ಬೆಂಗಳೂರು: ತಂತ್ರಜ್ಞಾನ ಕಲಿಕೆ ವೇದಿಕೆ ಸ್ಟಾರ್ಟಪ್ (startup) ಬೈಜೂಸ್‌ನ (Byju’s) ಸಂಸ್ಥಾಪಕ ಬೈಜು ರವೀಂದ್ರನ್ (Byju Raveendran) ಅವರು ತಮ್ಮ ಉದ್ಯೋಗಿಗಳಿಗೆ ಸಂಬಳ ನೀಡಲು ಹಣವನ್ನು ಸಂಗ್ರಹಿಸಲು ತಮ್ಮ ಮನೆ ಮತ್ತು ಅವರ ಕುಟುಂಬ ಸದಸ್ಯರ ಮನೆಗಳನ್ನು ಅಡವಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಬೈಜೂಸ್ ಸಾಲದ ಸುಳಿಯಲ್ಲಿ (Byju’s Debt) ತತ್ತರಿಸುತ್ತಿದೆ.
ಅಡವಿಟ್ಟ ಆಸ್ತಿಗಳಲ್ಲಿ ಅವರ ಕುಟುಂಬದ ಒಡೆತನದ ಎರಡು ಮನೆಗಳು ಮತ್ತು ಬೆಂಗಳೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ವಿಲ್ಲಾ ಇವೆ. $12 ಮಿಲಿಯ (₹100.07 ಕೋಟಿ) ಸಾಲಕ್ಕೆ ಅಡವಾಗಿ ಇವುಗಳನ್ನು ನೀಡಲಾಗಿದೆ. ಈ ಹಣವು Byju’s ಮಾಲೀಕತ್ವ ಹೊಂದಿರುವ ಕಂಪನಿಯಾದ ಥಿಂಕ್ ಅಂಡ್ ಲರ್ನ್ (Think and Learn) ಪ್ರೈವೇಟ್‌ನಲ್ಲಿರುವ 15,000 ಉದ್ಯೋಗಿಗಳಿಗೆ ಸಂಬಳ ಪಾವತಿಸಲು ರವೀಂದ್ರನ್‌ಗೆ ಸಹಾಯ ಮಾಡಲಿದೆ.
ಕಳೆದ ತಿಂಗಳು ಕಂಪನಿಯು (tech firm) 2022ರ ತನ್ನ ಲೆಕ್ಕಪರಿಶೋಧನೆಯ ಫಲಿತಾಂಶಗಳನ್ನು ವರದಿ ಮಾಡಿತ್ತು. 2022ರ ಮಾರ್ಚ್ 31ಕ್ಕೆ ಕೊನೆಗೊಂಡ ವರ್ಷಕ್ಕೆ ಅದರ ಪ್ರಮುಖ ಆನ್‌ಲೈನ್ ಶಿಕ್ಷಣ ವ್ಯವಹಾರದಲ್ಲಿ 6% ಅಂದರೆ 24 ಶತಕೋಟಿ ರೂಪಾಯಿ ನಷ್ಟವಾಗಿತ್ತು.
ಜಾರಿ ನಿರ್ದೇಶನಾಲಯ ಬಿಸಿ
ಕಳೆದ ತಿಂಗಳು, ಜಾರಿ ನಿರ್ದೇಶನಾಲಯವು (Enforcement Directorate) ಬೈಜು ರವೀಂದ್ರನ್ ಮತ್ತು ಥಿಂಕ್ ಅಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್‌ಗೆ ₹9,362 ಕೋಟಿ ಮೊತ್ತದ ವಿದೇಶಿ ವಿನಿಮಯ ಉಲ್ಲಂಘನೆಯ ಆರೋಪದ ಮೇಲೆ, ಸರ್ಕಾರಕ್ಕೆ ಆದಾಯದ ನಷ್ಟವನ್ನು ಉಂಟುಮಾಡಿದ್ದಕ್ಕಾಗಿ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು.
