ರಮೇಶ ದೊಡ್ಡಪುರ
ತಂತ್ರಜ್ಞಾನ ಮುಂದುವರಿಯುತ್ತಿದೆ, ಅದೂ ನಾಗಾಲೋಟದಲ್ಲಿ. ಓಪನ್ ಎಐ ಸಂಸ್ಥೆ ಆರಂಭಿಸಿರುವ ಚಾಟ್ ಜಿಪಿಟಿ (Chat gpt) ಎಂಬ ಭಾಷಾ ಮಾದರಿ ಈಗ ಎಲ್ಲ ಕಡೆ ಚರ್ಚೆಯಾಗುತ್ತಿರುವ ವಿಷಯ. ಕರ್ನಾಟಕ ರಾಜಕಾರಣದ ಕುರಿತು ಚಾಟ್ ಜಿಪಿಟಿಗೆ ಪ್ರಶ್ನೆ ಕೇಳಿದರೆ ಹೇಗೆ ಎಂಬ ಪ್ರಯತ್ನ ಇಲ್ಲಿದೆ.
ಚಾಟ್ ಜಿಪಿಟಿ ಹೇಗೆ ಕೆಲಸ ಮಾಡುತ್ತದೆ?
ಚಾಟ್ ಜಿಪಿಟಿಯನ್ನು ಗೂಗಲ್ ಜತೆಗೆ ಹೋಲಿಸೋಣ. ಗೂಗಲ್‌ನಲ್ಲಿ ಯಾವುದೇ ವಿಷಯ ಸರ್ಚ್ ಮಾಡಿದರೆ ಅದು ವಿವಿಧ ವೆಬ್‌ಸೈಟ್‌ಗಳ ಲಿಂಕ್ ಕೊಡುತ್ತದೆ. ಅದರಲ್ಲಿ ವಿಡಿಯೋ, ಸುದ್ದಿ, ವಿಕಿಪೀಡಿಯಾ, ಚಿತ್ರಗಳೆಲ್ಲವೂ ಸೇರಿರುತ್ತವೆ. ಅವುಗಳಲ್ಲಿ ಯಾವುದು ಉತ್ತಮವಾದ ಫಲಿತಾಂಶದ ಮೇಲೆ ಕ್ಲಿಕ್ ಮಾಡಿ ಓದಿಕೊಳ್ಳಬಹುದು. ಚಾಟ್ ಜಿಪಿಟಿಯಲ್ಲಿ, ನಾವು ಕೇಳುವ ಪ್ರಶ್ನೆಗೆ, “ಮಾನವನ ರೀತಿಯಲ್ಲೇ”, ಲಿಖಿತ ಉತ್ತರ ನೀಡುತ್ತದೆ. ಇದು ತಂತ್ರಜ್ಞಾನದ ಮುಂದಿನ ಅವತಾರ. ತನಗೆ ನೀಡಿರುವ ಅಗಾಧ ದತ್ತಾಂಶ ಹಾಗೂ ತರಬೇತಿಯನ್ನು ಆಧರಿಸಿ ಅದೇ ಉತ್ತರವನ್ನು ಸಿದ್ಧಪಡಿಸಿ ನೀಡುತ್ತದೆ.
