Site icon Vistara News

Telecommunications Bill 2023: ಯಾವುದೇ ಮೊಬೈಲ್‌ ನೆಟ್‌ವರ್ಕ್‌ ಸ್ವಾಧೀನ‌ಪಡಿಸಲು ಕೇಂದ್ರಕ್ಕೆ ಅಧಿಕಾರ

TRAI madidates Digital Consent Acquisition

ಹೊಸದಿಲ್ಲಿ: ನಿಮಗೆ ಗೊತ್ತಿರಲಿ, ಈ ಕಾಯಿದೆ ಜಾರಿಗೆ ಬಂದ ಬಳಿಕ ಕೇಂದ್ರ ಸರ್ಕಾರ ಯಾವುದೇ ಕಂಪನಿಯ ಮೊಬೈಲ್‌ ನೆಟ್‌ವರ್ಕ್‌ (Mobile Network) ಅನ್ನೂ ತನಗೆ ಬೇಕೆನಿಸಿದಾಗ ಸ್ವಾಧೀನಪಡಿಸಿಕೊಳ್ಳಬಹುದು! ಹೌದು, ಸಾರ್ವಜನಿಕ ಸುರಕ್ಷತೆ ಅಥವಾ ಸಾರ್ವಜನಿಕ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕೇಂದ್ರವು ಯಾವುದೇ ದೂರಸಂಪರ್ಕ ಜಾಲವನ್ನು ತಾತ್ಕಾಲಿಕವಾಗಿ ಸ್ವಾಧೀನಪಡಿಸಿಕೊಳ್ಳಲು ನೂತನ ದೂರಸಂಪರ್ಕ ವಿಧೇಯಕ (Telecommunications Bill 2023) ಅವಕಾಶ ನೀಡಿದೆ.

ಕಳೆದ ವಾರ ಸಂಭವಿಸಿದ ಸಂಸತ್ತಿನ ಭದ್ರತೆಯ ಉಲ್ಲಂಘನೆಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರ ಹೇಳಿಕೆಗೆ ಒತ್ತಾಯಿಸಿ ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆಯೂ ದೂರಸಂಪರ್ಕ ಮಸೂದೆ 2023 ಅನ್ನು ಸಂವಹನ ಸಚಿವ ಅಶ್ವಿನಿ ವೈಷ್ಣವ್ (Communications Minister Ashwini Vaishnaw) ಅವರು ಇಂದು ಲೋಕಸಭೆಯಲ್ಲಿ ಮಂಡಿಸಿದರು.

“ವಿಪತ್ತು ನಿರ್ವಹಣೆ ಸೇರಿದಂತೆ ಯಾವುದೇ ಸಾರ್ವಜನಿಕ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ, ಅಥವಾ ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ, ಕೇಂದ್ರ ಸರ್ಕಾರ, ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ವಿಶೇಷವಾಗಿ ಅಧಿಕಾರ ಪಡೆದ ಯಾವುದೇ ಅಧಿಕಾರಿ, ಅಧಿಸೂಚನೆಯ ಮೂಲಕ ಯಾವುದೇ ದೂರಸಂಪರ್ಕ ಸೇವೆ ಅಥವಾ ಜಾಲವನ್ನು ತಾತ್ಕಾಲಿಕವಾಗಿ ಸ್ವಾಧೀನಪಡಿಸಿಕೊಳ್ಳಬಹುದುʼʼ ಎಂದು ಕಾಯಿದೆ ಕರಡು ಹೇಳಿದೆ.

ಮಾನ್ಯತೆ ಹೊಂದಿರುವ ಮಾಧ್ಯಮ ಪ್ರತಿನಿಧಿಗಳಿಂದ ಸಂದೇಶಗಳನ್ನು ತಡೆಹಿಡಿಯಲಾಗುವುದಿಲ್ಲ, ಆದರೆ ರಾಷ್ಟ್ರೀಯ ಭದ್ರತಾ ಷರತ್ತಿನ ಅಡಿಯಲ್ಲಿ ಅವರ ಪ್ರಸರಣವನ್ನು ನಿಷೇಧಿಸಿದರೆ ಆಗ ತಡೆಹಿಡಿಯುವ ಅವಕಾಶವಿದೆ ಎಂದು ಕೂಡ ವಿಧೇಯಕ ಹೇಳಿದೆ. “ಉಪ-ವಿಭಾಗ (2) ರ ಷರತ್ತು (ಎ) ಅಡಿಯಲ್ಲಿ ನಿಷೇಧಿಸದ ​​ಹೊರತು, ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಮಾನ್ಯತೆ ಪಡೆದಿರುವ ವರದಿಗಾರರ ಭಾರತದಲ್ಲಿ ಪ್ರಕಟಿಸಲು ಉದ್ದೇಶಿಸಿರುವ ಪತ್ರಿಕಾ ಸಂದೇಶಗಳನ್ನು ತಡೆಹಿಡಿಯಲಾಗುವುದಿಲ್ಲ” ಎಂದು ಕರಡು ಮಸೂದೆ ಹೇಳುತ್ತದೆ.

ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ವ್ಯಕ್ತಿಗಳ ನಡುವೆ ಯಾವುದೇ ಸಂದೇಶವನ್ನು ಪ್ರತಿಬಂಧಿಸಲು ಸರ್ಕಾರವು ನಿರ್ದೇಶಿಸಬಹುದು ಎಂದು ಕರಡು ಕಾನೂನು ಹೇಳುತ್ತದೆ. ಇದು ದೂರಸಂಪರ್ಕ ಜಾಲಗಳನ್ನು ಸ್ಥಗಿತಗೊಳಿಸಲು ಸರ್ಕಾರಕ್ಕೆ ಅಧಿಕಾರ ನೀಡುತ್ತದೆ. ಸಂದೇಶಗಳನ್ನು ಕಾನೂನುಬಾಹಿರವಾಗಿ ಪ್ರತಿಬಂಧಿಸಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ, ₹2 ಕೋಟಿ ವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದು ಎಂದು ಮಸೂದೆ ಹೇಳುತ್ತದೆ.

ಇಂಡಿಯನ್ ಟೆಲಿಗ್ರಾಫ್ ಆಕ್ಟ್- 1885, ಇಂಡಿಯನ್ ವೈರ್‌ಲೆಸ್ ಟೆಲಿಗ್ರಾಫಿ ಆಕ್ಟ್- 1933 ಮತ್ತು ಟೆಲಿಗ್ರಾಫ್ ವೈರ್ಸ್ (ಕಾನೂನುಬಾಹಿರ ಸ್ವಾಧೀನ) ಕಾಯಿದೆ- 1950 ಅನ್ನು ಬದಲಿಸಲು ಕರಡು ವಿಧೇಯಕ ಪ್ರಯತ್ನಿಸುತ್ತದೆ.

ಇದನ್ನೂ ಓದಿ: Bharat internet Utsav: ದೂರಸಂಪರ್ಕ ಇಲಾಖೆಯ ಸ್ಪರ್ಧೆಯಲ್ಲಿ ಭಾಗವಹಿಸಿ 15000 ರೂ.ವರೆಗೂ ಬಹುಮಾನ ಗೆಲ್ಲಿ!

Exit mobile version