Site icon Vistara News

CoWIN Data Leak: ಕೋವಿನ್‌ ಪೋರ್ಟಲ್‌ನಿಂದ ಡೇಟಾ ಸೋರಿಕೆ: ಬಿಹಾರ ಮೂಲದ ವ್ಯಕ್ತಿ ಬಂಧನ

CoWIN data leak

#image_title

ನವದೆಹಲಿ: ಕೊರೊನಾ ಸಮಯದಲ್ಲಿ ಕೇಂದ್ರ ಸರ್ಕಾರ ಆರೋಗ್ಯ ಸೇತು ಅಪ್ಲಿಕೇಶನ್‌ ಬಿಡುಗಡೆ ಮಾಡಿತು. ಅದೇ ರೀತಿಯಲ್ಲಿ ಕೊರೊನಾ ಲಸಿಕೆ ಅಭಿಯಾನದ ಸಂಪೂರ್ಣ ಮಾಹಿತಿ ತಿಳಿಯುವ ಉದ್ದೇಶವನ್ನಿಟ್ಟುಕೊಂಡು ಕೋವಿನ್‌ ಪೋರ್ಟಲ್‌ ತಯಾರಿಸಿ ಬಿಡುಗಡೆ ಮಾಡಿತು. ಆದರೆ ಅದೇ ಪೋರ್ಟಲ್‌ನಲ್ಲಿದ್ದ ಮಾಹಿತಿಗಳು ಸೋರಿಕೆಯಾಗಿವೆ (CoWIN data leak) ಎಂದು ಸುದ್ದಿಯಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

ದೆಹಲಿ ಪೊಲೀಸರು ಬಿಹಾರ ಮೂಲದ ವ್ಯಕ್ತಿಯೊಬ್ಬನನ್ನು ಈ ಪ್ರಕರಣದಲ್ಲಿ ಬಂಧಿಸಿದ್ದಾರೆ. ಆತನ ವೈಯಕ್ತಿಕ ವಿವರಗಳನ್ನು ಬಿಟ್ಟುಕೊಡಲಾಗಿಲ್ಲ. ಆರೋಪಿ ಈ ಕೃತ್ಯ ಮಾಡಿರುವುದಕ್ಕೆ ಕಾರಣವೇನು ಎನ್ನುವುದನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಆರೋಪಿಯ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳು ಮತ್ತು ಭಾರತೀಯ ದಂಡ ಸಂಹಿತೆಯ ಹಲವಾರು ಇತರ ಸೆಕ್ಷನ್‌ಗಳ ಅಡಿಯಲ್ಲಿ ಡೇಟಾ ಕಳ್ಳತನ, ಅನಧಿಕೃತ ಪ್ರವೇಶ ಮತ್ತು ಗೌಪ್ಯತೆಯ ಉಲ್ಲಂಘನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಳ್ಳಲಾಗಿದೆ.

ಇದನ್ನೂ ಓದಿ: Education News: 9-10ನೇ ತರಗತಿ ಮಕ್ಕಳಿಗೂ ಸಿಗಲಿದೆ ಕೋಳಿ ಮೊಟ್ಟೆ?
ಇತ್ತೀಚೆಗೆ ಕೋವಿನ್‌ ಪೋರ್ಟಲ್‌ನಿಂದ ಮಾಹಿತಿ ಕದ್ದು ಅದನ್ನು ಟೆಲಿಗ್ರಾಂ ಆ್ಯಪ್‌ನಲ್ಲಿ ಹರಿಬಿಡಲಾಗಿದೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಟೆಲಿಗ್ರಾಂನಿಂದ ಆ ಮಾಹಿತಿಗಳು ದೊಡ್ಡ ಪ್ರಮಾಣದಲ್ಲಿ ಹಂಚಿಕೆಯಾಗಿದೆ ಎಂದೂ ಹೇಳಲಾಗಿತ್ತು. ಪ್ರಮುಖ ರಾಜಕಾರಣಿಗಳು ಮತ್ತು ಉದ್ಯಮಿಗಳ ಆಧಾರ್‌ ಸಂಖ್ಯೆ ಸೇರಿದಂತೆ ಇನ್ನಿತರ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗಿ ದುರ್ಬಳಕೆಯಾಗುತ್ತಿದೆ ಎನ್ನುವ ಆರೋಪಗಳು ಕೇಳಿಬಂದಿದ್ದವು.‌

ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಕೇಂದ್ರ ಸರ್ಕಾರ ಕೋವಿನ್‌ ಪೋರ್ಟಲ್‌ನ ಎಲ್ಲ ಮಾಹಿತಿ ಸುರಕ್ಷಿತವಾಗಿದೆ. ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ ಎಂದು ಹೇಳಿಕೆ ಕೊಟ್ಟಿತ್ತು.

Exit mobile version