ಈ ರೀತಿಯ ಚಾಟ್ ಜಿಪಿಟಿಗೆ ಕರ್ನಾಟಕ ರಾಜಕಾರಣ ಹಾಗೂ ಸಮಾಜದ ಕೆಲವು ಪ್ರಶ್ನೆಗಳನ್ನು ಕೇಳಿದಾಗ ಅದರಿಂದ ಬಂದ ಉತ್ತರ ಇಲ್ಲಿದೆ. ಸದ್ಯ ಇಂಗ್ಲಿಷ್‌ನಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಅದನ್ನು ಕನ್ನಡಕ್ಕೆ ಸರಳವಾಗಿ ಅನುವಾದಿಸಿ ಇಲ್ಲಿ ನೀಡಲಾಗಿದೆ. ಆದರೆ ಇದು ಟ್ರಯಲ್ ವರ್ಷನ್. ಮತ್ತೆ, ಇಂಟರ್ನೆಟ್‌ನಲ್ಲಿ ಲಭ್ಯವಿರುವ ಅಂಶಗಳನ್ನು ಆಧರಿಸಿಯೇ ಇದು ಉತ್ತರವನ್ನು ಬರೆಯುವುದರಿಂದ ಕೆಲವು ದೋಷಗಳೂ ಇಣುಕಬಹುದು. ಸದ್ಯಕ್ಕೆ 2021ರವರೆಗಿನ ಮಾಹಿತಿ ಆಧಾರದಲ್ಲಿ ಮಾತ್ರ ಉತ್ತರ ನೀಡುತ್ತದೆ. ಚುನಾವಣೆ ಕಾಲದಲ್ಲಿ ಇದನ್ನು ಕುತೂಹಲದ ಕಾರಣಕ್ಕೆ ಮಾತ್ರ ಇಲ್ಲಿ ನೀಡಲಾಗಿದೆ. ನಾವು ಕೇಳುವ ಪ್ರಶ್ನೆಗಳ ಆಧಾರದಲ್ಲಿಯೂ ಉತ್ತರ ಲಭಿಸುತ್ತದೆ ಎಂಬ ಎಚ್ಚರಿಕೆ ಓದುಗರಲ್ಲಿರಲಿ.
ಪ್ರಶ್ನೆ: ಯಾರು ಹೆಚ್ಚು ಶಕ್ತಿವಂತರು? ಸಿದ್ದರಾಮಯ್ಯ? ಅಥವಾ ಡಿ.ಕೆ. ಶಿವಕುಮಾರ್?
ಚಾಟ್ ಜಿಪಿಟಿ ಉತ್ತರ: ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಇಬ್ಬರೂ ಕರ್ನಾಟಕದ ಪ್ರಮುಖ ರಾಜಕಾರಣಿಗಳು. ಇಬ್ಬರೂ ಸ್ಥಾನಗಳನ್ನು ಹೊಂದಿದ್ದಾರೆ ಹಾಗೂ ಪ್ರಭಾವಿಗಳಾಗಿದ್ದಾರೆ. ರಾಜಕೀಯ ಶಕ್ತಿಯ ಕುರಿತು ಹೇಳುವುದು ಆಯಾ ಸಂದರ್ಭಕ್ಕೆ ಹಾಗೂ ವಿಷಯನಿಷ್ಠವಾಗಿರುವುದರಿಂದ ಹೇಳುವುದು ಕಷ್ಟ.
ಸಿದ್ದರಾಮಯ್ಯ 2013ರಿಂದ 2018ರವರೆಗೆ ಮುಖ್ಯಮಂತ್ರಿ ಆಗಿದ್ದರು ಹಾಗೂ ಅವರು ಕಾಂಗ್ರೆಸ್‌ನ ಹಿರಿಯ ನಾಯಕ. ಅನೇಕ ಬಾರಿ ಶಾಸಕರಾಗಿದ್ದಾರೆ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಅನೇಕ ಸ್ಥಾನಗಳನ್ನು ಅಲಂಕರಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಸಂಫುಟ ದರ್ಜೆ ಸಚಿವ ಸೇರಿ ರಾಜ್ಯ ಸರ್ಕಾರದಲ್ಲಿ ಅನೇಕ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಅವರು ಒಕ್ಕಲಿಗ ಸಮುದಾಯದ ಶಕ್ತಿಯುತ ನಾಯಕ ಎಂದು ಗುರುತಿಸಲ್ಪಡುತ್ತಾರೆ ಹಾಗೂ ಕರ್ನಾಟಕ ರಾಜಕಾರಣದ ಕಿಂಗ್‌ಮೇಕರ್ ಎಂದು ಹೇಳಲಾಗುತ್ತದೆ.
