ಹೊಸದಿಲ್ಲಿ: ಚಂದ್ರಯಾನ 3 (Chandrayaan 3) ನಿನ್ನೆ (ಆ.23) ಚಂದ್ರನ ದಕ್ಷಿಣ ಧ್ರುವದಲ್ಲಿ (south pole) ಯಶಸ್ವಿಯಾಗಿ ಇಳಿದಿದ್ದು, ವಿಕ್ರಮ್ ಲ್ಯಾಂಡರ್‌ನ (vikram lander) ಹೊಟ್ಟೆಯಲ್ಲಿದ್ದ ಪ್ರಗ್ಯಾನ್ ರೋವರ್ (rover pragyan) ಕೆಳಗಿಳಿದು ಚಲಿಸಲು ಆರಂಭಿಸಿದೆ. ಈ ಲ್ಯಾಂಡರ್ ಹಾಗೂ ರೋವರ್ 14 ದಿನ ಏನೇನು ಮಾಡಲಿವೆ, ನಂತರ ಇವುಗಳ ಕತೆ ಏನು, ಭೂಮಿಗೆ ಮರಳಲಿವೆಯೇ ಇತ್ಯಾದಿ ಕುತೂಹಲಗಳು ಈಗ ಮೂಡಿವೆ.
ಚಂದ್ರನ ಒಂದು ದಿನದಷ್ಟು ಕಾಲ ಈ ಪ್ರಗ್ಯಾನ್ ರೋವರ್ ಇಲ್ಲಿ ಹಲವು ಸರಣಿ ಪ್ರಯೋಗಗಳನ್ನು ಇಲ್ಲಿ ನಡೆಸಲಿದೆ. ಚಂದ್ರನ ಒಂದು ದಿನ ಭೂಮಿಯ 14 ದಿನಗಳಿಗೆ ಸಮವಾಗಿದೆ. ಇಷ್ಟು ದಿನ ಕಾಲ ನಡೆಸುವ ಪ್ರಯೋಗಗಳಿಂದ ಪಡೆದ ಡೇಟಾವನ್ನು ರೋವರ್ ಲ್ಯಾಂಡರ್‌ಗೆ ಕಳುಹಿಸುತ್ತದೆ, ಲ್ಯಾಂಡರ್ ಅದನ್ನು ಭೂಮಿಗೆ ಕಳುಹಿಸುತ್ತದೆ.
ಇಲ್ಲಿನ 14 ದಿನಗಳ ನಂತರ, ಚಂದ್ರನ ಮೇಲೆ ರಾತ್ರಿ ಕವಿಯುತ್ತದೆ. ಅದು 14 ದಿನಗಳವರೆಗೆ ಇರಲಿದೆ. ವಿಪರೀತ ಚಳಿಯ ವಾತಾವರಣವಿರುತ್ತದೆ. ವಿಕ್ರಮ್ ಮತ್ತು ಪ್ರಗ್ಯಾನ್ ಬಿಸಿಲಿನಲ್ಲಿ ಮಾತ್ರ ಕೆಲಸ ಮಾಡಬಹುದು. ಯಾಕೆಂದರೆ ಅವುಗಳ ಸೆಲ್‌ಗಳು ಸೂರ್ಯನ ಬಿಸಿಲು- ಶಾಖದಿಂದ ರಿಚಾರ್ಜ್ ಆಗಬೇಕಿವೆ. ಹೀಗಾಗಿ 14 ದಿನಗಳ ನಂತರ ಇವು ನಿಷ್ಕ್ರಿಯವಾಗುತ್ತವೆ. ಲ್ಯಾಂಡರ್ ಮತ್ತು ರೋವರ್ ಎರಡನ್ನೂ 14 ದಿನ ಕಾರ್ಯಾಚರಿಸುವಂತೆಯೇ ವಿನ್ಯಾಸಗೊಳಿಸಲಾಗಿದೆ.
ಆದರೆ ಚಂದ್ರನ ಮೇಲೆ ಸೂರ್ಯ ಮತ್ತೆ ಕಾಣಿಸಿಕೊಂಡಾಗ, ವಿಕ್ರಮ್ ಮತ್ತು ಪ್ರಗ್ಯಾನ್ ಮತ್ತೆ ಚೇತರಿಸಿಕೊಂಡು ಕೆಲಸ ಆರಂಭಿಸುವ ಸಾಧ್ಯತೆಯನ್ನು ಇಸ್ರೋ ವಿಜ್ಞಾನಿಗಳು ತಳ್ಳಿಹಾಕುವುದಿಲ್ಲ. ಹೀಗಾದರೆ ಅದು ಚಂದ್ರಯಾನ ಯೋಜನೆಗೆ ಬೋನಸ್ ಆಗಲಿದೆ.
