ʼʼಎದ್ದೇಳಿರಿ! ಜೀತದಾಳುಗಳಾಗಿರಲು ಒಪ್ಪದವರೆಲ್ಲ ಸೇರಿ.ʼʼ
ಇವು ಚೀನಾದ ರಾಷ್ಟ್ರಗೀತೆಯ ಆರಂಭದ ಚರಣಗಳು. ಆದರೆ ಈ ಸಾಲುಗಳನ್ನು ನೀವು ಈಗ ಚೀನಾದಲ್ಲಿ ಜನಪ್ರಿಯವಾದ Weibo ಎಂಬ ಸೋಶಿಯಲ್ ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ಹಾಕಿಕೊಳ್ಳುವಂತಿಲ್ಲ. ಅದಕ್ಕೆ ಕಾರಣ ಚೀನಾ ಸರಕಾರ ಹೇರಿರುವ ನಿಷೇಧ.
ಏಪ್ರಿಲ್ ಮಧ್ಯಭಾಗದಿಂದ ಈ ನಿಷೇಧ ಜಾರಿಯಲ್ಲಿದೆ. ಇದಕ್ಕೆ ಕಾರಣ- ಚೀನಾದ 45 ನಗರಗಳಲ್ಲಿ ವಿಧಿಸಲಾಗಿರುವ ಕಠಿಣಾತಿ ಕಠಿನ ಲಾಕ್‌ಡೌನ್. ಸುಮಾರು 40 ಕೋಟಿ ಮಂದಿ ಈ ಲಾಕ್‌ಡೌನ್‌ನ ದೆಸೆಯಿಂದ ನಾಲ್ಕು ಗೋಡೆಗಳ ಒಳಗೆ ಬಂಧಿಗಳಾಗಿದ್ದಾರೆ. ಕೋವಿಡ್ ಸೋಂಕಿತರ ಸಂಖ್ಯೆ ಏರುತ್ತಿದ್ದ ಹಿನ್ನೆಲೆಯಲ್ಲಿ ಏಪ್ರಿಲ್ ಮೊದಲ ವಾರದಿಂದ ಇಲ್ಲಿ ಹಂತಹಂತವಾಗಿ ಲಾಕ್‌ಡೌನ್ ತರಲಾಯಿತು.
ಈ ನಿರ್ಬಂಧದಿಂದ ಬೇಸತ್ತ ಜನತೆ, ಸರಕಾರ ಕಠಿಣ ಕ್ರಮಗಳನ್ನು ಪ್ರತಿರೋಧಿಸಲು ಹೊಸ ಹಾದಿ ಹುಡುಕಿಕೊಂಡರು. ತಮ್ಮ ಸೋಶಿಯಲ್ ತಾಣಗಳಲ್ಲಿ ರಾಷ್ಟ್ರಗೀತೆಯನ್ನು ಹಾಕಿಕೊಂಡು ಲಾಕ್‌ಡೌನ್ ವಿರೋಧಿ ಹ್ಯಾಷ್‌ಟ್ಯಾಗ್ ಹಾಕಿಕೊಂಡರು. ಅಪಾರ್ಟ್‌ಮೆಂಟ್‌ಗಳಲ್ಲಿ ದೊಡ್ಡದಾಗಿ ಏಕಕಾಲಕ್ಕೆ ರಾಷ್ಟ್ರಗೀತೆ ಹಾಡಲು, ನುಡಿಸಲು ಆರಂಭಿಸಿದರು.
ಚೀನಾದ ಸರಕಾರ ತನ್ನ ದೇಶೀಯರ ಬೆಡ್‌ರೂಮಿಗಳ ಒಳಕ್ಕೂ ಮೂಗು ತೂರಿಸಲು ಆರಂಭಿಸಿದೆ. ಕೋವಿಡ್ ಸಂಖ್ಯೆಯನ್ನು ಶೂನ್ಯಕ್ಕೆ ಇಳಿಸುವುದಕ್ಕಾಗಿ, ಅದು ವಿಚಿತ್ರ ನಿಯಮಗಳನ್ನೂ ಜಾರಿಗೆ ತಂದಿದೆ- ಮನೆಯ ಸದಸ್ಯರು ಒಂದೇ ಬೆಡ್‌ರೂಮಿನಲ್ಲಿ ಮಲಗುವಂತಿಲ್ಲ! ದೂರ ದೂರ ಮಲಗಬೇಕು. ಸಂಗಾತಿಗಳನ್ನು ತಬ್ಬುವುದಾಗಲೀ ಚುಂಬಿಸುವುದಾಗಲೀ ನಿಷೇಧಿತ!