ಒಟ್ಟಿನಲ್ಲಿ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಇಬ್ಬರೂ ಕರ್ನಾಟಕ ರಾಜಕಾರಣದ ಪ್ರಭಾವಿ ನಾಯಕರು. ಇಬ್ಬರೂ ಸಾಕಷ್ಟು ರಾಜಕೀಯ ಶಕ್ತಿ, ಸಂಪತ್ತು ಹಾಗೂ ತಮ್ಮ ಸಮುದಾಯಗಳಲ್ಲಿ ಹಾಗೂ ರಾಜ್ಯದಲ್ಲಿ ಬೆಂಬಲವನ್ನು ಹೊಂದಿದ್ದಾರೆ.
ಪ್ರಶ್ನೆ: ಯಡಿಯೂರಪ್ಪ ಮತ್ತೆ ಸಿಎಂ ಆಗುತ್ತಾರ?
ಚಾಟ್ ಜಿಪಿಟಿ ಉತ್ತರ: ಬಿ.ಎಸ್. ಯಡಿಯೂರಪ್ಪ ಅವರು ಕರ್ನಾಟಕ ರಾಜಕೀಯದ ಪ್ರಮುಖ ವ್ಯಕ್ತಿ. ಅವರು ಅನೇಕ ಬಾರಿ ಕರ್ನಾಟಕದ ಸಿಎಂ ಆಗಿದ್ದಾರೆ. ಅವರು ಮತ್ತೆ ಸಿಎಂ ಆಗುತ್ತಾರೆಯೇ ಇಲ್ಲವೇ ಎನ್ನುವುದು ಅನೇಕ ಸಂಗತಿಗಳ ಆಧಾರದಲ್ಲಿ ನಿರ್ಧಾರವಾಗುತ್ತದೆ. ಚುನಾವಣೆಯ ಫಲಿತಾಂಶ ಹಾಗೂ ರಾಜ್ಯ ರಾಜಕೀಯ ಪರಿಸ್ಥಿತಿಯು ಪ್ರಭಾವ ಬೀರುತ್ತದೆ.
ಪ್ರಶ್ನೆ: ಬಿ.ಎಲ್. ಸಂತೋಷ್ ಅವರ ಸಾಮರ್ಥ್ಯಗಳು ಯಾವುವು?
ಚಾಟ್ ಜಿಪಿಟಿ ಉತ್ತರ: ಬಿ.ಎಲ್. ಸಂತೋಷ್ ಅವರು ಬಿಜೆಪಿಯ ಹಿರಿಯ ನಾಯಕ ಹಾಗೂ ಭಾರತದ ಪ್ರಮುಖ ರಾಜಕೀಯ ನಾಯಕ. ಅವರ ಸಾಮರ್ಥ್ಯಗಳೆಂದರೆ,
1. ಸಂಘಟನಾ ಕೌಶಲ್ಯ: ಅವರು ರಾಜಕೀಯ ತಂಡಗಳನ್ನು ರೂಪಿಸುವಲ್ಲಿ ಹೆಸರುವಾಸಿ. ತಮ್ಮ ತವರು ರಾಜ್ಯ ಕರ್ನಾಟಕ ಸೇರಿ ದಕ್ಷಿಣದ ರಾಜ್ಯಗಳಲ್ಲಿ ಪಕ್ಷವನ್ನು ಕಟ್ಟಲು ಪ್ರಮುಖ ಪಾತ್ರ ವಹಿಸಿದ್ದಾರೆ.
