ನವದೆಹಲಿ: ಚಾಟ್‌ಜಿಪಿಟಿ (ChatGPT) ಸದ್ಯದ ಸೆನ್ಸೇಷನ್. ಕೃತಕ ಬುದ್ಧಿಮತ್ತೆ(AI) ಆಧರಿತ ಈ ಚಾಟ್‌ಬಾಟ್(Chatbot) ಪ್ರಬಂಧ, ಇ ಮೇಲ್ಸ್, ನಾಟಕಗಳು, ಕವಿತೆಗಳು ಸೇರಿದಂತೆ ಏನು ಬೇಕಾದರೂ ಬರೆಯುವ ಸಾಮರ್ಥ್ಯವನ್ನು ಹೊಂದಿದೆ. ನೀವು ಯಾವ ರೀತಿ ಅದಕ್ಕೆ ಆಜ್ಞೆಗಳನ್ನು ನೀಡುತ್ತೀರೋ ಅದಕ್ಕೆ ತಕ್ಕನಾದ ನಿಖರವಾದ ಫಲಿತಾಂಶವನ್ನು ಈ ಚಾಟ್‌ಬಾಟ್ ನೀಡುತ್ತದೆ. ಮೈಕ್ರೋಸಾಫ್ಟ್‌ನ ಓಪನ್ಎಐ(OpenAI) ಅಭಿವೃದ್ಧಿಪಡಿಸಿರುವ ಈ ಚಾಟ್ ಬಾಟ್, ಸದ್ಯದ ಮಟ್ಟಿಗೆ ಹೆಚ್ಚು ಸುದ್ದಿಯಲ್ಲಿದೆ. ಅದಕ್ಕೆ ನೀವು ಯಾವುದೇ ಟಾಸ್ಕ್ ನೀಡಿದರೂ, ಅದನ್ನು ಪೂರೈಸುವ ಸಾಮರ್ಥ್ಯವನ್ನು ಹೊಂದಿದೆ. ಈಗ ಹೊಸ ಸುದ್ದಿ ಏನೆಂದರೆ, ಅದು ಪರೀಕ್ಷೆಗಳನ್ನು ಕೂಡ ಪಾಸು ಮಾಡಬಲ್ಲದು. ಇತ್ತೀಚೆಗೆ ಚಾಟ್‌ಬಾಟ್ ಎಂಬಿಎ ಪರೀಕ್ಷೆಯನ್ನು ಪಾಸು ಮಾಡಿದೆ. ಎಂಬಿಎ ಪರೀಕ್ಷೆಯಲ್ಲಿ ಚಾಟ್‌ಬಾಟ್‌ನ ಕಾರ್ಯಕ್ಷಮತೆಯನ್ನು ಇತ್ತೀಚೆಗೆ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಾರ್ಟನ್ ಸ್ಕೂಲ್‌ನ ಪ್ರಾಧ್ಯಾಪಕರು ಮೌಲ್ಯಮಾಪನ ಮಾಡಿ, ಓಕೆ ಎಂದಿದ್ದಾರೆ.
ಕ್ರಿಶ್ಚಿಯನ್ ಟೆರ್ವಿಸ್ಚ್ ಅವರು ಚಾಟ್‌ಜಿಪಿಟಿಗೆ, ಎಂಬಿಯ ಪ್ರಮುಖ ಟಾಪಿಕ್ ಆದ ಆಪರೇಷನ್ ಮ್ಯಾನೇಜ್‌ಮೆಂಟ್ ಬಗ್ಗೆ ಪ್ರಶ್ನಿಸಿದರು. ಕೇಸ್ ಸ್ಟಡೀ ಆಧರಿತವಾಗಿದ್ದರೂ ಚಾಟ್‌ಜಿಪಿಟಿಯು ಆಪರೇಷನ್ ಮ್ಯಾನೇಜ್‌ಮೆಂಟ್ ಮೂಲಭೂತಗಳು ಮತ್ತು ಪ್ರಕ್ರಿಯೆ ವಿಶ್ಲೇಷಣೆಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಅದ್ಭುತವಾಗಿ ಉತ್ತರಿಸಿದೆ ಎಂದು ಅವರು ಹೇಳಿದ್ದಾರೆ.
ಚಾಟ್‌ಜಿಪಿಟಿ ಕೇವಲ ಅದ್ಭುತ ವಿವರಣೆಗಳನ್ನು ಮಾತ್ರವೇ ನೀಡಿದ್ದಲ್ಲ, ಬದಲಿಗೆ ಪ್ರಶ್ನೆಗಳಿಗೆ ಸರಿಯಾದ ಹಾಗೂ ನಿಖರವಾದ ಮಾಹಿತಿಗಳನ್ನು ಒದಗಿಸಿತು ಎಂದು ಟೆರ್ವಿಸ್ಚ್ ಹೇಳಿದ್ದಾರೆ. ಮಾನವ ಸೂಚನೆಗಳ ಅನುಸಾರ ಅದು ತನ್ನ ಉತ್ತರಗಳಲ್ಲಿ ಕೆಲವು ಮಾರ್ಪಾಡುಗಳನ್ನೂ ಮಾಡಿತು ಎಂಬುದು ಅವರ ಗ್ರಹಿಕೆಯಾಗಿದೆ.
ಸರಿಯಾದ ಪರಿಹಾರದೊಂದಿಗೆ ಸಮಸ್ಯೆಗೆ ಉತ್ತರ ಕಂಡುಕೊಳ್ಳಲು ವಿಫಲವಾದಾಗ, ಸರಿಯಾದ ಮಾರ್ಗದರ್ಶನ ನೀಡಿದರೆ, ಚಾಟ್‌ಜಿಪಿಟಿ ಸ್ವಯಂ ಆಗಿ ತನ್ನ ತಪ್ಪುಗಳನ್ನು ತಿದ್ದಿಕೊಳ್ಳುವ ಸಾಮರ್ಥ್ಯವನ್ನುಹೊಂದಿದೆ. ಹೀಗಿದ್ದೂ, ಚಾಟ್ ಬಾಟ್ ಅನೇಕ ಕೊರೆತಗಳನ್ನು ಹೊಂದಿದೆ ಎಂಬುದು ಟೆರ್ವಿಸ್ಚ್ ಹೇಳಿದ್ದಾರೆ. ಸ್ಕೂಲ್ ಹಂತದ ಗಣಿತದಲ್ಲಿ ಆಶ್ಚರ್ಯಕ ರೀತಿಯಲ್ಲಿ ಸಾಂದರ್ಭಿಕವಾಗಿ ಕೆಲವು ತಪ್ಪುಗಳನ್ನು ಮಾಡುತ್ತದೆ. ಈ ತಪ್ಪುಗಳು ದೊಡ್ಡದಾಗಿಯೇ ಇರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇಷ್ಟಾಗಿಯೂ, ಜಾಟ್‌ಜಿಪಿಟಿ, ಪ್ರಕ್ರಿಯೆ ವಿಶ್ಲೇಷಣೆಗಳಿಗೆ ಸಂಬಂಧಿಸಿದಂತೆ ಕೇಳಲಾದ ಕಠಿಣ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗಲಿಲ್ಲ ಎಂದು ಅವರು ತಿಳಿಸಿದ್ದಾರೆ.