ಕೋವಿಡ್ ಶೂನ್ಯ ಮಾಡಲು ಸಾಧ್ಯವಿಲ್ಲ ಎಂಬ ಕಾಮನ್ ಸೆನ್ಸನ್ನು ಸರಕಾರ ಒಪ್ಪಿಕೊಳ್ಳುತ್ತಿಲ್ಲ. ಸ್ವತಃ ಸರಕಾರದ ಕೋವಿಡ್ ಸಲಹೆಗಾರರು ಇಲ್ಲಿನ ರಾಷ್ಟ್ರೀಯ ಪತ್ರಿಕೆಯೊಂದರಲ್ಲಿ ʼದೀರ್ಘಕಾಲಿಕವಾಗಿ ನಾವು ಶೂನ್ಯ ಕೋವಿಡ್ ಮಾಡಲು ಸಾಧ್ಯವಿಲ್ಲʼ ಎಂದು ಲೇಖನ ಬರೆದರು. ಆದರೆ ಸರಕಾರವೇ ವೆಬ್‌ಸೈಟುಗಳಿಂದ ಅದನ್ನು ಕಿತ್ತು ಹಾಕಿಸಿತು.
ಇದನ್ನೂ ಓದಿ: ಮಾಸ್ಕ್ ಧರಿಸದಿದ್ದರೆ ದಂಡ ಎಂದ ಸರ್ಕಾರ: ಜನರು ಮಾತ್ರ Don’t Care
ರಾಷ್ಟ್ರಗೀತೆಯ ವಿಚಿತ್ರ ಕತೆ
ಚೀನಾದ ರಾಷ್ಟ್ರಗೀತೆ ಮತ್ತು ಅದನ್ನು ಬರೆದವನ ಕತೆಯೇ ವಿಚಿತ್ರವಾಗಿದೆ. 1935ರಲ್ಲಿ ಶಾಂಘಾಯ್ ಕಮ್ಯುನಿಸ್ಟ್ ಪಾರ್ಟಿ ತಯಾರಿಸಿದ ʼಚಿಲ್ಡ್ರನ್ ಆಫ್ ದಿ ವಿಂಡ್ ಆಂಡ್ ಕ್ಲೌಡ್ಸ್ʼ ಚಲನಚಿತ್ರಕ್ಕಾಗಿ, ತಿಯಾನ್ ಹ್ಯಾನ್ ಎಂಬಾತ ಬರೆದ ಹಾಡು ಇದು. ಜಪಾನೀ ಸೈನ್ಯದ ವಿರುದ್ಧದ ಚೀನೀ ಸೈನ್ಯದ ಧೀರೋದಾತ್ತ ಹೋರಾಟವನ್ನು ಪ್ರತಿನಿಧಿಸುವ ಹಾಡು.
1949ರಲ್ಲಿ ಇದನ್ನು ರಾಷ್ಟ್ರಗೀತೆಯಾಗಿ ಅಂಗೀಕರಿಸಲಾಯಿತು. 1966ರಿಂದ ಎರಡು ದಶಕ ಕಾಲ ದೇಶದಲ್ಲಿ ನಡೆದ ಸಾಂಸ್ಕೃತಿಕ ಕ್ರಾಂತಿಯ ಕಾಲದಲ್ಲಿ, ರಾಷ್ಟ್ರೀಯವಾದಿ ನೆಲೆಯಿಂದ ಸಿಡಿದು ನಿಂತ ಹ್ಯಾನ್‌ನನ್ನು ಬಂಧಿಸಿ, ಈ ಹಾಡನ್ನು ನಿಷೇಧಿಸಲಾಯಿತು. ಮಾವೋ ಸತ್ತ ಬಳಿಕ, ಈ ಹಾಡಿನಲ್ಲಿ ಕಮ್ಯುನಿಸ್ಟ್ ಪಕ್ಷವನ್ನು ಹೊಗಳುವ ಸಾಲುಗಳನ್ನು ಸೇರಿಸಿ, ರಾಷ್ಟ್ರಗೀತೆಯಾಗಿ ಪುನಸ್ಥಾಪಿಸಲಾಯಿತು.
ಇದನ್ನೂ ಓದಿ: ಫ್ರಾನ್ಸ್ ಅಧ್ಯಕ್ಷರಾಗಿ ಇಮಾನ್ಯುಯೆಲ್ ಮ್ಯಾಕ್ರಾನ್ ಪುನರಾಯ್ಕೆ