2. ವ್ಯೂಹಾತ್ಮಕ ಚಿಂತನೆ: ಸಂತೋಷ್ ಅವರು ವ್ಯೂಹಾತ್ಮ ಚಿಂತನೆ ಜತೆಗೆ ಪರಿಣಾಮಕಾರಿ ರಾಜಕೀಯ ತಂತ್ರಗಾರಿಕೆಯನ್ನು ಬೆಳೆಸುವ ಹಾಗೂ ಜಾರಿ ಮಾಡುವುದಕ್ಕೆ ಹೆಸರುವಾಸಿ. ಇತ್ತೀಚಿನ ವರ್ಷಗಳಲ್ಲಿ ಬಿಜೆಪಿಯ ಚುನಾವಣಾ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
3. ಬೇರು ಮಟ್ಟದ ಸಂಪರ್ಕ: ಅವರು ಬೇರು ಮಟದಲ್ಲಿ ಜನರೊಂದಿಗೆ ಸಂಪರ್ಕ ಹೊಂದುತ್ತಾರೆ ಹಾಗೂ ಸಾಮಾನ್ಯ ಜನರ ಬೇಕು ಬೇಡಗಳನ್ನು ಅರ್ಥ ಮಾಡಿಕೊಳ್ಳಲು ಹೆಸರುವಾಸಿ.
4. ಶಕ್ತಿಯುತ ಸಂವಹನ ಕೌಶಲ್ಯ: ಪಕ್ಷದ ನಾಯಕರು, ಕಾರ್ಯಕರ್ತರು ಹಾಗೂ ಸಾಮಾನ್ಯ ಜನರಲ್ಲಿ, ಶಕ್ತಿಯುತ ಸಂವಹನಕ್ಕೆ ಸಂತೋಷ್ ಪ್ರಸಿದ್ಧರು.
5. ಬದ್ಧತೆ: ಪಕ್ಷ ಹಾಗೂ ನಾಯಕತ್ವಕ್ಕೆ ಬದ್ಧತೆಗೆ ಸಂತೋಷ್ ಪ್ರಸಿದ್ಧರು. ಪಕ್ಷದ ಚೌಕಟ್ಟಿನಲ್ಲಿ ಹಾಗೂ ನಾಯಕರ ನಡುವೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ.
ಪ್ರಶ್ನೆ: ಕುಮಾರಸ್ವಾಮಿಯವರು ಕರ್ನಾಟಕ ರಾಜಕಾರಣದಲ್ಲಿ ಬದಲಾವಣೆಯನ್ನು ತರಬಲ್ಲರೆ?
ಚಾಟ್ ಜಿಪಿಟಿ ಉತ್ತರ: ಕುಮಾರಸ್ವಾಮಿಯವರು ಕರ್ನಾಟಕದ ಪ್ರಮುಖ ರಾಜಕಾರಣಿ ಹಾಗೂ ಮಾಜಿ ಸಿಎಂ. ಅವರು ಬದಲಾವಣೆಯನ್ನು ತರುತ್ತಾರೆಯೋ ಇಲ್ಲವೋ ಎನ್ನುವುದು, ಮುಂದಿನ ಚುನಾವಣೆಯ ಫಲಿತಾಂಶ, ರಾಜಕೀಯ ಪರಿಸ್ಥಿತಿ, ಕುಮಾರಸ್ವಾಮಿಯವರ ಕ್ರಿಯೆ ಹಾಗೂ ನಿರ್ಧಾರಗಳನ್ನು ಅವಲಂಬಿಸಿದೆ.
ರಾಜ್ಯದಲ್ಲಿ ರಾಜಕೀಯ ಪರಿಸ್ಥಿತಿ ಬಹಳ ಚಲನಶೀಲವಾಗಿದ್ದು, ಭವಿಷ್ಯವನ್ನು ಊಹಿಸುವುದು ಕಷ್ಟ. ಬದಲಾವಣೆಯನ್ನು ತರುವುದು ಕುಮಾರಸ್ವಾಮಿಯವರ ಪಕ್ಷ, ಯಾವುದಾದರೂ ಮೈತ್ರಿ ಮಾಡಿಕೊಳ್ಳುತ್ತದೆಯೇ? ಎನ್ನುವುದನ್ನೂ ಅವಲಂಬಿಸಿದೆ.