ರವೀಂದ್ರನ್ ಒಳಗೊಂಡಂತೆ ಥಿಂಕ್ ಅಂಡ್ ಲರ್ನ್ ಸಂಸ್ಥೆ “ಭಾರತದ ಹೊರಗೆ ಮಾಡಿದ ಮುಂಗಡ ಹಣ ವಿನಿಮಯದ ಬಗ್ಗೆ ದಾಖಲೆಗಳನ್ನು ಸಲ್ಲಿಸಲು ವಿಫಲವಾಗಿದೆ. ಭಾರತದ ಹೊರಗೆ ಮಾಡಿದ ರಫ್ತುಗಳ ಆದಾಯವನ್ನು ಅರಿತುಕೊಳ್ಳಲು ವಿಫಲವಾಗಿದ್ದು, ದಾಖಲೆಗಳನ್ನು ವಿಳಂಬಗೊಳಿಸುವ ಮೂಲಕ ಫೆಮಾದ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ” ಎಂದು ತನಿಖಾ ಸಂಸ್ಥೆ ಇಡಿ ಆರೋಪಿಸಿದೆ. ಕಂಪನಿಗೆ ಪಡೆದ ಹೂಡಿಕೆ (ಎಫ್‌ಡಿಐ), ಭಾರತದ ಹೊರಗೆ ಕಂಪನಿಯು ಮಾಡಿದ ಪಾವತಿಗಳ ಕುರಿತು ದಾಖಲೆಗಳನ್ನು ಸಲ್ಲಿಸಲು ಸಂಸ್ಥೆ ವಿಫಲವಾಗಿದೆ ಹಾಗೂ ಕಂಪನಿಗೆ ಸ್ವೀಕರಿಸಿದ ಎಫ್‌ಡಿಐಗೆ ಸಂಬಂಧಿಸಿದ ಷೇರುಗಳನ್ನು ಹಂಚಿಕೆ ಮಾಡಲು ವಿಫಲವಾಗಿದೆ.
ನೋಟೀಸ್‌ಗೆ ಪ್ರತಿಕ್ರಿಯಿಸಿರುವ ಬೈಜೂಸ್, “ನೋಟೀಸ್‌ನಲ್ಲಿ ಬಂದಿರುವ ಪ್ರಶ್ನೆಗಳು ಕೇವಲ ತಾಂತ್ರಿಕ ಸ್ವರೂಪದಲ್ಲಿವೆ. ಕಂಪನಿಯು ಎಲ್ಲಾ ಎಫ್‌ಡಿಐಗೆ ಅಗತ್ಯವಾದ ದಾಖಲೆಗಳನ್ನು ಸಲ್ಲಿಸಿದೆ. ಕಾನೂನಿನ ಅರ್ಹತಾ ಮಾನದಂಡಗಳಿಗೆ ಅನುಗುಣವಾಗಿ ಸ್ವೀಕರಿಸಲ್ಪಟ್ಟಿದೆ. ತೆರಿಗೆ ಪಾವತಿ ಮಾಡಿದೆ. ಎಫ್‌ಡಿಐ ಸಂಬಂಧಿತ ಷೇರುಗಳನ್ನು ನಿಗದಿತ ಸಮಯದೊಳಗೆ ವಿತರಿಸಿದೆ” ಎಂದು ಹೇಳಿದೆ.
ಕಳೆದ ಸೆಪ್ಟೆಂಬರ್‌ನಲ್ಲಿ ಕಂಪನಿಯ ಆಡಿಟರ್ ಹಾಗೂ ಮೂವರು ಬೋರ್ಡ್ ಸದಸ್ಯರು ಸಂಸ್ಥೆ ತೊರೆದಿದ್ದರು. ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಆನ್‌ಲೈನ್ ಕಲಿಕೆಯ ರಂಗದಲ್ಲಿ ಭಾರಿ ಯಶಸ್ಸು ಸಾಧಿಸಿದ್ದ ಕಂಪನಿ, ಕಳೆದ ಒಂದು ವರ್ಷದಲ್ಲಿ ಸಾಲದ ಹೊರೆಯಲ್ಲಿ ಮುಳುಗಿದೆ. ಒಂದೆರಡು ತಿಂಗಳ ಹಿಂದೆ ಸುಮಾರು 400 ಸಿಬ್ಬಂದಿಯನ್ನು ಸಂಸ್ಥೆ ಉದ್ಯೋಗದಿಂದ ತೆಗೆದಿತ್ತು.
ಇದನ್ನೂ ಓದಿ: BYJU’s Debt: ಹೆಚ್ಚಿದ ಸಾಲದ ಸುಳಿ; ಬೈಜೂಸ್ ಅಂಗಸಂಸ್ಥೆ ಈಗ ಸಾಲ ಕೊಟ್ಟವರ ಪಾಲು!