ಆದರೆ ವಿಕ್ರಮ್ ಮತ್ತು ಪ್ರಗ್ಯಾನ್‌ಗಳನ್ನು ಮತ್ತೆ ಭೂಮಿಗೆ ಕರೆತರುವ ಚಿಂತನೆ- ಯೋಜನೆಯನ್ನು ಇಸ್ರೋ ಮಾಡಿಲ್ಲ. ಕೆಲಸ ಮಾಡುವಷ್ಟು ಕಾಲ ಇವುಗಳನ್ನು ಮುಂದುವರಿಸಲಾಗುತ್ತದೆ. ಕೆಲಸ ಮಾಡದ ಸ್ಥಿತಿಗೆ ತಲುಪಿದ ಬಳಿಕ ಇವುಗಳನ್ನು ಮರಳಿ ತರುವುದೂ ವ್ಯರ್ಥ.
ಚಂದ್ರಯಾನ 3ರ ಒಟ್ಟು ತೂಕ ಎಷ್ಟು?
ಚಂದ್ರಯಾನ 3ರ ಒಟ್ಟು ತೂಕ 3,900 ಕೆ.ಜಿ. ಪ್ರೊಪಲ್ಷನ್ ಮಾಡ್ಯೂಲ್ 2,148 ಕೆಜಿ ತೂಗುತ್ತದೆ. ಲ್ಯಾಂಡರ್ ಮಾಡ್ಯೂಲ್ 1,752 ಕೆಜಿ ಹಾಗೂ ರೋವರ್ 26 ಕೆಜಿ ತೂಗುತ್ತವೆ. ಚಂದ್ರಯಾನ 3 ಲ್ಯಾಂಡರ್ ಇಳಿದ ಜಾಗದ ಫೋಟೋವನ್ನು ಇಸ್ರೋ ಈಗಾಗಲೇ ಹಂಚಿಕೊಂಡಿದೆ. ಬುಧವಾರ ಸಂಜೆ 6.04ಕ್ಕೆ ನಡೆದ ನಿಖರವಾದ ಸಾಫ್ಟ್ ಲ್ಯಾಂಡಿಂಗ್ ನಂತರ ವಿಕ್ರಮ್ ಅದರ ಕ್ಯಾಮೆರಾದಿಂದ ಫೋಟೋ ತೆಗೆದಿದೆ. ಚಂದ್ರನ ದಕ್ಷಿಣ ಧ್ರುವದ ಭಾಗಶಃ ಸಮತಟ್ಟಾದ ಪ್ರದೇಶದಲ್ಲಿ ಲ್ಯಾಂಡರ್ ಇಳಿದಿದೆ.
ರೋವರ್ ಪ್ರಗ್ಯಾನ್ ಏನು ಮಾಡುತ್ತದೆ?
ಪ್ರಗ್ಯಾನ್ ಚಂದ್ರನ ಮೇಲ್ಮೈಯ ರಾಸಾಯನಿಕ ಸಂಯೋಜನೆಯನ್ನು ಪರಿಶೀಲಿಸುತ್ತದೆ. ಚಂದ್ರನ ಮಣ್ಣು ಮತ್ತು ಬಂಡೆಗಳನ್ನು ಪರೀಕ್ಷಿಸಲಿದೆ. ವಾತಾವರಣದ ಅಯಾನುಗಳು, ಎಲೆಕ್ಟ್ರಾನ್‌ಗಳ ಸಾಂದ್ರತೆ, ಧ್ರುವ ಪ್ರದೇಶದ ಸಮೀಪವಿರುವ ಚಂದ್ರನ ಮೇಲ್ಮೈಯ ಉಷ್ಣತೆ, ಗುಣಲಕ್ಷಣಗಳನ್ನು ಅಳೆಯುತ್ತದೆ.
ಇದನ್ನೂ ಓದಿ: Chandrayaan 3: ಚಂದ್ರನ ಮೇಲೆ ವಾಕಿಂಗ್ ಹೊರಟ ರೋವರ್ ಪ್ರಗ್ಯಾನ್! ‘ಮೇಡ್ ಇನ್ ಇಂಡಿಯಾ, ಮೇಡ್ ಫಾರ್ ಮೂನ್’ ಎಂದ ಇಸ್ರೋ