರ್‌ ದುಷ್ಕರ್ಮಿಯೊಬ್ಬ ಡಾರ್ಕ್ ವೆಬ್‌ನಲ್ಲಿ ಈ ಡೇಟಾ ಉಲ್ಲಂಘನೆಯ ಮಾಹಿತಿಯನ್ನು ಪ್ರಕಟಿಸಿದ್ದಾನೆ. ಇದು 81.5 ಕೋಟಿ ಭಾರತೀಯ ನಾಗರಿಕರ ದಾಖಲೆಗಳನ್ನು ಒಳಗೊಂಡಿದೆ. ಇವರ ಹೆಸರುಗಳು, ಫೋನ್ ಸಂಖ್ಯೆಗಳು, ವಿಳಾಸಗಳು, ಆಧಾರ್ ಮತ್ತು ಪಾಸ್‌ಪೋರ್ಟ್ ಮಾಹಿತಿಗಳು ಸೋರಿಕೆಯಾಗಿವೆ. ಕೋವಿಡ್- 19 ಸಂದರ್ಭದಲ್ಲಿ ಮಾಡಲಾದ ವೈದ್ಯಕೀಯ ಪರೀಕ್ಷಾ ವಿವರಗಳಿಂದ ಈ ಡೇಟಾವನ್ನು ಹೊರತೆಗೆಯಲಾಗಿದೆಯಂತೆ. ಇದನ್ನು ICMRನಿಂದ ಪಡೆಯಲಾಗಿದೆ ಎಂದು ಈ ದುಷ್ಕರ್ಮಿ ಹೇಳಿಕೊಂಡಿದ್ದಾನೆ.

ಫೆಬ್ರವರಿಯಿಂದ ಐಸಿಎಂಆರ್ ಅನೇಕ ಸೈಬರ್ ದಾಳಿಯ ಪ್ರಯತ್ನಗಳನ್ನು ಎದುರಿಸಿದೆ. ಕೇಂದ್ರೀಯ ತನಿಖಾ ಏಜೆನ್ಸಿಗಳಿಗೆ ಇದು ತಿಳಿದಿತ್ತು. ಐಸಿಎಂಆರ್ ಸರ್ವರ್‌ಗಳನ್ನು ಹ್ಯಾಕ್ ಮಾಡಲು ಕಳೆದ ವರ್ಷ 6,000ಕ್ಕೂ ಹೆಚ್ಚು ಪ್ರಯತ್ನಗಳನ್ನು ಮಾಡಲಾಗಿದೆ. ಯಾವುದೇ ಡೇಟಾ ಸೋರಿಕೆಯನ್ನು ತಪ್ಪಿಸಲು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವಂತೆ ಏಜೆನ್ಸಿಗಳು ಐಸಿಎಂಆರ್ ಅನ್ನು ಕೇಳಿಕೊಂಡಿದ್ದವು.

ಈ ಸುದ್ದಿಯನ್ನೂ ಓದಿ: CoWin Data leak : ಕೋವಿಡ್‌ ಲಸಿಕೆ ಪಡೆದವರ ವಿವರ ಟೆಲಿಗ್ರಾಂ ಆ್ಯಪ್‌ನಲ್ಲಿ ಸೋರಿಕೆ, ಈ ಬಗ್ಗೆ ಇಲಾಖೆ ಹೇಳಿದ್ದೇನು?

Exit mobile version